ಜಾತಿಗಿಂತ ನೀತಿಯ ಕಾರಣಕ್ಕೆ ಗೆಲ್ಲುತ್ತೇನೆ: ಕೋಟ

| Published : Apr 28 2024, 01:17 AM IST

ಜಾತಿಗಿಂತ ನೀತಿಯ ಕಾರಣಕ್ಕೆ ಗೆಲ್ಲುತ್ತೇನೆ: ಕೋಟ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆ ಸಂದರ್ಭದಲ್ಲಿ ಬಂಟ, ಬಿಲ್ಲವ ವಿಚಾರ ಚರ್ಚೆ ಆಗಿರಬಹುದು, ಆದರೆ ಅದೆಲ್ಲ ಮತವಾಗಿ ಪರಿವರ್ತನೆಯಾಗಿಲ್ಲ. ಈ ಚುನಾವಣೆಯಲ್ಲಿ ರಾಷ್ಟ್ರ ಮೊದಲು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಚುನಾವಣೆಯಲ್ಲಿ ಜಾತಿ ಮುಖ್ಯವಾಗುತ್ತೆ ಅಂತ ನಾನು ನಂಬುವುದಿಲ್ಲ ಎಂದು ಕೋಟ ತಿಳಿಸಿದರು.

ಕನ್ನಡಪ್ರಭ ವಾರ್ತೆ ಉಡುಪಿ

ಉಡುಪಿ - ಚಿಕ್ಕಮಗಳೂರು ಕ್ಷೇತ್ರಗಳೆರಡರಲ್ಲೂ ಬಿಜೆಪಿಗೆ ಮುನ್ನಡೆ ಸಿಗುತ್ತದೆ. ನಾಳೆ ನನ್ನ ಗೆಲುವು ಘೋಷಣೆಯಾದರೆ, ಅದರ ಗೌರವ ಎನ್‌ಡಿಎ ಕಾರ್ಯಕರ್ತರಿಗೆ ಸಲ್ಲುತ್ತದೆ ಎಂದು ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.

ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಪರವಾಗಿ ಜೆಡಿಎಸ್ ಪಕ್ಷ ನಿಶ್ಚಯವಾಗಿ ಮನಪೂರ್ವಕವಾಗಿ ಕೆಲಸ ಮಾಡಿದೆ. ಚಿಕ್ಕಮಗಳೂರಿನಲ್ಲಿ ಜೆಡಿಎಸ್ ನಾಯಕ ಭೋಜೇಗೌಡರು ಉತ್ತಮ ಕೆಲಸ ಮಾಡಿದ್ದಾರೆ ಎಂದರು.

ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ, ಚುನಾವಣೆ ಸಂದರ್ಭದಲ್ಲಿ ಬಂಟ, ಬಿಲ್ಲವ ವಿಚಾರ ಚರ್ಚೆ ಆಗಿರಬಹುದು, ಆದರೆ ಅದೆಲ್ಲ ಮತವಾಗಿ ಪರಿವರ್ತನೆಯಾಗಿಲ್ಲ. ಈ ಚುನಾವಣೆಯಲ್ಲಿ ರಾಷ್ಟ್ರ ಮೊದಲು ಎಂದು ಎಲ್ಲರೂ ಅಭಿಪ್ರಾಯಪಟ್ಟಿದ್ದಾರೆ. ಕೇಂದ್ರ ಚುನಾವಣೆಯಲ್ಲಿ ಜಾತಿ ಮುಖ್ಯವಾಗುತ್ತೆ ಅಂತ ನಾನು ನಂಬುವುದಿಲ್ಲ, ಜಾತಿಯ ಕಾರಣಕ್ಕಿಂತ ನೀತಿಯ ಕಾರಣಕ್ಕೆ ಗೆಲ್ಲುತ್ತೇನೆ ಅನ್ನೋ ವಿಶ್ವಾಸವಿದೆ ಎಂದು ಹೇಳಿದರು.

ಸಂಘಪರಿವಾರ ಈ ಬಾರಿ ಬಿಜೆಪಿ ಪರ ಕೆಲಸ ಮಾಡಿಲ್ಲ ಎನ್ನುವ ಅಭಿಪ್ರಾಯಕ್ಕೆ ಪ್ರತಿಕ್ರಿಯಿದ ಅವರು, ಆರ್‌ಎಸ್‌ಎಸ್ ಒಂದು ರಾಜಕೀಯ ಪಕ್ಷ ಅಲ್ಲ, ಅದರ ವೈಚಾರಿಕತೆಯಲ್ಲಿ ಅದಕ್ಕೆ ಸ್ಪಷ್ಟತೆ ಇದೆ. ಮೋದಿಯವರ ಗೆಲುವಿಗೆ ಸಂಘ ಪರಿವಾರವೂ ಯಾವುದೇ ಪ್ರಚಾರ ಇಲ್ಲದೆ ಕೆಲಸ ಮಾಡಿದೆ ಎಂದರು.

ಕುಂದಾಪುರದ ಮಾಜಿ ಶಾಸಕ ಹಾಲಾಡಿ ಅವರು ತಟಸ್ಥರಾಗಿದ್ದ ಬಗ್ಗೆ, ಹಾಲಾಡಿ ಅವರು ಸ್ವತಃ ಚುನಾವಣೆಗೆ ನಿಂತಾಗ ಜನರಲ್ಲಿ ಒಂದು ರೀತಿಯ ಅಭಿಪ್ರಾಯ ಇರುತ್ತದೆ. ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಕಿರಣ್ ಕೊಡ್ಗಿ ನಿಂತಾಗ ನಾವು ಗೆಲ್ಲುತ್ತೇವೆ ಎಂದು ಕಾಂಗ್ರೆಸ್‌ನವರು ಹೇಳಿದ್ದರು. ಆದರೆ ಕೊಡ್ಗಿ 45 ಸಾವಿರ ಮತಗಳ ಅಂತರದಲ್ಲಿ ಗೆದ್ದರು. ಈ ಬಾರಿಯೂ ಹಾಗೇ ಆಗುತ್ತದೆ ಎಂದು ವಿಶ್ವಾಸಪಟ್ಟರು.

ಸುಮಲತಾ, ದೇವೇಗೌಡ ಭಿನ್ನಮತ ವಿಚಾರಕ್ಕೆ ಪ್ರತಿಕ್ರಿಯಿಸಿ, ಚುನಾವಣೆ ಸಂದರ್ಭದಲ್ಲಿ ಸಣ್ಣ ಪುಟ್ಟ ಸಮಸ್ಯೆ ಬರುತ್ತದೆ. ಸುಮಲತಾ ಅವರ ವಿಚಾರ ಹಾಗೂ ದೇವೇಗೌಡರ ಭಾವನೆಯನ್ನು ನಮ್ಮ ಪಕ್ಷ ಕೇಳಿಸಿಕೊಂಡಿದೆ. ಗೊಂದಲ ಇದ್ದರೆ ನಮ್ಮ ಪಕ್ಷದ ಹಿರಿಯರು ಅರ್ಥ ಮಾಡಿಕೊಂಡು ಸರಿಪಡಿಸುತ್ತಾರೆ ಎಂದರು.