ಬಾಡದಲ್ಲಿ ಚಿರತೆ ದಾಳಿ, ಇಬ್ಬರಿಗೆ ಗಾಯ

| Published : Apr 27 2024, 01:19 AM IST / Updated: Apr 27 2024, 01:20 AM IST

ಸಾರಾಂಶ

ಸ್ಥಳೀಯ ಮಹಾಬಲೇಶ್ವರ ಬೀರಪ್ಪ ನಾಯ್ಕ, ಈಶ್ವರ ಹೊನ್ನಪ್ಪ ನಾಯ್ಕ ಚಿರತೆಯಿಂದ ಗಾಯಗೊಂಡವರು. ಈಶ್ವರ ನಾಯ್ಕ ಕೈಬೆರಳಿಗೆ ಚಿರತೆ ಕಚ್ಚಿದ್ದರೆ, ಮಹಾಬಲೇಶ್ವರ ನಾಯ್ಕ ಅವರ ಭುಜ ಹಾಗೂ ಮೊಣಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಮಹಾಬಲೇಶ್ವರ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಕುಮಟಾ: ಜನವಸತಿ ಪ್ರದೇಶಕ್ಕೆ ನುಗ್ಗಿದ ಚಿರತೆಯೊಂದು ಇಬ್ಬರ ಮೇಲೆ ದಾಳಿ ಮಾಡಿ ಕಚ್ಚಿ ಗಾಯಗೊಳಿಸಿದ ಘಟನೆ ತಾಲೂಕಿನ ಬಾಡ ಪಂಚಾಯಿತಿ ವ್ಯಾಪ್ತಿಯ ಅರೆಅಂಗಡಿ ಗ್ರಾಮದ ಮಾದರಿ ರಸ್ತೆಯಲ್ಲಿ ಶುಕ್ರವಾರ ನಡೆದಿದೆ.

ಸ್ಥಳೀಯ ಮಹಾಬಲೇಶ್ವರ ಬೀರಪ್ಪ ನಾಯ್ಕ, ಈಶ್ವರ ಹೊನ್ನಪ್ಪ ನಾಯ್ಕ ಚಿರತೆಯಿಂದ ಗಾಯಗೊಂಡವರು. ಈಶ್ವರ ನಾಯ್ಕ ಕೈಬೆರಳಿಗೆ ಚಿರತೆ ಕಚ್ಚಿದ್ದರೆ, ಮಹಾಬಲೇಶ್ವರ ನಾಯ್ಕ ಅವರ ಭುಜ ಹಾಗೂ ಮೊಣಕೈಗೆ ಕಚ್ಚಿ ಗಂಭೀರವಾಗಿ ಗಾಯಗೊಳಿಸಿದೆ. ಮಹಾಬಲೇಶ್ವರ ನಾಯ್ಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗಾಯಾಳು ಮಹಾಬಲೇಶ್ವರ ಬೀರಪ್ಪ ನಾಯ್ಕ, ಬೆಳಗ್ಗೆ ೬ ಗಂಟೆಯಿಂದಲೇ ಊರಿನಲ್ಲಿ ಚಿರತೆ ಬಂದಿದೆ ಎಂಬ ವದಂತಿ ಹಬ್ಬಿತ್ತು. ನಾವು ಚಿರತೆ ಬಂದಿರುವುದನ್ನು ಒಮ್ಮೆ ಕಂಡಿದ್ದೆವು. ಸಂಜೆ ನಾಲ್ಕು ಗಂಟೆ ಸುಮಾರಿಗೆ ಮನೆಯ ಮುಂದಿನಿಂದಲೇ ಚಿರತೆ ಹೋಗುತ್ತಿರುವುದನ್ನು ನೋಡಿದೆವು. ಅದು ಮುಂದೆ ಹೋಯಿತೇ ಎಂದು ಮನೆಯ ಟೆರೇಸ್ ಹತ್ತಿ ನೋಡಿದೆ. ಆದರೆ ಕೆಳಗಡೆಯೇ ಇತ್ತು. ಅಲ್ಲಿಂದ ತಕ್ಷಣ ಟೆರೇಸ್ ಹತ್ತಿ ಬಂದು ದಾಳಿ ಮಾಡಿತು. ಮೊಣಕೈಗೆ, ಭುಜಕ್ಕೆ ಕಚ್ಚಿ ಹರಿಯಿತು. ಕೂಗಾಡಿ, ಹೋರಾಡಿದಾಗ ಬಿಟ್ಟು ಓಡಿಹೋಯಿತು. ನಂತರ ಸುತ್ತಲಿನ ಜನ ಸೇರಿದರು ಎಂದು ತಿಳಿಸಿದ್ದಾರೆ.

ದಾಳಿ ನಡೆಸಿದ ಬಳಿಕ ಚಿರತೆ ಆಸುಪಾಸಿನ ಹಲವು ಮನೆಯೊಳಗೆ ಹೊಕ್ಕು ಓಡಾಡಿದ್ದು, ಸದ್ಯ ಸೀತು ಲಕ್ಷ್ಮಣ ನಾಯ್ಕ ಅವರ ಮನೆಯಲ್ಲಿ ಅವಿತುಕೊಂಡಿದೆ. ಭಯದ ಸಂಗತಿ ಎಂದರೆ ಅದೇ ಮನೆಯ ಬೇರೆ ಕೋಣೆಗಳಲ್ಲಿ ನಾಲ್ವರು ಸಿಕ್ಕು ಹಾಕಿಕೊಂಡಿದ್ದು ಸುರಕ್ಷಿತವಾಗಿ ಇದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ಮಾದರಿ ರಸ್ತೆಯಲ್ಲಿ ಚಿರತೆ ಬಂದಿರುವ ಬಗ್ಗೆ ಅರಣ್ಯ ಇಲಾಖೆಗೆ ಬೆಳಿಗ್ಗೆಯೇ ಮಾಹಿತಿ ನೀಡಲಾಗಿತ್ತು. ಆದರೆ ಚಿರತೆ ಎಲ್ಲಿದೆ ಎಂಬುದು ಗೊತ್ತಾಗಿರಲಿಲ್ಲ. ಚಿರತೆ ಜನರ ಮೇಲೆ ದಾಳಿ ಮಾಡಿದ ಬಳಿಕ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಹಾಗೂ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಬಾಡ ಗ್ರಾಮ ಪಂಚಾಯಿತಿ ಹಾಗೂ ಅರಣ್ಯ ಇಲಾಖೆ ಜಂಟಿಯಾಗಿ ಮೈಕ್ ನಲ್ಲಿ ಸಂದೇಶ ಬಿತ್ತರಿಸಿದ್ದು ರಾತ್ರಿ ಮನೆಯೊಳಗೇ ಇರುವಂತೆ ಸೂಚಿಸಿದ್ದಾರೆ. ಆದರೆ ಕೆಲ ತಿಂಗಳಿಂದ ಈ ಭಾಗದಲ್ಲಿ ಪದೇ ಪದೇ ಚಿರತೆ ಕಾಟ ಕಂಡುಬಂದಿದ್ದರೂ ಅರಣ್ಯ ಇಲಾಖೆ ಬಳಿ ಬಲೆ ಇನ್ನಿತರ ಸರಿಯಾದ ಸಿದ್ಧತೆ ಇಲ್ಲದಿರುವುದು ಕಾರ್ಯಾಚರಣೆಯ ವಿಳಂಬಕ್ಕೆ ಕಾರಣವಾಗಿದೆ. ಮನೆಯಲ್ಲಿ ಸಿಲುಕಿಕೊಂಡವರು ಹನಿ ನೀರಿಗಾಗಿ ತತ್ತರಿಸುವಂತಾಗಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ. ಅರಣ್ಯ ಇಲಾಖೆಯ ನಿಧಾನಗತಿಯ ಕಾರ್ಯವೈಖರಿಗೆ ಸ್ಥಳೀಯವಾಗಿ ಆಕ್ರೋಶ ವ್ಯಕ್ತವಾಗಿದೆ. ಗೋಕರ್ಣದಿಂದ ಬಲೆ ತರಿಸಿ ಚಿರತೆ ಹಿಡಿಯುವ ಕಾರ್ಯಾಚರಣೆ ನಡೆಸಲಾಗುತ್ತಿದೆ.