ಸೇಂಟ್ ಜಾನ್ಸ್ ನರ್ಸಿಂಗ್ ಕಾಲೇಜಿನ 222 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ

| Published : Apr 28 2024, 01:24 AM IST

ಸಾರಾಂಶ

ಸೇಂಟ್ ಜಾನ್ಸ್ ನರ್ಸಿಂಗ್ ಕಾಲೇಜಿನ 41ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ 222 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸೇಂಟ್ ಜಾನ್ಸ್ ನರ್ಸಿಂಗ್ ಕಾಲೇಜಿನ 41ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭದಲ್ಲಿ ಕಾಲೇಜಿನ 222 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಇಂಡಿಯನ್ ನರ್ಸಿಂಗ್ ಕೌನ್ಸಿಲ್‌ನ ಸೀನಿಯರ್ ಕನ್ಸಲ್ಟೆಂಟ್ ಡಾ। ಇ.ಪುನಿತ ಮತ್ತು ಸೇಂಟ್ ಜಾನ್ಸ್ ನ್ಯಾಷನಲ್ ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಮಂಡಳಿ ಸದಸ್ಯ ಡಾ। ಜೋಶುವಾ ಮಾರ್ ಅವರು ಪದವಿ ಪ್ರದಾನ ಮಾಡಿದರು.

ನಮ್ಮ ವೃತ್ತಿಯಲ್ಲಿ ನಾವು ಏನು ಮಾಡುತ್ತಿದ್ದೇವೆ ಎನ್ನುವ ಸ್ವಯಂ ಹೊಣೆಗಾರಿಕೆಯನ್ನು ನಾವು ಹೊಂದಿರಬೇಕು. ನಾಗರಿಕರ ಆರೋಗ್ಯ ಸೇವೆ ಮಾಡುತ್ತಿರುವ ನಾವು ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ರೋಗಿಗಳು, ಅವರ ಸಂಬಂಧಿಕರ ನೋವು, ಅಹವಾಲು, ಸಮಸ್ಯೆಗಳಿಗೆ ಸ್ಪಂದಿಸಬೇಕು. ತಂತ್ರಜ್ಞಾನವನ್ನು ಬುದ್ಧಿವಂತಿಕೆಯಿಂದ ಬಳಸುವ ಮೂಲಕ ರೋಗಿಗಳ ಆರೈಕೆ ಮಾಡಬೇಕು ಎಂದು ಡಾ। ಪುನಿತ ಹೇಳಿದರು.

ನರ್ಸಿಂಗ್ ಅತ್ಯಂತ ಶ್ರೇಷ್ಠ ವೃತ್ತಿಯಾಗಿದೆ. ಸಾಮಾಜಿಕ ಕಳಕಳಿ, ನೈತಿಕತೆ, ಮೌಲ್ಯಗಳನ್ನು ರೂಢಿಸಿಕೊಳ್ಳಬೇಕು. ಅಗತ್ಯ ಇರುವವರಿಗೆ ಸೇವೆ ನೀಡಬೇಕು. ರೋಗಿಗಳು ಮತ್ತು ಅವರ ಸಂಬಂಧಿಕರಿಗೆ ಭಾವನಾತ್ಮಕ ಬೆಂಬಲ ನೀಡಬೇಕು ಎಂದು ಡಾ। ಜೋಶುವಾ ಮಾರ್ ಹೇಳಿದರು.