ಕರಡಿ ಸಂಗಣ್ಣಗೆ ಎರಡು ನಾಲಿಗೆ: ದೊಡ್ಡನಗೌಡ ಪಾಟೀಲ

| Published : Apr 28 2024, 01:17 AM IST

ಸಾರಾಂಶ

ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಯಾವ ಅನುದಾನವನ್ನೂ ಕೊಟ್ಟಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಚಿವ ತಂಗಡಗಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ವಿರೋಧ ಪಕ್ಷದ ಮುಖ್ಯಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ಆರೋಪಿಸಿದ್ದಾರೆ.

ಕುಷ್ಟಗಿ: ವಿಶ್ವಕಂಡ ಶ್ರೇಷ್ಠ ನಾಯಕ ನರೇಂದ್ರ ಮೋದಿ ಎನ್ನುತ್ತಿದ್ದ ಕರಡಿ ಸಂಗಣ್ಣ ಈಗ ಅಪರೂಪದ ರಾಜಕಾರಣಿ ಸಿದ್ದರಾಮಯ್ಯ ಅಂತ ಹೇಳುತ್ತಿದ್ದು, ಅವರಿಗೆ ಎರಡು ನಾಲಿಗೆ ಇವೆ ಎಂದು ವಿರೋಧ ಪಕ್ಷದ ಮುಖ್ಯಸಚೇತಕ ಶಾಸಕ ದೊಡ್ಡನಗೌಡ ಪಾಟೀಲ ವಾಗ್ದಾಳಿ ನಡೆಸಿದರು.

ತಾಲೂಕಿನ ಹಿರೇಮನ್ನಾಪುರ ಗ್ರಾಮದಲ್ಲಿ ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಂಗಣ್ಣ ಕರಡಿ ಈಗ ಕಾಂಗ್ರೆಸ್‌ ಜತೆ ಕೈ ಜೋಡಿಸಿದ್ದು, ಹಿಂದಿನ ಎರಡು ಲೋಕಸಭಾ ಚುನಾವಣೆಯಲ್ಲಿ ಮತದಾನ ಮಾಡಿದ ಮತದಾರರು ಹಾಗೂ ಹಿಂದೆ ಇದ್ದ ಕಾರ್ಯಕರ್ತರ ಗತಿಯೇನು? ಎಂದರು.

ಸಂಗಣ್ಣ ಕರಡಿ ಪುತ್ರ ಅಮರೇಶ ಕರಡಿ ಅವರು ಒಂದು ಕಡೆ ಪ್ರಚಾರದ ವೇಳೆಯಲ್ಲಿ ಈ ಸಲ ಕೊಪ್ಪಳ ಲೋಕಸಭಾ ಟಿಕೆಟ್‌ ಮಾರಾಟವಾಗಿದೆ ಎಂದಿದ್ದಾರೆ. ಆದರೆ 2014ರಲ್ಲಿ ಶಿವರಾಮಗೌಡ ಅವರು ಸಂಸದರಿದ್ದಾಗ ಟಿಕೆಟ್ ನಿಮ್ಮ ತಂದೆ ಸಂಗಣ್ಣ ಅವರಿಗೆ ನೀಡಿತ್ತು, ಅಂದು ನೀವು ಎಷ್ಟು ದುಡ್ಡು ಕೊಟ್ಟು ಟಿಕೆಟ್ ಪಡೆದುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು. ನಮ್ಮ ಕ್ಷೇತ್ರದ ಅಭಿವೃದ್ಧಿಗೆ ಯಾವ ಅನುದಾನವನ್ನೂ ಕೊಟ್ಟಿಲ್ಲ, ರಾಜ್ಯ ಸರ್ಕಾರ ದಿವಾಳಿಯಾಗಿದೆ. ಸಚಿವ ತಂಗಡಗಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಕಾರಿದರು.

ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾತನಾಡಿ, ಅಮರೇಗೌಡ ಬಯ್ಯಾಪುರ ಅವರು ಜಾತಿ ರಾಜಕಾರಣ ಮಾಡುವ ವ್ಯಕ್ತಿಯಾಗಿದ್ದು, ವಯಸ್ಸಾಗಿದೆ, ತಲೆ ಕೆಟ್ಟಿರೋರ ತರಹ ಮಾತನಾಡುತ್ತಿದ್ದಾರೆ. ಈ ಕ್ಷೇತ್ರದಲ್ಲಿ ಲಿಂಗಾಯತರು ಬೆಳೆಯುವುದು ಅವರಿಗೆ ಸಹಿಸಲು ಆಗುತ್ತಿಲ್ಲ. ಆದ ಕಾರಣ ಇಲ್ಲಸಲ್ಲದ ಹೇಳಿಕೆಗಳನ್ನು ಕೊಡುತ್ತಿದ್ದಾರೆ ಎಂದರು.

ಬಿಜೆಪಿ ಅಭ್ಯರ್ಥಿ ಕೆ. ಬಸವರಾಜ ಮಾತನಾಡಿ, ಕೊಪ್ಪಳ ಕ್ಷೇತ್ರದ ಅಭಿವೃದ್ಧಿಯ ಕನಸು ಹೊತ್ತು ರಾಜಕೀಯಕ್ಕೆ ಬಂದಿರುವೆ. ನಾನು ಅಭ್ಯರ್ಥಿ ಅಲ್ಲ, ನಮ್ಮ ಕಾರ್ಯಕರ್ತರೆಲ್ಲರೂ ಅಭ್ಯರ್ಥಿಗಳೆಂದು ತಿಳಿದು ನನಗೆ ಆಶೀರ್ವದಿಸಿ ಎಂದರು.

ವಿಧಾನಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಶಾಸಕ ಕೆ. ಶರಣಪ್ಪ, ಗುರುಮೂರ್ತಿ ಅಳವಂಡಿ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ರಾಜು ನಾಯಕ, ಸಿ.ಎಂ. ಹಿರೇಮಠ, ಪ್ರಭಾಕರ ಚಿಣಿ, ಬಿಜೆಪಿ ತಾಲೂಕಾಧ್ಯಕ್ಷ ಮಹಾಂತೇಶ ಬದಾಮಿ, ಮುಖಂಡರಾದ ದೇವೇಂದ್ರಪ್ಪ ಬಳೂಟಗಿ, ಫಕೀರಪ್ಪ ಚಳಗೇರಿ ವಕೀಲರು ಇದ್ದರು.