ಸೋಮವಾರಪೇಟೆ: ಅಬ್ಬರದ ಪ್ರಚಾರ ಇಲ್ಲದೇ ಮತದಾನ ಮುಕ್ತಾಯ

| Published : Apr 27 2024, 01:19 AM IST

ಸೋಮವಾರಪೇಟೆ: ಅಬ್ಬರದ ಪ್ರಚಾರ ಇಲ್ಲದೇ ಮತದಾನ ಮುಕ್ತಾಯ
Share this Article
  • FB
  • TW
  • Linkdin
  • Email

ಸಾರಾಂಶ

ಸೋಮವಾರಪೇಟೆ ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನದ ತನಕ ಮತದಾನ ನೀರಸವಾಗಿತ್ತು. ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಎಂದಿನಂತೆ ತೋಟದ ಕೆಲಸಕ್ಕೆ ತೆರಳಿ, ೩ ಗಂಟೆಯ ನಂತರ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಸೋಮವಾರಪೇಟೆ

ಲೋಕಸಭಾ ಚುನಾವಣೆ ಮತದಾನ ತಾಲೂಕಿನಲ್ಲಿ ಕಾರ್ಯಕರ್ತರ ಅಬ್ಬರದ ಪ್ರಚಾರವಿಲ್ಲದೆ ಶಾಂತಿಯುತವಾಗಿ ನಡೆಯಿತು.

ತಾಲೂಕಿನ ಬಹುತೇಕ ಮತಗಟ್ಟೆಗಳಲ್ಲಿ ಮಧ್ಯಾಹ್ನದ ತನಕ ಮತದಾನ ನೀರಸವಾಗಿತ್ತು. ಗ್ರಾಮೀಣ ಭಾಗದಲ್ಲಿ ಕೂಲಿ ಕಾರ್ಮಿಕರು ಎಂದಿನಂತೆ ತೋಟದ ಕೆಲಸಕ್ಕೆ ತೆರಳಿ, ೩ ಗಂಟೆಯ ನಂತರ ತಮ್ಮ ವ್ಯಾಪ್ತಿಯ ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಿದರು.

ಬಳಗುಂದ ಮತಗಟ್ಟೆಯಲ್ಲಿ ೧೦.೪೫ಕ್ಕೆ ಶಾಸಕ ಡಾ.ಮಂತರ್‌ಗೌಡ ಮತ್ತು ಪತ್ನಿ ದಿವ್ಯ ಅವರೊಂದಿಗೆ ಸರತಿ ಸಾಲಿನಲ್ಲಿ ನಿಂತು ಮತದಾನ ಮಾಡಿ ಮಾತನಾಡಿ, ಸಂವಿಧಾನ ನಮಗೆ ನೀಡಿರುವ ಮತದಾನದ ಹಕ್ಕನ್ನು ಗೌರವಿಸಿ, ಮತದಾನ ಮಾಡಬೇಕು. ಮತದಾನ ಪವಿತ್ರವಾದುದು. ದೇಶದ ಪ್ರಜಾಪ್ರಭುತ್ವದ ರಕ್ಷಣೆ ನಮ್ಮದಾಗಿದೆ. ಸರ್ವ ಜನಾಂಗದವರನ್ನು ಸಮಾನವಾಗಿ ಕಾಣುವ ಜನಪ್ರತಿನಿಧಿಯನ್ನು ಪ್ರಜ್ಞಾವಂತ ಮತದಾರರು ಆಯ್ಕೆ ಮಾಡಬೇಕು ಎಂದು ಹೇಳಿದರು.

ಮಾಜಿ ಶಾಸಕ ಅಪ್ಪಚ್ಚು ರಂಜನ್ ಕುಂಬೂರು ಬೂತ್‌ನಲ್ಲಿ ಮತಚಲಾಯಿಸಿದರು.

ಮೊದಲ ಮತದಾನದ ಖುಷಿ:

ಬಳಗುಂದ ಮತಗಟ್ಟೆಯಲ್ಲಿ ಕರ್ಕಳ್ಳಿ ಗ್ರಾಮದ ಪ್ರಥಮ ಬಿಸಿಎ ವಿದ್ಯಾರ್ಥಿ ಮಾಳವಿಕ ಮೊದಲ ಬಾರಿಗೆ ಮತದಾನ ಮಾಡಿದರು. ನಂತರ ಅವರು ಮತದಾನವನ್ನು ಸಂಭ್ರಮಿಸಿದ್ದೇನೆ. ನನಗೆ ಇಷ್ಟವಾದ ಸೂಕ್ತ ಅಭ್ಯರ್ಥಿಗೆ ಮತ ನೀಡಿದ್ದೇನೆ. ಅವರ ಗೆಲವನ್ನು ನಿರೀಕ್ಷೆ ಮಾಡುತ್ತಿದ್ದೇನೆ ಎಂದು ಹೇಳಿದರು.

ಅದೇ ಮತಗಟ್ಟೆಯಲ್ಲಿ ಹುಲ್ಲೂರಿಕೊಪ್ಪ ಗ್ರಾಮದ ವಿದೂಷಿ ಮಾದಪ್ಪ, ಗೋಣಿಮರೂರು ಮತಗಟ್ಟೆಯಲ್ಲಿ ವಿಮಿತ, ಬಾಣಾವಾರ ರಸ್ತೆ ಎಸ್‌ಜೆಎಂ ಸಖಿ ಮತಗಟ್ಟೆಯಲ್ಲಿ ಚಂದನಾ ಮೊದಲ ಬಾರಿಗೆ ಮತದಾನ ಮಾಡಿದರು.

ನೇಗಳ್ಳೆ ಕರ್ಕಳ್ಳಿ ಶಾಲೆಯ ಮತಗಟ್ಟೆಯಲ್ಲಿ ಅದೇ ಗ್ರಾಮದ ಬಿಂದು ಅವರು ಬೆಳಗ್ಗೆ ೭.೩೦ಕ್ಕೆ ಮತದಾನ ಮಾಡಿ ನಂತರ ಹಸೆಮಣೆ ಏರಿದರು. ೯೨ ವರ್ಷದ ತಿಮ್ಮಮ್ಮ ದೊಡ್ಡಮಳ್ತೆ ಶಾಲೆಯ ಮತಗಟ್ಟೆಯಲ್ಲಿ ಸಂಜೆ ಮತದಾನ ಮಾಡಿದರು.

ಪ್ರತಿ ಮತಗಟ್ಟೆಯಲ್ಲಿ ೨೦೦ ಮೀಟರ್ ದೂರದಲ್ಲಿ ಬೆರಣಿಕೆಯ ಕಾರ್ಯಕರ್ತರು ಮತಯಾಚಿಸುತ್ತಿರುವುದು ಕಂಡು ಬಂತು.

.