ಬಿಜೆಪಿಯ 3ನೇ ಗೆಲುವಿಗೆ ಕಡಿವಾಣ ಹಾಕಲು ಕಾಂಗ್ರೆಸ್‌ ಸಜ್ಜು

| Published : May 02 2024, 01:33 AM IST / Updated: May 02 2024, 09:41 AM IST

bjp congress
ಬಿಜೆಪಿಯ 3ನೇ ಗೆಲುವಿಗೆ ಕಡಿವಾಣ ಹಾಕಲು ಕಾಂಗ್ರೆಸ್‌ ಸಜ್ಜು
Share this Article
  • FB
  • TW
  • Linkdin
  • Email

ಸಾರಾಂಶ

ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಯಚೂರು ಲೋಕಸಭಾ ಕ್ಷೇತ್ರದಲ್ಲಿ ಮೂರನೇ ಬಾರಿ ಕಮಲ ಅರಳಿಸಿ ಕಮಾಲ್‌ ಮಾಡಲು ಬಿಜೆಪಿ ಹೊರಟಿದೆ.

ರಾಮಕೃಷ್ಣ ದಾಸರಿ

 ರಾಯಚೂರು : ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ರಾಯಚೂರು ಲೋಕಸಭಾ ಕ್ಷೇತ್ರ ಹಿಂದೆ ಕಾಂಗ್ರೆಸ್‌ನ ಭದ್ರಕೋಟೆ. 1957ರಿಂದ ನಡೆದ 17 ಚುನಾವಣೆಗಳಲ್ಲಿ 13 ಬಾರಿ ಕಾಂಗ್ರೆಸ್, ಎರಡು ಸಲ ಬಿಜೆಪಿ ಮತ್ತು ತಲಾ ಒಂದು ಬಾರಿ ಜೆಡಿಎಸ್‌ ಹಾಗೂ ಪಕ್ಷೇತರರು ಗೆದ್ದಿದ್ದಾರೆ. 

2009 ಮತ್ತು 2019ರಲ್ಲಿ ಬಿಜೆಪಿ ಪಾಲಾಗಿದ್ದ ಕ್ಷೇತ್ರವನ್ನು ಮತ್ತೆ ಕೈವಶ ಮಾಡಿಕೊಳ್ಳಲು ಕಾಂಗ್ರೆಸ್‌ ಕಸರತ್ತು ನಡೆಸುತ್ತಿದೆ. ಇತ್ತ ಕ್ಷೇತ್ರದಲ್ಲಿ ಮೂರನೇ ಬಾರಿ ಕಮಲ ಅರಳಿಸಿ ಕಮಾಲ್‌ ಮಾಡಲು ಬಿಜೆಪಿ ಹೊರಟಿದೆ. ಪಕ್ಕದ ಯಾದಗಿರಿಯ ಮೂರು ಹಾಗೂ ರಾಯಚೂರಿನ ಐದು ವಿಧಾನಸಭಾ ಕ್ಷೇತ್ರಗಳನ್ನೊಳಗೊಂಡ ಕ್ಷೇತ್ರದ ಕಣದಲ್ಲಿ ಒಟ್ಟು 8 ಅಭ್ಯರ್ಥಿಗಳಿದ್ದಾರೆ. 

ಆದರೆ, ಬಿಜೆಪಿಯ ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಹಾಗೂ ಕಾಂಗ್ರೆಸ್‌ನ ಜಿ.ಕುಮಾರ ನಾಯಕ ನಡುವೆಯೇ ಪೈಪೋಟಿ ಇದೆ. ರಾಜಾ ಅಮರೇಶ್ವರ ನಾಯಕ ಅವರು ಬಿಜೆಪಿಯಿಂದ ಎರಡನೇ ಸಲ ಸಂಸದರಾಗುವ ಕಾತುರದಲ್ಲಿದ್ದರೆ, ಏಳು ತಿಂಗಳ ಹಿಂದೆ ಐಎಎಸ್‌ ಸೇವೆಯಿಂದ ನಿವೃತ್ತಿ ಪಡೆದು ಕಾಂಗ್ರೆಸ್‌ ಸೇರಿ ಟಿಕೆಟ್‌ ಗಿಟ್ಟಿಸಿಕೊಂಡಿರುವ ಜಿ.ಕುಮಾರ ನಾಯಕ ಅವರು ತಮ್ಮ ಜೀವನದ ಎರಡನೇ ಇನ್ನಿಂಗ್ಸ್‌ ಆರಂಭಿಸುವ ಲೆಕ್ಕಾಚಾರದಲ್ಲಿದ್ದಾರೆ. 

ಕ್ಷೇತ್ರದ ವ್ಯಾಪ್ತಿ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ 5ರಲ್ಲಿ ಕಾಂಗ್ರೆಸ್, ಎರಡರಲ್ಲಿ ಬಿಜೆಪಿ ಮತ್ತು ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದಾರೆ. ಮೋದಿ ಅಲೆ, ಜೆಡಿಎಸ್‌ ಮೈತ್ರಿ, ಹಾಲಿ ಸಂಸದರಿಗೆ ಮತ್ತೊಮ್ಮೆ ಟಿಕೆಟ್‌ ದೊರಕಿರುವುದು ಬಿಜೆಪಿಗೆ ಬಲ ತಂದುಕೊಟ್ಟಿದೆ. ಜೊತೆಗೆ, ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದ ಬಿ.ವಿ.ನಾಯಕರ ಅಸಮಾಧಾನ ಶಮನಗೊಳಿಸುವಲ್ಲಿ ನಾಯಕರು ಯಶಸ್ವಿಯಾಗಿದ್ದಾರೆ.

ನಿವೃತ್ತ ಐಎಎಸ್‌ ಅಧಿಕಾರಿಯಾಗಿರುವ ಜಿ.ಕುಮಾರ ನಾಯಕಗೆ ಆಡಳಿತ ವಲಯದ ಸಂಪರ್ಕ, ಗ್ಯಾರಂಟಿ ಯೋಜನೆಗಳು, ಸಿದ್ದು, ಡಿಕೆಶಿ ವರ್ಚಸ್ಸು, ಗೆಲುವಿನ ಭರವಸೆ ಮೂಡಿಸಿದೆ.

- - -ಬಾಕ್ಸ್‌,,ರಾಜಾ ಅಮರೇಶ್ವರ ನಾಯಕ (ಬಿಜೆಪಿ)ಹಾಲಿ ಸಂಸದ ರಾಜಾ ಅಮರೇಶ್ವರ ನಾಯಕ ಅವರು ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕಿನ ಗುಂತಗೋಳ ಸಂಸ್ಥಾನದ ರಾಜ ಮನೆತನದವರು. ಎಲ್ಎಲ್‌ಬಿ ಪದವಿ ಪಡೆದು 1989ರಲ್ಲಿ ಲಿಂಗಸುಗೂರಿನಿಂದ ಹಾಗೂ 1999ರಲ್ಲಿ ಕಲ್ಮಾಲ ಕ್ಷೇತ್ರದಿಂದ ಕಾಂಗ್ರೆಸ್‌ ಶಾಸಕರಾಗಿ ಸಚಿವರಾಗಿದ್ದರು. 2019ರಲ್ಲಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಮೊದಲ ಬಾರಿಗೆ ಮೋದಿ ಅಲೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದರು. ಐದು ವರ್ಷ ಪಕ್ಷದ ಮುಖಂಡರು, ಕಾರ್ಯಕರ್ತರು ಮತ್ತು ಕ್ಷೇತ್ರದ ಜನಸಂಪರ್ಕ ಹೊಂದಿಲ್ಲ ಎನ್ನುವ ಅಪವಾದ ಹೊಂದಿದ್ದು ಬಿಟ್ಟರೆ, ಉಳಿದೆಲ್ಲದರಲ್ಲಿ ಉತ್ತಮ ಅಭಿಪ್ರಾಯವಿದ್ದು, ಕೇಂದ್ರದ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದಾರೆ.

ಜಿ.ಕುಮಾರ ನಾಯಕ (ಕಾಂಗ್ರೆಸ್‌)

ಬೆಂಗಳೂರು ಮೂಲದ ನಿವೃತ್ತ ಐಎಎಸ್‌ ಅಧಿಕಾರಿ ಜಿ.ಕುಮಾರ ನಾಯಕ ಅವರು ರಾಜಕೀಯಕ್ಕೆ ಹೊಸಬರು. ಕಳೆದ 2023 ಸೆಪ್ಟೆಂಬರ್‌ನಲ್ಲಿ ಸೇವೆಯಿಂದ ನಿವೃತ್ತಿ ಹೊಂದಿ ಕಾಂಗ್ರೆಸ್‌ ಸೇರಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. 1999ರಲ್ಲಿ ರಾಯಚೂರು ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಇವರು ಸೇವಾವಧಿಯಲ್ಲಿ ಜಿಲ್ಲೆ ಜೊತೆ ನಿರಂತರವಾಗಿ ಸಂಪರ್ಕವನ್ನಿಟ್ಟುಕೊಂಡು ಬಂದಿದ್ದಾರೆ. ರಾಜಕೀಯದಲ್ಲಿ ಅನುಭವದ ಕೊರತೆ, ಸ್ಥಳೀಯರಲ್ಲದೇ ಇರುವುದು, ಪಕ್ಷದಲ್ಲಿನ ಆಂತರಿಕ ಸಂಘರ್ಷ, ಕ್ಷೇತ್ರದಲ್ಲಿ ಚಿರಪರಿಚಿತರಲ್ಲದೇ ಇರುವುದು ಮೈನಸ್‌ ಪಾಯಿಂಟ್‌.

ಜಾತಿ-ಮತ ಲೆಕ್ಕಾಚಾರ:ಎಸ್ಟಿ ಮೀಸಲು ಕ್ಷೇತ್ರದಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿರುವುದು ವಿಶೇಷ. ಒಟ್ಟು 20.10 ಲಕ್ಷ ಮತದಾರರ ಪೈಕಿ 10.15 ಲಕ್ಷ ಮಹಿಳಾ ಮತದಾರರಿರುವುದರಿಂದ ಇವರೇ ನಿರ್ಣಾಯಕರಾಗುವ ಸಾಧ್ಯತೆಗಳಿವೆ. ಎಸ್ಟಿ 3.65 ಲಕ್ಷ, ಲಿಂಗಾಯತರು 3.20 ಲಕ್ಷ, ಎಸ್ಸಿ 3.45, ಕುರುಬರು 2.50 ಲಕ್ಷ, ಮುಸ್ಲಿಂ 2.90 ಲಕ್ಷ, ಗಂಗಾಮತಸ್ಥರು 1.50 ಲಕ್ಷ ಮತ್ತು 2.9 ಲಕ್ಷದಷ್ಟು ಇತರ ಸಮಾಜದ ಮತದಾರರಿದ್ದಾರೆ. ಮಹಿಳಾ ಮತಗಳೊಂದಿಗೆ ಲಿಂಗಾಯತರು, ಎಸ್ಸಿ ಹಾಗೂ ಹಿಂದುಳಿದ ವರ್ಗದ ಸಮಾಜದವರ ಮತಗಳ ಆಧಾರದ ಮೇಲೆ ಸೋಲು-ಗೆಲವಿನ ಫಲಿತಾಂಶ ತೀರ್ಮಾನವಾಗಲಿದೆ.ಕ್ಷೇತ್ರದ ಮತದಾರರ ವಿವರ* ಪುರುಷರು: 9,94,646* ಮಹಿಳೆಯರು: 10,15,158* ಇತರರು: 299* ಒಟ್ಟು: 20,10,103- - -2019ರ ಚುನಾವಣೆ ಫಲಿತಾಂಶರಾಜಾ ಅಮರೇಶ್ವರನಾಯಕ (ಬಿಜೆಪಿ) ಗೆಲುವು- : 5,98,337ಬಿ.ವಿ.ನಾಯಕ (ಕಾಂಗ್ರೆಸ್) - ಸೋಲು : 4,80,621