ಮಂಚಳ್ಳೀಲಿ ಅಹಿಂದ ವರ್ಗದಿಂದ ಮತದಾನ ಬಹಿಷ್ಕಾರ!

| Published : Apr 28 2024, 01:15 AM IST

ಸಾರಾಂಶ

ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ದಿನ ಗ್ರಾಮದ ಅಹಿಂದ ವರ್ಗ ಸಂಪೂರ್ಣವಾಗಿ ಮತದಾನ ಬಹಿಷ್ಕರಿಸಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ತಾಲೂಕಿನ ಮಂಚಹಳ್ಳಿ ಗ್ರಾಮದಲ್ಲಿ ಲೋಕಸಭೆ ಚುನಾವಣೆ ದಿನ ಗ್ರಾಮದ ಅಹಿಂದ ವರ್ಗ ಸಂಪೂರ್ಣವಾಗಿ ಮತದಾನ ಬಹಿಷ್ಕರಿಸಿದರು. ಗ್ರಾಮದಲ್ಲಿ ಕಾಂಗ್ರೆಸ್‌, ಬಿಜೆಪಿಯ ಮುಖಂಡರು ಅಹಿಂದ ವರ್ಗದ ಜನರ ಕಷ್ಟ, ಸುಖಗಳಿಗೆ ಸ್ಪಂದಿಸುತ್ತಿಲ್ಲ. ಗ್ರಾಮದಲ್ಲಾದ ಕೇಸು, ವಗೈರೆಗಳಿಗೆ ಅಹಿಂದ ವರ್ಗ ಕೈ ಹಿಡಿಯುತ್ತಿಲ್ಲ. ಚುನಾವಣೆ ಸಮಯದಲ್ಲೂ ಪ್ರಚಾರಕ್ಕೂ ಕರೆದಿಲ್ಲ ಎಂದು ಬೇಸತ್ತು ಅಹಿಂದ ವರ್ಗದವರೆಲ್ಲ ಚುನಾವಣೆಗೆ ಬಹಿಷ್ಕರಿಸಿದ್ದಾರೆ.

ಗ್ರಾಮದಲ್ಲಿ ವೀರಶೈವ, ಲಿಂಗಾಯಿತರು, ಕುರುಬ, ನಾಯಕ, ಮಡಿವಾಳ, ಗೆಜ್ಜಗಾರ, ಗಾಣಿಗ, ಉಪ್ಪಾರ, ಕುಂಬಾರ ಸಮಾಜ ಸೇರಿದಂತೆ ಇನ್ನಿತರ ಸಮಾಜದವರಿದ್ದಾರೆ. ಲೋಕಸಭೆ ಚುನಾವಣೆಯ ದಿನದಂದು ವೀರಶೈವ, ಲಿಂಗಾಯಿತರ ಹೊರೆತು ಪಡಿಸಿ ಉಳಿದೆಲ್ಲ ಅಹಿಂದ ವರ್ಗದ ಸಮಾಜದ ಸ್ವಯಂ ಪ್ರೇರಣೆಯಿಂದ ಸುಮಾರು ೭೫೦ ಕ್ಕೂ ಹೆಚ್ಚು ಜನರು ಮತ ಚಲಾಯಿಸಿದೆ ಸ್ವಾಭಿಮಾನ ಮರೆದಿದ್ದಾರೆ.

ಈ ಸಂಬಂಧ ಗ್ರಾಮದ ಅಹಿಂದ ವರ್ಗದ ಮುಖಂಡರೊಬ್ಬರು ಕನ್ನಡಪ್ರಭಕ್ಕೆ ಪ್ರತಿಕ್ರಿಯಿಸಿದ್ದು, ಗ್ರಾಮದ ಎರಡು ಪಕ್ಷದ ಮುಖಂಡರು ಅಹಿಂದ ವರ್ಗದವರನ್ನು ಕಡೆಗಣಿಸಿದ್ದು ಅಲ್ಲದೆ ಶಾಸಕ ಎಚ್.ಎಂ.ಗಣೇಶ್‌ ಪ್ರಸಾದ್‌ ಕಡೆಗಣಿಸಿದ್ದು ಮತದಾನ ಬಹಿಷ್ಕಾರಕ್ಕೆ ಕಾರಣ ಎಂದಿದ್ದಾರೆ.

ಮನವೊಲಿಕೆ ವಿಫಲ: ಮಂಚಹಳ್ಳಿ ಗ್ರಾಮದ ಅಹಿಂದ ವರ್ಗದವರು ಮತದಾನ ಬಹಿಷ್ಕರಿಸಿದಾಗ ಗ್ರಾಮದ ಪ್ರಮುಖರು ಮತದಾನ ಮಾಡಿ ನಿಮ್ಮ ಸಮಸ್ಯೆ ಕುರಿತು ಮಾತನಾಡೋಣ ಎಂದು ಹೇಳಿದರೂ ಒಪ್ಪಿಲ್ಲ ಎಂದು ತಿಳಿದು ಬಂದಿದೆ.

ಅಹಿಂದ ವರ್ಗದ ಬಸವನಾಯಕ, ಬೆಳ್ಳನಾಯಕ, ಕೃಷ್ಣ ನಾಯಕ, ಸಿದ್ದನಾಯಕ, ಈರನಾಯಕ, ಯಜಮಾನ ಸಿದ್ದನಾಯಕ್‌, ಜಯರಾಜ್‌ ನಾಯಕ, ನಾಗನಾಯಕ, ಮಹದೇವೇಗೌಡ, ಜಡೇ ಗೌಡ, ಚಿಕ್ಕೂಸ್‌ ಗೌಡ, ಸ್ವಾಮಿ ಗೌಡ, ಮಾದೇಶ, ಪುಟ್ಟಸ್ವಾಮಿ ಶೆಟ್ಟಿ, ಗುರುಸಿದ್ದಶೆಟ್ಟಿ, ರಂಗಸ್ವಾಮಿಶೆಟ್ಟಿ, ಸಿದ್ದರಾಜಶೆಟ್ಟಿ, ನಾಗೇಂದ್ರ ಶೆಟ್ಟಿ, ಲೋಕ ಶೆಟ್ಟಿ, ಸಿದ್ದರಾಜ ಶೆಟ್ಟಿ, ಮಹದೇವಶೆಟ್ಟಿ, ಆಟೋ ಬಸವರಾಜ್‌, ಚಿಕ್ಕಣ್ಣ ಶೆಟ್ಟಿ, ವೀರಶೆಟ್ಟಿ, ಮಹದೇವ ಶೆಟ್ಟಿ, ಸ್ವಾಮಿ ಹಾಗೂ ನೂರಾರು ಮಂದಿ ಇದ್ದಾರೆ.