ಇಂದು ಸಾಣೇಹಳ್ಳಿ ಶಿವಕುಮಾರ ಶ್ರೀ ರಥೋತ್ಸವ

| Published : Apr 28 2024, 01:21 AM IST

ಸಾರಾಂಶ

ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಸ್ವಾಮೀಜಿಯ ರಥೋತ್ಸವ ಏ.28ರಂದು ಪಂಡಿತಾರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿದೆ.

ಹೊಸದುರ್ಗ: ತಾಲೂಕಿನ ಸಾಣೇಹಳ್ಳಿಯ ಶಿವಕುಮಾರ ಸ್ವಾಮೀಜಿಯ ರಥೋತ್ಸವ ಏ.28ರಂದು ಪಂಡಿತಾರಾಧ್ಯ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆಯಲಿದೆ.

ಸಾಣೇಹಳ್ಳಿ ಪುಟ್ಟ ಗ್ರಾಮವಾದರೂ ಇಲ್ಲಿ ವರ್ಷದುದ್ದಕ್ಕೂ ಸಾಹಿತ್ಯ, ಸಂಗೀತ, ಕಲೆ, ಕೃಷಿ, ಧರ್ಮಕ್ಕೆ ಸಂಬಂಧಿಸಿದ ಚಟುವಟಿಕೆಗಳು ನಡೆಯುತ್ತಿರುತ್ತವೆ. ಸಾಣೇಹಳ್ಳಿಗೆ ಒಂದು ಘನತೆ ಬರುವಂತೆ ಮಾಡಿದವರು ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ. ತಮ್ಮ ಬದುಕಿಗೆ ಬೆಳಕು ನೀಡಿದ ಗುರುವಿನ ಹೆಸರಿನಲ್ಲಿ ರಥೋತ್ಸವ ಮಾಡಬೇಕು ಎನ್ನುವ ಆಶಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಭಕ್ತರ ಸಹಕಾರದೊಂದಿಗೆ ಸ್ವಾಮೀಜಿ ಹುಟ್ಟಿದ ದಿನವಾದ ಏ.28ರಂದು ರಥೋತ್ಸವ ನಡೆಯುತ್ತದೆ.

ಪ್ರತಿವರ್ಷ ತಾಲೂಕಿನ ಬೇರೆ ಬೇರೆ ಗ್ರಾಮಗಳ ಭಕ್ತರು ರಥೋತ್ಸವದ ಜವಾಬ್ದಾರಿ ನಿರ್ವಹಿಸುತ್ತಾರೆ. ರಥೋತ್ಸದ ಸಂದರ್ಭದಲ್ಲಿ ಪುಸ್ತಕಗಳ ಹರಾಜು ನಡೆಯುವುದು.

ನಂತರ ಗುರುಗಳಿಗೆ ಪ್ರಿಯವಾದ ವಚನ ಗೀತೆ, ನಾಟಕದ ಮೂಲಕ ಗುರುಗಳ ಸ್ಮರಣೆ ಅರ್ಥಪೂರ್ಣವಾಗಿ ನಡೆಯುವುದು. ಮಧ್ಯಾಹ್ನ 4 ಗಂಟೆಗೆ ರಥೋತ್ಸವ ಪೂಜ್ಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳ ಸಮ್ಮುಖದಲ್ಲಿ ನಡೆಯುವುದು. ನಂತರ ಸಾರ್ವಜನಿಕ ಸಭೆ ಸಂಜೆ 5.30ಕ್ಕೆ ನಡೆಯಲಿದೆ. ಹೊಳಲ್ಕೆರೆಯ ಮಾಜಿ ಶಾಸಕ ಪಿ.ರಮೇಶ್ ಗುರುವಂದನಾ ನುಡಿಗಳನ್ನಾಡುವರು. ಶಿವಸಂಚಾರ ಕಲಾವಿದರು ವಚನಗೀತೆಗಳನ್ನು ಹಾಡುವರು. ಗಾನ ಸಿದ್ಧಗಂಗಾ ಸಂಗೀತ ವಿದ್ಯಾಲಯ ಬೆಂಗಳೂರಿನ ಗೀತಾ ಭತ್ತದ್ ಹಾಗೂ ತಂಡದವರಿಂದ ಸಂಗೀತ ಸುಧೆ ಏರ್ಪಡಿಸಲಾಗಿದೆ. ಶಿವಕುಮಾರ ಕಲಾಸಂಘದ ಹಿರಿಯ ಕಲಾವಿದರಿಂದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರು ರಚಿಸಿದ, ವೈ.ಡಿ.ಬದಾಮಿ ನಿರ್ದೇಶನದ ‘ಮರಣವೇ ಮಹಾನವಮಿ’ ನಾಟಕ ಪ್ರದರ್ಶನಗೊಳ್ಳಲಿದೆ. ಸಾರ್ವಜನಿಕರು ಹೆಚ್ಚಿನ ಪ್ರಮಾಣದಲ್ಲಿ ಈ ರಥೋತ್ಸವದಲ್ಲಿ ಪಾಲ್ಗೊಳ್ಳಬೇಕೆಂದು ರಥೋತ್ಸವ ಸಮಿತಿಯವರು ಮನವಿ ಮಾಡಿಕೊಂಡಿದ್ದಾರೆ.