ನಾರ್ಮಲ್ಲೋ ಸಿಸೇರಿಯನ್ನೋ : ಹೆಂಗಸರ ಥರಾವರಿ ಸಲಹೆ

| Published : Apr 14 2024, 01:51 AM IST / Updated: Apr 14 2024, 07:53 AM IST

ನಾರ್ಮಲ್ಲೋ ಸಿಸೇರಿಯನ್ನೋ : ಹೆಂಗಸರ ಥರಾವರಿ ಸಲಹೆ
Share this Article
  • FB
  • TW
  • Linkdin
  • Email

ಸಾರಾಂಶ

ಜನರ ಬಾಯಿ ಮಾತಿನಲ್ಲಿ ವಜೈನಲ್ ಡೆಲಿವರಿ ನಾರ್ಮಲ್ ಹೆರಿಗೆ ಎಂದೂ, ಮಿಕ್ಕಿದ್ದೆಲ್ಲಾ ಅಬ್‌ನಾರ್ಮಲ್‌ ಎಂಬ ನಂಬಿಕೆ ಇದೆ. ಇದು ಏಕೆ ಹೀಗೆ ಎಂದು ಮನೆಯ ಹೆಂಗಸರಲ್ಲಿ ಕೇಳಿದಾಗ ಥರಾವರಿ ಸಲಹೆಗಳು ಬಂದವು.- ಮೇಘನಾ ಸುಧೀಂದ್ರ

- ಮೇಘನಾ ಸುಧೀಂದ್ರ 

ನಾನು ಈಗ ಹತ್ತು ತಿಂಗಳ ಅಮ್ಮ. ನನ್ನ ಅವಳಿ ಜವಳಿ ಮಕ್ಕಳನ್ನು ಬಿಟ್ಟು ಬೇರೆ ಏನೂ ಕೆಲಸ ಮಾಡೋದಕ್ಕೆ ಸಾಧ್ಯವಿಲ್ಲ ಅನ್ನುವಷ್ಟು ಅವರು ನನ್ನನ್ನು ಆವರಿಸಿಕೊಂಡಿದ್ದಾರೆ. ‘ಇದೆಲ್ಲಾ ಮೊದಲ ಹೆರಿಗೆಯಲ್ಲಿ ಮಾಮೂಲು. ಅಮ್ಮನನ್ನು ಸ್ವಲ್ಪ ಹೊತ್ತು ಕಾಣದಿದ್ದರೆ ಮಕ್ಕಳು ಆಕಾಶ ಭೂಮಿ ಒಂದು ಮಾಡಿಬಿಡುತ್ತಾರೆ ಎಂಬುದೆಲ್ಲಾ ಸುಳ್ಳು. ನೀನು ಮಕ್ಕಳನ್ನು ಬಿಟ್ಟು ಸ್ವಲ್ಪ ಹೊತ್ತು ಇಲ್ಲೆಲ್ಲಾದರೂ ಹೋಗೋದು ರೂಢಿ ಮಾಡಿಕೊಳ್ಳಬೇಕು’ ಎಂದು ಅಮ್ಮ ಹೇಳುತ್ತಿದ್ದಳು. ನನ್ನ ಅಮ್ಮ ಅಜ್ಜಿಯಾದ ಮೇಲೆ ಬುದ್ಧಿ ಕಲಿತುಕೊಂಡಳು ಎಂದು ಖುಷಿ ಪಟ್ಟೆ. ಆಗ ಮನೆಗೆ ಬಂದವರೊಬ್ಬರು, ‘ಮಕ್ಕಳು ನಾರ್ಮಲ್ ಡೆಲಿವರಿನಾ ಇಲ್ಲಾ.. ಅದೇ..?’ ಎಂದು ಕೇಳಿದರು. (ಸಿಸೇರಿಯನ್ನು ಎಂದು ಹೇಳಲೂ ಅಳುಕು ಅವರಿಗೆ) ‘ಸಿಸೇರಿಯನ್ ಆಗೋದು ನಾರ್ಮಲ್ ಅಲ್ವಾ?’ ಎಂದು ಅವರನ್ನು ಕೇಳಿದೆ. ಅವರು ತಲೆ ಚಚ್ಚಿಕೊಂಡು, ‘ನಿನ್ನ ಹತ್ತಿರ ಮಾತಾಡಲೇ ಬಾರದು, ನೀನೊಂದು ಶುದ್ಧ ತಲೆಹರಟೆ. ನಿನ್ನ ಮಕ್ಕಳು ದೊಡ್ಡವರಾದ ಮೇಲೆ ಹೀಗೆ ನಿನ್ನ ಹತ್ತಿರ ಮಾತಾಡಲಿ’ ಎಂದರು. ಅವರ ಬಾಯಿ ಹರಕೆಗಿಂತ ಅವರು ತಂದಿದ್ದ ಮಕ್ಕಳ ಬಟ್ಟೆಗಳೇ ಇಷ್ಟವಾದವು. ಇರಲಿ ಹಬ್ಬಕ್ಕೆ ಹಾಕಬಹುದು ಎಂದು ಇಟ್ಟುಕೊಂಡೆ. 10 ತಿಂಗಳಲ್ಲಿ ಒಂದು ಸಾವಿರ ಸಲ ನಾನು ಸಿಸೇರಿಯನ್ ಎಂಬ ಪದ ಕೇಳಿರೋದು.

ಅದಕ್ಕೂ ಮುಂಚೆ ನಾನು ಗರ್ಭಿಣಿ ಆಗಿದ್ದಾಗ 5 ತಿಂಗಳಿನ ಸ್ಕ್ಯಾನಿನಲ್ಲಿ ಡಾಕ್ಟರು, ‘ನಿನ್ನ ಪ್ರಿಫರೆನ್ಸ್ ಏನು? ವಜೈನಲ್ ಡೆಲಿವರಿನಾ ಅಥವಾ ಸಿ ಸೆಕ್ಷನ್ನಾ?’ ಎಂದು ಕೇಳಿದರು. ಎರಡೂ ಪದದ ಅರ್ಥ ಮೊದಲು ಹೊಳೆಯದೇ ಕಂಗಾಲಾಗಿದ್ದೆ. ಜನರ ಬಾಯಿ ಮಾತಿನಲ್ಲಿ ವಜೈನಲ್ ಡೆಲಿವರಿ ನಾರ್ಮಲ್ ಹೆರಿಗೆ ಎಂದೂ, ಮಿಕ್ಕಿದ್ದೆಲ್ಲಾ ಅಬ್‌ನಾರ್ಮಲ್‌ ಎಂಬ ನಂಬಿಕೆ ಇದೆ. ಇದು ಏಕೆ ಹೀಗೆ ಎಂದು ನಾನು ಮನೆಯಲ್ಲಿನ ಹೆಂಗಸರನ್ನ ಕೇಳುತ್ತಿದ್ದೆ. ಅವರೆಲ್ಲಾ, ‘ಅಯ್ಯೋ ಸಿಸೇರಿಯನ್ ಮಾಡಿಸ್ಕೊಂಡ ಮೇಲೆ ನನಗೆ ಮೈ ಬಂದಿದ್ದು, ಬೆನ್ನು ನೋವು ಬಂದಿದ್ದು, ಹೊಟ್ಟೆ ಸ್ಯಾಗ್ ಆಗುತ್ತಿದೆ, ಕೆಲಸ ಮಾಡೋದಕ್ಕೆ ಆಗಲ್ಲ, ಅದು ಇದು..’ ಎಂದೆಲ್ಲಾ ಹೇಳುತ್ತಾ ಹೋದರು. ‘ನೋವಾದರೂ ಪರವಾಗಿಲ್ಲ ಹೇಗಾದರೂ ನಾರ್ಮಲ್ ಡೆಲಿವರಿ ಮಾಡಿಸಿಕೋ’ ಎಂದು ಎಲ್ಲಾ ಹೆಂಗಸರೂ ನನಗೆ ಸಲಹೆ ಕೊಟ್ಟರು. ನಾನು ಇದನ್ನೇ ಡಾಕ್ಟರ್ ಬಳಿ ಹೇಳಿದೆ. ಅವರು ಜೋರಾಗಿ ನಗೋದಕ್ಕೆ ಶುರು ಮಾಡಿದರು. ‘ಬೆನ್ನು ನೋವು ಬರೋದು ಸರಿಯಾಗಿ ಕೂರದೇ ಇರೋದರಿಂದ. ಹೊಟ್ಟೆ ಸ್ಯಾಗ್ ಆಗೋದು ವ್ಯಾಯಾಮ ಮಾಡದೇ ಇರೋದರಿಂದ, ತೂಕ ಜಾಸ್ತಿ ಆಗೋದು ಸರಿಯಾದ ಡಯಟ್ ಮಾಡದೇ ಇರೋದರಿಂದ. ಸಿಸೇರಿಯನ್‌ನಲ್ಲಿ ರಿಸ್ಕ್ ಇರೋದು ಅತಿಯಾದ ರಕ್ತಸ್ರಾವ ಮತ್ತು ಗಾಯ ವಾಸಿಯಾಗದೇ ಇರೋದು. ಅದನ್ನ ಬಿಟ್ಟು ಬೇರೆಲ್ಲಾ ಹೇಳಿದ್ದಾರಲ್ಲಾ?’ ಎಂದು ನಕ್ಕರು.

‘ಟ್ವಿನ್ಸ್ ಇರೋದರಿಂದ ಮೋಸ್ಟ್ಲಿಸಿಸೇರಿಯನ್ನೇ ಮಾಡಬೇಕಾಗುತ್ತದೆ, ರೆಡಿ ಆಗಿರಿ’ ಎಂದು 7 ತಿಂಗಳ ಸ್ಕ್ಯಾನಿಂಗ್‌ನಲ್ಲಿ ಡಾಕ್ಟರ್ ಹೇಳಿದರು. ‘ರೆಡಿ ಏನಾಗೋದು, ಇನ್ಶೂರೆನ್ಸ್ ಅದೂ ಕಾರ್ಪೋರೇಟ್ ಇನ್ಶೂರೆನ್ಸ್ ಇದ್ದರೆ ಈ ದೊಡ್ಡ ದೊಡ್ಡ ಆಸ್ಪತ್ರೆಗಳು ಅದೇ ಮಾಡೋದು’ ಎಂದು ನನ್ನ ಗಂಡ ಹೇಳುತ್ತಿದ್ದ. ಆಮೇಲೆ ಮನೆಯಲ್ಲಿ, ‘ನಮ್ಮ ಪಕ್ಕದ ಮನೆಯ ಅತ್ತೆಯ ಮಗಳು, ಸೋದರ ಮಾವನ ಮಗಳಿಗೂ ಟ್ವಿನ್ಸ್ ಆಗಿರೋದು, ಅದು ನಾರ್ಮಲ್ ಡೆಲಿವರಿ. 

ಶಂಕರಪುರದಲ್ಲಿನ ಆಸ್ಪತ್ರೆಯಲ್ಲಿ ಹಾಗೇ ಮಾಡೋದು, ಅಲ್ಲಿ ತೋರಿಸಬೇಕಾಗಿತ್ತು’ ಎಂದೆಲ್ಲಾ ಬಿಟ್ಟಿ ಸಲಹೆಗಳು ಶುರು ಆದವು. ನನ್ನ ಆಫೀಸಿನ ಎಚ್ಆರ್ ಒಮ್ಮೆ ಊಟದ ಬ್ರೇಕಿನಲ್ಲಿ ಒಂದು ಮಾತು ಹೇಳಿದ್ದರು, ‘ಈ ಅಮ್ಮಂದಿರು ಸುಮ್ಮನೆ ಗಂಟಾನುಗಟ್ಟಲೆ ಲೇಬರ್ ಅಲ್ಲಿದ್ದು, ನೋವು ತಿಂದು ಮಕ್ಕಳು ದೊಡ್ಡವರಾದ ಮೇಲೆ ನಾನು ನಿನ್ನನ್ನ ಹೆರೋದಕ್ಕೆ ಎಷ್ಟು ಕಷ್ಟ ಪಟ್ಟೆ ಗೊತ್ತಾ ಎಂದು ಪುಂಗಿ ಊದೋದು ಬಿಡಬೇಕು, ಸುಮ್ಮನೆ ಸಿಸೇರಿಯನ್ ಮಾಡಿಸ್ಕೊಂಡರೆ ಇವೆಲ್ಲಾ ಡ್ರಾಮಾನೇ ಇರೋದಿಲ್ಲ’ ಎಂದಿದ್ದರವರು.

 ಇದು ಬಹಳ ಸುಲಭ ಎಂದು ನಾನು ಅಂದುಕೊಂಡೆ. 8ನೇ ತಿಂಗಳಿನಲ್ಲಿ ಮಕ್ಕಳು ಇಷ್ಟಿಷ್ಟು ಒದೆಯುತ್ತಾರಾ ಎಂದು ಪರೀಕ್ಷೆ ಮಾಡಿಕೊಳ್ಳಿ ಎಂದು ನರ್ಸ್ ಹೇಳಿದ್ದರು. ಸ್ವಲ್ಪ ಹೆಚ್ಚೂ ಕಡಿಮೆ ಆದರೂ ತಕ್ಷಣ ಆಸ್ಪತ್ರೆಗೆ ಬರಬೇಕು ಎಂದರು. ಅದಕ್ಕೊಂದು ಲಾಗ್ ಬುಕ್ ಹಿಡಿದು ಬಲಗಡೆಯ ಮಗು ಇಷ್ಟು ಒದೆಯಿತು, ಎಡಗಡೆಯದ್ದು ಇಷ್ಟು- ಈ ಸಮಯಕ್ಕೆ ಎಂಬ ಲೆಕ್ಕವನ್ನು ನಾನು ಮತ್ತು ನನ್ನ ಗಂಡ ಚರ್ಚೆ ಬೇರೆ ಮಾಡುತ್ತಿದ್ದೆವು. ಅತಿಯಾಗಿ ಏನ್ನನ್ನೂ ಮಾಡಬಾರದು ಎಂದು ಅರಿವಿದ್ದರೂ ಲಾಗ್ ಪುಸ್ತಕ ಮಾತ್ರ ಬರೆಯೋದು ನಿಲ್ಲಿಸುತ್ತಿರಲ್ಲಿಲ್ಲ. ‘ಸಿಸೇರಿಯನ್ನಿನಲ್ಲಿ ದೇಹದ 7 ಲೇಯರುಗಳನ್ನು ಕುಯ್ಯುತ್ತಾರೆ’ ಎಂದು ಓದಿ ಗಾಬರಿ ಆಯಿತು. 

ಆಸ್ಪತ್ರೆ, ಇಂಜೆಕ್ಷನ್ನು, ಮಾತ್ರೆ ಅಂದರೆ ವಿಪರೀತ ಅಲರ್ಜಿ ನನಗೆ, ಭಯ ಕೂಡ. ಅಂಥದ್ದರಲ್ಲಿ ಅನಸ್ತೇಷಿಯಾ ಅಂತೆ ಅಂದಾಗ ಭಯ ಶುರು ಆಯಿತು. ‘ಆಗೋದು ಆಗತ್ತೆ’ ಎಂದು ಪೇರೆಂಟಿಂಗ್ ಟಿಪ್ಸ್ ಪುಸ್ತಕ ಓದುತ್ತಾ ಕೂತೆ. ಮುಂದಿನ ಸ್ಕ್ಯಾನಿನ ಟೈಮಿನಲ್ಲಿ ‘ಮಕ್ಕಳು ಚೆನ್ನಾಗಿ ಬೆಳೆದಿದ್ದಾರೆ. ಮಕ್ಕಳಿಬ್ಬರಿಗೂ ಜಾಗ ಸಾಲದೇ ಇರಬಹುದು, ಸಿ ಸೆಕ್ಷನ್ನೇ 90%, ಪ್ಲೆಸೆಂಟಾ ಪ್ರಿವಿಯಾ ಬೇರೆ, ಸ್ವಲ್ಪ ಬೇಗ ಹೆರಿಗೆ ಆಗುತ್ತದೆ’ ಎಂದು ಹೇಳಿದ ಮೇಲೆ ಅದಕ್ಕೊಂದು ತಯಾರಿ ಶುರು ಆಯಿತು. ‘ಸಿ ಸೆಕ್ಷನ್ ಅಂದರೆ ನಾವೇ ದಿನ, ಸಮಯ ಗೊತ್ತು ಮಾಡಬಹುದು’ ಎಂದು ಗಂಡನ ಮನೆಯವರು ಡೇಟು ಮತ್ತು ಟೈಮ್ ಲಿಸ್ಟ್ ಯಾರ ಹತ್ತಿರವೋ ಕೇಳಿಸಿ ಕೊಟ್ಟರು. 

ನಾನು ನನ್ನ ಹುಟ್ಟಿದ ಹಬ್ಬದ ದಿನವೇ ಹುಟ್ಟಲಿ ಎಂದು ಆಸೆ ಇಟ್ಟುಕೊಂಡೆ. ಇನ್ನೊಂದು ದಿನ ಡಾಪ್ಲರ್ ಸ್ಕ್ಯಾನ್ ಎಂದು ಆಸ್ಪತ್ರೆಗೆ ಹೋದರೆ, ‘ಇವತ್ತು ರಾತ್ರಿಯೇ ಅಡ್ಮಿಟ್ ಆಗಿ ಮಕ್ಕಳಿಗೆ ಸ್ವಲ್ಪವೂ ಜಾಗ ಇಲ್ಲ, ಇನ್ನು ಬಿಟ್ಟರೆ ಕಷ್ಟ’ ಎಂದು ಡಾಕ್ಟರು ಹೇಳಿ ಎಮರ್ಜೆನ್ಸಿ ಸಿ ಸೆಕ್ಷನ್ನಿಗೆ ತಯಾರಿ ಮಾಡಿಬಿಟ್ಟರು. ನಾನು ಈ ಗೌನ್ ಹಾಕಿಕೊಳ್ಳಬೇಕು, ಮಕ್ಕಳ ಬಟ್ಟೆ ಇಂಥದ್ದೇ ಬರಬೇಕು ಎಂದೆಲ್ಲಾ ತಯಾರಿ ಮಾಡಿಕೊಂಡು ಅಮೆಜಾನ್‌ನಲ್ಲಿ ಆರ್ಡರ್ ಮಾಡಿದ್ದೆಲ್ಲವೂ ಇನ್ನೂ ಟ್ರಾನ್ಸಿಟ್ಟಿನಲ್ಲೇ ಇದ್ದವು. ಸರಿ, ಫೋನ್ ತೆಗೆದು ಏನೋ ಸ್ಕ್ರಾಲ್ ಮಾಡೋವಾಗ ನನ್ನ ಕಾಲೇಜಿನ ಸೀನಿಯರ್ ಫೋಟೋ ಕೆಳಗೆ ‘RIP’ ಎಂದು ಹಾಕಿದ್ದರು. ಇದೇನಪ್ಪಾ ಹೋದ ತಿಂಗಳು ತಾನೇ ಸೀಮಂತ ಮಾಡಿಕೊಂಡಿದ್ದಳಲ್ಲಾ ಎಂದು ಗಾಬರಿ ಆಗಿ ಇನ್ನೊಂದು ಫ್ರೆಂಡಿಗೆ ಕೇಳಿದರೆ ‘ಎಮರ್ಜೆನ್ಸಿ ಸಿ ಸೆಕ್ಷನ್ ಆದಮೇಲೆ ಅತಿ ರಕ್ತಸ್ರಾವ ಆಗಿ ಹೋಗೇಬಿಟ್ಟಳಂತೆ, ಮಗು ಆಯ್ತು’ ಎಂದಳು. 

ನನ್ನ ಬೀಪಿ ಯಾವ ರೇಂಜಿಗೆ ಏರಿತೆಂದರೆ, ‘ಇವೆಲ್ಲಾ ಏನು ಬೇಡ, ಅದಾಗದೇ ಬರಲಿ ಮಗು’ ಎಂದು ಗಲಾಟೆ ಮಾಡೋಕೆ ಶುರು ಮಾಡಿದೆ. ಸಿ ಸೆಕ್ಷನ್ ಸುಲಭ ಅಂದುಕೊಂಡವಳಿಗೆ ಈಗ ಅದು ಬೇಡ ಅನ್ನಿಸೋಕೆ ಶುರು ಆಯಿತು. ಆದರೂ ಎಲ್ಲರೂ ಕನ್ವಿನ್ಸ್ ಮಾಡಿ, ತೀರ ಇಷ್ಟು ಚಿಕ್ಕ ವಯಸ್ಸಿಗೆ ಸಾಯೋ ಬಾಡಿ ನಂದಲ್ಲ ಎಂದು ನನಗೇ ಅನ್ನಿಸಿದ ಮೇಲೆ ಆಸ್ಪತ್ರೆಗೆ ಸಮಾಧಾನವಾಗಿ ಹೋದೆ. ರಾತ್ರಿ ಹನ್ನೊಂದು ಘಂಟೆಗೆ ಆಸ್ಪತ್ರೆಯ ಕ್ಯಾಂಟೀನಿನಲ್ಲಿ ಜ್ಯೂಸ್ ಕುಡಿದು ‘ನಾಳೆಯಿಂದ ನನ್ನ ಜೀವನ ಬದಲಾಗುತ್ತದೆ’ ಎಂದು ಸಿನಿಮೀಯವಾಗಿ ಗಂಡನಿಗೆ ಹೇಳಿದೆ. 

ಸಮಚಿತ್ತನಾಗಿ ಅವನು ಸ್ವಲ್ಪ ನಕ್ಕ ಅಷ್ಟೆ. ವಾರ್ಡಿಗೆ ಬಂದ ಮೇಲೆ ನರ್ಸ್, ‘ಇವತ್ತೆ ಲಾಸ್ಟ್ ನೀವು ಆರಾಮಾಗಿ ಮಲಗೋಕೆ ಸಾಧ್ಯವಾಗೋದು, ನಾಳೆಯಿಂದ ಒಂದು 10 ವರ್ಷದವರೆಗೆ ರಾತ್ರಿಯೆಲ್ಲಾ ನಿದ್ದೆಗೆಡೋದೆ’ ಎಂದು ಭಯಪಡಿಸಿ ಕೆನೋಲಾ ಹಾಕಿ ಹೋದರು.ಅನಸ್ತೇಷಿಯಾ ವೈದ್ಯರು ಬಂದು ಫಾರ್ಮಿಗೆ ಸೈನ್ ಹಾಕಿಸಿಕೊಂಡು ಹೋದರು. ‘ಏನು ಅಂತಾದರೂ ಓದಿದೆಯಾ?’ ಎಂದು ಗಂಡ ಕೇಳಿದ. ‘ಅಯ್ಯಾ ಬಿಡೋ’ ಎಂದು ಹೇಳಿದೆ. ‘

ಕರ್ಮ’ ಎಂದು ಫಾರ್ಮ್ ತರಿಸಿಕೊಂಡು ಮತ್ತೆ ಓದಿದ. ಅವನು ಓದುವಷ್ಟರಲ್ಲಿ ‘ಟೈಮ್ ಫಾರ್ ಬೇಬೀಸ್’ ಎಂದು ನರ್ಸ್ ವ್ಹೀಲ್‌ಚೇರ್‌ ತಂದರು. ‘ನಾ ನಡೀತೀನಿ ಬಿಡಿ’ ಎಂದೆ. ‘ಮುಚ್ಕೊಂಡು ಕೂತ್ಕೋಮೌ, ಹೆರಿಗೆ ಆಗ್ತಿರೋದು ನಿಂಗೆ’ ಎಂದು ಬೈದ ಮೇಲೆ ತೆಪ್ಪಗೆ ಕೂತೆ. ಓಟಿಗೆ ಹೋದರೆ ಫಿಲ್ಮ್ ಅಲ್ಲಿ ತೋರಿಸೋ ಹಾಗೆ ಏನೂ ಇರಲಿಲ್ಲ. ಎಲ್ಲವೂ ಸುಸಜ್ಜಿತವಾಗಿತ್ತು. ಡಾಕ್ಟರು, ನರ್ಸುಗಳು ಖುಷಿಯಾಗಿ ನಗುತ್ತಾ ಇದ್ದರು. ಅನಸ್ತೇಷಿಯಾ ಡಾಕ್ಟರಂತೂ ಸಕ್ಕತ್ತಾಗಿ ಜೋಕ್ಸ್ ಮಾಡುತ್ತಿದ್ದರು. 

‘ಒಂದೇ ನಿಮಿಷ ಕೂರು, ಬೆನ್ನಿಗೆ ಚುಚ್ಚಿದರೆ ಮುಗೀತು’ ಎಂದು ಅರಿವಳಿಕೆ ನೀಡಿದರು. ಅರ್ಧ ದೇಹಕ್ಕೆ ಮಾತ್ರ ಅರಿವಳಿಕೆ ನೀಡಿದ್ದರಿಂದ ನನಗೆ ಏನಾಗುತ್ತಿದೆ ಎಂಬ ಅರಿವಿತ್ತು. ನನ್ನ ಗಂಡನನ್ನೂ ಓಟಿಗೆ ಬಿಟ್ಟಿದ್ದರು. ಏನು ಮಾಡುತ್ತೇವೆ ಎಂದು ಡಾಕ್ಟರು ಹೇಳಿಯೇ ಮಾಡುತ್ತಿದ್ದರು. ಬಯಾಲಜಿಯಲ್ಲಿ ಭಯಂಕರ ವೀಕ್ ಇದ್ದ ನನಗೆ ಅವರು ಹೇಳಿದ್ದು ಅರ್ಥ ಆಗಿರಲಿಲ್ಲ. 10 ನಿಮಿಷದಲ್ಲಿ ಒಂದು ಮಗುವಿನ ಅಳು, ಇನ್ನೆರಡು ನಿಮಿಷದಲ್ಲಿ ಇನ್ನೊಂದು. ಗಂಡು-ಹೆಣ್ಣು ಫಸ್ಟ್ ಕ್ಲಾಸ್, ನೋ ಪ್ರಾಬ್ಲಂ, ಸ್ಟಿಚ್ ಅಪ್ ಎಂದು ಪಟಪಟ ಕೆಲಸ ಮುಗಿಸಿಬಿಟ್ಟರು ಡಾಕ್ಟರು. 

ನಂತರ ಮಕ್ಕಳನ್ನ ಡಾಕ್ಟ್ರು ಪರೀಕ್ಷೆ ಮಾಡಿ, ಹುಟ್ಟಿದಾಕ್ಷಣ ಕೊಡುವ ಲಸಿಕೆ ಇಂಜೆಕ್ಷನ್ ಎಲ್ಲಾ ಮುಗಿದು ನನ್ನ ಬಳಿ ಮಕ್ಕಳನ್ನ ಕೊಟ್ಟು ಫೋಟೋನೂ ತೆಗೆದುಬಿಟ್ಟರು. ಅಯ್ಯೋ ಇಷ್ಟೇನಾ ಎಂದು ನಾನು ಖುಷಿ ಪಟ್ಟೆ. ‘ಅರಿವಳಿಕೆ ಎಫೆಕ್ಟ್ ಹೋದ ಮೇಲೆ ನೋವು ಗೊತ್ತಾಗುತ್ತದೆ, ಬ್ಲೀಡ್ ಆಗತ್ತೆ, ಹುಷಾರು’ ಎಂದು ನನಗೆ ಹೇಳಿ ನರ್ಸಿಗೆ ಮಾನಿಟರ್ ಮಾಡಲು ಹೇಳಿ ಹೋದರು. ಅವತ್ತೇನು ಗೊತ್ತಾಗಲಿಲ್ಲ. ಆರಾಮಾಗಿ ರಿಕ್ಲೈನರ್ ಹಾಸಿಗೆಯಲ್ಲಿ ಕೂರೋದು , ಮಲಗೋದು ಮಾಡಿಕೊಂಡು ಫೀಡ್ ಮಾಡಿಯೇ ಬಿಟ್ಟೆ. ಮರುದಿವಸ ಹೆಜ್ಜೆ ಇಡೋಕ್ಕಾಗದೇ ಇರೋ ಅಷ್ಟು ನೋವು. ‘ನೋವೂ’ ಎಂದು ಕಿರುಚುವಷ್ಟರಲ್ಲಿ ನರ್ಸ್ ಬಂದು, ‘ಎದ್ದು ನಡೆಯಮ್ಮ, ಮೆಟ್ಟಿಲು ಹತ್ತಿ ಇಳಿಬೇಕು ಇವತ್ತೇ’ ಅಂದಾಗ, ನಾನು ಸಾಧ್ಯವೇ ಇಲ್ಲ ಅಂದೆ. ‘ನಿಮಗ್ಯಾರು ಕೇಳಿದ್ದು ಆಗತ್ತೆ ಆಗಲ್ಲ ಎಂದು, ಏಳಮ್ಮ ಸಾಕು’ ಅಂದರು. 

‘ಇದೊಳ್ಳೆ ಕಥೆಯಾಯ್ತಲ್ಲ’ ಎಂದು ನಾನು ಕೋಪ ಮಾಡಿಕೊಂಡೆ. ಆಮೇಲೆ ನಾನೀಗ ಬೇಜವಾಬ್ದಾರಿ ಹುಡುಗಿ ಅಲ್ಲ, ಎರಡು ಮಕ್ಕಳ ತಾಯಿ. ನಾನೇನು ಮಾತಾಡುತ್ತೀನೋ, ನಾನು ಹೇಗೆ ಇರುತ್ತೀನೋ ಎಲ್ಲವನ್ನು ಮಕ್ಕಳು ನೋಡುತ್ತಾ ಇರುತ್ತಾರೆ, ಹಾಗೇ ಕಲಿಯುತ್ತಾರೆ. ಸ್ವಲ್ಪ ಸಮಾಧಾನವಾಗಿ ಇರಬೇಕು ಎಂದು ಕೋಪದಲ್ಲಿ ಬರುವ ಯಾವ ಶಬ್ದವನ್ನು ಬಳಸದೇ ಎದ್ದು ನರ್ಸ್ ಹೇಳಿದ ಹಾಗೆ ಒಂದು ಫ್ಲೋರ್ ಮೆಟ್ಟಿಲು ಹತ್ತಿ ಇಳಿದು, ನಾಲಕ್ಕು ಸಲ ವಾಕಿಂಗ್ ಮಾಡಿ ಬಂದೆ. ರಕ್ತ ಅದೆಷ್ಟು ಹರಿಸಿದೆನೋ ಅದನ್ನು ಲೆಕ್ಕಕ್ಕೂ ಇಟ್ಟುಕೊಳ್ಳಲಿಲ್ಲ. ಫೋನ್ ಮಾಡಿ ವಿಷ್ ಮಾಡಿದವರೆಲ್ಲಾ ‘ಸಿಸೇರಿಯನ್ನಾ, ಸುಲಭ ಬಿಡು’ ಎಂದೆಲ್ಲಾ ಹೇಳೋವಾಗ ತೆಗೆದೆರಡು ಬಾರಿಸಬೇಕು ಅನ್ನಿಸುತ್ತಿತ್ತು. ಆದರೇನು ಮಾಡುವುದು ಓಡಾಡಲು ಸಾಧ್ಯವಾಗುತ್ತಿರಲಿಲ್ಲ. ದಿನಾ ನರ್ಸ್ ಬಂದು ‘ಎದ್ದು ನಡೀರಿ’ ಅನ್ನುತ್ತಿದ್ದರು. ನಾನು ಅತ್ತು ಕರೆದು ರಂಪಾಟ ಮಾಡಿದರೂ ‘ಅದೆಷ್ಟೊತ್ತು ಗಲಾಟೆ ಮಾಡ್ತೀರೋ ಮಾಡಿ, ಆಮೇಲೆ ನಡೀಲೇ ಬೇಕು’ ಎಂದಾಗ ಈಯಮ್ಮ ನನಗಿಂತಲೂ ಹಠ ಎಂದು ಎದ್ದು ನಡೆಯುತ್ತಿದ್ದೆ. 4 ದಿವಸದಲ್ಲಿ ನಡಿಗೆಯೇನೋ ಸುಗಮ ಆಯಿತು, ಆದರೆ ಬೆನ್ನು ಮಾತ್ರ ವಿಪರೀತ ನೋವು. ಕೂರೋದಕ್ಕೆ ನೋವು. ನಮ್ಮ ಡಾಕ್ಟರು ಬಂದು, ‘ಮನೆಗೆ ಹೋಗು ಸಾಕು ಹಾಯಾಗಿ. ಡಿಸ್ಚಾರ್ಜ್‌’ ಅಂದರು.

‘ಅಲ್ಲಾ ಇಷ್ಟೆಲ್ಲಾ ನೋವಿತ್ತಂದ್ರೆ ನಾರ್ಮಲ್ ಡೆಲಿವರಿ ಮಾಡ್ಬೋದಿತ್ತಲ್ವಾ’ ಅಂದೆ. ಅವರು ನಕ್ಕು, ‘ಅಯ್ಯೋ ಅದು ಮಾಡಿದರೆ ಕೆಳಗೆ ನೋವು, ಇದು ಮಾಡಿದರೆ ಮೇಲೆ ನೋವು, ಅದ್ರಲ್ಲೇನು’ ಎಂದು ಸಿಂಪಲ್ಲಾಗಿ ಹೇಳಿ ಮನೆಗೆ ಕಳಿಸಿದರು. ಅಮ್ಮನಾದ ಮೇಲೆ ನನಗೆ ಈಗ ಎರಡು ಜಗತ್ತುಗಳ ಪರಿಚಯ ಆಗಿದೆ. ನಾರ್ಮಲ್ ಅನ್ನುವುದು ಬೇರೆ ಬೇರೆ ಗುಂಪಿನಲ್ಲಿ ಬೇರೆ ಬೇರೆ ತರಹ. ಆದರೆ ಒಟ್ಟಿನಲ್ಲಿ ಜಗತ್ತಿನ ಥರಾವರಿ ಜಡ್ಜ್‌ಮೆಂಟುಗಳ ಬಗ್ಗೆ ತಲೆ ಕೆಡಿಸಿಕೊಳ್ಳಬಾರದೆಂಬ ಅರಿವಾಗತೊಡಗಿದೆ.