ನೂರಾರು ವರ್ಷ ಹಾಯಾಗಿ ಬದುಕುವ ಇಕಿಗಾಯ್‌ ಸೂತ್ರ

| Published : Apr 07 2024, 01:49 AM IST / Updated: Apr 07 2024, 06:34 AM IST

ನೂರಾರು ವರ್ಷ ಹಾಯಾಗಿ ಬದುಕುವ ಇಕಿಗಾಯ್‌ ಸೂತ್ರ
Share this Article
  • FB
  • TW
  • Linkdin
  • Email

ಸಾರಾಂಶ

ಬದುಕುವ ರೀತಿ ಚೆನ್ನಾಗಿದ್ದರೆ ಬದುಕೂ ಚೆನ್ನಾಗಿರುತ್ತದೆ ಎಂಬ ಇಕಿಗಾಯ್‌ ಸೂತ್ರ.

-ಡಾ ಕೆ.ಎಸ್. ಪವಿತ್ರ

ಟೋಕಿಯೋದ 800 ಮೈಲಿ ದಕ್ಷಿಣಕ್ಕೆ ಓಕಿನಾವೋ ಎಂಬ ದ್ವೀಪ ಸಮೂಹವಿದೆ. 161 ಸಣ್ಣ ದ್ವೀಪಗಳ ಮಧ್ಯೆ ಒಂದು ಮುಖ್ಯದ್ವೀಪ. ವಿಶ್ವದ ದೀರ್ಘಾಯುಷಿ ಮಹಿಳೆಯರು ಇಲ್ಲಿಯೇ ಹೆಚ್ಚಿನ ಸಂಖ್ಯೆಯಲ್ಲಿರುವುದು. ‘ಅಯ್ಯೋ, ವಯಸ್ಸಾದ ಮೇಲೆ ವೃದ್ಧಾಪ್ಯವೇ ಒಂದು ಕಾಯಿಲೆ ಎಂಬ ಸಮಯದಲ್ಲಿ ಈ ದ್ವೀಪದ ಗೊಡವೆ ನಮಗೇಕೆ’ ಎಂದು ಕೆಲವರನ್ನಬಹುದು. ಆದರೆ ಓಕಿನಾವೋ ಕೇವಲ ದೀರ್ಘಾಯುಷಿಗಳ ದ್ವೀಪವಲ್ಲ, ವೃದ್ಧಾಪ್ಯದ ಮಾಮೂಲು ಅಸಮರ್ಥತೆಗಳಿಂದ ಮುಕ್ತವಾದ ಸಂತೋಷದ ಜೀವನ ಇಲ್ಲಿದೆ ಎನ್ನುವುದೇ ಈ ದ್ವೀಪದ ವಿಶೇಷ. 

ಇಡೀ ಜಗತ್ತು ಎದುರು ನೋಡುತ್ತಿರುವ ‘ಆರಾಮದ ದೀರ್ಘಾಯುಷ್ಯ; ನೂರು ಮುಟ್ಟಿದ ಮೇಲೆ ತಕ್ಷಣದ ಸಂತಸದ ಮರಣ’ ಎಂಬ ಜೀವನವನ್ನು ಇಲ್ಲಿಯ ಜನ ತಮ್ಮದಾಗಿಸಿಕೊಂಡಿದ್ದಾರೆ. 

ನ್ಯಾಷನಲ್ ಜಿಯೋಗ್ರಾಫಿಕ್ ಸೊಸೈಟಿ ನಡೆಸಿದ ‘ನೀಲಿ ವಲಯ’ ದ ಅಧ್ಯಯನದಲ್ಲಿ ಜಗತ್ತಿನಾದ್ಯಂತ ಇಂತಹ ದೀರ್ಘಾಯುಷಿಗಳನ್ನು ಹೊಂದಿರುವ ಆರೋಗ್ಯದ ನೀಲಿ ವಲಯಗಳನ್ನು ಪರಿಶೀಲಿಸಿತು. ಅದರಲ್ಲಿ ‘ಓಕಿನಾವೋ’ ದ್ವೀಪವೂ ಒಂದು. ಆರೋಗ್ಯವಿರುವ ದೀರ್ಘಾಯುಷ್ಯವೇನೂ ಓಕಿನಾವೋ ಜನರ ಅದೃಷ್ಟವಲ್ಲ. ಅದು ಅವರ ರೂಢಿಗತವಾದ ಜೀವನಶೈಲಿಗೆ ಸಂಬಂಧಿಸಿದ್ದು.

 ಅವರೇನು ತಿನ್ನುತ್ತಾರೆ, ಹೇಗೆ ಬದುಕುತ್ತಾರೆ, ಏನನ್ನು ಎದುರು ನೋಡುತ್ತಾರೆ, ಇವೆಲ್ಲವೂ ಅವರ ದೀರ್ಘಾಯುಷ್ಯಕ್ಕೆ ಕಾರಣವಾದ ಅಂಶಗಳು. ಕೆಲ ಸ್ಯಾಂಪಲ್‌ಗಳನ್ನು ನೋಡಿ.ಓಕಿನಾವೋ ಜನರು ಒಮ್ಮೆಗೇ ಸಿಕ್ಕಾಪಟ್ಟೆ ತಿಂದುಬಿಡುವುದನ್ನು ತಡೆಯಲು ಜೀವನಕ್ರಮದಲ್ಲಿಯೇ ಕೆಲವು ಚಿಕ್ಕ ಚಿಕ್ಕ ತಂತ್ರಗಳಿವೆ. ಚಿಕ್ಕ ತಟ್ಟೆಗಳಲ್ಲಿ ತಿನ್ನುವುದು, ಪ್ರತಿಯೊಬ್ಬರೂ ಎದ್ದು ಬಂದು ಒಂದು ಚಿಕ್ಕ ಕಟ್ಟೆಯ ಮೇಲಿಟ್ಟಿರುವ ಆಹಾರ ಹಾಕಿಕೊಂಡು ಬಂದು ತಿನ್ನುವುದು, ತಿನ್ನುವಾಗ ‘ಹರಾ, ಹಚೀ, ಬು’ ಎಂದು ಕನ್‌ಫ್ಯೂಷಿಯಸ್ ಹೇಳಿದ ವಾಕ್ಯವನ್ನು ನೆನಪಿಸಿಕೊಂಡು ಹೇಳುವುದು. ‘ಹರಾ ಹಚೀ ಬು’ ಎಂದರೆ ‘ಹೊಟ್ಟೆ 80% ರಷ್ಟು ತುಂಬಿದಾಗ ನಿಲ್ಲಿಸಿಬಿಡು’ ಎಂಬ ಸೂಚನೆ. 

ಈ ಹಂತದಲ್ಲಿ ನಿಲ್ಲಿಸಿದಾಗ, ಆರೋಗ್ಯಕ್ಕೆ ಬೇಕಾದ ನಿಧಾನವಾಗಿ ತಿನ್ನುವುದು, ಆಹಾರದ ಮೇಲೆ ಕೇಂದ್ರೀಕರಿಸಿ ತಿನ್ನುವುದು, ಆನಂದವಾಗಿ ತಿನ್ನುವುದು ಈ ಮೂರನ್ನೂ ಸಾಧ್ಯವಾಗಿಸುತ್ತದೆ. ‘ಹೊಟ್ಟೆ ತುಂಬಿದೆ’ ಎಂಬುದಕ್ಕಿಂತ ‘ಹಸಿವು ಶಮನವಾಗಿದೆ’ ಎಂಬ ತೃಪ್ತಿ ತರುತ್ತದೆ.  

ಆಹಾರಕ್ಕಿಂತ ಮುಖ್ಯವಾದದ್ದು ಸಾಮಾಜಿಕ ಸಂಬಂಧಗಳು. ನೀವು ಓಕಿನಾವೋದಲ್ಲಿ ಹುಟ್ಟಿದರೆ ನಿಮಗೆ ಅನಾಯಾಸವಾಗಿ ಹುಟ್ಟಿನಿಂದಲೇ ಜೀವನಪೂರ್ತಿ ಇರುವ (ಓಕಿನಾವೋದಲ್ಲಿ ದೀರ್ಘಾಯುಷಿಗಳೇ ಹೆಚ್ಚು) ಅರ್ಧ ಡಜನ್ ಸ್ನೇಹಿತರು ನಿಮ್ಮವರಾಗುತ್ತಾರೆ. ‘ಮಾವೋಯಿ’ ಎಂದು ಈ ಕುಟುಂಬದ್ದಲ್ಲದ, ಆದರೆ ಜೀವನ ಪೂರ್ತಿ ನೆರವಾಗುವ ಸಂಬಂಧವನ್ನು ಕರೆಯಲಾಗುತ್ತದೆ. ನಿಮಗೆ ಲಾಟರಿ ಹೊಡೆದರೂ ಇವರೊಂದಿಗೆ ಹಂಚಿಕೊಳ್ಳಬೇಕು, ಯಾವುದಾದರೂ ಬೇಸರದ ಸಂಗತಿ ನಡೆದರೂ ನಿಮ್ಮ ‘ಮಾವೋಯಿ’ ಗಳು ನಿಮ್ಮೊಂದಿಗೆ!ಆಹಾರ-ಸಾಮಾಜಿಕ ಸಂಬಂಧಗಳಿಗಿಂತ ಮುಖ್ಯ ‘ನಿವೃತ್ತಿ’ಯ ನಂತರ ನಾವೇನು ಮಾಡುತ್ತೇವೆ ಎನ್ನುವುದು. ಓಕಿನಾವಾ ಭಾಷೆಯಲ್ಲಿ ‘ನಿವೃತ್ತಿ’ ಪದವೇ ಇಲ್ಲ. ಅದರ ಬದಲು ಇಡೀ ಜೀವನಕ್ಕೆ ಅವರು ಅನ್ವಯಿಸುವ ಒಂದು ಪದ ‘ಇಕಿಗಾಯ್’. ಹೀಗಂದರೆ ಪ್ರತಿ ಬೆಳಿಗ್ಗೆ ನಾವು ಏಳುವಾಗ ನಮ್ಮ ಮುಂದಿರುವ ಉದ್ದೇಶ.

ನಮ್ಮ ನಿಮ್ಮ ‘ಇಕಿಗಾಯ್’ ಏನು? ಮಕ್ಕಳ ರ್‍ಯಾಂಕ್/ಸೀಟು/ ಕೆಲಸದ ಪ್ರಮೋಷನ್/ಮದುವೆ ಇತ್ಯಾದಿ ಇತ್ಯಾದಿ. ಈಗ ಓಕಿನಾವೋ ಸ್ಯಾಂಪಲ್‌ಗಳನ್ನು ನೋಡೋಣ. 102 ವರ್ಷದ ಕರಾಟೆ ಮಾಸ್ಟರ್‌ನ ಇಕಿಗಾಯ್ ಅವನ ಸಮರ ಕಲೆಯನ್ನು ಮುಂದಿನವರಿಗೆ ಕಲಿಸಿ, ದಾಟಿಸುವುದು. 100 ವರ್ಷದ ಮೀನುಗಾರನಿಗೆ ತನ್ನ ಕುಟುಂಬದವರಿಗೆ ವಾರಕ್ಕೆ ಮೂರು ದಿನ ಮೀನು ಹಿಡಿದು ಕೊಡುವುದು; 102 ವರ್ಷದ ಮಹಿಳೆಗೆ ಅವಳ ಇಕಿಗಾಯ್ - ಸರಳವಾಗಿ ಅವಳ ಮರಿಮೊಮ್ಮಗಳ ಮಗಳನ್ನು ಕೈಲಿ ಹಿಡಿದುಕೊಳ್ಳುವುದು. ‘ಸ್ವರ್ಗಕ್ಕೆ ಹಾರಿದಂತೆ’ ಆ ಅನುಭವ ಎನ್ನುವ ಈ ದೊಡ್ಡ ಹುಡುಗಿ ಮತ್ತು ಪುಟ್ಟ ಮಗುವಿನ ವಯಸ್ಸಿನ ಅಂತರ 101 ವರ್ಷಗಳು!

‘ಇಕಿಗಾಯ್’ ಕಥೆ ಮುಗಿಸಿದ ನಂತರ ಮತ್ತೊಂದು ಇಂಥದ್ದೇ ನೀಲಿ ವಲಯ ಜಗತ್ತಿನ ಇನ್ನೊಂದು ಮೂಲೆಯಲ್ಲಿದೆ. ಇಟೆಲಿಯ ದಕ್ಷಿಣ ಸಮುದ್ರ ತೀರದಲ್ಲಿರುವ ಸಾರ್ಡೀನಿಯಾ ದ್ವೀಪ. ಈ ಸಾರ್ಡೀನಿಯಾ ದ್ವೀಪದ ನ್ಯೂಓರೋ ಪ್ರಾಂತದಲ್ಲಿ ಮತ್ತೆ ಜೋರಿನ ಶತಾಯುಷಿಗಳಿದ್ದಾರೆ. ಜೋರು ಏಕೆಂದರೆ 102 ವರ್ಷಕ್ಕೂ ಇಲ್ಲಿ ಕೆಲಸಕ್ಕೆ ಸೈಕಲ್ ಹೊಡೆದುಕೊಂಡು ಹೋಗುತ್ತಾರೆ, ಮರ ಕಡಿಯಲು ಕಾಡಿಗೆ ಓಡುತ್ತಾರೆ, ತಮಗಿಂತ ಕಿರಿಯರೊಡನೆ ಸ್ಪರ್ಧಿಸುತ್ತಾರೆ. ಮತ್ತೆ ಇದೂ ಅದೃಷ್ಟಕ್ಕೆ ಸಂಬಂಧಿಸಿದ್ದೇನಲ್ಲ. ಬಂಜರು ಭೂಮಿಯಾದ್ದರಿಂದ, ಇಲ್ಲಿಯ ಜನ ಬೆಟ್ಟ ಹತ್ತಬೇಕು, ಕುರಿಗಳನ್ನು ಮೇಯಿಸಬೇಕು. ಹೀಗೆ ಬೆಟ್ಟ ಹತ್ತಿ ಹೋಗಬೇಕಾದ್ದರಿಂದ ಹಗುರವಾದ ಗೋಧಿ ಬ್ರೆಡ್ಡು ಹೊತ್ತು ಹೋಗಬೇಕು. ಹುಲ್ಲನ್ನೇ ತಿನ್ನುವ ಪ್ರಾಣಿಗಳ ಹಾಲಿನಿಂದ ತಯಾರಾಗುವ ಗಿಣ್ಣನ್ನೇ ತಿನ್ನಬೇಕು. ಈ ಚೀಸ್‌ನಲ್ಲಿ ಇರುವುದೇ ಮಿದುಳಿಗೆ ಬಲು ಅವಶ್ಯವಾದ ಒಮೆಗಾ 3 ಫ್ಯಾಟ್ಟಿ ಆ್ಯಸಿಡ್‌ಗಳು. ಅದರ ಮೇಲೆ ಇವರ ಸಮಾಜದಲ್ಲಿ ವಯಸ್ಸಾದಷ್ಟೂ ಗೌರವದ ಜೊತೆಗೆ ಮಿಂಚಲೂ ಅವಕಾಶಗಳು ಹೆಚ್ಚು.

ನೀವೇನಾದರೂ ಸಾರ್ಡೀನಿಯಾದ ಅಂಗಡಿ-ಬಾರ್‌ಗಳಿಗೆ ಹೋದರೆ ಅಲ್ಲಿ ಸಿನಿಮಾ, ಕ್ರೀಡಾ ತಾರೆಯರ ಕ್ಯಾಲೆಂಡರ್ ಬದಲು ಶತಾಯುಷಿಗಳ ವಿವಿಧ ಕ್ಯಾಲೆಂಡರ್‌ಗಳು ಕಣ್ಣಿಗೆ ಬೀಳುತ್ತವೆ. ‘ನೀಲಿ ವಲಯ’ ಗಳ ಅಧ್ಯಯನದ ಪ್ರಕಾರ ಇಂತಹ ಪ್ರವೃತ್ತಿ ಆರೋಗ್ಯಕರವಾಗಿ ಬದುಕುವ ಆಸೆ ಹೆಚ್ಚಿಸುತ್ತದೆ. ಈ ಆಸೆಯೇ ಆಯುಷ್ಯಕ್ಕೆ 4 - 6 ವರ್ಷಗಳನ್ನು ಸೇರಿಸುತ್ತದೆ. ಅಷ್ಟೇ ಅಲ್ಲ ‘ಅಜ್ಜಿ ಪರಿಣಾಮ’ ‘ಗ್ರ್ಯಾಂಡ್ ಮದರ್ ಇಫೆಕ್ಟ್’-ಮೊಮ್ಮಕ್ಕಳ ಆರೋಗ್ಯ ಜೀವನ ದೃಷ್ಟಿಗಳನ್ನು ರೂಪಿಸುತ್ತದೆ.

ನಮ್ಮ ದೇಹದಲ್ಲಿ 35 ಟ್ರಿಲಿಯನ್ ಜೀವಕೋಶಗಳಿವೆ. ಪ್ರತಿ ಎಂಟು ವರ್ಷಗಳಿಗೊಮ್ಮೆ ಅವು ಬದಲಿಸಲ್ಪಡುತ್ತವೆ. ಕ್ಯಾಸೆಟ್-ಸಿಡಿ-ಫೈಲ್ ಕಾಪಿ ಮತ್ತೆ ಮತ್ತೆ ಮಾಡುವಾಗ ಹಾಡಿನ ಧ್ವನಿ ಕರ್ಕಶವಾದಂತೆಯೇ, ಈ ಜೀವಕೋಶಗಳು ಬದಲಾಗುವಾಗಲೂ ನಡೆಯುತ್ತದೆ. ಅಂದರೆ 65 ವರ್ಷ ವಯಸ್ಸಿನ ವ್ಯಕ್ತಿ 12 ವರ್ಷದ ಬಾಲಕನಿಗಿಂತ 125 ಪಟ್ಟು ವೇಗವಾಗಿ ‘ವಯಸ್ಸಾಗುವಿಕೆ’ಯ ಬದಲಾವಣೆಗಳಿಗೆ ಗುರಿಯಾಗುತ್ತಾನೆ. ಎಷ್ಟೆಲ್ಲಾ ಕಾಯಿಲೆಗಳು ನಮಗೆ ಬರಲು ಸಾಧ್ಯವಿದೆ. ಅಚ್ಚರಿಯ ಮಾತೆಂದರೆ ವಿಜ್ಞಾನ ಈ ಎಲ್ಲಾ ಕಾಯಿಲೆಗಳನ್ನು ತಡೆಯಲು ಮತ್ತೆ ಮತ್ತೆ ಕಂಡು ಹಿಡಿಯುತ್ತಿರುವ ಸೂತ್ರಗಳು ಒಂದೇ ಆಗಿವೆ! ಅದೂ ನಮ್ಮ ಹಿರಿಯರು ಪಾಲಿಸುತ್ತಿದ್ದ ಜೀವನ ಕ್ರಮವೇ!

ಯುಗಾದಿಯ ಈ ಹೊತ್ತು, ಆರೋಗ್ಯ ದಿನದ ಈ ಸಮಯ ಹಿಂದಿನ-ಎಂದಿನ ಆಹಾರ ಕ್ರಮ-ನಮ್ಮ ನಮ್ಮ ‘ಇಕಿಗಾಯ್’ - ಜೀವನ ಶ್ರದ್ಧೆಗಳಿಂದ ಮುನ್ನಡೆದು ಶತಾಯುಷಿಗಳಾಗಬೇಕಾದ ಶುಭ ಸಂದರ್ಭದ ಆರಂಭವೂ ಆಗಬಹುದಲ್ಲವೆ?