ಪುಸ್ತಕ ಓದುವ ಸಂಸ್ಕೃತಿ ರೂಢಿಸಿಕೊಳ್ಳಿ: ಕೆ.ಪಿ.ಬಾಬು

| Published : Apr 28 2024, 01:17 AM IST

ಸಾರಾಂಶ

ಮಕ್ಕಳಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಜೊತೆಗೆ ಸಂಸ್ಕೃತಿ - ಸಂಸ್ಕಾರದೊಂದಿಗೆ ಬೆಳವಣಿಗೆ ಕಾಣಬೇಕು. ತಂದೆ-ತಾಯಿಯರನ್ನು ಪ್ರೀತಿಸುವ, ಗುರು-ಹಿರಿಯರನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ ವಿದ್ಯಾರ್ಥಿಗಳ ಲಕ್ಷಣ. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ಸಮಾಜದ ಗೌರವಕ್ಕೆ ಪಾತ್ರರಾಗುವಿರಿ .

ಕನ್ನಡಪ್ರಭ ವಾರ್ತೆ ಮಂಡ್ಯ

ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸವನ್ನು ವಿದ್ಯಾರ್ಥಿಗಳು ರೂಢಿಸಿಕೊಳ್ಳಬೇಕು. ಇದರಿಂದ ಮಕ್ಕಳ ಜ್ಞಾನ ವೃದ್ಧಿಯಾಗುವುದಲ್ಲದೆ ವ್ಯಕ್ತಿತ್ವ ವಿಕಸನಗೊಳ್ಳುತ್ತದೆ ಎಂದು ರಾಮನಗರ ಡಯಟ್ ಉಪನ್ಯಾಸಕ ಕೆ.ಪಿ.ಬಾಬು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ತಾಲೂಕಿನ ಉಮ್ಮಡಹಳ್ಳಿ ಗ್ರಾಪಂಯ ಗ್ರಂಥಾಲಯ ಮತ್ತು ತರಬೇತಿ ಕೇಂದ್ರದ ವತಿಯಿಂದ ಆಯೋಜಿಸಿದ್ದ ‘ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರ’ದಲ್ಲಿ ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದರು.

ಮಕ್ಕಳಿಗೆ ಜೀವನದಲ್ಲಿ ಶಿಸ್ತು ಬಹಳ ಮುಖ್ಯ. ಜೊತೆಗೆ ಸಂಸ್ಕೃತಿ - ಸಂಸ್ಕಾರದೊಂದಿಗೆ ಬೆಳವಣಿಗೆ ಕಾಣಬೇಕು. ತಂದೆ-ತಾಯಿಯರನ್ನು ಪ್ರೀತಿಸುವ, ಗುರು-ಹಿರಿಯರನ್ನು ಗೌರವಿಸುವ ಮನೋಭಾವವನ್ನು ಬೆಳೆಸಿಕೊಳ್ಳುವುದು ಉತ್ತಮ ವಿದ್ಯಾರ್ಥಿಗಳ ಲಕ್ಷಣ. ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಾಗ ಸಮಾಜದ ಗೌರವಕ್ಕೆ ಪಾತ್ರರಾಗುವಿರಿ ಎಂದರು.

ಪುಸ್ತಕ ಜ್ಞಾನವಷ್ಟೇ ಅಲ್ಲದೇ ಸಾಮಾನ್ಯ ಜ್ಞಾನವೂ ವಿದ್ಯಾರ್ಥಿಗಳಿಗೆ ಬಹಳ ಮುಖ್ಯ. ಕೇವಲ ವಿದ್ಯಾರ್ಥಿಗಳು ಪುಸ್ತಕದ ಹುಳುಗಳಾಗುವುದರಿಂದ ಪ್ರಯೋಜನವಿಲ್ಲ. ಪ್ರಚಲಿತ ವಿದ್ಯಮಾನಗಳು, ನಮ್ಮ ಸುತ್ತಮುತ್ತ ನಡೆಯುವ ಆಗು-ಹೋಗುಗಳನ್ನು ಗಮನಿಸಬೇಕು. ಪ್ರಶ್ನಿಸುವ ಮನೋಭಾವವನ್ನು ಮಕ್ಕಳು ಬೆಳೆಸಿಕೊಂಡಾಗ ಹೆಚ್ಚು ವಿಷಯಗಳನ್ನು ಮನನ ಮಾಡಿಕೊಳ್ಳಬಹುದು ಎಂದು ಹೇಳಿದರು.

ಪರೀಕ್ಷೆಗಳೆಲ್ಲಾ ಮುಗಿದಿರುವುದರಿಂದ ಒಳ್ಳೆಯ ಪ್ರವಾಸಿ ತಾಣಗಳಿಗೆ, ನಮ್ಮ ನಾಡಿನ ಇತಿಹಾಸ ಪ್ರಸಿದ್ಧ ದೇವಸ್ಥಾನಗಳು, ಸ್ಮಾರಕಗಳಿಗೆ ಭೇಟಿ ನೀಡುವುದು. ಅಲ್ಲಿನ ಸ್ಥಳದ ವಿಶೇಷ, ದೇವಸ್ಥಾನಗಳ ಮಹತ್ವ, ಇತಿಹಾಸವನ್ನು ತಿಳಿದುಕೊಳ್ಳುವುದರಿಂದ ನಾಡಿನ ಸಂಸ್ಕೃತಿಯ ಪರಿಚಯವಾಗುತ್ತದೆ. ಪ್ರವಾಸದಿಂದ ಹೊಸ ಅನುಭವ ಪಡೆದುಕೊಂಡಂತಾಗುವುದು. ಅದರ ಬಗ್ಗೆ ಪುಟ್ಟ ಲೇಖನಗಳನ್ನು ಬರೆಯುವ, ವಿಶೇಷತೆಗಳನ್ನು ಗುರುತಿಸುವ ಕೌಶಲ್ಯವನ್ನು ಸಂಪಾದಿಸುವಂತೆ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಬಿಸಿಲಿನ ತಾಪ ಹೆಚ್ಚಾಗುತ್ತಿರುವುದನ್ನು ಮಕ್ಕಳು ಅರಿಯಬೇಕು. ಪರಿಸರ ಪ್ರೇಮವನ್ನು ರೂಢಿಸಿಕೊಂಡು ಗ್ರಾಮೀಣ ಪ್ರದೇಶದಲ್ಲಿ ಖಾಲಿ ಇರುವ ಸ್ಥಳಗಳಲ್ಲಿ ಗಿಡಗಳನ್ನು ನೆಡುವುದು, ಅವುಗಳನ್ನು ಪೋಷಿಸಿ ಬೆಳೆಸುವ ಜವಾಬ್ದಾರಿಯನ್ನು ಮಕ್ಕಳು ತೆಗೆದುಕೊಳ್ಳಬೇಕು. ಇದರಿಂದ ಶುದ್ಧ ಗಾಳಿ ನಿಮ್ಮದಾಗುತ್ತದೆ. ಪರಿಸರದ ಬೆಳವಣಿಗೆಗೂ ಕೊಡುಗೆ ನೀಡಿದಂತಾಗುವುದು. ಕಾಡುಗಳು ನಾಶವಾಗುತ್ತಿರುವುದೇ ಬರಗಾಲಕ್ಕೆ ಮೂಲ ಕಾರಣವಾಗಿದೆ. ಹಾಗಾಗಿ ಪರಿಸರವನ್ನು ಉಳಿಸಿ, ನೀರನ್ನು ಮಿತವಾಗಿ ಬಳಸುವಂತೆ ಸಲಹೆ ನೀಡಿದರು.

ಬೇಸಿಗೆ ಇರುವುದರಿಂದ ಆಹಾರ ಸೇವನೆಯಲ್ಲೂ ಜಾಗೃತಿ ವಹಿಸಬೇಕು. ಸಾಧ್ಯವಾದಷ್ಟು ದ್ರವರೂಪದ ಆಹಾರ ಸೇವನೆಗೆ ಒತ್ತು ನೀಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ಫಾಸ್ಟ್‌ಪುಡ್, ಜಂಕ್‌ಫುಡ್‌ಗಳಿಂದ ದೂರವಿದ್ದು ಮನೆಯಲ್ಲೇ ತಯಾರಿಸಿದ ಆಹಾರವನ್ನು ಸೇವಿಸಿ. ಮುದ್ದೆ, ಸೊಪ್ಪು, ತರಕಾರಿ, ಹಣ್ಣಿನ ರಸ ಇವೆಲ್ಲವೂ ದೇಹಾರೋಗ್ಯಕ್ಕೆ ಉತ್ತಮವಾಗಿರುತ್ತದೆ ಎಂದು ಸಲಹೆ ನೀಡಿದರು.

ಮೊಬೈಲ್, ಇಂಟರ್ನೆಟ್ ವೀಕ್ಷಿಸುವ ಸಮಯದಲ್ಲಿ ಜ್ಞಾನಾರ್ಜನೆಗೆ ಪೂರಕವಾಗುವ, ಒಳ್ಳೆಯ ವಿಷಯಗಳನ್ನು ತಿಳಿದುಕೊಳ್ಳುವುದಕ್ಕೆ ಸೀಮಿತವಾಗಿ ಉಪಯೋಗಿಸುವುದು ಒಳ್ಳೆಯದು. ದಿನಕ್ಕೊಂದು ಗಂಟೆ ಉಪಯೋಗಿಸಿ ಕಣ್ಣಿನ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು ಎಂದರು.