ಇರಾನ್ ವಶಪಡಿಸಿಕೊಂಡ ಹಡಗಲ್ಲಿದ್ದ ಕೇರಳ ಯುವತಿ ತವರಿಗೆ

| Published : Apr 19 2024, 01:02 AM IST / Updated: Apr 19 2024, 06:42 AM IST

ಇರಾನ್ ವಶಪಡಿಸಿಕೊಂಡ ಹಡಗಲ್ಲಿದ್ದ ಕೇರಳ ಯುವತಿ ತವರಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಕಳೆದ ಶನಿವಾರ ಇರಾನ್‌ ಸೇನಾಪಡೆ ವಶಪಡಿಸಿಕೊಂಡಿದ್ದ ಇಸ್ರೇಲ್‌ನ ಸರಕು ಹಡಗಿನ 17 ಭಾರತೀಯ ಸಿಬ್ಬಂದಿಗಳ ಪೈಕಿ ಒಬ್ಬರಾದ ಕೇರಳ ಮೂಲದ ಆ್ಯನ್‌ ಟೆಸ್ಸಾ ಜೋಸೆಫ್‌ ಅವರನ್ನು ಬಿಡುಗಡೆ ಮಾಡಲಾಗಿದೆ.

ನವದೆಹಲಿ: ಕಳೆದ ಶನಿವಾರ ಇರಾನ್‌ ಸೇನಾಪಡೆ ವಶಪಡಿಸಿಕೊಂಡಿದ್ದ ಇಸ್ರೇಲ್‌ನ ಸರಕು ಹಡಗಿನ 17 ಭಾರತೀಯ ಸಿಬ್ಬಂದಿಗಳ ಪೈಕಿ ಒಬ್ಬರಾದ ಕೇರಳ ಮೂಲದ ಆ್ಯನ್‌ ಟೆಸ್ಸಾ ಜೋಸೆಫ್‌ ಅವರನ್ನು ಬಿಡುಗಡೆ ಮಾಡಲಾಗಿದೆ. ಬಿಡುಗಡೆಯಾದ ಟೆಸ್ಸಾ ಗುರುವಾರ ಸುರಕ್ಷಿತವಾಗಿ ತವರಿಗೆ ಮರಳಿದ್ದಾರೆ. ಇದರೊಂದಿಗೆ ಭಾರತದ ರಾಜತಾಂತ್ರಿಕತೆಗೆ ಮತ್ತೊಂದು ಯಶಸ್ಸು ಸಿಕ್ಕಂತಾಗಿದೆ.

ಇಸ್ರೇಲ್‌ ಮೇಲಿನ ಸೇಡಿನ ಕಾರಣಕ್ಕಾಗಿ ಆ ದೇಶಕ್ಕೆ ಸೇರಿದ ‘ಎಂಎಸ್ ಸಿ ಅರೀಸ್ ’ ಹಡಗನ್ನು ಇರಾನ್ ಕಳೆ ಶನಿವಾರ ವಶಪಡಿಸಿಕೊಂಡಿತ್ತು. ಅದರಲ್ಲಿ ಆ್ಯನ್‌ ಸೇರಿದಂತೆ 7 ಮಂದಿ ಭಾರತೀಯ ಸಿಬ್ಬಂದಿಗಳಿದ್ದರು. ಇರಾನ್‌- ಇಸ್ರೇಲ್‌ ವೈಮನಸ್ಯದ ಹಿನ್ನೆಲೆಯಲ್ಲಿ ಭಾರತೀಯ ಸಿಬ್ಬಂದಿ ಸುರಕ್ಷತೆ ಬಗ್ಗೆ ಕಳವಳ ಉಂಟಾಗಿತ್ತು. ಆದರೆ ಭಾರತೀಯ ಸಿಬ್ಬಂದಿ ಬಿಡುಗಡೆಗೆ ಇರಾನ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ನಡೆಸಿದ ಸತತ ಪ್ರಯತ್ನದ ಫಲವಾಗಿ ಮೊದಲ ಹಂತದಲ್ಲಿ ಏಕೈಕ ಮಹಿಳಾ ಸಿಬ್ಬಂದಿಯಾಗಿದ್ದ ಟೆಸ್ಸಾರನ್ನು ಇರಾನ್‌ ಸರ್ಕಾರ ಬಿಡುಗಡೆ ಮಾಡಿದೆ.

ಈ ಬಗ್ಗೆ ಕೇಂದ್ರ ವಿದೇಶಾಂಗ ಸಚಿವಾಲಯ ಮಾಹಿತಿ ನೀಡಿದ್ದು, ‘ಉಳಿದ 16 ಭಾರತೀಯರ ಸಿಬ್ಬಂದಿಗಳ ಜೊತೆ ಟೆಹ್ರಾನ್ ಸಂಪಕರ್ದಲ್ಲಿದೆ. ಹಡಗಿನಲ್ಲಿರುವವರು ಎಲ್ಲರೂ ಸುರಕ್ಷಿತವಾಗಿದ್ದಾರೆ. ತಮ್ಮ ಕುಟುಂಬದ ಜೊತೆ ಸಂಪರ್ಕದಲ್ಲಿದ್ದಾರೆ ’ ಎಂದಿದೆ. ನಾಲ್ಕು ದಿನಗಳ ಹಿಂದಷ್ಟೇ ಹಡಗಿನಲ್ಲಿ ಸಿಲುಕಿರುವ ಭಾರತೀಯರ ರಕ್ಷಣೆಗಾಗಿ ಕೇಂದ್ರ ವಿದೇಶಾಂಗ ಸಚಿವ ಜೈ ಶಂಕರ್ ಇರಾನ್ ಸಹವರ್ತಿ ಅಮಿರ್ ಅಬ್ದುಲ್ಲಾಹಿಯಾನ್ ಜೊತೆ ಮಾತುಕತೆ ನಡೆಸಿದ್ದರು.