ಗದ್ದಿಗೌಡರ ಮನೆಗೆ ಕಳಿಸಿ, ಸಂಯುಕ್ತಾ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ

| Published : Apr 28 2024, 01:16 AM IST

ಗದ್ದಿಗೌಡರ ಮನೆಗೆ ಕಳಿಸಿ, ಸಂಯುಕ್ತಾ ಗೆಲ್ಲಿಸಿ: ಸಿಎಂ ಸಿದ್ದರಾಮಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಬರ ಪರಿಹಾರದಲ್ಲಿ ಕೇಂದ್ರದ ಈ ತಾರತಮ್ಯದ ವಿರುದ್ಧ ಭಾನುವಾರ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಕನ್ನಡಪ್ರಭ ವಾರ್ತೆ ರಬಕವಿ-ಬನಹಟ್ಟಿ

ರಾಜ್ಯದ ಬರ ಪರಿಹಾರಕ್ಕೆಂದು ಕೇಂದ್ರಕ್ಕೆ ₹18,172 ಕೋಟಿ ಕೇಳಿದ್ದೆವು. ಆದರೆ, ಕೇಂದ್ರ ನೀಡಿದ್ದು ಬರೀ ₹ 3,498 ಕೋಟಿ ಮಾತ್ರ. ಕೇಂದ್ರದ ಈ ತಾರತಮ್ಯದ ವಿರುದ್ಧ ಭಾನುವಾರ ಬೆಂಗಳೂರಿನ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬಾಗಲಕೋಟೆ ಜಿಲ್ಲೆಯ ಬನಹಟ್ಟಿಯ ಎಸ್‌ಆರ್‌ಎ ಮೈದಾನದಲ್ಲಿ ಶನಿವಾರ ಪ್ರಜಾಧ್ವನಿ-ಭಾಗ2 ಸಮಾವೇಶದಲ್ಲಿ ಮಾತನಾಡಿದ ಅವರು, ಸುಪ್ರೀಂಕೋರ್ಟ್ ಛೀಮಾರಿ ಹಾಕಿದ ನಂತರ ಕೇಂದ್ರ ಸರ್ಕಾರ ಕಾಟಾಚಾರಕ್ಕೆ ಬರ ಪರಿಹಾರ ನೀಡಿದೆ. ನ್ಯಾಯಾಲಯಕ್ಕೂ ಗೌರವ ನೀಡದ ಬಿಜೆಪಿ ಸರ್ಕಾರದ ವರ್ತನೆ ಖಂಡನೀಯ ಎಂದು ಕಿಡಿಕಾರಿದರು.

ರಾಜ್ಯಕ್ಕೆ ಭೀಕರ ಬರಗಾಲ ಬಂದಿದೆ. ರಾಜ್ಯದ ಪಾಲಿನ ಬರ ಪರಿಹಾರ ಕೊಡಿ ಕೊಡಿ ಅಂತ ಕೇಳಿ ಕೇಳಿ ಸಾಕಾಯ್ತು. ದೆಹಲಿಗೆ ಬಂದು ಪ್ರತಿಭಟನೆ ಕೂಡ ಮಾಡಿದೆವು. ಆದರೂ ರಾಜ್ಯದ ಪಾಲಿನ ಹಣ ಕೊಡಲಿಲ್ಲ. ನಾವು ಕಾನೂನು ಹೋರಾಟ ಶುರು ಮಾಡಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆವು. ಸುಪ್ರೀಂಕೋರ್ಟ್ ಸ್ಪಷ್ಟ ಸೂಚನೆ ಕೊಡುವವರೆಗೂ ಏಕೆ ರಾಜ್ಯಕ್ಕೆ ಒಂದು ಪೈಸೆಯನ್ನೂ ಕೊಡಲಿಲ್ಲ ಮೋದಿಯವರೇ. ಇಂಥಾ ದ್ರೋಹ ಏಕೆ ಮಾಡಿದಿರಿ ಎಂದು ಜನರೆದುರೇ ಮೋದಿಯವರನ್ನು ಪ್ರಶ್ನಿಸಿದರು.

ನಾವು ಹಣ ಕೇಳಿದ್ದು ಗ್ಯಾರಂಟಿಗಲ್ಲ:

ಕೇಂದ್ರಕ್ಕೆ ಬರ ಪರಿಹಾರದ ಹಣ ಕೇಳಿದ್ದೇವೆಯೇ ಹೊರತು ಗ್ಯಾರಂಟಿ ಯೋಜನೆಗಳಿಗಲ್ಲ. ಪಂಚ ಗ್ಯಾರಂಟಿಗೆ ರಾಜ್ಯದ ಸಂಪನ್ಮೂಲವಿದೆ. ₹50,900 ಕೋಟಿ ಗ್ಯಾರಂಟಿಗೆ ಹಾಗೂ ₹68 ಸಾವಿರ ಕೋಟಿ ಅಭಿವೃದ್ಧಿಗಾಗಿ ಹಣ ಮೀಸಲಿಟ್ಟಿದ್ದೇವೆ. ಇದನ್ನು ತಿರುಚಿ ಹೇಳಿಕೆ ನೀಡುತ್ತಿರುವ ಬಿಜೆಪಿ ನಾಯಕರು ಅರಿತು ಮಾತನಾಡಬೇಕು ಎಂದು ಬಿಜೆಪಿ ಮುಖಂಡರ ವಿರುದ್ಧ ಹರಿಹಾಯ್ದರು.

ಮೋದಿಯವರೇ ರೈತರ ಆದಾಯ ದುಪ್ಪಟ್ಟು ಮಾಡುತ್ತೇವೆ ಎಂದಿದ್ದರು. ಪ್ರತಿಭಟನೆ ಮಾಡಿ ನೂರಾರು ರೈತರು ಮೃತಪಟ್ಟರೂ ಈ ರೈತರ ಸಾವಿನ ಬಗ್ಗೆ ನಿಮಗೆ ಸಣ್ಣ ಕರುಣೆಯೂ ಬರಲಿಲ್ಲ. ಮೋದಿಯವರೇ, ಡಾಲರ್ ಎದುರು ರುಪಾಯಿ ಮೌಲ್ಯ ಕಡಿಮೆ ಮಾಡುತ್ತೇವೆ ಅಂದಿರಿ. ಆದರೆ ಈಗ ಡಾಲರ್ ಎದುರು ರುಪಾಯಿ ಮೌಲ್ಯ ಯಾವ ಮಟ್ಟಕ್ಕೆ ಏರಿಕೆ ಆಗಿದೆ ನೋಡಿ. 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಿ. ಕೆಲಸ ಕೇಳಿದ್ರೆ ಪಕೋಡ ಮಾರಾಟ ಮಾಡಿ ಅಂದವರು ನೀವು. ಮೋದಿಯವರೇ, ಬೆಲೆ ಏರಿಕೆಗೆ ಬ್ರೇಕ್ ಹಾಕ್ತೀವಿ ಅಂತ ಭಾರತೀಯರನ್ನು ನಂಬಿಸಿ ಬಕರಾ ಮಾಡಿದಿರಿ. ಡೀಸೆಲ್, ಪೆಟ್ರೋಲ್, ಗೊಬ್ಬರ, ಗ್ಯಾಸ್ ಬೆಲೆ ಗಗನಕ್ಕೆ ಏರಿಸಿದರಲ್ಲಾ, ಇಂಥಾ ನಂಬಿಕೆ ದ್ರೋಹನಾ ಸ್ವಾಮಿ ನೀವು ಮಾಡೋದು ಎಂದು ಖಾರವಾಗಿಯೇ ಪ್ರಶ್ನಿಸಿದರು.

ಗ್ಯಾರಂಟಿ ನಿಶ್ಚಿತ:

ರಾಜ್ಯದ 5 ಗ್ಯಾರಂಟಿ ಸಂಪೂರ್ಣ ಯಶಸ್ವಿಗೊಂಡಿವೆ. ಲೋಕಸಭೆಯಲ್ಲಿ ಕಾಂಗ್ರೆಸ್‌ಗೆ ಆಶೀರ್ವಾದ ಮಾಡಿದರೆ 20 ಗ್ಯಾರಂಟಿಗಳೂ ನಿಶ್ಚಿತ ನಿಮ್ಮ ಮನೆ ಬಾಗಿಲಿಗೆ ಬರಲಿವೆ ಎಂದು ಭರವಸೆ ನೀಡಿದ ಸಿಎಂ, ಪ್ರಧಾನಿ ನರೇಂದ್ರ ಮೋದಿ ಬಾಯಿ ಬರೀ ಸಂವಿಧಾನ ವಿರೋಧಿ ಮಾತುಗಳನ್ನೇ ಆಡುತ್ತಾರೆ. ದೇಶದ 140 ಕೋಟಿ ಜನರ ರಕ್ಷಣೆಯ ಜವಾಬ್ದಾರಿ ಅವರ ಮೇಲಿದೆ. ಕೇವಲ ಆರ್‌ಎಸ್‌ಎಸ್ ಅಜೆಂಡಾದೊಂದಿಗೆ ಹಿಂದು-ಮುಸ್ಲಿಂ ಎಂದು ಜನರ ಭಾವನೆಗಳಿಗೆ ಧಕ್ಕೆ ತಂದು ದೇಶವನ್ನು ಒಡೆದು ಹಿಂದುಸ್ಥಾನ ಮಾಡಲು ಹೊರಟಿದ್ದಾರೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದು ಕಿಡಿಕಾರಿದರು.

ಕೇಂದ್ರದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇಡೀ ದೇಶದ ರೈತರ ಸಾಲ ಮನ್ನಾ ಆಗಲಿದೆ. ಪ್ರತಿ ಕುಟುಂಬದ ಮಹಿಳೆಗೆ ವರ್ಷಕ್ಕೆ ಒಂದೂ ಕಾಲು ಲಕ್ಷ ರು. ಅಕೌಂಟಿಗೆ ಬಂದು ಬೀಳುತ್ತದೆ. ನಿರುದ್ಯೋಗಿ ಯುವಕರಿಗೆ ವರ್ಷಕ್ಕೆ ಒಂದು ಲಕ್ಷ ರು. ಕೊಡುತ್ತೇವೆ. ಸ್ವಾಮಿನಾಥನ್ ವರದಿಯಂತೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ಖಚಿತ. ಈ ರೀತಿಯ 25 ಗ್ಯಾರಂಟಿಗಳು ಜಾರಿಯಾಗಲಿದ್ದು ಈ ಗ್ಯಾರಂಟಿ ಪತ್ರಕ್ಕೆ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯವರು ಸಹಿ ಹಾಕಿದ್ದಾರೆ. ಎಲ್ಲಾ ಗ್ಯಾರಂಟಿಗಳ ಲಕ್ಷ ಹಣ ಬ್ರೋಕರ್‌ಗಳ ಹಾವಳಿ ಇಲ್ಲದೆ ನಿಮ್ಮ ಖಾತೆಗೆ ನೇರವಾಗಿ ಬಂದು ಬೀಳುತ್ತದೆ ಎಂದು ವಿಶ್ವಾಸ ತುಂಬಿದರು.

ಗದ್ದಿಗೌಡರಲ್ಲ ನಿದ್ದೆಗೌಡರು:

ಸಂಸದ ಗದ್ದಿಗೌಡರು 20 ವರ್ಷ ಕೇಂದ್ರದಲ್ಲಿ ನಿದ್ದೆಯನ್ನೇ ಮಾಡಿದ್ದಾರೆ. ಜಿಲ್ಲೆಗೆ ಯಾವುದೇ ಅಭಿವೃದ್ಧಿ ಕಾಮಗಾರಿ ತರುವಲ್ಲಿ ಸಂಪೂರ್ಣ ವಿಫಲಗೊಂಡಿದ್ದಾರೆ. ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಸಂಯುಕ್ತಾ ಪಾಟೀಲರನ್ನು ಗೆಲ್ಲಿಸುವ ಮೂಲಕ ಕಾಂಗ್ರೆಸ್ ಗ್ಯಾರಂಟಿ ಬೆಂಬಲಿಸಿ ಎಂದು ಸಿಎಂ ಮನವಿ ಮಾಡಿದರು.

ಈ ಬಾರಿ ನೀವು ಬಿಜೆಪಿಯ ಗದ್ದಿಗೌಡರನ್ನು ಸೋಲಿಸಲೇಬೇಕು. ಕಾಂಗ್ರೆಸ್ಸಿನ ಸಂಯುಕ್ತಾ ಪಾಟೀಲ್ ಪಾರ್ಲಿಮೆಂಟಿನಲ್ಲಿ ನಿಮ್ಮ ಧ್ವನಿ ಆಗಿರ್ತಾರೆ. ಆದ್ದರಿಂದ ಗೆಲ್ಲಿಸಿ ಕಳುಹಿಸಿ ಎಂದು ಮುಖ್ಯಮಂತ್ರಿ ಕರೆ ನೀಡಿದರು

ಗದ್ದಿಗೌಡರೇ ಇಷ್ಟು ವರ್ಷ ನೀವು ಪಾರ್ಲಿಮೆಂಟಿನಲ್ಲಿ ರಾಜ್ಯದ ಪರವಾಗಿ ಬಾಯಿಯನ್ನೇ ಬಿಟ್ಟಿಲ್ಲ. ರಾಜ್ಯಕ್ಕೆ ಬರ ಬಂದಾಗಲೂ ಬಾಯಿ ಬಿಡಲಿಲ್ಲ. ಪ್ರವಾಹ ಬಂದಾಗಲೂ ಬಾಯಿ ಬಿಡಲಿಲ್ಲ. ಬಾಗಲಕೋಟೆ ಜಿಲ್ಲೆಯ ಜನರ ಪರವಾಗಿ, ಜಿಲ್ಲೆಯ ಅಭಿವೃದ್ಧಿ ಪರವಾಗಿಯೂ ಬಾಯಿ ಬಿಡಲಿಲ್ಲ. ಇದು ನಿಮಗೆ ಬಿದ್ದ ಓಟಿಗೆ ನೀವು ಮಾಡಿದ ಅವಮಾನ ಅಲ್ಲವೇ ಎಂದು ಪ್ರಶ್ನಿಸಿದರು.

ಜೀತದಾಳಾಗಿ ಕೆಲಸ ಮಾಡುವೆ:

ಜಿಲ್ಲೆಗೆ ಕುಡಚಿ-ಬಾಗಲಕೋಟೆ ರೈಲ್ವೆ ಕಾಮಗಾರಿ, ಪ್ರವಾಸೋದ್ಯಮ, ನೇಕಾರ ಸಮಸ್ಯೆ, ಕೃಷ್ಣಾ ಮೇಲ್ದಂಡೆ ಹಾಗೂ ಕಳಸಾ-ಬಂಡೂರಿ ಯೋಜನೆ ಸೇರಿದಂತೆ ಅನೇಕ ಸಮಸ್ಯೆಗಳು ದೀರ್ಘ ಸಮಯದಿಂದ ಇತ್ಯರ್ಥವಾಗಿಲ್ಲ. ಇವೆಲ್ಲದಕ್ಕೂ ಸಂಸದ ಗದ್ದಿಗೌಡರ ಅವರ ನಿರ್ಲಕ್ಷ್ಯತನವೇ ಕಾರಣ. ಈ ಬಾರಿ ನನ್ನ ಗೆಲುವಿಗೆ ಸಹಕರಿಸಿದರೆ ಮುಂದಿನ 5 ವರ್ಷ ನಿಮ್ಮ ಜೀತದಾಳಾಗಿ ಜಿಲ್ಲೆಯ ಜನರ ಸೇವೆ ಮಾಡುವುದಾಗಿ ಅಭ್ಯರ್ಥಿ ಸಂಯುಕ್ತಾ ಪಾಟೀಲ ಮತದಾರರಿಗೆ ಕೈ ಮುಗಿದು ಮನವಿ ಮಾಡಿದರು.

ವೇದಿಕೆ ಮೇಲೆ ಸಚಿವರಾದ ಆರ್.ಬಿ. ತಿಮ್ಮಾಪುರ, ಶಿವಾನಂದ ಪಾಟೀಲ, ಶಾಸಕರಾದ ಲಕ್ಷ್ಮಣ ಸವದಿ, ವಿನಯ ಕುಲಕರ್ಣಿ, ಜೆ.ಟಿ. ಪಾಟೀಲ, ಪ್ರಕಾಶ ಹುಕ್ಕೇರಿ, ವಿಜಯಾನಂದ ಕಾಶಪ್ಪನವರ, ಅಜಯಕುಮಾರ ಸರನಾಯಕ, ಬಿ.ಆರ್. ಯಾವಗಲ್, ವಿಪ ಸದಸ್ಯ ಸುನೀಲಗೌಡ ಪಾಟೀಲ, ಮಾಜಿ ಶಾಸಕರಾದ ಎಸ್.ಆರ್. ಪಾಟೀಲ, ಉಮಾಶ್ರಿ, ಆನಂದ ನ್ಯಾಮಗೌಡ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಉಸ್ತುವಾರಿ ಸಯ್ಯದ್, ರಕ್ಷಿತಾ ಈಟಿ, ಮುತ್ತಣ್ಣ ಬೆನ್ನೂರ, ಸುಶೀಲಕುಮಾರ ಬೆಳಗಲಿ, ಸಿದ್ದು ಕೊಣ್ಣೂರ ಸೇರಿದಂತೆ ಅನೇಕರಿದ್ದರು.

ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಮೋದಿ:

ರಾಜ್ಯದ ಹಿಂದುಳಿದ ಸಮುದಾಯಗಳೇ ಎಚ್ಚರ. ಮೋದಿ ನಿಮ್ಮ ಹಾದಿ ತಪ್ಪಿಸಿ ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆರೋಪಿಸಿದರು.

ದೇಶದಲ್ಲಿ 102 ಲೋಕಸಭಾ ಕ್ಷೇತ್ರಗಳಿಗೆ ಮೊದಲ ಹಂತದ ಚುನಾವಣೆ ನಡೆದ ಬಳಿಕ ಬಿಜೆಪಿ ಸೋಲುತ್ತದೆ ಎನ್ನುವ ಸುಳಿವು ಮೋದಿಯವರಿಗೆ ಸ್ಪಷ್ಟವಾಗಿ ಸಿಕ್ಕಿದೆ. ಈ ಕಾರಣಕ್ಕೆ ಭಯಾನಕ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಕಿತ್ತು ಮುಸಲ್ಮಾನರಿಗೆ ಕೊಡುತ್ತಿದ್ದಾರೆ ಎನ್ನುವ ಸುಳ್ಳನ್ನು ಹೇಳುವ ಮೂಲಕ ಹಿಂದುಳಿದವರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟುತ್ತಿದ್ದಾರೆ. ಎಚ್ಚರ ವಹಿಸಿ ಎಂದು ಎಚ್ಚರಿಸಿದರು.

ಮೋದಿ ಮೀಸಲಾತಿ ವಿಚಾರದಲ್ಲೂ ಸುಳ್ಳು ಹೇಳುತ್ತಿದ್ದಾರೆ. ಇವರಿಗೆ ಸಂವಿಧಾನದ ತಿಳಿವಳಿಕೆ ಇಲ್ಲ. ಈ ಮಟ್ಟದ ಸುಳ್ಳು ಹೇಳುವ ಇವರಿಗೆ ನಾಚಿಕೆ, ಮಾನ ಮರ್ಯಾದೆ ಏನಾದರೂ ಇದೆಯಾ ಎಂದು ಖಾರವಾಗಿ ಪ್ರಶ್ನಿಸಿದರು.

ಮಂಡಲ್ ವರದಿ ವಿರೋಧಿಸಿ ಹಿಂದುಳಿದವರ ಹಾದಿ ತಪ್ಪಿಸಿ ಆತ್ಮಹತ್ಯೆಗೆ ದೂಡಿದ್ದು ಇದೇ ಬಿಜೆಪಿ. ಹಿಂದುಳಿದವರ ಮೀಸಲಾತಿ ವಿರೋಧಿಸಿ ಕೋರ್ಟ್‌ಗೆ ಹೋಗಿದ್ದ ರಾಮಾಜೋಯಿಸ್ ಬಿಜೆಪಿಯವರು. ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ಕೊಟ್ಟಾಗ ಅದನ್ನು ವಿರೋಧಿಸಿ ಪ್ರತಿಭಟಿಸಿದ್ದು ಇದೇ ಬಿಜೆಪಿ. ಹಿಂದುಳಿದವರ, ಮಹಿಳೆಯರ ವಿರೋಧಿಯಾಗಿರುವ ಇವರು ಈಗ ಹಿಂದುಳಿದವರನ್ನು ಮುಸ್ಲಿಮರ ವಿರುದ್ಧ ಎತ್ತಿ ಕಟ್ಟಿ ಏಕ ಕಾಲದಲ್ಲಿ ಎರಡೂ ಸಮುದಾಯಗಳ ಜೀವಗಳ ಜೊತೆ ಚೆಲ್ಲಾಟ ಆಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.‌