ಕಾರ್ಯಕರ್ತರ ಜೊತೆ ದಿನ ಕಳೆದ ಬಾಲರಾಜು

| Published : Apr 28 2024, 01:26 AM IST

ಸಾರಾಂಶ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜು ಅವರು ಶನಿವಾರ ಇಡೀ ದಿನವನ್ನು ಕೊಳ್ಳೇಗಾಲದ ತಮ್ಮ ನಿವಾಸದಲ್ಲಿ ಕಾರ್ಯಕರ್ತರು, ಮುಖಂಡರ ಜೊತೆಯೇ ಕಳೆದರು.

ಎನ್.ನಾಗೇಂದ್ರಸ್ವಾಮಿ

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಚಾಮರಾಜನಗರ ಲೋಕಸಭಾ ಕ್ಷೇತ್ರದ ಎನ್‌ಡಿಎ ಅಭ್ಯರ್ಥಿ ಎಸ್.ಬಾಲರಾಜು ಅವರು ಶನಿವಾರ ಇಡೀ ದಿನವನ್ನು ಕೊಳ್ಳೇಗಾಲದ ತಮ್ಮ ನಿವಾಸದಲ್ಲಿ ಕಾರ್ಯಕರ್ತರು, ಮುಖಂಡರ ಜೊತೆಯೇ ಕಳೆದರು.ಬೆಳಗ್ಗೆ 6 ಗಂಟೆಯಿಂದಲೇ ತಮ್ಮ ದಿನಚರಿ ಪ್ರಾರಂಭಿಸಿದ ಬಾಲರಾಜು ಬೆಳಗ್ಗೆ ಧ್ಯಾನ, ಪೂಜೆ ಬಳಿಕ ತಮ್ಮ ನಿವಾಸಕ್ಕೆ ಬಂದ ಕಾರ್ಯಕರ್ತರ ಜೊತೆ ಉಭಯ ಕುಶಲೋಪರಿ ವಿಚಾರಿಸಿದರಲ್ಲದೆ ತಮ್ಮ ತಮ್ಮ ಗ್ರಾಮಗಳಲ್ಲಿ (ಬೂತ್) ದೊರೆತ ಮತಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು. ಬೆಳಗ್ಗೆ 9.30ಕ್ಕೆ ತಮ್ಮ ಜೊತೆಗಿದ್ದ ಮುಖಂಡರ ಜೊತೆಯೇ ಮಾಜಿ ಶಾಸಕ ಉಪಹಾರ ಸವಿದರು. ಪುನಃ ಚಾಮರಾಜನಗರ, ಗುಂಡ್ಲುಪೇಚೆ, ಹನೂರು, ನಂಜನಗೂಡು, ನರಸೀಪುರದಿಂದ ಆಗಮಿಸಿದ ಬಿಜೆಪಿ ಕಾರ್ಯಕರ್ತರ ಜೊತೆ ಮಾತುಕತೆ ನಡೆಸಿದರು.

ಮಧ್ಯಾಹ್ನದ ಊಟವನ್ನು ಕಾರ್ಯಕರ್ತರ ಜೊತೆಗೂಡಿ ಮಾಡಿದರು. ಚುನಾವಣೆಯಲ್ಲಿನ ಮುನ್ನಡೆ, ಹಿನ್ನೆಡೆಗಳ ಬಗ್ಗೆ ಚರ್ಚಿಸಿದರು. ಸಂಜೆಯ ವೇಳೆಗೆ ಕೊಳ್ಳೇಗಾಲದ ಕಾರ್ಯಕರ್ತರು, ತಮ್ಮ ಬೆಂಬಲಿಗರ ಜೊತೆ ಕೊಳ್ಳೇಗಾಲದಲ್ಲಿ ಯಾವ ಯಾವ ಬೂತ್‌ನಲ್ಲಿ ಯಾವ ರೀತಿ ಮತದಾನ ಪ್ರಕ್ರಿಯೆ ನಡೆದಿದೆ. ಇಲ್ಲಿ ತಮಗೆ ದೊರೆತಿರಬಹುದಾದ ಮತಗಳ ಪ್ರಮಾಣದ ಕುರಿತು ಮಾತನಾಡಿದರು. ಇಂಡಿಗನತ್ತ ಘಟನೆಗೆ ಜಿಲ್ಲಾಡಳಿತ, ಸರ್ಕಾರವೇ ಹೊಣೆ:

ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಇಂಡಿನನತ್ತ ಗ್ರಾಮದಲ್ಲಿ ನಡೆದ ಅಹಿತಕರ ಘಟನೆಗೆ ಸರ್ಕಾರ ಹಾಗೂ ಜಿಲ್ಲಾಡಳಿತವೇ ನೇರ ಹೊಣೆ ಹೊರಬೇಕು. ಮುಂದೆ ಅಲ್ಲಿನ ನಿವಾಸಿಗಳು ಪ್ರತಿಭಟನೆ, ಬಹಿಷ್ಕಾರದಂತಹ ತೀರ್ಮಾನಕ್ಕೆ ಬರುವ ಮುನ್ನವೇ ಸರ್ಕಾರ ಎಚ್ಚೆತ್ತು ಅಲ್ಲಿನ ನಿವಾಸಿಗಳಿಗೆ ಮೂಲಭೂತ ಸೌಲಭ್ಯ ಕಲ್ಪಿಸಲು ಅಗತ್ಯ ಕ್ರಮಕೈಗೊಳ್ಳಬೇಕು ಎಂದು ಮಾಜಿ ಶಾಸಕ, ಎನ್‌ಡಿಎ ಅಭ್ಯರ್ಥಿ ಎಸ್ ಬಾಲರಾಜು ಹೇಳಿದರು.

ಇಂಡಿಗನತ್ತ ಗ್ರಾಮದ ಸಮಸ್ಯೆ ಬಗ್ಗೆ ಖುದ್ದು ಸಿಎಂ ಸಿದ್ದರಾಮಯ್ಯರಿಗೆ ತಿಳಿದಿದೆ. ಹನೂರು ಕ್ಷೇತ್ರದಲ್ಲಿ ಎರಡು ಬಾರಿ ಶಾಸಕರಾಗಿರುವ, ಕಾಂಗ್ರೆಸ್ ಪಕ್ಷದ ನರೇಂದ್ರ ಅವರಿಗೆ ತಿಳಿದಿದೆ. ಸ್ವತಃ ಉಸ್ತುವಾರಿ ಸಚಿವರು, ಸಮಾಜ ಕಲ್ಯಾಣ ಸಚಿವ ಮಹದೇವಪ್ಪ ಅವರಿಗೂ ಅರಿವಿದೆ. ಹಾಗಿದ್ದರೂ ಸಹಾ ಅಲ್ಲಿನ ಸಮಸ್ಯೆ ನಿವಾರಣೆಗೆ ಕ್ರಮಕೈಗೊಳ್ಳುವ ಕುರಿತು ಮತದಾರರ ಮನವೊಲಿಸುವ ಕುರಿತು ಕಿಂಚಿತ್ತು ಗಮನ ಹರಿಸಲಿಲ್ಲ, ಅದೇ ರೀತಿಯಲ್ಲಿ ಜಿಲ್ಲಾಡಳಿತ ಸಹಾ ಗ್ರಾಮಕ್ಕೆ ತೆರಳಿತ್ತಾದರೂ ಗ್ರಾಮಸ್ಥರ ಮನವೊಲಿಸುವಲ್ಲಿ, ಮುಂದಿನ ದಿನಗಳಲ್ಲಿ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಮಸ್ಥರಲ್ಲಿ ಅರಿವುಂಟುಮಾಡಲಿಲ್ಲ. ಈ ಹಿನ್ನೆಲೆ ಇಂಡಿಗನತ್ತ ಘಟನೆಯ ನೇರ ಹೊಣೆಯನ್ನು ಕಾಂಗ್ರೆಸ್ ಸರ್ಕಾರವೇ ಹೊರಬೇಕು, ಅಲ್ಲಿನ ಗ್ರಾಮಸ್ಥರು ಇಂತಹ ಘಟನೆಯಲ್ಲಿ ಭಾಗವಹಿಸುವವರಲ್ಲ. ಘಟನೆ ವಿಕೋಪಕ್ಕೆ ತೆರಳಿ ಈ ಘಟನೆ ನಡೆದಿರಬಹುದೇ ವಿನಃ ಗ್ರಾಮಸ್ಥರ ತಪ್ಪಿನಿಂದ ಈ ಘಟನೆ ನಡೆದಿಲ್ಲ. ಇದನ್ನೆ ಜಿಲ್ಲಾಡಳಿತ, ಸರ್ಕಾರ ದ್ವೇಷ ಸಾಧಿಸದೆ ಮೂಲ ಸೌಲಭ್ಯಕ್ಕೆ ಮುಂದಾಲಿ. ಇದನ್ನು ದೊಡ್ಡದೆಂಬಂತೆ ಬಿಂಬಿಸುವುದನ್ನು ಬಿಟ್ಟು, ಇನ್ನಾದರೂ ಅಗತ್ಯ ಮೂಲ ಸೌಲಭ್ಯ ಕಲ್ಪಿಸಲು ಕ್ರಮಕ್ಕೆ ಮುಂದಾಗಬೇಕು ಎಂದರು.ಎಚ್‌ಸಿಎಂ ಜೊತೆ ಮಾತನಾಡಿಲ್ಲ:

ನಾನು ಸಚಿವ ಮಹದೇವಪ್ಪ ಜೊತೆ ಪ್ರಚಾರ ಸಭೆಗಳಲ್ಲೂ ಸಹಾ ಮುಖಾಮುಖಿಯಾಗಿಲ್ಲ, ದೂರವಾಣಿ ಮೂಲಕವೂ ಚರ್ಚಿಸಿಲ್ಲ, ಆದರೂ ಅವರಿಂದ ಹಣ ಪಡೆದು, ಒಳ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಕಾಂಗ್ರೆಸ್ಸಿಗರು ಸೋಲಿನ ಭೀತಿಯಿಂದಾಗಿ ಇಲ್ಲ, ಸಲ್ಲದ ಆರೋಪ ಸೃಷ್ಠಿಸಿದರು. ಇದೆಲ್ಲಾ ಶುದ್ಧ ಸುಳ್ಳು ಎಂದು ಬಾಲರಾಜು ಹೇಳಿದರು. ನನ್ನ ವಿರುದ್ಧ ಟಿಕೆಟ್ ಘೋಷಣೆಯ ನಂತರದಿಂದಲೂ ಸಹಾ ಅನೇಕ ಅಪಪ್ರಚಾರ ಸೃಷ್ಠಿಸಲಾಯಿತು. ಕೊನೆಯಲ್ಲೂ ಅದೇ ರೀತಿಯ ಅಪಪ್ರಚಾರ, ವದಂತಿಗಳನ್ನೆ ಸೖಷ್ಟಿಸಲಾಯಿತು.

ಸುಳ್ಳು ಕಾಂಗ್ರೆಸ್ಸಿಗರ ಮನೆ ದೇವರಿದ್ದಂತೆ ಹಾಗಾಗಿಯೇ ಅವರು ನನ್ನ ಮೇಲೆ ಅನೇಕ ಸುಳ್ಳು ಸುದ್ದಿಗಳನ್ನು ಹಬ್ಬಿಸಿದರು. ಇಂತಹ ಸುಳ್ಳು ವದಂತಿಗಳಿಗೆ ನಾನು ಜಗ್ಗಿಲ್ಲ, ಕುಗ್ಗಿಲ್ಲ, ಮತದಾರರ ಆಶೀರ್ವಾದಿಂದ ನಾನೇ ಗೆಲ್ಲುವೆ ಎಂದರು. ನಾನು ಕೇಂದ್ರದ ಮಾಜಿ ಸಚಿವ ದಿ.ರಾಜಶೇಖರಮೂರ್ತಿಯವರ ಶಿಷ್ಯ. ನಾನು ಪಕ್ಷದ ಶಿಸ್ತಿನ ಸಿಪಾಯಿ, ನನ್ನ ಗುರುಗಳಂತೆ ನಾನು ಸಹಾ ಶಿಸ್ತು ರೂಡಿಸಿಕೊಂಡಿರುವೆ. ಬಸವಾದಿ ಶರಣರೇ ನನಗೆ ಆದರ್ಶ ಹಾಗಾಗಿ ನಾನು ಎಂದಿಗೂ ಸಹಾ ನನ್ನ ಚುನಾವಣೆಯಲ್ಲಿ ಎಡವಿಲ್ಲ, ನನ್ನ ಪರ ಅಪಪ್ರಚಾರ ನಡೆಸುತ್ತಲೆ ಬಂದವರಿಗೆ ಮಹದೇಶ್ವರ ಒಳ್ಳೇ ಬುದ್ಧಿ ಕೊಡಲಿ ಎಂದರು. ಚಾಮರಾಜನಗರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭಾ ಕ್ಷೇತ್ರಗಳಲ್ಲೂ ಬಿಜೆಪಿ ಪರ ಉತ್ತಮ ಪ್ರತಿಕ್ರಿಯೆ ಬಂದಿದೆ. ಅಭೂತಪೂರ್ವ ಬೆಂಬಲ ಸಹಾ ಸಿಕ್ಕಿದೆ. ಗೆಲ್ಲುವ ವಿಶ್ವಾಸವಿದೆ ಎಂದರು.ನಾನು ಎನ್‌ಡಿಎ ಪಕ್ಷದ ಅಭ್ಯರ್ಥಿಯಾಗಿ ಜನರ ಮುಂದೆ ತೆರಳಿ ಮತ ಕೇಳಿದ್ದೇನೆ. ಪ್ರಚಾರ ಸಭೆಗಳಲ್ಲಿ ಪಾಲ್ಗೊಂಡಿರುವೆ. ಆದರೆ ಈ ಬಾರಿ ಹಣಕಾಸಿನ ನಿರ್ವಹಣೆ ಇತ್ಯಾದಿ ಕಾರ್ಯಕ್ರಮಗಳನ್ನು ಬಿಜೆಪಿಯ ರಾಜ್ಯ ಸಮಿತಿ ಹಾಗೂ ಮುಖಂಡರೆ ನೋಡಿಕೊಂಡರು. ಬೂತ್ ಹಂತದ ಹಣ ಹಂಚಿಕೆ ವಿಚಾರದಲ್ಲೂ ಮುಖಂಡರೆ ಕ್ರಮಕೈಗೊಂಡರು ಎಂದರು.