ಬೇಲೂರು ತಾಲೂಕಿನಲ್ಲಿ ವಯೋವೃದ್ಧೆಯಿಂದ ಮತದಾನ

| Published : Apr 27 2024, 01:17 AM IST

ಸಾರಾಂಶ

ಲೋಕಸಭಾ ಚುನಾವಣೆಗೆ ಹಾಸನ ಲೋಕಸಭಾ ಕ್ಷೇತ್ರದ ಬೇಲೂರು ತಾಲೂಕಿನಲ್ಲಿ ಶುಕ್ರವಾರ ನಡೆದ ಮತದಾನದಲ್ಲಿ ಕಂದವಾರ ಗ್ರಾಮದ ಲಕ್ಷ್ಮಮ್ಮ (೯೭) ತಮ್ಮ ಇಳಿವಯಸ್ಸಿನಲ್ಲಿ ಮತಗಟ್ಟೆಗೆ ಬಂದು ಮತದಾನ ಮಾಡಿದರು.

97ರ ಹರೆಯದಲ್ಲೂ ಮತಗಟ್ಟೆಗೆ ಆಗಮಿಸಿ ಹಕ್ಕು ಚಲಾವಣೆ

ಕನ್ನಡಪ್ರಭ ವಾರ್ತೆ ಬೇಲೂರು

ಲೋಕಸಭಾ ಚುನಾವಣೆಗೆ ಹಾಸನ ಲೋಕಸಭಾ ಕ್ಷೇತ್ರದ ಬೇಲೂರು ತಾಲೂಕಿನಲ್ಲಿ ಶುಕ್ರವಾರ ನಡೆದ ಮತದಾನದಲ್ಲಿ ಹೆಚ್ಚು ವಯೋವೃದ್ದರು ಮತಗಟ್ಟೆಗೆ ಬಂದು ಮತದಾನ ಮಾಡಿದರು.

ತಾಲೂಕಿನ ಕಂದವಾರ ಗ್ರಾಮದ ಲಕ್ಷ್ಮಮ್ಮ (೯೭) ತಮ್ಮ ಇಳಿವಯಸ್ಸಿನಲ್ಲಿ ಕೂಡ ಮತಗಟ್ಟೆಗೆ ಆಗಮಿಸಿ ತಮ್ಮ ಹಕ್ಕು ಚಲಾಯಿಸಿ, ತಮ್ಮ ಕರ್ತವ್ಯವನ್ನು ನಿಭಾಹಿಸುವ ಮೂಲಕ ಯುವ ಮತದಾರರಿಗೆ ಮಾದರಿಯಾದರು. ಕಂದವಾರ ಗ್ರಾಮದ ಲಕ್ಷ್ಮಮ್ಮ ಅವರಿಗೆ ಆರು ಜನ ಮಕ್ಕಳು, ೧೫ಕ್ಕೂ ಅಧಿಕ ಮೊಮ್ಮಕ್ಕಳನ್ನು ಹೊಂದಿರುವ ಇವರು ತುಂಬು ಜೀವನ ನಡೆಸಿದ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ. ಮತದಾನದ ಬಗ್ಗೆ ಅಪಾರ ಪ್ರಮಾಣದಲ್ಲಿ ಗೌರವ ಇರುವ ಹಿನ್ನೆಲೆ ಯಾವುದೇ ಚುನಾವಣೆಗೆ ತಪ್ಪಿಸದೆ ಮತದಾನ ಮಾಡುತ್ತ ಬಂದಿದ್ದಾರೆ. ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ೮೫ ವರ್ಷದ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನ ನಡೆಸುವ ಅವಕಾಶವನ್ನು ಚುನಾವಣೆ ಆಯೋಗ ಕಲ್ಪಿಸಿತ್ತು. ಆದರೆ ಇವರು ತಾವು ಯಾವ ಕಾರಣಕ್ಕೂ ಮನೆಯಲ್ಲಿ ಮತದಾನ ನಡೆಸುವುದಿಲ್ಲ, ಮತಗಟ್ಟೆಗೆ ತೆರಳಿ ಅಲ್ಲಿಯೇ ಮತದಾನ ನಡೆಸುವ ಬಗ್ಗೆ ತಿಳಿಸಿದ್ದರು. ಅದರಂತೆ ಶುಕ್ರವಾರ ಯಾರ ಸಹಾಯ ಪಡೆಯದೆ ಮತದಾನ ಮಾಡಿದ್ದಾರೆ. ಅಲ್ಲದೆ ಮತದಾನ ಎಂದರೆ ಹಿಂದೇಟು ಹಾಕುವ ಮತದಾರರಿಗೆ ಇವರ ದಿಟ್ಟ ನಿಲುವು ಆದರ್ಶಪ್ರಾಯವಾಗಿದೆ.ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದ ಗ್ರಾಮಸ್ಥರ ಜತೆ ಸಂಧಾನ

ಬಸವಾಪಟ್ಟಣ: ಇಲ್ಲಿಗೆ ಸಮೀಪದ ಕಾನನಕೊಪ್ಪಲು ಗ್ರಾಮದಲ್ಲಿ ಸುಮಾರು ೩೫೦-೪೦೦ ಮತದಾರರಿದ್ದು ಈ ಗ್ರಾಮದಲ್ಲಿ ಪಕ್ಕದ ಸುಮಾರು ೨ ಕಿ.ಮೀ ದೂರದಲ್ಲಿರುವ ಗರುಡನಹಳ್ಳಿ ಗ್ರಾಮಕ್ಕೆ ತೆರಳಿ ಮತದಾನ ಮಾಡಬೇಕಾಗಿದ್ದು ಇದನ್ನು ವಿರೋಧಿಸಿ ಕಾನನಕೊಪ್ಪಲು ಗ್ರಾಮದ ಜನತೆ ಮತದಾನ ಬಹಿಷ್ಕಾರಕ್ಕೆ ಮುಂದಾಗಿದ್ದರು. ಆದರೆ ರಾಮನಾಥಪುರ ಮತ್ತು ಬಸವಾಪಟ್ಟಣದ ಅಧಿಕಾರಿಗಳು ಮತದಾನಕ್ಕೆ ಗ್ರಾಮಸ್ಥರ ಮನವೊಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಕಾನನಕೊಪ್ಪಲು ಗ್ರಾಮದಲ್ಲಿ ಮೂಲಭೂತಸೌಲಭ್ಯಗಳ ಕೊರತೆ ಇದ್ದು ಗ್ರಾಮದಲ್ಲಿದ್ದ ಕಿರಿಯ ಪ್ರಾಥಮಿಕ ಶಾಲೆಯನ್ನು ಕಳೆದ ೫ ವರ್ಷಗಳ ಹಿಂದೆಯೇ ಮುಚ್ಚಲಾಗಿದೆ. ಮತದಾನ ಕೇಂದ್ರ ಬೇರೆ ಗ್ರಾಮದಲ್ಲಿದೆ. ಅಂಗನವಾಡಿಗೆ ಕಟ್ಟಡದ ಕೊರತೆ ಇದೆ, ಸರ್ಕಾರಿ ಬಸ್‌ಗಳ ನಿಲುಗಡೆ ಸಮಸ್ಯೆಗಳಿಂದ ಗ್ರಾಮ ಸೌಲಭ್ಯ ವಂಚಿತವಾಗಿದ್ದು ವಯಸ್ಸಾದ ಹಿರಿಯರು, ಕಾಯಿಲೆ ಇದ್ದವರು, ಅಂಗವಿಕಲರು ೨ ಕಿ.ಮೀ ನಡೆದು ಹೋಗಿ ಮತದಾನ ಮಾಡುವುದು ದುಸ್ಸಾಹಸದ ಕೆಲಸವಾಗಿದೆ. ಅದ್ದರಿಂದ ಸೌಲಭ್ಯ ವಂಚಿತರಾಗಿದ್ದ ಕಾನನಕೊಪ್ಪಲು ಗ್ರಾಮದ ಯುವಕರು ೨೦೨೪ ಲೋಕಸಭಾ ಚುನಾವಣೆ ಬಹಿಷ್ಕಾರಕ್ಕೆ ಮುಂದಾಗಿದ್ದರು. ಈ ವಿಚಾರವನ್ನು ತಾಲೂಕು ಅಡಳಿತದ ಗಮನಕ್ಕೆ ತರಲಾಗಿ ರಾಮನಾಥಪುರ ಕಂದಾಯ ಇಲಾಖೆ ರಾಜಸ್ವ ನಿರೀಕ್ಷಕರು ಮತ್ತು ಬಸವಾಪಟ್ಟಣ ಗ್ರಾಮ ಲೆಕ್ಕಾಧಿಕಾರಿಗಳು ಕಾನನಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಮತದಾರರನ್ನು ಮನವೊಲಿಸಿ ಮುಂಬರುವ ಚುನಾವಣಾ ವೇಳೆಗೆ ಪರಿಹಾರ ಕಂಡು ಹಿಡಿಯುವುದಾಗಿ ಗ್ರಾಮಸ್ಥರ ಮನವೊಲಿಸಿ, ಯುವಕರಿಗೆ ಮುಂದಿನ ದಿನಗಳಲ್ಲಿ ಸೌಲಭ್ಯಗಳ ವಿಸ್ತರಣೆಗೆ ಇತರ ಇಲಾಖೆಗಳಿಗೂ ತಹಸೀಲ್ದಾರ್ ಕರೆಯಿಂದ ಪರಿಹಾರ ಒದಗಿಸಲು ಮುಂದಾಗುವುದಾಗಿ ತಿಳಿಸಿದರು. ನಂತರ ಮತದಾನಕ್ಕೆ ಗ್ರಾಮಸ್ಥರು ಸಮ್ಮತಿಸಿದರು.