‘ಸಾಂಬಾರು’ ಪದಾರ್ಥದಿಂದ ‘ಸಾಧನೆ’ಯತ್ತ ಯುವ ರೈತನ ಹೆಜ್ಜೆ

| Published : Apr 01 2024, 12:45 AM IST / Updated: Apr 01 2024, 08:30 AM IST

‘ಸಾಂಬಾರು’ ಪದಾರ್ಥದಿಂದ ‘ಸಾಧನೆ’ಯತ್ತ ಯುವ ರೈತನ ಹೆಜ್ಜೆ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷಿಯಿಂದ ಯುವ ಸಮುದಾಯ ವಿಮುಖರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಬಯಲು ಸೀಮೆಯ ಪ್ರದೇಶದಲ್ಲಿ ಮಲೆನಾಡು ಭಾಗದಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳ ಬೆಳೆಗಳನ್ನು ಬೆಳೆದು ಕೃಷಿಕ್ಷೇತ್ರದಲ್ಲಿ ಸಾಧನೆಯತ್ತ ಸಾಗುತ್ತಿದ್ದು ಶ್ಲಾಘನೀಯವಾಗಿದೆ.

 ಪಾಂಡವಪುರಮಲೆನಾಡು ಪ್ರದೇಶದಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳಾದ ಕಾಳು ಮೆಣಸು, ಏಲಕ್ಕಿ ಬೆಳೆಗಳನ್ನು ತೋಟಗಾರಿಕೆ ಬೆಳೆಗಳ ಜೊತೆ ಸಾವಯವ ಕೃಷಿ ಬೇಸಾಯದ ಮೂಲಕ ಬೆಳೆದು ತಾಲೂಕಿನ ರೈತ ಯಶಸ್ವಿಯಾಗಿದ್ದಾನೆ ಯುವ ರೈತ.

ತಾಲೂಕಿನ ಶಂಭೂವಿನಹಳ್ಳಿ ಯುವ ರೈತ ಮಂಜುನಾಥ್ ಕಳೆದ 5 ವರ್ಷಗಳಿಂದ ತಮಗಿರುವ 1.13 ಎಕರೆ ಮಳೆಯಾಶ್ರಿತ ಪ್ರದೇಶದಲ್ಲಿ ಸಾವಯವ ಬೇಸಾಯ ಪದ್ಧತಿ ಅಳವಡಿಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ತಮ್ಮ ಆದಾಯ ಹೆಚ್ಚಳ ಮಾಡಿಕೊಂಡು ಇತರೆ ರೈತರಿಗೂ ಮಾದರಿಯಾಗಿದ್ದಾನೆ.

ಕೃಷಿಯಿಂದ ಯುವ ಸಮುದಾಯ ವಿಮುಖರಾಗುತ್ತಿರುವ ಪ್ರಸ್ತುತ ಸಂದರ್ಭದಲ್ಲಿ ಮಂಡ್ಯ ಜಿಲ್ಲೆ ಬಯಲು ಸೀಮೆಯ ಪ್ರದೇಶದಲ್ಲಿ ಮಲೆನಾಡು ಭಾಗದಲ್ಲಿ ಬೆಳೆಯುವ ಸಾಂಬಾರು ಪದಾರ್ಥಗಳ ಬೆಳೆಗಳನ್ನು ಬೆಳೆದು ಕೃಷಿಕ್ಷೇತ್ರದಲ್ಲಿ ಸಾಧನೆಯತ್ತ ಸಾಗುತ್ತಿದ್ದು ಶ್ಲಾಘನೀಯವಾಗಿದೆ.

ತಮ್ಮ ಜಮೀನು ಸಂಪೂರ್ಣವಾಗಿ ಮಳೆಯಾಶ್ರಿತ ಪ್ರದೇಶವಾಗಿರುವುದರಿಂದ ಬೋರ್‌ವೆಲ್ ಕೊರೆಸಿಕೊಂಡು ತೋಟಗಾರಿಕೆ ಬೆಳೆಗಳನ್ನು ಬೆಳೆದಿದ್ದಾರೆ. ಬೆಳೆಗಳಿಗೆ ಹನಿ ನೀರಾವರಿ, ತುಂತುರು ನೀರಾವರಿ ಅಳವಡಿಕೊಂಡು ಸಾಂಬಾರು ಪದಾರ್ಥ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯಗಳಿಸುತ್ತಿದ್ದಾರೆ.

ಸಾಂಬಾರ ಪದಾರ್ಥಗಳ ಕಾಳುಮೆಣಸು, ಏಲಕ್ಕಿ ಜತೆಗೆ ತೋಟಗಾರಿಕೆ ಬೆಳೆಗಳಾದ ತೆಂಗು, ಅಡಿಕೆ, ವಿವಿಧ ಜಾತಿಯ ಹಣ್ಣು, ತರಕಾರಿ ಬೆಳೆ ಬೆಳೆಯುತ್ತಿದ್ದಾರೆ. ಇವರು 250 ಅಡಿಕೆ ಹಾಗೂ 180 ಸಿಲ್ವರ್ ಮರಗಳಿಗೆ ಕಾಳು ಮೆಣಸಿನ ಬಳ್ಳಿಯನ್ನು ಹಬ್ಬಿಸಿದ್ದು ಉತ್ತಮವಾದ ಕಾಳುಮೆಸು ಬೆಳೆಬಂದಿದೆ. ಮೊದಲ ವರ್ಷದ ಕಾಳುಮೆಣಸಿನ ಕಟಾವಿನಲ್ಲಿಯೇ ಒಂದೂವರೆ ಕ್ವಿಂಟಾಲ್‌ಗೂ ಅಧಿಕ ಇಳುವರಿ ಬಂದಿದ್ದು ಇದರಿಂದ 2 ಲಕ್ಷಕ್ಕೂ ಅಧಿಕ ಲಾಭಗಳಿಸಿದ್ದಾರೆ.

ಇದರೊಟ್ಟಿಗೆ 60 ತೆಂಗು, 50 ಬಾಳೆ, ವಿವಿಧ ಜಾತಿಯ 20 ಹಣ್ಣಿನ ಗಿಡಗಳನ್ನು ಬೆಳೆದಿದ್ದಾರೆ. ಅಲ್ಲದೇ, ತಮ್ಮ ನಿತ್ಯ ಬಳಕೆಗೆ ಬೇಕಾದ ಸೊಪ್ಪು ,ತರಕಾರಿಗಳನ್ನು ಬೆಳೆದಿದ್ದಾರೆ. 2 ಹಸುಗಳನ್ನು ಸಾಕಿಕೊಂಡು ಇದರಿಂದ ಬರುವ ಗೊಬ್ಬರವನ್ನು ಜೀವಾಮೃತ ಮಾಡಿ ಬೆಳೆಗಳಿಗೆ ಸಿಂಪಡಣೆ ಮಾಡುವುದರ ಜತೆಗೆ ಎರೆಹುಳು ಗೂಬ್ಬರ ಬಳಸಿ ಉತ್ತಮ ಗುಣಮಟ್ಟದ ಇಳುವರಿ ಪಡೆಯುತ್ತಿದ್ದಾರೆ.

ಕೀಟ ನಿರ್ವಹಣೆಗಾಗಿ ಜೀವಾಮೃತ, ತಯಾರಿಸಿ ಸಿಂಪರಣೆ ಹಾಗೂ ಆತ್ಮ ಯೋಜನೆಯಡಿ ವಿತರಿಸಲಾಗಿರುವ ಸೋಲಾರ್ ಟ್ರ್ಯಾಪ್ ಅಳವಡಿಕೆ ಮಾಡಿಕೊಂಡು ಬೆಳೆ ರಕ್ಷಣೆ ಮಾಡಿಕೊಳ್ಳುತ್ತಿದ್ದಾರೆ. ಇದರ ಜತೆಗೆ ರೇಷ್ಮೆ ಕೃಷಿಯನ್ನು ಸಹ ಅಳವಡಿಸಿಕೊಂಡಿರುವ ರೈತ ಮಂಜುನಾಥ್ ಅದರಿಂದಲೂ ಸಹ ಅಧಿಕ ಇಳುವರಿ ಪಡೆದು ಲಾಭಗಳಿಸುತ್ತಿದ್ದಾರೆ.

ರೈತ ಮಂಜುನಾಥ್ ಅವರ ಕೃಷಿ ಕೆಲಸಕ್ಕೆ ಪತ್ನಿ ವಿನುತಾ, ತಂದೆ-ತಾಯಿಯೂ ಸಹ ಸಹಕಾರ ನೀಡುತ್ತಿದ್ದಾರೆ. ಇವರ ಕೃಷಿ ಸಾಧನೆಗೆ ಕೃಷಿ ಇಲಾಖೆ ನೀಡುವ 2023-24ನೇ ಸಾಲಿನ ಆತ್ಮ ಯೋಜನೆಯಡಿ ತಾಲೂಕು ಶ್ರೇಷ್ಠ ಕೃಷಿಕ ಪ್ರಶಸ್ತಿಯನ್ನು ಸಹ ನೀಡಿ ಗೌರವಿಸಿದ್ದಾರೆ. ಜಿಲ್ಲೆಯ ರೈತರು ಕಬ್ಬು, ಭತ್ತ ಬೆಳೆದು ಕೈಸುಟ್ಟುಕೊಳ್ಳುವ ಬದಲು ಇಂತಹ ಬೇಸಾಯ ಪದ್ದತಿಯನ್ನು ಅಳವಡಿಸಿಕೊಂಡು ಅಧಿಕ ಲಾಭಗಳಿಸುವ ಕಡೆ ಗಮನ ಹರಿಸಬೇಕಿದೆ.ಮಂಜುನಾಥ್ ತಮಗಿರುವ ಜಮೀನಿನಲ್ಲಿ ಮಲೆನಾಡಿನ ಸಾಂಬಾರು ಪದಾರ್ಥಗಳ ಬೆಳೆಗಳನ್ನು ಬೆಳೆದು ಹೆಚ್ಚಿನ ಆದಾಯ ಗಳಿಸಿ ಮಾದರಿ ಕೃಷಿಕರಾಗಿ ಹೊರಹೊಮ್ಮಿರುವುದು ಶ್ಲಾಘನೀಯ. ಇತರ ರೈತರು ಇತರೆ ಕೃಷಿ ಪದ್ಧತಿಗಳನ್ನು ಅಳವಡಿಸಿಕೊಂಡರೆ ರೈತ ಲಾಭದಾಯಕ ಕೃಷಿಯತ್ತ ಮುಖ ಮಾಡಬಹುದು.

- ಎ.ಎನ್ .ಶೃತಿ, ತಾಲೂಕು ತಾಂತ್ರಿಕ ವ್ಯವಸ್ಥಾಪಕಿ, ಕೃಷಿ ಇಲಾಖೆ(ಆತ್ಮ)ರೈತ ಮಂಜುನಾಥ್ ಸಾವಯವ ಕೃಷಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿ ಹೆಚ್ಚಿನ ಲಾಭಗಳಿಸುತ್ತಿದ್ದಾರೆ. ಇದೇ ರೀತಿ ಎಲ್ಲಾ ರೈತರು ಕಡಿಮೆ ಜಮೀನಿನಲ್ಲಿ ಮಿಶ್ರ ಬೆಳೆಗಳನ್ನು ಬೆಳೆದು ಹೆಚ್ಚಿನ ಲಾಭಗಳಿಸಿ ಆರ್ಥಿಕವಾಗಿ ಪ್ರಗತಿ ಸಾಧಿಸಬೇಕು.

- ಟಿ.ಎಸ್.ಮಂಜುನಾಥ್, ಸಹಾಯಕ ಕೃಷಿ ನಿರ್ದೇಶಕ, ಪಾಂಡವಪುರ.