ಯದುವೀರ್ ಬಹುಮತದಿಂದ ಗೆಲುವು ನಿಶ್ಚಿತ : ಎಲ್.ನಾಗೇಂದ್ರ ವಿಶ್ವಾಸ

| Published : Apr 28 2024, 01:24 AM IST / Updated: Apr 28 2024, 12:49 PM IST

Yaduveer

ಸಾರಾಂಶ

ರಾಜಮನೆತನದವರು ಕೈಗೆ ಸಿಗುವುದಿಲ್ಲ ಎಂಬ ವಿರೋಧ ಪಕ್ಷದವರ ಹೇಳಿಕೆಯನ್ನು ಯದುವೀರ ಸುಳ್ಳಾಗಿಸಿದ್ದು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರೊಂದಿಗೆ ಮತ ಕೇಳಿದ್ದು, ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ.

ಮೈಸೂರು : ಮೈಸೂರು- ಕೊಡಗು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಬಹುಮತದಿಂದ ಗೆಲುವು ಸಾಧಿಸುವುದು ನಿಶ್ಚಿತ ಎಂದು ಬಿಜೆಪಿ ನಗರಾಧ್ಯಕ್ಷರಾದ ಮಾಜಿ ಶಾಸಕ ಎಲ್. ನಾಗೇಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಎರಡೂ ಜಿಲ್ಲೆಗಳ ಜನರು ಸ್ವಯಂ ಪ್ರೇರಣೆ ಹಾಗೂ ಉತ್ಸಾಹದಿಂದ ಮತ ಚಲಾಯಿಸಿದ್ದಾರೆ. ಅಲ್ಲದೆ ಎಲ್ಲರ ಬಾಯಲ್ಲೂ ಯದುವೀರ್ ಅವರ ಹೆಸರು ಕೇಳಿ ಬರುತ್ತಿದೆ. ಇದನ್ನು ಗಮನಿಸಿದರೆ ಬಿಜೆಪಿ ಗೆಲುವು ಸಾಧಿಸುವುದರಲ್ಲಿ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.

ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ಅಭ್ಯರ್ಥಿ ಗೆಲುವಿಗೆ ಹಗಲಿರುಳು ಶ್ರಮಿಸಿದ್ದಾರೆ. ಜೊತೆಗೆ ಜೆಡಿಎಸ್ ಕಾರ್ಯಕರ್ತರು ಹಾಗೂ ಮುಖಂಡರು ಇದಕ್ಕೆ ಸಾಥ್ ನೀಡಿರುವುದು ಮತ್ತಷ್ಟು ಬಲ ಬಂದಂತಾಗಿದೆ. ಎರಡೂ ಪಕ್ಷಗಳ ಕಾರ್ಯಕರ್ತರು ಒಗ್ಗಟ್ಟಿನಿಂದ ಶ್ರಮ ವಹಿಸಿದ್ದು, ಪೂರಕವಾದ ವಾತಾವರಣ ನಿರ್ಮಾಣವಾಗಲು ಸಾಧ್ಯವಾಯಿತು ಎಂದು ಹೇಳಿದ್ದಾರೆ.

ಅಭ್ಯರ್ಥಿ ಯದುವೀರ್ ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ಇಡೀ ಕ್ಷೇತ್ರವನ್ನು ಸುತ್ತಿದ್ದಾರೆ. ಅಲ್ಲದೆ ಸಾರ್ವಜನಿಕರೊಂದಿಗೆ ಅವರು ಬೆರೆಯುತ್ತಿದ್ದ ರೀತಿ ಎಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸಿದೆ. ರಾಜಮನೆತನದವರು ಕೈಗೆ ಸಿಗುವುದಿಲ್ಲ ಎಂಬ ವಿರೋಧ ಪಕ್ಷದವರ ಹೇಳಿಕೆಯನ್ನು ಯದುವೀರ ಸುಳ್ಳಾಗಿಸಿದ್ದು, ಸಾಮಾನ್ಯರಲ್ಲಿ ಸಾಮಾನ್ಯರಾಗಿ ಜನರೊಂದಿಗೆ ಮತ ಕೇಳಿದ್ದು, ಸಾರ್ವಜನಿಕ ವಲಯದಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಅವರು ತಿಳಿಸಿದ್ದಾರೆ.

ಪೆನ್ಸಿಲ್‌ ಲೆಡ್‌ ನಲ್ಲಿ ಯದುವೀರ್‌ ಕಲಾಕೃತಿ

ಕನ್ನಡಪ್ರಭ ವಾರ್ತೆ ಮೈಸೂರುಯದುವೀರ್ ಅವರ ಅದ್ಭುತ ಕಲಾಕೃತಿಯನ್ನು ಪೆನ್ಸಿಲ್ ಲೆಡ್ ನಲ್ಲಿ ಕಲಾವಿದ ಅರಳಿಸಿ, ಯದುವೀರ್‌ ಅವರಿಗೆ ಉಡುಗೊರೆಯಾಗಿ ನೀಡಿದರು. ಮೈಸೂರಿನ ಪೆನ್ಸಿಲ್ ಲೆಡ್ ಕಾರ್ವಿಂಗ್ ಕಲಾವಿದ ನಂಜುಂಡಸ್ವಾಮಿ ಅವರು ಮೈಸೂರು ಕೊಡಗು ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾದ ಯದುವೀರ್ ಒಡೆಯರ್ ಅವರಿಗೆ‌ವಿಶೇಷ ಉಡುಗೊರೆಯೊಂದನ್ನು ನೀಡಿದರು. ಅವರ ಭಾವಚಿತ್ರವನ್ನು ಪೆನ್ಸಿಲ್ ಲೆಡ್ ನಲ್ಲಿ ಮೂಡಿಸಿ ಅವರಿಗೆ ಉಡುಗೊರೆಯಾಗಿ ನೀಡಿದ್ದು ವಿಶೇಷವಾಗಿತ್ತು , ಅದನ್ನು ಸ್ವೀಕರಿಸಿದ ಯದುವೀರ್ ಅವರು ಕಲಾವಿದರಿಗೆ ಧನ್ಯವಾದ ಅರ್ಪಿಸಿದರು.

ಕಾಂಗ್ರೆಸ್‌ ಬಿಜೆಪಿ ಕಾರ್ಯಕರ್ತ ನಡುವೆ ಗಲಾಟೆ

ಮೈಸೂರು: ಚಾಮರಾಜ ಕ್ಷೇತ್ರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಗಲಾಟೆ ನಡೆಯಿತು. ಹೆಬ್ಬಾಳು ಬಡಾವಣೆಯ ಶಿವಾನಂದ ಶಾಲೆಯ ಮತಗಟ್ಟೆ ಬಳಿ ಗಲಾಟೆ ಆಯಿತು. ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಪರಸ್ಪರ ಮಾತಿನ ಚಕಮಕಿ, ತಳ್ಳಾಟ ನೂಕಾಟ ನಡೆಯಿತು. ಟೇಬಲ್ ಹಾಕುವ ವಿಚಾರಕ್ಕೆ ಗಲಾಟೆ ನಡೆದಿದೆ. ಉಭಯ ಪಕ್ಷಗಳ ಕಾರ್ಯಕರ್ತರ ನಡುವೆ ವಾಗ್ವಾದ ಉಂಟಾಯಿತು. ಘಟನಾ ಸ್ಥಳಕ್ಕೆ ಸ್ಥಳೀಯ ಶಾಸಕ ಕೆ. ಹರೀಶ್ ಗೌಡ ಭೇಟಿ ಪರಿಸ್ಥಿತಿ ತಿಳಿಗೊಳಿಸಿ ಸಮಾಧಾನ ಪಡಿಸಿದರು. ಬಿಜೆಪಿ ಕಾರ್ಯಕರ್ತರ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.