ಸುಂಟಿಕೊಪ್ಪ ಹೋಬಳಿ: ಶಾಂತಿಯುತ ಬಿರುಸಿನ ಮತದಾನ

| Published : Apr 27 2024, 01:20 AM IST

ಸುಂಟಿಕೊಪ್ಪ ಹೋಬಳಿ: ಶಾಂತಿಯುತ ಬಿರುಸಿನ ಮತದಾನ
Share this Article
  • FB
  • TW
  • Linkdin
  • Email

ಸಾರಾಂಶ

ಸುಂಟಿಕೊಪ್ಪ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮತದಾನ ಶಾಂತಿಯುತವಾಗಿ ನಡೆಯಿತು.ಚುನಾವಣಾ ಆಯೋಗದ ನೀತಿ ನಿಯಮಗಳಿಗೆ ಅನುಸಾರವಾಗಿ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಅಂಗಡಿ, ಹೊಟೇಲ್, ವ್ಯಾಪಾರ, ವಾಹನ ನಿಲುಗಡೆ ಮತ್ತು ಗುಂಪು ಓಡಾಟ ನಿರ್ಬಂಧಿಸಲಾಗಿತ್ತು. ಇದರಿಂದ ಅಸಹಾಯಕರಿಗೆ ಓಡಾಟಕ್ಕೆ ಕಷ್ಟವಾಯಿತು ಎಂದು ಮತದಾರರು ದೂರಿದ್ದಾರೆ.

ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ

ಲೋಕಸಭಾ ಚುನಾವಣೆಯು ಶುಕ್ರವಾರ ನಡೆದಿದ್ದು, ಸುಂಟಿಕೊಪ್ಪ ಹಾಗೂ ಹೋಬಳಿ ವ್ಯಾಪ್ತಿಯಲ್ಲಿ ಬಿರುಸಿನ ಮತದಾನ ಶಾಂತಿಯುತವಾಗಿ ನಡೆಯಿತು.

ಚುನಾವಣಾ ಆಯೋಗದ ನೀತಿ ನಿಯಮಗಳಿಗೆ ಅನುಸಾರವಾಗಿ ಮತಗಟ್ಟೆಯ 200 ಮೀಟರ್ ವ್ಯಾಪ್ತಿಯಲ್ಲಿ ಅಂಗಡಿ, ಹೊಟೇಲ್, ವ್ಯಾಪಾರ, ವಾಹನ ನಿಲುಗಡೆ ಮತ್ತು ಗುಂಪು ಓಡಾಟ ನಿರ್ಬಂಧಿಸಲಾಗಿತ್ತು.

ಆದರೆ ಈ ನಿರ್ಬಂಧಗಳು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿತ್ತು. ಯಾಕೆಂದರೆ ಹಿರಿಯ ನಾಗರೀಕರು ವಿಕಲಚೇತನರು, ಅನಾರೋಗ್ಯ ಪೀಡಿತರು ವಾಹನಗಳಲ್ಲಿ ಬಂದ ಸಂದರ್ಭ ಅವರನ್ನೂ ಮತಗಟ್ಟೆಯ ಗೇಟಿನ ಮುಂಭಾಗ ತಡೆದು ಅಲ್ಲಿಂದಲ್ಲೇ ಮತಗಟ್ಟೆಗೆ ಹೋಗುವಂತೆ ಚುನಾವಣಾ ಕರ್ತವ್ಯ ನಿರತ ಸಿಬ್ಬಂದಿ ಒತ್ತಾಯಿಸುತ್ತಿದ್ದು ಕಂಡು ಬಂತು. ಕೇವಲ ಬೆರಳೆಣಿಕೆಯ ವ್ಹೀಲ್‌ಚೇರ್ ಇರಿಸಿದ್ದು 3 ಸಾವಿರಕ್ಕೂ ಮಿಕ್ಕಿ ಮತದಾರರನ್ನು ಹೊಂದಿರುವ 4 ಮತ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯಗಳ ಕೊರತೆಯಿಂದ ಹಿರಿಯ ನಾಗರೀಕರು ಮತ್ತು ವಿಕಲಚೇತನರು ಹಾಗೂ ಅನಾರೋಗ್ಯ ಪೀಡಿತರು ಸಂಕಷ್ಟಕ್ಕೆ ಒಳಗಾಗಿದ್ದು ಕಂಡು ಬಂತು.

ವಿಶೇಷವಾಗಿ ಹೊರ ರಾಜ್ಯದ ಪೊಲೀಸ್ ಸಿಬ್ಬಂದಿ ಮತ್ತು ಅಧಿಕಾರಿಗಳನ್ನು ಚುನಾವಣಾ ಕರ್ತವ್ಯಕ್ಕೆ ನಿಯೋಜಿಸಿದ ಹಿನ್ನಲೆಯಲ್ಲಿ ಭಾಷೆ ಪರಿಸರ ತಿಳಿಯದ ಅವರಿಂದ ಸಂವಹನ ಸಮಸ್ಯೆಯಾಯಿತು ಎಂಬ ಆರೋಪ ಕೇಳಿ ಬಂತು.

ನಿಧಾನ ಆರಂಭ, ಬಿರುಸಿನ ಅಂತ್ಯ:

ಸುಂಟಿಕೊಪ್ಪದ ಎಲ್ಲ ಮತಗಟ್ಟೆಗಳಲ್ಲಿ ಬೆಳಗ್ಗೆ 10 ಗಂಟೆಯವರೆಗೆ ನಿಧಾನಗತಿಯಲ್ಲಿ ಸಾಗಿದ ಮತದಾನ ನಂತರ ಬಿರುಸುಗೊಂಡಿತ್ತು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7 ಮತಗಟ್ಟೆಗಳಲ್ಲಿ ಮಧ್ಯಾಹ್ನದ ನಂತರ ಬಿರುಸಿನ ಮತದಾನ ನಡೆಯಿತು.

ಮತದಾನ ಮುಗಿಯುವ ವೇಳೆಗೆ 7 ಮತಗಟ್ಟೆಗಳಲ್ಲಿ 7001 ಮತದಾರರಿದ್ದು ಶೇ.70ಕ್ಕೂ ಮಿಕ್ಕಿ ಮತದಾನ ದಾಖಲಾಯಿತು.

ಮೊದಲ ಬಾರಿ ಮತ ಚಲಾಯಿಸಿದ ಯುವಕ ಯುವತಿಯರ ಮುಖದಲ್ಲಿ ಸಂತೋಷದ ನಗೆ ಮೂಡಿದ್ದು ವಿಶೇಷವಾಗಿತ್ತು.

ಕುಶಾಲನಗರ ಡಿವೈಎಸ್‌ಪಿ ಆರ್.ವಿ.ಗಂಗಾಧರಪ್ಪ ನೇತೃತ್ವದಲ್ಲಿ ವೃತ್ತ ನಿರೀಕ್ಷಕ ರಾಜೇಶ್ ಕೋಟ್ಯಾನ್ ಹಾಗೂ ಸುಂಟಿಕೊಪ್ಪ ಠಾಣಾಧಿಕಾರಿ ಎಂ.ಸಿ.ಶ್ರೀಧರ್ ಹಾಗೂ ಸಿಬ್ಬಂದಿ ಬಂದೋಬಸ್ತ್ ವಹಿಸಿದ್ದರು.

--------

ಮೊದಲ ಮತದಾನದ ಖುಷಿ...ಕೊಡಗರಹಳ್ಳಿ ಸ್ಕೂಲ್ ಬಾಣೆ ನಿವಾಸಿ ಹಾಗೂ ಹಿರಿಯ ಪತ್ರಕರ್ತ ಬಿ.ಸಿ.ದಿನೇಶ್ ಅವರ ಪುತ್ರಿ ಬಿ.ಡಿ.ಮಧುರ ಪ್ರಥಮ ಮತದಾನವನ್ನು ಮತಗಟ್ಟೆ ಸಂಖ್ಯೆ 189 ರ ಕೊಡಗರಹಳ್ಳಿ ಸರಕಾರಿ ಪ್ರಾಥಮಿಕ ಶಾಲಾ ಮತಗಟ್ಟೆಯಲ್ಲಿ ನೆರವೇರಿಸಿದರು.

ತನ್ನ ಅನುಭವ ಹಂಚಿಕೊಂಡ ಅವರು, ದೇಶವು ನಮಗೆ ಮತದಾನದ ಹಕ್ಕನ್ನು ನೀಡಿದ್ದು ಅದನ್ನು ಚಲಾಯಿಸುವ ದೇಶದ ಉನ್ನತಿಗೆ ಅಳಿಲು ಸೇವೆಯಾಗಲಿದೆ. ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೆ ಪ್ರತಿಯೊಬ್ಬರೂ ಮತ ಚಲಾಯಿಸುವ ಮೂಲಕ ಮತದಾನದ ಹಬ್ಬವನ್ನು ಆಚರಿಸುವಂತಾಗಬೇಕೆಂದು ಹೇಳಿದರು.

.