ವಾಜಪೇಯಿ, ಮೋದಿ ಹೆಸರೇಳಿ ಗೆದ್ದವರ ಸಾಧನೆ ಶೂನ್ಯ

| Published : Apr 27 2024, 01:19 AM IST

ಸಾರಾಂಶ

ವಾಜಪೇಯಿ, ಮೋದಿ ಹೆಸರು ಹೇಳಿ, ಮೂರು ಸಲ ಸಂಸದರಾದವರ ಸಾಧನೆ ಶೂನ್ಯವಾಗಿದ್ದು, ಒಂದೇ ಒಂದು ಉತ್ತಮ ಅಭಿವೃದ್ಧಿ ಕಾರ್ಯ ಯಾವುದಿದೆ ಎಂದು ತೋರಿಸಲಿ ನೋಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ದಾವಣಗೆರೆಯಲ್ಲಿ ಹೇಳಿದ್ದಾರೆ.

- ಡಾ.ಪ್ರಭಾ ಪರ ಮತಯಾಚನೆಯಲ್ಲಿ ಎಸ್‌.ಎಸ್‌. ಮಲ್ಲಿಕಾರ್ಜುನ ವಾಗ್ದಾಳಿ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ವಾಜಪೇಯಿ, ಮೋದಿ ಹೆಸರು ಹೇಳಿ, ಮೂರು ಸಲ ಸಂಸದರಾದವರ ಸಾಧನೆ ಶೂನ್ಯವಾಗಿದ್ದು, ಒಂದೇ ಒಂದು ಉತ್ತಮ ಅಭಿವೃದ್ಧಿ ಕಾರ್ಯ ಯಾವುದಿದೆ ಎಂದು ತೋರಿಸಲಿ ನೋಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

ನಗರದ ಸದ್ಯೋಜಾತ ಸ್ವಾಮಿಗಳ ಹಿರೇಮಠದಲ್ಲಿ ಶುಕ್ರವಾರ ಜೆಜೆಎಂ ವೈದ್ಯಕೀಯ ಕಾಲೇಜು, ಬಾಪೂಜಿ ವಿದ್ಯಾಸಂಸ್ಥೆಗಳ ಅಧಿಕಾರಿ, ಸಿಬ್ಬಂದಿ ಜತೆ ಹಮ್ಮಿಕೊಂಡಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಾ.ಪ್ರಭಾ ಮಲ್ಲಿಕಾರ್ಜುನ ಬೆಂಬಲ ಸಭೆಯಲ್ಲಿ ಮಾತನಾಡಿದ ಅವರು, ಕೊಂಡಜ್ಜಿ ಕೆರೆ ಎಲ್ಲಿದೆ ಎನ್ನುವ ಸಂಸದರು ಬೇಕೇ ಅಥವಾ ಜಿಲ್ಲೆಯ ಎಲ್ಲಾ ಕೆರೆಗಳನ್ನು ತುಂಬಿಸುವ ಸಂಸದರು ಬೇಕೆ ಎಂದು ಪ್ರಶ್ನಿಸುವ ಮೂಲಕ ತಮ್ಮ ಬದ್ಧ ಎದುರಾಳಿ ಸಂಸದ ಜಿ.ಎಂ.ಸಿದ್ದೇಶ್ವರ ವಿರುದ್ಧ ಹರಿಹಾಯ್ದರು.

ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಬಿಜೆಪಿ ಸರ್ಕಾರದಲ್ಲಿ ನೂರಾರು ಕೋಟಿ ರು. ಲೂಟಿ ಮಾಡಲಾಗಿದೆ. ಕ್ವಾರಂಟೀನ್‌, ಆಕ್ಸಿಜನ್‌, ಕೋವಿಡ್ ಲಸಿಕೆ ಹೆಸರಿನಲ್ಲಿ ಒಬ್ಬ ರೋಗಿಯಿಂದ ₹4ರಿಂದ ₹10 ಸಾವಿರ, ಒಬ್ಬ ವೈದ್ಯರಿಗೆ ₹30-₹40 ಸಾವಿರ ವರೆಗೆ ಲೂಟಿ ಮೇಲೆ ಲೂಟಿ ಮಾಡಲಾಗಿದೆ ಎಂದು ಆರೋಪಿಸಿದರು.

ನಾವು ವೈಯಕ್ತಿಕವಾಗಿ ₹10 ಕೋಟಿ ಠೇವಣಿ ಮಾಡಿ, ಲಸಿಕೆ ತರಿಸಿ ಜನರಿಗೆ ನೀಡಿದೆವು. ನಮ್ಮ ವೈದ್ಯರು, ಸಿಬ್ಬಂದಿ ಹಗಲಿರುಳು ಸೋಂಕಿತರ ಯೋಗಕ್ಷೇಮಕ್ಕಾಗಿ ಶ್ರಮಿಸಿದರು. ಬಡ ರೋಗಿಗಳಿಗಾಗಿ ₹20 ಕೋಟಿ ಮೀಸಲಿಟ್ಟಿದ್ದೇವೆ. ಬಾಪೂಜಿ ಆರೋಗ್ಯ ಕ್ಯಾಂಪ್‌ಗಳಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವವರ ವಿಚಾರ ಗೊತ್ತಾಗಿದೆ. ಪೌಷ್ಟಿಕಾಂಶದ ಒದಗಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ಅವರು ತಿಳಿಸಿದರು.

ಜಿಲ್ಲೆಯಲ್ಲಿ ಅರೋಗ್ಯ, ನೀರಾವರಿ, ವಿವಿಧ ಮೂಲ ಸೌಕರ್ಯಗಳಿಗೆ ಉತ್ತಮ ಯೋಜನೆ ರೂಪಿಸಬೇಕು. ಬಿಜೆಪಿಯವರಿಗೆ ಬುದ್ದಿ ಇದೆಯಾ? ಡಿಸಿಎಂ ಟೌನ್ ಶಿಫ್, ಅಶೋಕ ರಸ್ತೆ ರೈಲ್ವೆ ಕೆಳಸೇತುವೆ ಕಾಮಗಾರಿಗಳು ಸಂಪೂರ್ಣ ಅವೈಜ್ಞಾನಿಕವಾಗಿವೆ. ಜಿಲ್ಲೆಯ 57 ಕೆರೆ ತುಂಬಿಸುವ ಯೋಜನೆ ಕಳಪೆ ಕಾಮಗಾರಿಯಿಂದ 10 ವರ್ಷ ಕಳೆದರೂ ಪೂರ್ಣವಾಗಿಲ್ಲ. ಮೋದಿ ಮೋದಿ ಎನ್ನುವವರಿಗೆ ಅವರಪ್ಪನಂಥವರು ಬರುವರು ಎಂಬುದನ್ನು ತೋರಿಸಬೇಕಿದೆ ಎಂದ ಅವರು, ಜಿಲ್ಲೆಯಲ್ಲಿ 1800 ಬೆಡ್ ಇರುವ ಉತ್ತಮ ಆಸ್ಪತ್ರೆ ಕಟ್ಟುತ್ತಿದ್ದೇವೆ. ಡಾ.ಪ್ರಭಾ ನಿಮ್ಮ ಮನೆ ಮಗಳು, ಕಕ್ಕರಗೊಳ್ಳದವರು. ಈಗ ಕಾಂಗ್ರೆಸ್ ಅಭ್ಯರ್ಥಿಯಾಗಿರುವ, ಡಾ.ಪ್ರಭಾ ಅವರನ್ನು ಗೆಲ್ಲಿಸಬೇಕು ಎಂದು ಮಲ್ಲಿಕಾರ್ಜುನ ಮನವಿ ಮಾಡಿದರು.

ಬಾಪೂಜಿ ಕಣ್ಣಿನ ಆಸ್ಪತ್ರೆ ಮುಖ್ಯಸ್ಥ ಡಾ.ರವೀಂದ್ರ ಬಣಕಾರ, ಜೆಜೆಎಂಎಂಸಿ ಆಡಳಿತಾಧಿಕಾರಿ ಟಿ.ಸತ್ಯನಾರಾಯಣ, ಸಂಶೋಧನಾ ವಿಭಾಗ ಮುಖ್ಯಸ್ಥ ಡಾ.ಮಂಜುನಾಥ ಆಲೂರು, ಪ್ರಾಚಾರ್ಯರಾದ ಡಾ.ಶುಕ್ಲಾ ಶೆಟ್ಟಿ, ಬಾಪೂಜಿ ಆಸ್ಪತ್ರೆ ವೈದ್ಯಕೀಯ ನಿರ್ದೇಶಕರಾದ ಡಾ.ಡಿ.ಎಸ್.ಕುಮಾರ, ಬಾಪೂಜಿ ಮಕ್ಕಳ ಆಸ್ಪತ್ರೆ ಮತ್ತು ಸಂಶೋಧನಾ ವಿಭಾಗದ ನಿರ್ದೇಶಕ ಡಾ.ಗುರುಪ್ರಸಾದ, ಅಧಿಕಾರಿ ಸಿಬ್ಬಂದಿ ಇದ್ದರು. ಸಹ ಪ್ರಾಧ್ಯಾಪಕ ಡಾ.ಜಿ.ಧನ್ಯಕುಮಾರ, ಡಾ.ನೀತು ಕಾರ್ಯಕ್ರಮ ನಡೆಸಿಕೊಟ್ಟರು.

- - - -26ಕೆಡಿವಿಜಿ17, 18, 19:

ಸಭೆಯಲ್ಲಿ ಸಚಿವ ಮಲ್ಲಿಕಾರ್ಜುನ ಡಾ.ಪ್ರಭ ಪರವಾಗಿ ಮತಯಾಚಿಸಿದರು.