ಮತದಾನ ಪ್ರತಿಯೊಬ್ಬರ ಹಕ್ಕು, ಕರ್ತವ್ಯ-ಅಕ್ಷಯ ಶ್ರೀಧರ

| Published : Apr 27 2024, 01:17 AM IST

ಮತದಾನ ಪ್ರತಿಯೊಬ್ಬರ ಹಕ್ಕು, ಕರ್ತವ್ಯ-ಅಕ್ಷಯ ಶ್ರೀಧರ
Share this Article
  • FB
  • TW
  • Linkdin
  • Email

ಸಾರಾಂಶ

ಚುನಾವಣೆಯು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾಗಿದೆ. ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ತಮ್ಮ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ್ ಶ್ರೀಧರ್ ಹೇಳಿದರು.

ಹಾವೇರಿ: ಚುನಾವಣೆಯು ಪ್ರಜಾಪ್ರಭುತ್ವದ ಅತಿದೊಡ್ಡ ಹಬ್ಬವಾಗಿದೆ. ಮತದಾರರು ಯಾವುದೇ ಆಸೆ ಆಮಿಷಕ್ಕೆ ಒಳಗಾಗದೆ ನಿರ್ಭೀತಿಯಿಂದ ತಮ್ಮ ಮತದಾನ ಹಕ್ಕನ್ನು ಚಲಾಯಿಸಬೇಕು ಎಂದು ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹಾಗೂ ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷ ಅಕ್ಷಯ್ ಶ್ರೀಧರ್ ಹೇಳಿದರು.ನಗರದಲ್ಲಿ ಗುರುವಾರ ಸಂಜೆ ಲೋಕಸಭಾ ಚುನಾವಣೆ ಪ್ರಯುಕ್ತ ಸ್ವೀಪ್ ಕಾರ್ಯಕ್ರಮದಡಿ ಮತದಾನ ಜಾಗೃತಿ ಮೂಡಿಸಲು ನಗರಸಭೆ ಕಾರ್ಯಾಲಯದಿಂದ ನಗರದ ಜೆ.ಎಚ್. ಪಟೇಲ್ ವೃತ್ತದವರೆಗೆ ಆಯೋಜಿಸಲಾದ ಮೊಬೈಲ್ ಟಾರ್ಚ್ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.ಜಿಲ್ಲೆಯಲ್ಲಿ ಮತದಾನ ಪ್ರಮಾಣ ಹೆಚ್ಚಿಸುವ ನಿಟ್ಟಿನಲ್ಲಿ ಜಿಲ್ಲಾ ಸ್ವೀಪ್ ಸಮಿತಿಯಿಂದ ಚಿತ್ರಕಲೆ, ಗೋಡೆಬರಹ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮತದಾನ ಜಾಗೃತಿ ಮೂಡಿಸಲಾಗುತ್ತಿದೆ. ಮತದಾನ ಪ್ರತಿಯೊಬ್ಬರ ಹಕ್ಕು ಮತ್ತು ಕರ್ತವ್ಯವಾಗಿದೆ. ಮತದಾನ ಮಾಡಿ ಪ್ರಜಾಪ್ರಭುತ್ವ ಗಟ್ಟಿಗೊಳಿಸಿ ಎಂದು ಕರೆ ನೀಡಿದರು. ಅಕ್ಷತಾ ಕೆ.ಸಿ. ಮಾತನಾಡಿ, ಇಂದು ಮೊಬೈಲ್ ಟಾರ್ಚ್ ಮೂಲಕ ಮತದಾನ ಜಾಗೃತಿ ಹಮ್ಮಿಕೊಂಡಿದ್ದು ಬಹಳ ವಿಶೇಷವಾಗಿದೆ. ೧೮ ವರ್ಷ ಪೂರೈಸಿದ ಪ್ರತಿಯೊಬ್ಬರೂ ಮತದಾನ ಮಾಡಬೇಕು. ನಮ್ಮ ಮತ ನಮ್ಮ ಹಕ್ಕು, ಪ್ರಜಾಪ್ರಭುತ್ವದ ಉಳಿವಿಗಾಗಿ ಎಲ್ಲರೂ ತಪ್ಪದೇ ಮತದಾನ ಮಾಡಬೇಕು ಎಂದು ಹೇಳಿದರು.ಇದೇ ಸಂದರ್ಭದಲ್ಲಿ ಜಿಲ್ಲಾ ಸ್ವೀಪ್ ಸಮಿತಿ ಹೊರತಂದ ಮತದಾನ ಮರಿಬೇಡ ಮಾವ ಜಾಗೃತಿಗೀತೆ ಬಿಡುಗಡೆಗೊಳಿಸಲಾಯಿತು. ಜಿಲ್ಲಾ ಸ್ವೀಪ್ ಚುನಾವಣೆ ರಾಯಭಾರಿ ಕನ್ನಡ ಕೋಗಿಲೆ ಖ್ಯಾತಿಯ ಗಾಯಕ ಖಾಸೀಂಅಲಿ, ವಿಜಯಲಕ್ಷ್ಮೀ ಹುಬ್ಬಳ್ಳಿ, ಮೊಬೈಲ್ ಮಲ್ಲಪ್ಪ ಅವರು ವಿವಿಧ ಮತದಾನ ಜಾಗೃತಿ ಗೀತೆಗಳನ್ನು ಹಾಡಿದರು.ನಗರಸಭೆಯಿಂದ ಆರಂಭವಾದ ಮೊಬೈಲ್ ಟಾರ್ಚ್ ಮತದಾನ ಜಾಗೃತಿ ಜಾಥಾದಲ್ಲಿ ಮೊಬೈಲ್ ಲೈಟ್ ಆನ್ ಮಾಡಿಕೊಂಡು ನಗರದ ಜೆ.ಎಚ್.ಪಟೇಲ್‌ವರೆಗೆ ಆಗಮಿಸಿದ ವಿವಿಧ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು, ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು, ನಗಸಭೆ ಪೌರಕಾರ್ಮಿಕರು, ಇತರರು ಮತದಾನ ಘೋಷಣೆ ಕೂಗುತ್ತ ಸಾಗಿದರು.ಉಪ ಅರಣ್ಯ ಸಂರಕ್ಷಣಾಧಿಕಾರಿ ಬಾಲಕೃಷ್ಣ ಎಸ್.,ಜಿ.ಪಂ.ಉಪ ಕಾರ್ಯದರ್ಶಿ ಸೋಮಶೇಖರ ಮುಳ್ಳಳ್ಳಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಶ್ರೀನಿವಾಸ ಆಲದರ್ತಿ, ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸುರೇಶ ಹುಗ್ಗಿ, ನಗರಸಭೆ ಪೌರಾಯುಕ್ತ ಪರಶುರಾಮ ಚಲವಾದಿ, ಚುನಾವಣಾ ರಾಯಭಾರಿ ಮಾಲತೇಶ ಗರಡಿಮನಿ ಇತರರು ಉಪಸ್ಥಿತರಿದ್ದರು.