ಡಾ.ಎಂ.ಎಂ.ಕಲಬುರ್ಗಿ ಕುರಿತ ಆಪ್ತ ಬರಹಗಳು...!

| Published : Apr 05 2024, 01:00 AM IST / Updated: Apr 05 2024, 06:19 AM IST

ಡಾ.ಎಂ.ಎಂ.ಕಲಬುರ್ಗಿ ಕುರಿತ ಆಪ್ತ ಬರಹಗಳು...!
Share this Article
  • FB
  • TW
  • Linkdin
  • Email

ಸಾರಾಂಶ

ಡಾ.ಎಂ.ಎಂ. ಕಲಬುರ್ಗಿ-85 ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹಾಗೂ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್‌ ಸಂಪಾದಿಸಿದ್ದಾರೆ. 

 ಮೈಸೂರು :   ಡಾ.ಎಂ.ಎಂ. ಕಲಬುರ್ಗಿ-85 ಕೃತಿಯನ್ನು ಹಂಪಿ ಕನ್ನಡ ವಿಶ್ವವಿದ್ಯಾಲಯ ಕುಲಪತಿ ಡಾ.ಡಿ.ವಿ. ಪರಮಶಿವಮೂರ್ತಿ ಹಾಗೂ ಪ್ರಾಧ್ಯಾಪಕ ಡಾ.ಎಸ್.ವೈ. ಸೋಮಶೇಖರ್‌ ಸಂಪಾದಿಸಿದ್ದಾರೆ. ಡಾ.ಕಲಬುರ್ಗಿ ಅವರನ್ನು ಹತ್ತಿರದಿಂದ ಬಲ್ಲ ಸಾರಸ್ವತ ಲೋಕದ 85 ಗಣ್ಯರು ಲೇಖನಗಳ ಸಂಗ್ರಹ ಇದು.

ಉಮಾದೇವಿ ಕಲಬುರ್ಗಿ ಅವರ ಬಯಕೆಯಂತೆ ಈ ಕೃತಿ ಹೊರತರಲಾಗಿದ್ದು, ಕಲಬುರ್ಗಿ ಅವರ ವಿದ್ವತ್ತಿನ ಜೊತೆಗೆ ಮಾನವೀಯ ಅಂತಃಕರಣ ಮತ್ತು ಸೂಕ್ಷ್ಮ ಮನಸ್ಸನ್ನು ನಾಡಿಗೆ ಪರಿಚಯಿಸುವ ಕಳಕಳಿ ಕೃತಿಯುದ್ದಕ್ಕೂ ಕಂಡು ಬರುತ್ತದೆ. ಕಲಬುರ್ಗಿ ಅವರ ಸ್ನೇಹಿತರು, ಅಭಿಮಾನಿಗಳು, ವಿದ್ಯಾರ್ಥಿಗಳು ಅವರೊಂದಿಗಿನ ವೈಯಕ್ತಿಕ ಹಾಗೂ ಶೈಕ್ಷಣಿಕ ಒಡನಾಟದ ಅನುಭವಗಳನ್ನು ತುಂಬಾ ಆಪ್ತವಾಗಿ ಕಟ್ಟಿಕೊಟ್ಟಿದ್ದಾರೆ.

ನವ ಚೈತನ್ಯ ತುಂಬಿದ ವಿದ್ವಾಂಸ, ಮಮತೆಯ ಪ್ರೇರಕ, ಸತ್ಯ ಸಂಶೋಧಕ, ಸಜ್ಜನಿಕೆಯ ವಿದ್ವಾಂಸ, ಸ್ಫೂರ್ತಿಯ ಚಿಲುಮೆ, ಸಂಶೋಧನೆಯ ಕಿಚ್ಚನ್ನು ಹಚ್ಚಿದ ಗುರು, ಸಂಶೋಧನಾ ಮಾರ್ಗಕಾರ, ಮಹಾನ್ ಚೇತನ, ಅಪೂರ್ವ ವ್ಯಕ್ತಿತ್ವ, ಯೋಜನೆಗಳ ಹರಿಕಾರರು, ಪೂರ್ವಸೂರಿಗಳ ಶಾಸ್ತ್ರಜ್ಞ, ಚಿನ್ಮಯಿ ಗುರು, ಮಹಾನುಭಾವರು, ಸಮಗ್ರ ದೃಷ್ಟಿಕೋನದ ಸಂಶೋಧಕ, ಸಾಹಿತ್ಯ- ಪುರಾತತ್ವಗಳ ಪಾಂಡಿತ್ಯದ ಪ್ರತಿಭೆ, ಬದುಕು- ಬರೆಹದಲ್ಲಿ ಶಿಸ್ತು ಕಲಿಸಿದ ಗುರು, ಚಿನ್ಮಯಿ ಗುರು,

ಕನ್ನಡ ಸಂಶೋಧನಾ ಮಾರ್ಗದ ಧೀಮಂತರು, ಹಂಪಿಯಲ್ಲಿ ಅಕ್ಷರ ದಾಸೋಹದ ಸಂತ, ಮಹಾಗುರು, ಸಾಮಾನ್ಯ ಕುಟುಂಬದ ಅಸಾಮಾನ್ಯ ವ್ಯಕ್ತಿ, ಶರಣನೆಲೆಯ ವೇಗದ ಸಂಶೋಧಕ, ನಿಷ್ಠರ ನಡೆ-ನುಡಿಯ ವಿದ್ವಾಂಸರು, ಹುಡುಕಾಟ ಮತ್ತು ಹೋರಾಟದ ಹಠ ಯೋಗಿ, ನಿಸ್ವಾರ್ಥ ಸಂಶೋಧಕ, ಪರುಷಶಿಲೆ, ನುಡಿದಂತೆ ನಡೆದವರು, ಗುಣಪಕ್ಷಪಾತಿ- ಶ್ರಮಸಂಸ್ಕೃತಿಯ ಆರಾಧಕ, ತಾತ್ವಿಕ ಬದುಕಿನ ಸಾಕ್ಷಿಪ್ರಜ್ಞೆ, ಮಹಾಮಾರ್ಗಿ, ಸಂಶೋಧನಾ ಕ್ಷೇತ್ರದ ದಿಗ್ಗಜ, ಸಂಶೋಧನಾ ಸಿರಿ ಎಂಬ ಇವೇ ಮೊದಲಾದ ಗುಣವಿಶೇಷಣಗಳ ಮೂಲಕ ಕಲಬುರ್ಗಿ ಅವರ ವ್ಯಕ್ತಿತ್ವ ಹಾಗೂ ವಿದ್ವತ್‌ ಅನ್ನು ಅನಾವರಣಗೊಳಿಸಿದ್ದಾರೆ.

ಕೆಲವರು ಅವರ ಒಡನಾಟ, ಮರೆಯಲಾಗದ ಮರುಕಳಿಸುವ ನೆನಪುಗಳು ಹಂಚಿಕೊಂಡಿದ್ದು, ನೆನಪಿನಂಗಳದಲ್ಲಿ ಚಿರಸ್ಥಾಯಿಯಾಗಿರುವ ಮಹಾನ್‌ ಚೇತನ, ಶರಣ ಸಂಸ್ಕೃತಿಯನ್ನು ಮೈಗೂಡಿಸಿಕೊಂಡಿದ್ದರು, ಕನ್ನಡವನ್ನೇ ಕುಟುಂಬವಾಗಿಸಿಕೊಂಡಿದ್ದರು ಎಂದು ಸ್ಮರಿಸಿದ್ದಾರೆ.

ಕಾಯಕವೇ ಕೈಲಾಸ ಎಂದ ಅವರು ಪ್ರಾಮಾಣಿಕತೆಗೆ ಇನ್ನೊಂದು ಹೆಸರಾಗಿದ್ದರು. ಅವರನ್ನು ನೋಡಿ ಕಲಿಯಬೇಕು. ಅವರಿಗೆ ಶಕ್ತಿಯಂಥ ದೇಹ, ಹಕ್ಕಿಯಂಥ ಚೈತನ್ಯ ಇತ್ತು. ಅವರೊಂದು ವಿಶ್ವಕೋಶವಾಗಿದ್ದರು. ನಾಡುಕಂಡ ಶ್ರೇಷ್ಠ ಸಂಶೋಧಕರಾಗಿದ್ದರು. ಸ್ಫಟಿಕದಂಥ ತೆರೆದ ಮನವಿತ್ತು. ಶಕ್ತಿ ಮತ್ತು ಸೌಜನ್ಯದ ಸಂಗಮವಾಗಿದ್ದರು ಎಂಬುದನ್ನು ತಿಳಿಸಿದ್ದಾರೆ.

ಕಲಬುರ್ಗಿಯವರನ್ನು ಕೊಂದವರು ಉಳಿಯುತ್ತಾರೆಯೇ? ಎಂದು ವಿಶ್ವಾರಾಧ್ಯ ಸತ್ಯಂಪೇಟೆ, ಜಯದೇವಿ ಜಂಗಮಶೆಟ್ಟಿ ಪ್ರಶ್ನಿಸಿದ್ದರೆ, ಶಶಿಕಾಂತ ರುದ್ರಪ್ಪ ಪಟ್ಟಣ, ಸತ್ಯಹೇಳಿ ಸತ್ತು ಹೋದ ನಿತ್ಯ ಸ್ಮರಣೀಯ ಎಂದಿದ್ದಾರೆ. ಚಕ್ರವ್ಯೂಹದ ಒಳಗೆ ಸಿಲುಕಿದರು ಎಂದು ಶಾಂತಿನಾಥ ದಿಬ್ಬದ ಹೇಳಿದ್ದಾರೆ.

ಈ ಕೃತಿಗೆ ವೀರಣ್ಣ ರಾಜೂರ ಅವರ ಬೆನ್ನುಡಿ ಇದೆ. ಮೈಸೂರಿನ ಸಂವಹನ ಪ್ರಕಾಶನದ ಡಿ.ಎನ್. ಲೋಕಪ್ಪ ಅವರು ಪ್ರಕಟಿಸಿದ್ದು, ಮೊ. 99026 39593 ಸಂಪರ್ಕಿಸಬಹುದು.