ಬಿಜೆಪಿಯನ್ನು ಕಿತ್ತು ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಒಂದಾಗಿ: ಸಚಿವ ಬಿ. ನಾಗೇಂದ್ರ

| Published : Apr 27 2024, 01:20 AM IST

ಬಿಜೆಪಿಯನ್ನು ಕಿತ್ತು ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಒಂದಾಗಿ: ಸಚಿವ ಬಿ. ನಾಗೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಕಾಂಗ್ರೆಸ್ ಕಾರ್ಯಕರ್ತರ ಧ್ವನಿ ಬಿಜೆಪಿಯವರಿಗೆ ಕೇಳಿಸಬೇಕು. ಈ ಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಹೇಳಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಿಜೆಪಿಯನ್ನು ಕಿತ್ತು ಹಾಕಲು ಕಾಂಗ್ರೆಸ್ ಕಾರ್ಯಕರ್ತರು ಒಟ್ಟಾಗಿ ಬನ್ನಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಕರೆ ನೀಡಿದರು.

ನಗರದ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಜಿಲ್ಲಾ ಸಮಿತಿಯಿಂದ ಶುಕ್ರವಾರ ಸಂಜೆ ಆಯೋಜಿಸಿದ್ದ ಪ್ರಜಾಧ್ವನಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಬರುವ ಮುನ್ನ ಮಾತನಾಡಿದರು.

ಕಾಂಗ್ರೆಸ್ ಕಾರ್ಯಕರ್ತರ ಧ್ವನಿ ಬಿಜೆಪಿಯವರಿಗೆ ಕೇಳಿಸಬೇಕು. ಈ ಚುನಾವಣೆಯಲ್ಲಿ ಬಿಜೆಪಿಗೆ ಬುದ್ಧಿ ಕಲಿಸೋಣ. ನಮ್ಮ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ. ನಾವೆಲ್ಲರೂ ಒಗ್ಗಟ್ಟಾಗಿ ಕೈ ಪಕ್ಷವನ್ನು ಅಧಿಕಾರಕ್ಕೆ ತರೋಣ ಎಂದರು.

ಸಚಿವ ಶಿವರಾಜ್ ತಂಗಡಗಿ ಮಾತನಾಡಿ, ಈ ಬಾರಿ ಸುಳ್ಳಿನ ಬಿಜೆಪಿ, ಸತ್ಯದ ಕಾಂಗ್ರೆಸ್ ನಡುವಿನ ಚುನಾವಣೆಯಾಗಿದೆ. ಬರೀ ಸುಳ್ಳುಗಳನ್ನೇ ಹೇಳಿಕೊಂಡು ಬಂದಿರುವ ಬಿಜೆಪಿಗೆ ದೇಶದ ಮತದಾರರು ತಕ್ಕ ಪಾಠ ಕಲಿಸುತ್ತಾರೆ. ಬಿಜೆಪಿ ಎಂದೂ ಅಭಿವೃದ್ಧಿ ವಿಚಾರವನ್ನಿಟ್ಟುಕೊಂಡು ರಾಜಕೀಯ ಮಾಡುವುದಿಲ್ಲ. ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಬಡವರ ಕಲ್ಯಾಣ ಅವರಿಗೆ ಬೇಕಾಗಿಲ್ಲ. ಶ್ರೀಮಂತರ ಕಲ್ಯಾಣಕ್ಕಾಗಿಯೇ ಬಿಜೆಪಿಯವರು ಯೋಚಿಸುತ್ತಾರೆ ಎಂದು ಟೀಕಿಸಿದರು.

ರಾಹುಲ್‌ ಮನವೊಲಿಕೆ

ಕಾಂಗ್ರೆಸ್ ಸಮಾವೇಶಕ್ಕೆಂದು ಆಗಮಿಸಿದ್ದ ರಾಹುಲ್ ಗಾಂಧಿ ಅವರು ಬಳ್ಳಾರಿಯ ಸಮಾವೇಶದಲ್ಲಿ ನಿರೀಕ್ಷೆಯಷ್ಟು ಜನರು ಸೇರಿಲ್ಲ ಎಂಬ ಕಾರಣಕ್ಕೆ ತೋರಣಗಲ್ ವಿಮಾನ ನಿಲ್ದಾಣದಿಂದ ವಾಪಾಸ್ ತೆರಳಲು ನಿರ್ಧರಿಸಿದ್ದರು. ರಾಹುಲ್ ಅವರ ನಿರ್ಧಾರದಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಕಾಂಗ್ರೆಸ್ ನಾಯಕರು ಆತಂಕಗೊಂಡಿದ್ದರು. ಬಳಿಕ ಕಾಂಗ್ರೆಸ್ ನಾಯಕರು ಮನವೊಲಿಸಿ, ರಾಹುಲ್ ಗಾಂಧಿ ಅವರನ್ನು ಬಳ್ಳಾರಿಗೆ ಕರೆಸುವಲ್ಲಿ ಯಶಸ್ವಿಯಾದರು.

ಬಿಸಿಲಿನಿಂದಾಗಿ ಸಂಜೆ 5 ಗಂಟೆ ವರೆಗೆ ಜನರು ಸೇರಿರಲಿಲ್ಲ. ರಾಹುಲ್ ಗಾಂಧಿ ಬರುವ ಹೊತ್ತಿಗೆ ಜಿಲ್ಲೆಯ ನಾನಾ ಭಾಗಗಳಿಂದ ಸಾವಿರಾರು ಕಾರ್ಯಕರ್ತರು ಜಮಾಯಿಸಿದ್ದರು. ಇದರಿಂದಾಗಿ ಕಾಂಗ್ರೆಸ್ಸಿಗರು ನಿರಮ್ಮಳಗೊಂಡರು.

ಮುಂದೆ ಬನ್ನಿ...ಇನ್ನೂ ಮುಂದೆ ಬನ್ನಿ

ಸಮಾವೇಶಕ್ಕೆಂದು ಆಗಮಿಸಿದ್ದ ಜನರಿಗೆ ಮುಂದೆ ಬನ್ನಿ. ಇನ್ನೂ ಮುಂದೆ ಬನ್ನಿ ಎಂದು ಕಾಂಗ್ರೆಸ್ ನಾಯಕರು ಮೈಕ್‌ನಲ್ಲಿ ಪದೇ ಪದೇ ಹೇಳುತ್ತಿರುವುದು ಕಂಡು ಬಂತು. ರಾಹುಲ್ ಗಾಂಧಿ ಅವರು ಕೆಲವೇ ಹೊತ್ತಿನಲ್ಲಿ ಆಗಮಿಸಲಿದ್ದಾರೆ. ಹಿಂದೆ ಕುಳಿತವರು ಮುಂದೆ ಬನ್ನಿ. ಸೈಡ್‌ನಲ್ಲಿ ನಿಂತವರು ಆಸೀನರಾಗಿ. ಹೊರಗಡೆ ಇದ್ದವರು ಗೇಟ್ ಕಿತ್ತು ಒಳಗೆ ಬನ್ನಿ. ಪೊಲೀಸರು ದಯವಿಟ್ಟು ನಮ್ಮ ಕಾರ್ಯಕರ್ತರನ್ನು ಒಳಗಡೆ ಕಳಿಸಿಕೊಡಿ. ಪೊಲೀಸರು ಗೇಟ್ ತೆರವುಗೊಳಿಸಿ ಎಂದು ಕಾಂಗ್ರೆಸ್ ನಾಯಕರು ಗೊಗರೆಯುವ ದೃಶ್ಯ ಕಂಡು ಬಂತು.

ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಹೆಚ್ಚಿನ ಸಂಖ್ಯೆಯ ಜನರು ಕಾಂಗ್ರೆಸ್ ಸಮಾವೇಶಕ್ಕೆ ಆಗಮಿಸಿರುವುದು ಕಂಡು ಬಂತು.