ರಾಜ್ ಕುಮಾರ್ ನಾಡಿನ ಸಾಂಸ್ಕೃತಿಕ ರಾಯಭಾರಿ: ಡಾ.ಕೋಡಿರಂಗಪ್ಪ ಅಭಿಮತ

| Published : Apr 26 2024, 12:48 AM IST

ರಾಜ್ ಕುಮಾರ್ ನಾಡಿನ ಸಾಂಸ್ಕೃತಿಕ ರಾಯಭಾರಿ: ಡಾ.ಕೋಡಿರಂಗಪ್ಪ ಅಭಿಮತ
Share this Article
  • FB
  • TW
  • Linkdin
  • Email

ಸಾರಾಂಶ

ಕನ್ನಡ ಭಾಷೆಗೆ ಧಕ್ಕೆ ಬಂದಾಗ ಅದರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲುತ್ತಿದ್ದರು, ಬಂಗಾರದ ಮನುಷ್ಯ ಚಿತ್ರದಿಂದ ಕೃಷಿಕರಿಗೆ ಪ್ರೇರಣೆಯಾದವರು, ಆಧ್ಯಾತ್ಮ ಮತ್ತು ಭಕ್ತಿಯ ಆಳವಾದ ಜ್ಙಾನವನ್ನು ಭಕ್ತಿ ಪ್ರಧಾನ ಚಿತ್ರಗಳ ಮೂಲಕ ಜನರಿಗೆ ತಲುಪಿಸಿದವರು. ಕೌಟುಂಬಿಕ ಜೀವನದಲ್ಲಿ ಹೇಗೆ ಬದುಕಬೇಕೆಂಬ ಕಲೆಯನ್ನು ತಮ್ಮ ಚಿತ್ರಗಳ ಮೂಲಕ ಜನರಿಗೆ ಅದರ ಮೌಲ್ಯಗಳನ್ನು ತಿಳಿಸುತ್ತಿದ್ದರು.

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ವರನಟ ಡಾ.ರಾಜ್ ಕುಮಾರ್ ರವರು ನಾಡಿನ ಸಾಂಸ್ಕೃತಿಕ ರಾಯಭಾರಿಯಾಗಿ ಕನ್ನಡದ ಅಧಮ್ಯ ಶಕ್ತಿಯಾಗಿದ್ದರು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ, ಶಿಕ್ಷಣ ತಜ್ಞ, ಡಾ.ಕೋಡಿರಂಗಪ್ಪ ಹೇಳಿದರು.

ನಗರದ ನಂದಿ ರಂಗಮಂದಿರದ ಕಸಾಪ ಕಚೇರಿಯಲ್ಲಿ ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡಿದ್ದ ವರನಟ ಡಾ.ರಾಜ್ ಕುಮಾರ್ ರವರ 95 ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಅತ್ಯಂತ ಬಡತನದ ಕುಟುಂಬದಲ್ಲಿ ಜನಿಸಿದ ರಾಜ್ ಕುಮಾರ್ ತಮ್ಮ ನಟನೆಯ ಮೂಲಕ ನಾಡಿನ ಅಸ್ಮಿತೆಯನ್ನು ಸಾರಿದವರು ಎಂದರು.

ಕನ್ನಡ ಭಾಷೆಗೆ ಧಕ್ಕೆ ಬಂದಾಗ ಅದರ ರಕ್ಷಣೆಗಾಗಿ ಟೊಂಕ ಕಟ್ಟಿ ನಿಲ್ಲುತ್ತಿದ್ದರು, ಬಂಗಾರದ ಮನುಷ್ಯ ಚಿತ್ರದಿಂದ ಕೃಷಿಕರಿಗೆ ಪ್ರೇರಣೆಯಾದವರು, ಆಧ್ಯಾತ್ಮ ಮತ್ತು ಭಕ್ತಿಯ ಆಳವಾದ ಜ್ಙಾನವನ್ನು ಭಕ್ತಿ ಪ್ರಧಾನ ಚಿತ್ರಗಳ ಮೂಲಕ ಜನರಿಗೆ ತಲುಪಿಸಿದವರು. ಕೌಟುಂಬಿಕ ಜೀವನದಲ್ಲಿ ಹೇಗೆ ಬದುಕಬೇಕೆಂಬ ಕಲೆಯನ್ನು ತಮ್ಮ ಚಿತ್ರಗಳ ಮೂಲಕ ಜನರಿಗೆ ಅದರ ಮೌಲ್ಯಗಳನ್ನು ತಿಳಿಸುತ್ತಿದ್ದರು. ಕನ್ನಡ ಸಾಹಿತ್ಯ ಲೋಕದ ಕಾದಂಬರಿ ಆಧಾರಿತ ಚಲನಚಿತ್ರಗಳನ್ನು ತಯಾರಿಸಿ ಸಾಹಿತಿಗಳನ್ನು ಜನರಿಗೆ ಪರಿಚಯಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆಯೆಂದು ಗುಣಗಾನ ಮಾಡಿದರು.

ಚಿಕ್ಕಬಳ್ಳಾಪುರ ತಾಲೂಕು ಕಸಾಪ ಅಧ್ಯಕ್ಷ ಯಲುವಹಳ್ಳಿ ಸೊಣ್ಣೇಗೌಡ ಮಾತನಾಡಿ, ಡಾ.ರಾಜ್ ಕುಮಾರ್ ಅವರು ತಮ್ಮ ಬದುಕಿನುದಕ್ಕೂ ಸರಳವಾಗಿ ಬದುಕಿದವರು. ಕನ್ನಡ ಭಾಷೆಯ ಪ್ರೌಢಿಮೆಯನ್ನು ಮೆರೆದು ತಮ್ಮ ಚಿತ್ರಗಳ ಮೂಲಕ ಕನ್ನಡ ನಾಡಿಗೆ ವಿಶೇಷ ಕೀರ್ತಿ ತಂದವರು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಭಕ್ತಿ ಪ್ರಧಾನ ಮತ್ತು ಜೇಮ್ಸ್ ಬಾಂಡ್ ಚಿತ್ರಗಳಲ್ಲಿ ನಟಿಸಿ ಕನ್ನಡಿಗರ ಮನದಲ್ಲಿ ಅಜರಾಮರರಾಗಿದ್ದಾರೆ. ಎಲ್ಲಾ ರೀತಿಯ ಪಾತ್ರಗಳಲ್ಲಿ ಲೀಲಾಜಾಲವಾಗಿ ನಟಿಸುವ ವಿಶ್ವದ ಏಕೈಕ ನಟರೆಂದು ಬಣ್ಣಸಿದರು.

ಜಿಲ್ಲಾ ಗೌರವ ಕಾರ್ಯದರ್ಶಿ ಅಮೃತ ಕುಮಾರ್, ತಾಲೂಕು ಗೌರವ ಕಾರ್ಯದರ್ಶಿಗಳಾದ ಕೆ.ಎಂ.ರೆಡ್ಡಪ್ಪ, ಸುಶೀಲಾ ಮಂಜುನಾಥ್, ಸಾಹಿತಿ ಸರಸಮ್ಮ, ಸರ್ಧಾರ್ ಚಾಂದ್ ಪಾಷ, ನರಸಿಂಹರೆಡ್ಡಿ, ಪಟೇಲ್ ನಾರಾಯಣಸ್ವಾಮಿ, ಮಹಾಂತೇಶ್, ಚಿಕ್ಕ ರೆಡ್ಡಪ್ಪ, ಪ್ರೇಮಲೀಲಾ ವೆಂಕಟೇಶ್ ,ಜಯಮ್ಮ ಇತರರು ಇದ್ದರು.