ಇನ್ನೂ ಸಿಗದ ಕಿನ್ನಾಳದ ಬಾಲಕಿ ಹಂತಕರು

| Published : Apr 28 2024, 01:23 AM IST / Updated: Apr 28 2024, 01:24 AM IST

ಸಾರಾಂಶ

ಆರೋಪಿಗಳ ಪತ್ತೆಗಾಗಿ ಪೊಲೀಸ್‌ ಇಲಾಖೆ ವಿಶೇಷ ತಂಡ ರಚನೆ ಮಾಡಿದ್ದರೂ ಈ ವರೆಗೂ ಯಶಸ್ಸು ಸಿಕ್ಕಿಲ್ಲ. ಹೀಗಾಗಿ ಆರೋಪಿಗಳ ಸುಳಿವು ನೀಡಿದವರಿಗೆ ₹25 ಸಾವಿರ ನಗದು ಬಹುಮಾನ ಘೋಷಣೆ ಮಾಡಿದೆ.

ಕೊಪ್ಪಳ: ಕಿನ್ನಾಳ ಗ್ರಾಮದಲ್ಲಿ 6 ವರ್ಷದ ಬಾಲಕಿಯ ಹತ್ಯೆಗೈದ ಆರೋಪಿಗಳು ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ಆರೋಪಿಗಳ ಸುಳಿವು ಕೊಟ್ಟವರಿಗೆ ಬಹುಮಾನ ಘೋಷಣೆ ಮಾಡಿದ್ದಾರೆ.

ಏ. 19ರಂದು ನಾಪತ್ತೆಯಾಗಿದ್ದ ಬಾಲಕಿ ಅನುಶ್ರೀ ರಾಘವೇಂದ್ರ ಮಡಿವಾಳ ಏ . 21ರಂದು ಮನೆಯ ಪಕ್ಕದಲ್ಲಿಯೇ ಇರುವ ಪಾಳುಬಿದ್ದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಳು. ಆದು, ಗೊಬ್ಬರ ಚೀಲದಲ್ಲಿ ಬಾಲಕಿಯ ಶವ ತುಂಬಿಡಲಾಗಿತ್ತು. ಇದು ಇಡೀ ಕಿನ್ನಾಳ ಗ್ರಾಮವನ್ನೇ ಬೆಚ್ಚಿಬೀಳಿಸುವಂತೆ ಮಾಡಿತ್ತು. ಆದರೆ, ಘಟನೆ ನಡೆದು ವಾರ ಗತಿಸಿದರೂ ಆರೋಪಿಗಳು ಸುಳಿವು ಸಿಗುತ್ತಿಲ್ಲ.

ಈ ಬಗ್ಗೆ ಗ್ರಾಮಸ್ಥರು ತೀವ್ರ ಆಕ್ರೋಶಗೊಂಡಿದ್ದಾರೆ. ಹೇಗಾದರೂ ಆರೋಪಿಗಳನ್ನು ಹೆಡೆಮುರಿ ಕಟ್ಟಿ ಎಂದು ಆಗ್ರಹಿಸುತ್ತಿದ್ದಾರೆ. ಇಂಥ ಕ್ರೂರ ಘಟನೆಯ ನಂತರವೂ ಆರೋಪಿಗಳು ಸಿಗದೆ ಇದ್ದರೆ ಇನ್ನಷ್ಟು ಆತಂಕ ಸೃಷ್ಟಿಯಾಗುತ್ತಿದೆ ಎನ್ನುವ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಬಹುಮಾನ ಘೋಷಣೆ: ಆರೋಪಿಗಳ ಪತ್ತೆಗಾಗಿ ಪೊಲೀಸ್‌ ಇಲಾಖೆ ವಿಶೇಷ ತಂಡ ರಚನೆ ಮಾಡಿದ್ದರೂ ಈ ವರೆಗೂ ಯಶಸ್ಸು ಸಿಕ್ಕಿಲ್ಲ. ಅಷ್ಟೇ ಅಲ್ಲ, ನಾಲ್ಕಾರು ಜನರ ವಿಚಾರಣೆ ನಡೆಸಿದರೂ ಸುಳಿವು ಸಿಕ್ಕಿಲ್ಲ. ಹೀಗಾಗಿ, ಕಿನ್ನಾಳ ಗ್ರಾಮದಲ್ಲಿ ಪ್ರಕಟಣೆಯನ್ನು ಮನೆ ಮನೆಗೆ ಹಂಚಿ, ಆರೋಪಿಗಳ ಸುಳಿವು ನೀಡಿದವರಿಗೆ ₹25 ಸಾವಿರ ನಗದು ಬಹುಮಾನ ಘೋಷಣೆ ಮಾಡಿದೆ.

ತನಿಖಾ ತಂಡದಲ್ಲಿರುವ ಪಿಐ ಆಂಜನೇಯ ಮೊ. 8861116999, ಮೌನೇಶ ಪಾಟೀಲ್ ಮೊ. 9986074506, ಸುರೇಶ ಪಿಐ ಮೊ. 9480803731 ಹಾಗೂ ಡಾಕೇಶ ಪಿಎಸ್‌ಐ ಮೊ. 9480803746 ಸಂಖ್ಯೆಗೆ ಮಾಹಿತಿ ನೀಡುವಂತೆ ಪ್ರಕಟಣೆ ಬಿಡುಗಡೆ ಮಾಡಿ, ಕಿನ್ನಾಳ ಗ್ರಾಮದಲ್ಲಿ ಹಂಚಿಕೆ ಮಾಡಿದೆ. ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೂ ಬಂದು ಮಾಹಿತಿ ನೀಡಬಹುದಾಗಿದೆ. ಮಾಹಿತಿ ನೀಡಿದವರ ವಿವರವನ್ನು ಬಹಿರಂಗಪಡಿಸುವುದಿಲ್ಲ ಎಂದು ಸಹ ಹೇಳಿದ್ದಾರೆ.

ಪೊಲೀಸ್ ಇಲಾಖೆ ಎಲ್ಲ ರೀತಿಯಿಂದಲೂ ತನಿಖೆ ಮಾಡಿದರೂ ಆರೋಪಿಗಳ ಸುಳಿವು ಸಿಕ್ಕಿಲ್ಲ. ಪೊಲೀಸ್ ನಿಧಾನಗತಿಯ ತನಿಖೆಗೆ ಆಕ್ರೋಶವೂ ವ್ಯಕ್ತವಾಗುತ್ತಿದೆ.ಆರೋಪಿಗಳ ಸುಳಿವಿಗಾಗಿ ಗ್ರಾಮದಲ್ಲಿ ಪ್ರಕಟಣೆಗಳನ್ನು ಹಂಚಿದ್ದು, ಮಾಹಿತಿ ನೀಡಿದವರಿಗೆ ಬಹುಮಾನ ಘೋಷಣೆ ಮಾಡಲಾಗಿದೆ. ಅಲ್ಲದೆ ಮಾಹಿತಿ ನೀಡಿದವರ ಕುರಿತು ವಿವರಣೆಯನ್ನು ಬಹಿರಂಗ ಪಡಿಸುವುದಿಲ್ಲ ಎಂದು ಸಹ ಹೇಳಲಾಗಿದೆ ಪಿಐ ಆಂಜನೇಯ ಹೇಳಿದರು.ಬಾಲಕಿಯೋರ್ವಳ ಹತ್ಯೆಗೈದು ಗೊಬ್ಬರ ಚೀಲದಲ್ಲಿ ಹಾಕಿರುವ ಘಟನೆಯಿಂದ ಗ್ರಾಮ ಬೆಚ್ಚಿ ಬಿದ್ದಿದೆ. ಇದುವರೆಗೂ ಆರೋಪಿಗಳ ಪತ್ತೆಯಾಗದೆ ಇರುವುದು ಗ್ರಾಮಸ್ಥರಲ್ಲಿ ಆತಂಕವನ್ನುಂಟು ಮಾಡಿದೆ. ಆದ್ದರಿಂದ ಸಮಗ್ರ ತನಿಖೆ ಮಾಡಿ, ಆರೋಪಿಗಳನ್ನು ಪತ್ತೆ ಮಾಡಲು ಮನವಿ ಮಾಡಿದ್ದೇವೆ ಎಂದು ಹೋರಾಟಗಾರ ಬಾಷಾ ಹಿರೇಮನಿ ಹೇಳಿದರು.