ರಾಜ್ಯ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕು ಅನ್ನೋ ಆಸಕ್ತಿ ಇಲ್ಲ : ಸಿ.ಟಿ. ರವಿ

| Published : Apr 28 2024, 01:16 AM IST

ರಾಜ್ಯ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕು ಅನ್ನೋ ಆಸಕ್ತಿ ಇಲ್ಲ : ಸಿ.ಟಿ. ರವಿ
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕು ಅನ್ನೋ ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.

ರಾಜ್ಯದಲ್ಲಿ 600 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ । ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಬಿಡುಗಡೆ ಮಾಡಬೇಕು,

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಬರ ಪರಿಹಾರ ಬಿಡುಗಡೆ ಮಾಡಿದೆ. ಆದರೆ, ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ರೈತರ ನೆರವಿಗೆ ಬರಬೇಕು ಅನ್ನೋ ಆಸಕ್ತಿ ಇಲ್ಲ ಎಂದು ಮಾಜಿ ಸಚಿವ ಸಿ.ಟಿ. ರವಿ ಆರೋಪಿಸಿದ್ದಾರೆ.

ಶನಿವಾರ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರಕ್ಕೆ ರೈತರ ವಿಷಯದಲ್ಲಿ ರಾಜಕಾರಣ ಮಾಡ ಬೇಕೆಂಬುದರಲ್ಲೇ ಆಸಕ್ತಿ ಹೆಚ್ಚಾಗಿತ್ತು. ಈಗ ಬಿಡುಗಡೆ ಮಾಡಿರುವ ಹಣವನ್ನಾದರೂ ಪ್ರಾಮಾಣಿಕವಾಗಿ ತಲುಪಿಸಲಿ 600ಕ್ಕೂ ಹೆಚ್ಚು ಜನ ರೈತರು ಆತ್ಮಹತ್ಯೆ ಮಾಡಿಕೊಂಡಿರುವುದು ಸಾಮಾನ್ಯ ಸಂಗತಿಯಲ್ಲ. ಹಿಂದೆ ನಿಮ್ಮ ಒಬ್ಬ ಸಚಿವ ಹಣಕ್ಕಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ ಎಂದು ಹೇಳಿದ್ರು, ಇದು ರೈತರ ಬಗ್ಗೆ ಇವರಿಗಿರುವ ಕಾಳಜಿ ತೋರಿಸುತ್ತದೆ. ರೈತರ ಸಂಕಷ್ಟಕ್ಕೆ ಒಳಗಾಗಿ ಹತಾಶೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹಣಕ್ಕಾಗಿ ಯಾರಾದ್ರೂ ಆತ್ಮಹತ್ಯೆ ಮಾಡಿಕೊಳ್ಳುತ್ತಾರಾ ಎಂದು ಪ್ರಶ್ನಿಸಿದರು. ರೈತರ ಸಂಕಷ್ಟಗಳಿಗೆ ಸ್ಪಂದಿಸಿ, ಸ್ಥಳದಲ್ಲೇ ಉದ್ಯೋಗ ಸೃಷ್ಟಿಸಬೇಕು, ಮುಖ್ಯಮಂತ್ರಿಯಾದಿಯಾಗಿ ಸಚಿವರು ಶಾಸಕರೆಲ್ಲರೂ ಕೇವಲ ರಾಜಕಾರಣ ಮಾಡುವುದರಲ್ಲಿ ನಿರತರಾಗಿದ್ದಾರೆ. ರೈತರ ಸಂಕಷ್ಟಗಳಿಗೆ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಯಾವುದೇ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಇದನ್ನ ಇಲ್ಲಿಗೆ ನಿಲ್ಲಿಸಿ ಇನ್ನು ಮುಂದೆಯಾದರೂ ಪ್ರಾಮಾಣಿಕವಾಗಿ ಪ್ರಯತ್ನಿಸಿ ಎಂದರು.

ಮಹಾರಾಷ್ಟ್ರ ಸರ್ಕಾರದ ಮಾದರಿಯಲ್ಲಿ ಕಿಸಾನ್ ಸಮ್ಮಾನ್ ಯೋಜನೆಗೆ ಚಾಲನೆ ಕೊಡಿ, ತಕ್ಷಣ ಕೇಂದ್ರದ 6 ಸಾವಿರದ ಜೊತೆಗೆ ನೀವು 6 ಸಾವಿರ ಸೇರಿಸಿ 12,000 ಕೊಡಿ, ಹಾಲು ಉತ್ಪಾದಕರ ಪ್ರೋತ್ಸಾಹ ಧನವನ್ನು ಕೂಡಲೇ ಬಿಡುಗಡೆ ಮಾಡಿ. ಜಾಹೀರಾತು ಕೊಡುವ ಹಣದ ಅರ್ಧದಲ್ಲಿ ಸಬ್ಸಿಡಿಯನ್ನೇ ಕೊಡಬಹುದಿತ್ತು, ನಿಮಗೆ ಜಾಹೀರಾತು ಕೊಡುವುದಕ್ಕೆ ಹಣ ಇದೆ. ಸಗಣಿ ಬಾಚಿ ಕಷ್ಟಪಡುವ ಮಹಿಳೆಗೆ ಸಬ್ಸಿಡಿ ಕೊಡದೆ ಇರುವುದು ದುರದೃಷ್ಟಕರ. ತಕ್ಷಣ ಹಾಲಿನ ಸಬ್ಸಿಡಿ ದರವನ್ನು ಬಿಡುಗಡೆ ಮಾಡಿ, ರೈತ ವಿದ್ಯಾನಿಧಿ ಸ್ಥಗಿತಗೊಳಿಸಿದ್ದು ಯಾವ ರೀತಿಯ ನ್ಯಾಯ. ನೀವು ನ್ಯಾಯದ ಮಾತಾಡ್ತೀರಿ, ನ್ಯಾಯದ ಮಾತಾಡುವ ಸಂದರ್ಭದಲ್ಲಿ ಇದು ಎಷ್ಟು ಸರಿ ಎಂದ ಅವರು, ಇದು ರೈತ ಮಕ್ಕಳಿಗೆ ಮಾಡುವ ಅನ್ಯಾಯ ಅಲ್ಲವೇ ಎಂದು ಪ್ರಶ್ನಿಸಿದರು.

ತನ್ನ ಅಳಿಯನನ್ನ ಗೆಲ್ಲಿಸಿಕೊಳ್ಳೋದಕ್ಕೆ ಎಮೋಷನಲ್ ಬ್ಲಾಕ್ ಮೇಲ್ ಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇಳಿಸಿದ್ದಾರೆ ಎಂದು ಸಿ.ಟಿ. ರವಿ ಆರೋಪಿಸಿದರು. ಅವರ ಅಳಿಯ ಸೋಲ್ತಾನೆ ಎಂಬ ಇಂಟಲಿಜೆನ್ಸಿ ರಿಪೋರ್ಟ್ ಹೇಳಿರೋ ಕಾರಣಕ್ಕೆ ಏನಾದ್ರೂ ಮಾಡಿ ಅಳಿಯನ ಗೆಲ್ಲಿಸಬೇಕು ಎಂಬ ಹತಾಶೆಯಲ್ಲಿ ಖರ್ಗೆ ಸಾಹೇಬರು ಇದ್ದಾರೆ. ಅಲ್ಲಿಯ ಜನ ನಿಮ್ಮ ಪುತ್ರ ಪ್ರಿಯಾಂಕ್ ಖರ್ಗೆ ಆಡಳಿತ ವೈಖರಿಗೆ ಮಾತ್ರವಲ್ಲ ಕಾಂಗ್ರೆಸಿಗರೇ ಬೇಸತ್ತಿದ್ದಾರೆ ಎಂದರು.

ಖರ್ಗೆ ಅವರ ಅಳಿಯನ್ನ ಗೆಲ್ಲಿಸಿದರೆ ತಲೆ ಮೇಲೆ ಮಸಾಲೆ ಹರೆಯುತ್ತಾರೆ, ಅಳಿಯನು ಸೋಲಬೇಕು ಎಂಬ ಚಿಂತನೆಯಲ್ಲಿ ಕಾಂಗ್ರೆಸ್ಸಿಗರೇ ಇರೋದ್ರಿಂದ ಆ ಹತಾಶೆಯಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಒಂದು ತಂತ್ರವೇ ಹೊರತು ಬೇರೆನೂ ಇಲ್ಲ ಎಂದು ಹೇಳಿದರು.

ಓಲೈಕೆಯ ರಾಜನೀತಿಯಿಂದಾಗಿ ಭಯೋತ್ಪಾದನೆ ಬೆಳೆದಿದೆ. ಇದಕ್ಕೆ ಸೈನಿಕರು ಬಲಿಯಾಗಬೇಕಾಯಿತು, ಆ ಭಯೋತ್ಪಾದನೆ ಬೆಳೆಯುವುದಕ್ಕೆ ಫಲ ಕೊಟ್ಟವರು ಯಾರು, ನಿಮ್ಮ ರಾಜಕೀಯ ನೀತಿಯೇ ಆ ಫಲ ಕೊಟ್ಟಿದ್ದು ಎಂದು ಹೇಳಿದರು.

ಭಯೋತ್ಪಾದಕರಿಗೆ ನೀವು ಬಿರಿಯಾನಿ ತಿನ್ಸಿ ಭಾಯ್, ಬ್ರದರ್ಸ್ ಅಂತ ಕರೆದರೆ ಭಯೋತ್ಪಾದನೆ ಯಾವ ರೀತಿ ಕಂಟ್ರೋಲ್ ಗೆ ಬರುತ್ತೆ. ಭಯೋತ್ಪಾದನೆಗೆ ಬೇಕಾಗಿರುವುದು ಸರ್ಜಿಕಲ್ ಸ್ಟ್ರೈಕ್, ಕಾಂಗ್ರೆಸ್ ಜೀರೋ ಟ್ರಾಲೆನ್ಸ್ ಗೆ ಎಲ್ಲಿ ಅವಕಾಶ ಮಾಡಿಕೊಟ್ಟಿದೆ. ಇಷ್ಟರ ಮೇಲಾದರೂ ರೈತರು, ಸೈನಿಕರನ್ನು ಅಪಮಾನಿಸೋದನ್ನ ಕಾಂಗ್ರೆಸ್ ಬಿಡಬೇಕು. ಕಾಂಗ್ರೆಸ್ ನಿರಂತರವಾಗಿ ರೈತರು ಸೈನಿಕರನ್ನು ಅಪಮಾನಿಸುತ್ತಿದೆ. ನಿಮ್ಮ ಅನುಮಾನಕ್ಕೆ ಔಷಧಿ ಇಲ್ಲ, ನೀವು ಎಲ್ಲರ ಮೇಲು ಅನುಮಾನ ಪಡುತ್ತೀರಿ ಎಂದರು.

ಇವಿಎಂ ಮೇಲೆ ಅನುಮಾನ ಪಟ್ಟಿ ಸುಪ್ರೀಂಕೋರ್ಟ್ ತಪರಾಕಿ ಹಾಕಿದೆ. ರೈತರ ಸಾವಿನ ಬಗ್ಗೆಯೂ ಅನುಮಾನ ಪಡ್ತೀರಿ. ಸೈನಿಕರ ಸಾವನ್ನು ಅನುಮಾನಿಸುವ ನಿಮ್ಮ ಪ್ರವೃತ್ತಿ, ನೀವು ಯಾರನ್ನ ನಂಬ್ತಿರಿ, ಯಾರನ್ನೂ ನಂಬಲ್ಲ, ಹೆತ್ತ ತಾಯಿನೂ ನಂಬಲ್ಲ, ಕಟ್ಟಿಕೊಂಡ ಪತ್ನಿನೂ ನಂಬಲ್ಲ. ಆ ಸ್ಥಿತಿಗೆ ನೀವು ಬಂದು ತಲುಪಿದ್ದೀರಿ ಎಂದು ಬಿ.ಕೆ ಹರಿಪ್ರಸಾದ್ ಗೆ ಚಾಟಿ ಬೀಸಿದರು.ಪೋಟೋ ಫೈಲ್‌ ನೇಮ್‌ 27 ಕೆಸಿಕೆಎಂ 4