102 ಕ್ಷೇತ್ರಗಳಿಗೆ ಏ.19ಕ್ಕೆ ಮೊದಲ ಹಂತದಲ್ಲಿ ಚುನಾವಣೆ

| Published : Apr 18 2024, 07:48 AM IST

voting 0
102 ಕ್ಷೇತ್ರಗಳಿಗೆ ಏ.19ಕ್ಕೆ ಮೊದಲ ಹಂತದಲ್ಲಿ ಚುನಾವಣೆ
Share this Article
  • FB
  • TW
  • Linkdin
  • Email

ಸಾರಾಂಶ

ಏ.19ರಂದು ಲೋಕಸಭೆಗೆ ನಡೆಯುವ ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ .ಶುಕ್ರವಾರ ಮತದಾನ ನಡೆಯಲಿದ್ದು, ಇದರೊಂದಿಗೆ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ವಿಧ್ಯುಕ್ತವಾಗಿ ಆರಂಭವಾಗಲಿದೆ.

ನವದೆಹಲಿ: ಏ.19ರಂದು ಲೋಕಸಭೆಗೆ ನಡೆಯುವ ಮೊದಲ ಹಂತದ ಚುನಾವಣೆಗೆ ಬಹಿರಂಗ ಪ್ರಚಾರಕ್ಕೆ ಬುಧವಾರ ತೆರೆ ಬಿದ್ದಿದೆ .ಶುಕ್ರವಾರ ಮತದಾನ ನಡೆಯಲಿದ್ದು, ಇದರೊಂದಿಗೆ ಲೋಕಸಭೆ ಚುನಾವಣೆಯ ಮತದಾನ ಪ್ರಕ್ರಿಯೆ ವಿಧ್ಯುಕ್ತವಾಗಿ ಆರಂಭವಾಗಲಿದೆ.

ಮೊದಲ ಹಂತದಲ್ಲಿ 21 ರಾಜ್ಯಗಳ 102 ಕ್ಷೇತ್ರಗಳಿಗೆ ಮತದಾನ ನಡೆಯಲಿದೆ. ಎಲ್ಲ ಕ್ಷೇತ್ರಗಳ ಫಲಿತಾಂಶ ಜೂ.4ರಂದು ಇತರ 6 ಹಂತಗಳ ಲೋಕಸಭೆ ಕ್ಷೇತ್ರಗಳ ಜತೆಗೇ ಪ್ರಕಟವಾಗಲಿದೆ.

ಮೊದಲ ಹಂತದ ಪ್ರಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ, ಕೇಂದ್ರ ಸಚಿವ ಅಮಿತ್‌ ಶಾ, ಕಾಂಗ್ರೆಸ್‌ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ರಾಹುಲ್‌ ಗಾಂಧಿ, ಪ್ರಿಯಾಂಕಾ ಗಾಂಧಿ ಅಬ್ಬರಿಸಿದರು. ಅನೇಕ ವಿವಾದಿತ ಹೇಳಿಕಗಳಿಗೂ ಪ್ರಚಾರ ಸಾಕ್ಷಿಯಾಯಿತು.

ಅರುಣಾಚಲ ಪ್ರದೇಶ, ಅಸ್ಸಾಂ, ಆಂಧ್ರಪ್ರದೇಶ, ಬಿಹಾರ, ಛತ್ತೀಸ್‌ಗಢ, ಮೇಘಾಲಯ, ಮಹಾರಾಷ್ಟ್ರ, ಮಧ್ಯಪ್ರದೇಶ್‌, ಮಣಿಪುರ, ಮಿಜೋರಾಂ, ನಾಗಾಲ್ಯಾಂಡ್, ರಾಜಸ್ಥಾನ, ಸಿಕ್ಕಿಂ, ತ್ರಿಪುರಾ, ಉತ್ತರಾಖಂಡ, ತಮಿಳುನಾಡು, ಪಶ್ಚಿಮ ಬಂಗಾಳ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಪುದುಚೇರಿ- ಮತದಾನ ನಡೆಯಲಿರುವ ರಾಜ್ಯಗಳಾಗಿವೆ.

ಮೊದಲ ಹಂತದ ಚುನಾವಣೆಯಲ್ಲಿ 8 ಕೇಂದ್ರ ಸಚಿವರು, ಇಬ್ಬರು ಮಾಜಿ ಮುಖ್ಯಮಂತ್ರಿಗಳು, ಓರ್ವ ಮಾಜಿ ರಾಜ್ಯಪಾಲರು ಕಣಕ್ಕೆ ಇಳಿದಿದ್ದಾರೆ.

2019ರಲ್ಲಿ ಈ ಕ್ಷೇತ್ರಗಳ ಪೈಕಿ ಯುಪಿಎ 45, ಎನ್‌ಡಿಎ 41 ಸ್ಥಾನ ಗೆದ್ದಿದ್ದವು. ಉಳಿದ 6 ಸ್ಥಾನಗಳು ಕ್ಷೇತ್ರ ಮರುವಿಂಗಡಣೆ ವೇಳೆ ಬದಲಾವಣೆಯಾಗಿದೆ.

ಪ್ರಮುಖ ಅಭ್ಯರ್ಥಿಗಳು:

ನಾಗಪುರದಿಂದ ಕೇಂದ್ರ ಸಚಿವರಾದ ನಿತಿನ್‌ ಗಡ್ಕರಿ, ಅರುಣಾಚಲ ಪಶ್ಚಿಮದಿಂದ ಕಿರಣ್‌ ರಿಜಿಜು, ಅಸ್ಸಾಂನ ದಿಬ್ರುಗಢದಿಂದ ಸರ್ಬಾನಂದ ಸೋನೊವಾಲ್‌, ಜಮ್ಮುವಿನ ಉಧಂಪುರದಿಂದ ಜಿತೇಂದ್ರ ಸಿಂಗ್‌, ರಾಜಸ್ತಾನದ ಅಳ್ವರ್‌ನಿಂದ ಭೂಪೇಂದ್ರ ಸಿಂಗ್‌, ಬಿಕಾನೇರ್‌ನಲ್ಲಿ ಅರ್ಜುನ ರಾಮ್‌ ಮೇಘ್ವಾಲ್‌ - ಕಣಕ್ಕಿಳಿದಿರುವ ಪ್ರಮುಖ ಅಭ್ಯರ್ಥಿಗಳು.

ಇನ್ನು ತಮಿಳುನಾಡಿನ ದಕ್ಷಿಣ ಚೆನ್ನೈನಲ್ಲಿ ಬಿಜೆಪಿಯ ಮಾಜಿ ರಾಜ್ಯಪಾಲೆ ತಮಿಳಿಸಾಯಿ ಸೌಂದರರಾಜನ್‌, ಕೊಯಮತ್ತೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ, ಡಿಎಂಕೆ ನೇತಾರರಾದ ಎ. ರಾಜಾ ನೀಲಗಿರಿಯಲ್ಲಿ ಹಾಗೂ ದಯಾನಿಧಿ ಮಾರನ್ ಉತ್ತರ ಚೆನ್ನೈನಲ್ಲಿ ಸ್ಪರ್ಧಿಸಿದ್ದಾರೆ.