ನಟಿ ತಮನ್ಹಾಗೆ ಸೈಬರ್‌ ಕ್ರೈಮ್‌ ಪೊಲೀಸ್‌ ಸಮನ್ಸ್‌!

| Published : Apr 26 2024, 12:54 AM IST / Updated: Apr 26 2024, 04:30 AM IST

ಸಾರಾಂಶ

₹100 ಕೋಟಿ ನಷ್ಟ ಉಂಟು ಮಾಡಿದ್ದಾರೆ ಎಂದು ಐಪಿಎಲ್‌ ಅಧಿಕೃತ ಪ್ರಸಾರಕರಾದ ವಯೋಕಾಂ 18 ಸಂಸ್ಥೆ ದೂರು ಸಲ್ಲಿಸಿತ್ತು. ಹೀಗಾಗಿ ಫೇರ್‌ಪ್ಲೇ ಸಂಸ್ಥೆಗೆ ರಾಯಭಾರಿಯಾಗಿರುವ ತಮನ್ಹಾಗೆ ಸಮನ್ಸ್‌ ಜಾರಿಗೊಳಿಸಲಾಗಿದೆ.

ಮುಂಬೈ: 2023ರ ಐಪಿಎಲ್‌ ಪಂದ್ಯವನ್ನು ಅಕ್ರಮವಾಗಿ ಪ್ರಸಾರ ಮಾಡಿ, ಐಪಿಎಲ್‌ ಪ್ರಸಾರಕರಾದ ವಯೋಕಾಮ್‌ 18 ಸಂಸ್ಥೆಗೆ 100 ಕೋಟಿ ರು. ನಷ್ಟ ಉಂಟು ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ತಮನ್ಹಾ ಭಾಟಿಯಾಗೆ ಮಹಾರಾಷ್ಟ್ರ ಸೈಬರ್‌ ಕ್ರೈಮ್‌ ಪೊಲೀಸರು ಸಮನ್ಸ್ ಜಾರಿಗೊಳಿಸಿದ್ದಾರೆ. 

ಏ.29ರಂದು ವಿಚಾರಣೆಗೆ ಆಗಮಿಸುವಂತೆ ಸೂಚಿಸಿದ್ದಾರೆ.ಮಹದೇವ್‌ ಬೆಟ್ಟಿಂಗ್‌ ಆ್ಯಪ್‌ಯ ಅಂಗಸಂಸ್ಥೆ ಫೇರ್‌ಪ್ಲೇ ಆ್ಯಪ್‌ನಲ್ಲಿ 2023ರ ಐಪಿಎಲ್‌ ಪಂದ್ಯ ಪ್ರಸಾರ ಮಾಡಲಾಗಿತ್ತು. ಇದರ ವಿರುದ್ಧ ವಯೋಕಾಮ್‌ 18 ಸಂಸ್ಥೆ ದೂರು ಸಲ್ಲಿಸಿತ್ತು. ಹೀಗಾಗಿ ಫೇರ್‌ಪ್ಲೇ ಸಂಸ್ಥೆಗೆ ರಾಯಭಾರಿಯಾಗಿರುವ ತಮನ್ಹಾಗೆ ಸಮನ್ಸ್‌ ಜಾರಿಗೊಳಿಸಲಾಗಿದೆ. ಇದೇ ಪ್ರಕರಣದಲ್ಲಿ ಫೇರ್‌ಪ್ಲೇ ಸಂಸ್ಥೆ ಜೊತೆ ನಂಟು ಹೊಂದಿರುವ ಸಂಜಯ್ ದತ್‌ರನ್ನೂ ಪೊಲೀಸರು ವಿಚಾರಣೆ ಕರೆದಿದ್ದಾರೆ. ಇನ್ನೂ ಕೆಲ ತಾರೆಗಳಿಗೆ ಸಮನ್ಸ್‌ ನೀಡುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಇಂಪ್ಯಾಕ್ಟ್‌ ಆಟಗಾರ ಬಗ್ಗೆ ಅಕ್ಷರ್‌ ಪಟೇಲ್‌ ಆಕ್ಷೇಪ!

ನವದೆಹಲಿ: ಐಪಿಎಲ್‌ನಲ್ಲಿ ಜಾರಿಯಲ್ಲಿರುವ ಇಂಪ್ಯಾಕ್ಟ್‌ ಆಟಗಾರನ ನಿಯಮದಿಂದಾಗಿ ಆಲ್ರೌಂಡರ್‌ಗಳ ಪಾತ್ರ ಅಪಾಯದಲ್ಲಿದೆ ಎಂದು ಅಕ್ಷರ್‌ ಪಟೇಲ್‌ ಅಭಿಪ್ರಾಯಪಟ್ಟಿದ್ದಾರೆ.‘ಇಂಪ್ಯಾಕ್ಟ್‌ ಆಟಗಾರನ ನಿಯಮದಿಂದಾಗಿ ಎಲ್ಲಾ ತಂಡಗಳು ತಜ್ಞ ಬ್ಯಾಟರ್‌ ಇಲ್ಲವೇ ತಜ್ಞ ಬೌಲರ್‌ಗಳನ್ನು ಆಡಿಸಲು ಇಚ್ಛಿಸುತ್ತಿವೆ. 

ಆಲ್ರೌಂಡರ್‌ಗಳನ್ನು ಆಡಿಸುವುದೇ ಅಪರೂಪವಾಗಿದೆ. ಒಬ್ಬ ಆಲ್ರೌಂಡರ್‌ ಆಗಿ ಈ ನಿಯಮದ ಪರಿಣಾಮವೇನಾಗಬಹುದು ಎನ್ನುವ ಅರಿವು ನನಗಿದೆ’ ಎಂದು ಅಕ್ಷರ್‌ ಹೇಳಿದ್ದಾರೆ. ಇತ್ತೀಚೆಗಷ್ಟೇ ಭಾರತ ತಂಡದ ನಾಯಕ ರೋಹಿತ್‌ ಶರ್ಮಾ ಸಹ ಇಂಪ್ಯಾಕ್ಟ್‌ ಆಟಗಾರ ನಿಯಮವನ್ನು ಟೀಕಿಸಿದ್ದರು.