ಪ್ರತಿಶತ ಮತದಾನ ಗುರಿ ಮುಟ್ಟಲು ಸಿಇಒ ಮೀನಾ ಕರೆ

| Published : Apr 26 2024, 12:47 AM IST / Updated: Apr 26 2024, 12:48 AM IST

ಪ್ರತಿಶತ ಮತದಾನ ಗುರಿ ಮುಟ್ಟಲು ಸಿಇಒ ಮೀನಾ ಕರೆ
Share this Article
  • FB
  • TW
  • Linkdin
  • Email

ಸಾರಾಂಶ

ಯಾವುದೇ ಆಸೆ-ಆಮಿಷೆಗಳಿಗೆ ಬಲಿಯಾಗದೆ ಪವಿತ್ರವಾದ ಹಕ್ಕನ್ನು ಚಲಾಯಿಸಬೇಕು ಎಂದು ಜಿಪಂ ಸಿಇಒ ಭಂವರ್ ಸಿಂಗ್ ಮೀನಾ ಕರೆ ನೀಡಿದರು. ಕಲಬುರಗಿಯಲ್ಲಿ ಮನಸಾಕ್ಷಿ ಮತ ದೇಶಕ್ಕೆ ಹಿತ ಎನ್ನುವ ಮತ ಕಾವ್ಯ ಎಂಬ ಜನಜಾಗೃತಿ ಕವಿಗೋಷ್ಠಿ ಮೂಲಕ ಮತದಾನ ಜಾಗೃತಿ ಮೂಡಿಸಲಾಯಿತು.

ಕನ್ನಡಪ್ರಭ ವಾರ್ತೆ ಕಲಬುರಗಿ

ಮತದಾನ ನಮ್ಮ ಸಂವಿಧಾನಿಕ ಹಕ್ಕು. ಅದನ್ನು ಯಾವುದೇ ಆಸೆ-ಆಮಿಷೆಗಳಿಗೆ ಬಲಿಯಾಗದೆ ಪವಿತ್ರವಾದ ಹಕ್ಕನ್ನು ಚಲಾಯಿಸಬೇಕು. ದೇಶದ ಅಬಿವೃದ್ಧಿಗೆ ಪ್ರತಿ ಮತವು ಮಹತ್ವದಾಗಿದೆ. ಪ್ರತಿಯೊಬ್ಬರೂ ತಪ್ಪದೇ ಮತದಾನ ಮಾಡುವ ಮೂಲಕ ಪ್ರತಿಶತ ಮತದಾನದ ಗುರಿ ಮುಟ್ಟಬೇಕು ಎಂದು ಜಿಪಂ ಸಿಇಒ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಭಂವರ್ ಸಿಂಗ್ ಮೀನಾ ಕರೆ ನೀಡಿದರು.

ಲೋಕಸಭಾ ಚುನಾವಣೆ ಹಿನ್ನೆಲೆ ಮತದಾನ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಯೋಗದಲ್ಲಿ ನಗರದ ಕನ್ನಡ ಭವನದ ಸಾಹಿತ್ಯ ಮಂಟಪದಲ್ಲಿ ನಡೆದ ‘ಮನಸಾಕ್ಷಿ ಮತ ದೇಶಕ್ಕೆ ಹಿತ ಎನ್ನುವ ಮತ ಕಾವ್ಯ’ ಎಂಬ ಜನಜಾಗೃತಿಯ ಕವಿಗೋಷ್ಠಿ ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಆಸೆ, ಆಮಿಷಗಳಿಗೆ ಒಳಗಾಗದೇ, ಜಾತಿ, ಮತ, ಧರ್ಮಗಳ ಜಾಡಿಗೆ ಒಳಗಾಗದೇ ಉತ್ತಮ ವ್ಯಕ್ತಿತ್ವದ ಅಭ್ಯರ್ಥಿಗೆ ಗುಪ್ತ ಮತದಾನದ ಮೂಲಕ ಚುನಾಯಿಸಬೇಕೆಂಬ ಸಂದೇಶ ಸಾರಿದರು.

ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿ, ಸಂವಿಧಾನ ನಿರ್ಮಾತೃ ಡಾ.ಅಂಬೇಡ್ಕರ್ ಭಾರತೀಯ ಪ್ರಜೆಗೆ ನೀಡಿದ ಏಕಮತಾಧಿಕಾರ ಅತ್ಯಂತ ಅಮೂಲ್ಯವಾದದು. ಮತದಾರಲ್ಲಿ ಜಾಗೃತಿ ಮೂಡಿಸಲು ಕನ್ನಡ ಸಾಹಿತ್ಯ ಪರಿಷತ್ತಿನಿಂದ ಈ ಕಾರ್ಯಕ್ರಮ ಆಯೋಜಿಸಲಾಗಿದೆ. ಮತದಾನದ ಕುರಿತಾಗಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕವನ ಸಂಗ್ರಹಿಸಿ ಅದನ್ನು ಪುಸ್ತಕ ರೂಪದಲ್ಲಿ ಹೊರತರಲಾಗುವುದು ಎಂದರು.

ಕವಿಗಳಾದ ನರಸಿಂಗರಾವ ಹೇಮನೂರ, ಶಾಂತಾ ಪಸ್ತಾಪೂರ, ಕಲ್ಲಯ್ಯಾ ಸ್ಥಾವರಮಠ, ಶಕುಂತಲಾ ಪಾಟೀಲ, ಪ್ರಭು ನಿಷ್ಠಿ ನಿಡಗುಂದಾ ಮತ್ತಿತರರು ವಾಚಿಸಿದ ಕವಿತೆಗಳು ಮತದಾನ ಜಾಗೃತಿಗೆ ಕನ್ನಡಿಯಂತಿದ್ದಲ್ಲದೆ ನೆರೆ‌ದ ಸಭಿಕರ ಗಮನ ಸೆಳೆದವು.

ಹಿರಿಯ ಲೇಖಕಿ ಕಾವ್ಯಶ್ರೀ ಮಹಾಗಾಂವಕರ್ ಕಾರ್ಯಕ್ರಮದ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಜಿಪಂ ಉಪ ಕಾರ್ಯದರ್ಶಿ ಮತ್ತು ಸ್ವೀಪ್ ನೋಡಲ್ ಅಧಿಕಾರಿ ಅಬ್ದುಲ್ ಅಜೀಮ್, ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಪಾಟೀಲ, ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿಗಳಾದ ಶಿವರಾಜ ಎಸ್.ಅಂಡಗಿ, ಧರ್ಮಣ್ಣ ಎಚ್.ಧನ್ನಿ ವೇದಿಕೆ ಮೇಲಿದ್ದರು.

ಪ್ರಮುಖರಾದ ರವೀಂದ್ರಕುಮಾರ ಭಂಟನಳ್ಳಿ, ರಾಜೇಂದ್ರ ಮಾಡಬೂಳ, ಸಂತೋಷ ಕುಡಳ್ಳಿ, ಸಿದ್ಧಲಿಂಗ ಜಿ. ಬಾಳಿ, ಶರಣಬಸಪ್ಪ ಕೋಬಾಳ, ಎಂ.ಎನ್. ಸುಗಂಧಿ, ಚಂದ್ರಕಾಂತ ಸೂರನ್, ಡಾ. ಬಸವರಾಜ ಕುಮ್ನೂರ್, ಹಣಮಂತ ಪ್ರಭು, ಡಾ. ನಾಗವೇಣಿ ಪಾಟೀಲ, ಗಂಗಮ್ಮಾ ಹಿರೇಮಠ, ಗಣೇಶ ಚಿನ್ನಾಕಾರ, ಪ್ರಿಯಾಂಕಾ ಪಾಟೀಲ, ಪದ್ಮಾವತಿ ಮಾಲಿಪಾಟೀಲ, ಶಿವಾನಂದ ಮಠಪತಿ, ಸೋಮಶೇಖರ ನಂದಿಧ್ವಜ, ಜ್ಯೋತಿ ಕೋಟನೂರ, ಬಸವರಾಜ ಉಪ್ಪಿನ್, ಸೈಯದ್ ನಜೀರುದ್ದೀನ್, ನವಾಬ್ ಖಾನ್, ಕಲ್ಯಾಣಕುಮಾರ ಶೀಲವಂತ, ಮಲ್ಲಿಕಾರ್ಜುನ ಕುಮಸಿ, ಡಾ. ರೆಹಮಾನ್ ಪಟೇಲ್, ವಿನೋದಕುಮಾರ ಜೇನವೇರಿ, ಎಚ್.ಎಸ್.ಬರಗಾಲಿ, ಮಲ್ಲಿಕಾರ್ಜುನ ಇಬ್ರಾಹಿಂಪುರ, ಪದ್ಮಾವತಿ ನಾಯಕ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.