3 ದಶಕದಿಂದ ಭರವಸೆ ಕೇಳಿದ್ರಿ, ನನಗೆ ಅವಕಾಶ ಕೊಟ್ಟು ನೋಡಿ

| Published : Apr 28 2024, 01:16 AM IST

3 ದಶಕದಿಂದ ಭರವಸೆ ಕೇಳಿದ್ರಿ, ನನಗೆ ಅವಕಾಶ ಕೊಟ್ಟು ನೋಡಿ
Share this Article
  • FB
  • TW
  • Linkdin
  • Email

ಸಾರಾಂಶ

ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ಹರಪನಹಳ್ಳಿ ತಾಲೂಕಿನಲ್ಲಿ ಪ್ರಚಾರ ಕೈಗೊಂಡು, ಮತಯಾಚಿಸಿದರು.

ಕನ್ನಡಪ್ರಭ ವಾರ್ತೆ ದಾವಣಗೆರೆ

ಮೂರು ದಶಕದಿಂದ ಅಧಿಕಾರ ಅನುಭವಿಸಿ, ಆಸ್ತಿ ಮಾಡಿದವರು ಈಗಲೂ ಜನರ ಬಳಿ ಅದೇ ಭರವಸೆ ನೀಡಿ, ಮತ ಕೇಳುತ್ತಿದ್ದಾರೆ. ಪ್ರತಿ ಚುನಾವಣೆಯಲ್ಲೂ ಹೇಳಿದ್ದನ್ನೇ ಪುನಃ ಹೇಳುವವರು ಬೇಕಾ, ಜನಸೇವೆಗೆಂದು ಜನ ಸಾಮಾನ್ಯರಲ್ಲಿ ಸಾಮಾನ್ಯನಾಗಿ ಬಂದ ನಾನು ಬೇಕಾ ಎಂಬುದನ್ನು ನಿರ್ಧರಿಸಿ, ಚುನಾವಣೆಯಲ್ಲಿ ಮತ ಚಲಾಯಿಸಿ ಎಂದು ದಾವಣಗೆರೆ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಜಿ.ಬಿ.ವಿನಯಕುಮಾರ ತಿಳಿಸಿದರು.

ಹರಪನಹಳ್ಳಿ ಕ್ಷೇತ್ರದ ಜಂಬುಲಿಂಗನಹಳ್ಳಿ, ರಾಗಿಮಸಲವಾಡ, ಶಿಂಗ್ರಿಹಳ್ಳಿ, ಶಿಂಗ್ರಿಹಳ್ಳಿ ದೊಡ್ಡ ತಾಂಡಾ, ಲಕ್ಷ್ಮೀಪುರ ತಾಂಡಾ, ಜಂಬುಲಿಂಗನಹಳ್ಳಿ ಇತರೆಡೆ ಪ್ರಚಾರ ಮಾಡಿ, ಮತಯಾಚಿಸಿ ಮಾತನಾಡಿದ ಅವರು, ಮೂರು ದಶಕದಿಂದ ನೀವು ಕೇಳಿರುವ ಭರವಸೆ ಈಡೇರಿಸಲು ಸಿಲಿಂಡರ್ ಗುರಿತಿನ ನನಗೊಂದು ಸಲ ಮತ ಹಾಕಿ, 1 ಲಕ್ಷಕ್ಕೂ ಅದಿಕ ಮತಗಳ ಅಂತರದಲ್ಲಿ ನನ್ನನ್ನು ಸಂಸದನಾಗಿ ಆಯ್ಕೆ ಮಾಡುವ ಮೂಲಕ ಕೆಲಸ ಮಾಡಲು ಅನುವು ಮಾಡಿಕೊಡಿ ಎಂದರು.

ಶಿಕ್ಷಣ, ಆರೋಗ್ಯ, ಕೈಗಾರಿಕೆ ಸೇರಿ ದೇಶವೇ ದಾವಣಗೆರೆಯತ್ತ ತಿರುಗಿ ನೋಡುವಂತೆ ಅಭಿವೃದ್ಧಿ ಮಾಡಿ ತೋರಿಸುವೆ. ಕಾಂಗ್ರೆಸ್, ಬಿಜೆಪಿ ಹೋದಲ್ಲೆಲ್ಲಾ ನೀರಾವರಿ, ಕೈಗಾರಿಕೆ ಸ್ಥಾಪನೆ, ಉದ್ಯೋಗ ಸೃಷ್ಟಿ, ಶಿಕ್ಷಣ, ಆರೋಗ್ಯ ಇತರೆ ಅಭಿವೃದ್ಧಿ ಕುರಿತಂತೆ ಭರವಸೆ ನೀಡುವುದನ್ನು ಕೇಳುತ್ತಿದ್ದೀರಿ. ಹಾಗಿದ್ದರೆ ಇಷ್ಟು ವರ್ಷ ಕೇಂದ್ರ, ರಾಜ್ಯದಲ್ಲಿ, ಜಿಲ್ಲೆಯಲ್ಲಿ ಅಧಿಕಾರದಲ್ಲೇ ಇದ್ದಾಗ ಇದನ್ನೆಲ್ಲಾ ಯಾಕೆ ಮಾಡಲಿಲ್ಲ ಎಂದು ಅವರು ಪ್ರಶ್ನಿಸಿದರು.

ಚುನಾವಣೆ ಕಾರಣಕ್ಕೆ ಜನರ ಮುಂದೆ ಅದೇ ಸುಳ್ಳು ಭರವಸೆ ನೀಡಿ ಹೋಗುತ್ತಿದ್ದಾರೆ. ಬಡ ಕುಟುಂಬದ ನಾನು ನಿಮ್ಮ ಬಳಿ ಬಂದಿದ್ದೇನೆ. ಸಂಕಷ್ಟ ಕೇಳಿದ್ದೇನೆ, ಸಮಸ್ಯೆ ಅರಿತಿದ್ದೇನೆ. ನಿಮ್ಮ ಮನೆ ಮಗನಂತೆ ಕೆಲಸ ಮಾಡಿ ತೋರಿಸುತ್ತೇನೆ. ನಾನು ಕೇಳುತ್ತಿರುವುದು ಒಂದು ಅವಕಾಶ ಮಾತ್ರ. ಸಿಲಿಂಡರ್ ಗುರುತು ಸಿಕ್ಕಿದ್ದು, ಕ್ರಮ ಸಂಖ್ಯೆ 28 ಆಗಿದೆ. ಮೇ.7ರ ಮತದಾನದ ದಿನದಂದು ಸಿಲಿಂಡರ್‌ಗೆ ಹೆಚ್ಚಿನ ಮತ ಹಾಕುವಂತೆ ಮನೆ ಮನೆಗೆ ಹೋಗಿ ಹಗಲು ರಾತ್ರಿ ವಿರಮಿಸದೇ ಕೆಲಸ ಮಾಡಿ. ಹರಪನಹಳ್ಳಿ ತಾಲೂಕಿನ ಸಮಸ್ಯೆ ಬಗ್ಗೆ ನನಗೆ ಅರಿವಿದೆ. ಪಾದಯಾತ್ರೆ ನಡೆಸಿ, ಹಳ್ಳಿಗಳಿಗೆ ಹೋಗಿ ತಿಳಿದಿದ್ದೇನೆ. ಲೋಕಸಭಾ ಸದಸ್ಯನಾಗಿ ಆಯ್ಕೆಯಾದರೆ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹಗಲಿರುಳು ಶ್ರಮಿಸುತ್ತೇನೆ ಎಂದು ಹೇಳಿದರು.

ನೂರಾರು ಬಡವರ ಮಕ್ಕಳಿಗೆ ಸಹಾಯ ಮಾಡುತ್ತಿದ್ದೇನೆ. ಕೇವಲ ಕೋಚಿಂಗ್ ಸೆಂಟರ್‌ವೊಂದರಿಂದಲೇ ಎಲ್ಲಾ ಮಕ್ಕಳಿಗೆ ಶಿಕ್ಷಣ ನೀಡಲಾಗದು. ಹಾಗಾಗಿ, ಶಾಲಾ ಕಾಲೇಜು ಹೆಚ್ಚಾಗಿ ಆಗಬೇಕು. ನಗರಗಳಲ್ಲಿ ಸಿಗುವಂತ ಮೂಲಭೂತ ಸೌಲಭ್ಯ, ಗುಣಮಟ್ಟದ ಶಿಕ್ಷಣ ಸೇರಿ ಎಲ್ಲಾ ರೀತಿ ವ್ಯವಸ್ಥೆ ಕಲ್ಪಿಸಬೇಕು. ಬಡವರ ಮಕ್ಕಳೂ ಐಎಎಸ್, ಐಪಿಎಸ್ ಶಿಕ್ಷಣ ಪಡೆಯುವಂತಾಗಬೇಕು. ಶ್ರೀಮಂತರ ಮಕ್ಕಳು ಮಾತ್ರ ಐಎಎಸ್, ಐಪಿಎಸ್ ಆಗುತ್ತಾರೆ. ಬಡವರ ಮಕ್ಕಳಿಗೆ ಸೂಕ್ತ ಸೌಲಭ್ಯ ಸಿಕ್ಕರೆ ಸಾಧನೆ ಮಾಡಿಯೇ ಮಾಡುತ್ತಾರೆ. ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ತಿಳಿಸಿದರು.

ರಾಗಿಮಸಲವಾಡಕ್ಕೆ ಜಿ.ಬಿ.ವಿನಯಕುಮಾರ ಆಗಮಿಸುತ್ತಿದ್ದಂತೆ ಜನರು ಅದ್ಧೂರಿಯಾಗಿ ಬರಮಾಡಿಕೊಂಡರು. ನೂರಾರು ಸಂಖ್ಯೆಯಲ್ಲಿ ವಿನಯ ಪರ ಜೈಕಾರ ಕೂಗಿದರು. ಈ ಬಾರಿ ಗ್ಯಾಸ್ ಸಿಲಿಂಡರ್ ಗೆ ಮತವಣ್ಣ, ವಿನಯಕುಮಾರಗೆ ನಮ್ಮ ಬೆಂಬಲವಣ್ಣ ಎಂಬ ಘೋಷಣೆ ಕೂಗಿದರು. ಈ ವೇಳೆ ಗ್ರಾಮದ ಮುಖಂಡರಾದ ಚನ್ನಪ್ಪ, ದೊಡ್ಡೇಶ್, ಆನಂದ್, ಹನುಮಂತಪ್ಪ ಸೇರಿದಂತೆ ಹಲವರು ಹಾಜರಿದ್ದರು. ಶಿಂಗ್ರಿಹಳ್ಲಿ, ಶಿಂಗ್ರಿಹಳ್ಳಿ ತಾಂಡಾ ಸೇರಿದಂತೆ ಹಲ ಗ್ರಾಮಗಳಲ್ಲಿ ವಿನಯ್ ಕುಮಾರ್ ಅವರು ಮತಯಾಚನೆ ಮಾಡಿದರು. ಮಹಿಳೆಯಪು ಆರತಿ ಎತ್ತಿ, ಹಣೆಗೆ ಕುಂಕುಮ ಇಟ್ಟು ವಿನಯಗೆ ಬೆಂಬಲ ಸೂಚಿಸಿದರು. ಶಿಂಗ್ರಿಹಳ್ಳಿ ನಾಗರಾಜ, ವೆಂಕಟೇಶ, ಮಂಜಪ್ಪ, ಹನುಮಂತಪ್ಪ, ಉಚ್ಚಂಗೆಪ್ಪ, ಶಿಂಗ್ರಿಹಳ್ಳಿ ದೊಡ್ಡ ತಾಂಡಾದ ವೈ. ರಮೇಶ್ ನಾಯ್ಕ, ಜಿ. ನಾಗರಾಜ, ಕೀರ್ತಿ, ನಾಗರಾಜ ಮತ್ತಿತರರು ಇದ್ದರು.

ಬಡವರ ಮಕ್ಕಳೂ ಅಧಿಕಾರಿ, ರಾಜಕಾರಣಿ ಆಗಬೇಕು

ಒಂದು ಲಕ್ಷಕ್ಕೂ ಅದಿಕ ಮತಗಳ ಅಂತರದಲ್ಲಿ ನೀವು ನನ್ನನ್ನು ಗೆಲ್ಲಿಸಿ ಕಳುಹಿಸಿದರೆ ಮಕ್ಕಳ ಉಜ್ವಲ ಭವಿಷ್ಯಕ್ಕೆ, ಒಳ್ಳೆಯ ಉದ್ಯೋಗ ಸಿಗುವಂತೆ ಮಾಡಲು ಶ್ರಮಿಸುವೆ.

ನಿಮ್ಮ ಮಕ್ಕಳೂ ಅಧಿಕಾರಿ, ರಾಜಕಾರಣಿ ಆಗಬೇಕು. ನಿಮ್ಮ ಈ ಕನಸು ನಾನು ಈಡೇರಿಸುತ್ತೇನೆ. ನಿಮ್ಮ ಜೊತೆಗಿದ್ದು ಕೆಲಸ ಮಾಡುತ್ತೇನೆ. ಸೋಲಲಿ, ಗೆಲ್ಲಲಿ. ಮೇ.7ಕ್ಕೆ ಮತದಾನ ಮುಗಿದ ಬಳಿಕ ಎಲ್ಲಿಯೂ ಹೋಗಲ್ಲ. ಫಲಿತಾಂಶಕ್ಕೆ ಒಂದು ತಿಂಗಳು ಕಾಲಾವಕಾಶ ಇರುತ್ತೆ. ಯಾವ್ಯಾವ ಹಳ್ಳಿಗಳಿಗೆ ಹೋಗಿಲ್ಲವೋ ಅಲ್ಲಿಗೆ ಮತ್ತೆ ನಾನು ಖುದ್ದು ಹೋಗುತ್ತೇನೆ. ಜನರ ಕಷ್ಟ ಆಲಿಸುತ್ತೇನೆ.

ಜಿ.ಬಿ.ವಿನಯಕುಮಾರ. ದಾವಣಗೆರೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ.

ದೊಡ್ಡವರ ಎದುರು ಹಾಕೊಂಡು ಸ್ಪರ್ಧೆ!

ದೊಡ್ಡವರನ್ನು ಎದುರು ಹಾಕಿಕೊಂಡು ಚುನಾವಣಾ ಕಣಕ್ಕಿಳಿದಿದ್ದೇನೆ. ಸಾಮಾನ್ಯ ಯುವಕ ಹೋರಾಟ ಮಾಡುತ್ತಿದ್ದು, ಅವಕಾಶ ಮಾಡಿ ಕೊಡುವಂತೆ ಮನವಿ ಮಾಡುತ್ತಿದ್ದೇನೆ. ಪ್ರಬಲರ ಎದುರು ಸ್ಪರ್ಧೆ ಸುಲಭವಲ್ಲ. ದೊಡ್ಡ ಪಕ್ಷಗಳ ವಿರುದ್ಧ ನಾನು ಸ್ಪರ್ಧೆ ಮಾಡುವುದು ಸುಲಭವಲ್ಲ. ನಾನು ಇದಕ್ಕೆ ಸರಿ ಸಮಾನವಾಗಿ ಚುನಾವಣೆಗೆ ತಯಾರಿ ಮಾಡಿಕೊಂಡಿದ್ದೇನೆ. ನನಗೆ ಬೇಕಿರುವುದು ಮತದಾರರ ಆಶೀರ್ವಾದ. ನನಗೊಂದು ಅವಕಾಶ ಮಾಡಿಕೊಟ್ಟರೆ ರಾಜಕೀಯ ಇತಿಹಾಸ ಸೃಷ್ಟಿಯಾದಂತಾಗುತ್ತದೆ. ರಾಜಕಾರಣಕ್ಕೆ ಬರಲು ನೂರಾರು ಯುವಕರಿಗೆ ಪ್ರೇರಣೆ ಸಿಗುವಂತಾಗುತ್ತದೆ. ರಾಜಕೀಯ ಹೊಲಸು, ಕೊಳಕು ಎಂದುಕೊಂಡವರಲ್ಲಿಯೂ ಹೊಸ ಆಶಾಕಿರಣ ಮೂಡುತ್ತದೆ. ಜೊತೆಗೆ ಮಾರ್ಗವೂ ಸಿಕ್ಕಂತಾಗುತ್ತದೆ.

ಜಿ.ಬಿ.ವಿನಯ ಕುಮಾರ. ದಾವಣಗೆರೆ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ.