ಮಂಡ್ಯದಲ್ಲಿ ದಾಖಲೆ ಮತದಾನ: ವಿಜಯಮಾಲೆ ಯಾರಿಗೆ?

| Published : Apr 28 2024, 01:19 AM IST

ಸಾರಾಂಶ

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗಿದ್ದ ಜನಪ್ರಿಯತೆಯ ಕಾರಣದಿಂದಲೇ ಕೊನೇ ಘಳಿಗೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಪ್ರವೇಶಿಸಿದ್ದು ಜೆಡಿಎಸ್‌ನವರಲ್ಲಿ ಹೊಸ ಉತ್ಸಾಹವನ್ನು ತುಂಬಿತು. ಅಲ್ಲಿಯವರೆಗೆ ನಿರುತ್ಸಾಹದಲ್ಲಿದ್ದ ಜೆಡಿಎಸ್ ಪಡೆ ತಕ್ಷಣವೇ ಸಕ್ರಿಯಗೊಂಡು ತೀವ್ರ ಸ್ವರೂಪದ ಹೋರಾಟಕ್ಕಿಳಿಯಿತು. ಪ್ರಚಾರದ ಆರಂಭದಿಂದ ಕೊನೆಯವರೆಗೂ ಒಂದೇ ಸಮತೋಲನ ಕಾಯ್ದುಕೊಂಡು ಬಂದಿತು. ಜೊತೆಯಲ್ಲೇ ಪಕ್ಷದೊಳಗೆ ಹೊಸ ಬದಲಾವಣೆಯ ಗಾಳಿ ಬೀಸಲು ಆರಂಭಿಸಿತು. ದಾಖಲೆಯ ಮತದಾನ ನೋಡಿದಾಗ ಏಕಮುಖವಾಗಿ ನಡೆದಿರುವಂತೆ ಕಂಡುಬರುತ್ತಿದೆ.

ಕನ್ನಡಪ್ರಭ ವಾರ್ತೆ ಮಂಡ್ಯ

ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ದಾಖಲೆಯ ಶೇ.೮೧.೬೭ರಷ್ಟು ಮತದಾನ ನಡೆದಿದೆ. ನಿರೀಕ್ಷೆಗೂ ಮೀರಿ ನಡೆದಿರುವ ಮತದಾನ ಯಾರಿಗೆ ಲಾಭವನ್ನು ತಂದುಕೊಟ್ಟಿದೆ ಎಂಬ ಬಗ್ಗೆ ರಾಜಕೀಯ ಪಕ್ಷಗಳೊಳಗೆ ಸೋಲು-ಗೆಲುವಿನ ಲೆಕ್ಕಾಚಾರ ಆರಂಭಗೊಂಡಿದೆ.

೨೦೧೯ರ ಲೋಕಸಭೆ ಚುನಾವಣೆಯಿಂದ ಸತತ ಸೋಲುಗಳನ್ನು ಕಾಣುತ್ತಲೇ ನೆಲಕಚ್ಚಿದ್ದ ಜೆಡಿಎಸ್‌ಗೆ ಗೆಲುವಿನ ಟಾನಿಕ್ ನೀಡುವುದಕ್ಕಾಗಿ ೨೦೨೪ರ ಲೋಕಸಭೆ ಚುನಾವಣೆಗೆ ಸ್ವತಃ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರೇ ತೊಡೆತಟ್ಟಿ ಅಖಾಡ ಪ್ರವೇಶಿಸಿದರು. ಹಿಂದಿನ ಚುನಾವಣೆಯಲ್ಲಿ ಸುಮಲತಾಗೆ ಸಾಥ್ ನೀಡಿದಂತೆ ಈ ಬಾರಿ ಬಿಜೆಪಿ ಕುಮಾರಸ್ವಾಮಿಗೆ ಹೆಗಲುಕೊಟ್ಟಿತು. ಸ್ಥಳೀಯ ಜೆಡಿಎಸ್ ನಾಯಕರು ಒಗ್ಗಟ್ಟಾಗಿ ನಿಂತು ಚುನಾವಣೆ ನಡೆಸಿದರು. ಜೊತೆಗೆ ದಾಖಲೆಯ ಮತದಾನ ನಡೆದಿರುವುದು ಜೆಡಿಎಸ್‌ನೊಳಗೆ ಗೆಲುವಿನ ನಗೆ ಮೂಡಿಸುವಂತೆ ಮಾಡಿದೆ.

ಎಚ್‌ಡಿಕೆ ಸ್ಪರ್ಧೆಯಿಂದ ಹೊಸ ಉತ್ಸಾಹ:

ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರಿಗಿದ್ದ ಜನಪ್ರಿಯತೆಯ ಕಾರಣದಿಂದಲೇ ಕೊನೇ ಘಳಿಗೆಯಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರ ಪ್ರವೇಶಿಸಿದ್ದು ಜೆಡಿಎಸ್‌ನವರಲ್ಲಿ ಹೊಸ ಉತ್ಸಾಹವನ್ನು ತುಂಬಿತು. ಅಲ್ಲಿಯವರೆಗೆ ನಿರುತ್ಸಾಹದಲ್ಲಿದ್ದ ಜೆಡಿಎಸ್ ಪಡೆ ತಕ್ಷಣವೇ ಸಕ್ರಿಯಗೊಂಡು ತೀವ್ರ ಸ್ವರೂಪದ ಹೋರಾಟಕ್ಕಿಳಿಯಿತು. ಪ್ರಚಾರದ ಆರಂಭದಿಂದ ಕೊನೆಯವರೆಗೂ ಒಂದೇ ಸಮತೋಲನ ಕಾಯ್ದುಕೊಂಡು ಬಂದಿತು. ಜೊತೆಯಲ್ಲೇ ಪಕ್ಷದೊಳಗೆ ಹೊಸ ಬದಲಾವಣೆಯ ಗಾಳಿ ಬೀಸಲು ಆರಂಭಿಸಿತು. ದಾಖಲೆಯ ಮತದಾನ ನೋಡಿದಾಗ ಏಕಮುಖವಾಗಿ ನಡೆದಿರುವಂತೆ ಕಂಡುಬರುತ್ತಿದೆ.

ಕಾಂಗ್ರೆಸ್‌ನೊಳಗೂ ಗೆಲುವಿನ ವಿಶ್ವಾಸ:

ಕಾಂಗ್ರೆಸ್‌ನವರು ಕೂಡ ಗೆಲುವಿನ ಬಗ್ಗೆ ನಾನಾ ರೀತಿಯ ಲೆಕ್ಕಾಚಾರದಲ್ಲಿದ್ದಾರೆ. ಗ್ಯಾರಂಟಿ ಯೋಜನೆಗಳಿಂದ ಪ್ರೇರಿತರಾಗಿ ಮಹಿಳಾ ಮತದಾರರು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೈಹಿಡಿದಿದ್ದಾರೆ. ಅಹಿಂದ ಜೊತೆಗೆ ಇತರೆ ಹಿಂದುಳಿದ ಸಮುದಾಯಗಳ ಮತಗಳೂ ನಮ್ಮ ಕೈಹಿಡಿದಿವೆ. ಕಾಂಗ್ರೆಸ್ ಕೂಡ ಒಗ್ಗಟ್ಟಿನಿಂದ ಬಹಳ ಶ್ರಮವಹಿಸಿ ಮತಬೇಟೆಯಲ್ಲಿ ತೊಡಗಿತ್ತು. ಅದಕ್ಕಾಗಿಯೇ ಮತದಾನದ ಪ್ರಮಾಣ ಹೆಚ್ಚಳವಾಗಿದೆ. ಮತ ಹೆಚ್ಚಳವಾದ ಮಾತ್ರಕ್ಕೆ ಗೆಲುವು ತಮ್ಮದೆಂದು ಭಾವಿಸುವುದು ಜೆಡಿಎಸ್‌ನವರ ಅತಿಯಾದ ಆತ್ಮವಿಶ್ವಾಸವಾಗಿದೆ ಎಂದು ಹೇಳುತ್ತಿದ್ದಾರೆ.

ಸ್ವಾಭಿಮಾನದ ಕಿಚ್ಚು ಪ್ರದರ್ಶನ?:ಕಳೆದ ಚುನಾವಣೆಯಲ್ಲಿ ಜೆಡಿಎಸ್ ವಿರುದ್ಧ ಸ್ವಾಭಿಮಾನ ಕಿಚ್ಚನ್ನು ಪ್ರದರ್ಶಿಸಿರುವಂತೆ ಈ ಬಾರಿ ಕುಮಾರಸ್ವಾಮಿ ವಿರುದ್ಧವೂ ಅಂತಹುದೇ ಕಿಚ್ಚನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಜನರು ಮೌನದಿಂದಲೇ ಪ್ರದರ್ಶಿಸಿರಬಹುದು. ಅದಕ್ಕಾಗಿಯೇ ದಾಖಲೆಯ ಮತದಾನ ನಡೆದಿದೆ. ಅಂದ ಮಾತ್ರಕ್ಕೆ ಅದನ್ನೇ ಜೆಡಿಎಸ್ ಗೆಲುವು ಎನ್ನಲಾಗುವುದಿಲ್ಲ. ನಮ್ಮ ಚುನಾವಣಾ ಹೋರಾಟಕ್ಕೂ ದಾಖಲೆಯ ಮತಗಳು ಹರಿದು ಬಂದಿರಬಹುದು ಎಂದು ಕೈ ಪಾಳಯದ ನಾಯಕರು ವಿಶ್ಲೇಷಿಸುತ್ತಿದ್ದಾರೆ.

ಚುನಾವಣಾ ಹೋರಾಟವನ್ನು ಪರಿಣಾಮಕಾರಿಯಾಗಿ ನಡೆಸಿಕೊಂಡು ಬಂದ ಕಾಂಗ್ರೆಸ್, ಸಮರ್ಥ ಅಭ್ಯರ್ಥಿಯನ್ನು ಕಣಕ್ಕಿಳಿಸುವಲ್ಲಿ ಎಡವಿತೇ ಎಂಬ ಮಾತುಗಳೂ ಕೇಳಿಬರುತ್ತಿವೆ. ಅಭ್ಯರ್ಥಿ ಪ್ರಬಲವಾಗಿಲ್ಲದಾಗ, ಜನಾಕರ್ಷಣೆಯಿಂದ ಕೂಡಿರದಿದ್ದಾಗ, ಅಪರಿಚಿತನಂತೆ ಕಂಡುಬಂದಾಗ ಜನಪ್ರಿಯತೆ ಇರುವ ವ್ಯಕ್ತಿಯ ಕಡೆಗೆ ಜನರು ಮುಖ ಮಾಡುವುದು ಮಾಮೂಲಾಗಿದೆ. ಹಣಬಲದೊಂದಿಗೆ ಜನಬಲವೂ ಚುನಾವಣೆಗೆ ಬಹಳ ಮುಖ್ಯವಾಗುತ್ತದೆ ಎನ್ನುವುದು ಚುನಾವಣಾ ವಿಶ್ಲೇಷಕರು ಹೇಳುತ್ತಿದ್ದಾರೆ.

ದಾಖಲೆ ಮತದಾನ ಗೆಲುವಿನ ಮಾನದಂಡವಲ್ಲ:

ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪರವಾಗಿ ಎಲ್ಲರೂ ಒಗ್ಗಟ್ಟಿನಿಂದ ಪ್ರಚಾರ ನಡೆಸಿದ್ದಾರೆ. ಸಣ್ಣ ಭಿನ್ನಮತ, ಗೊಂದಲಗಳಿಗೆ ಅವಕಾಶವಾಗದ ರೀತಿಯಲ್ಲಿ ಚುನಾವಣೆಯನ್ನು ನಡೆಸಿದ್ದೇವೆ. ಒಕ್ಕಲಿಗರ ಓಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್ ಕೈಹಿಡಿಯದಿದ್ದರೂ ಅವರಿಗಿಂತ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ, ದಲಿತರು, ಹಿಂದುಳಿದ ವರ್ಗ ಹಾಗೂ ಇತರೆ ಸಮುದಾಯಗಳ ಜನರು ಕಾಂಗ್ರೆಸ್ ಕೈಹಿಡಿದಿದ್ದಾರೆ. ನಟ ದರ್ಶನ್ ಪ್ರಚಾರದಿಂದಲೂ ಅವರ ಅಭಿಮಾನಿಗಳ ಮತಗಳು ಕಾಂಗ್ರೆಸ್ ಬುಟ್ಟಿ ಸೇರಿವೆ. ಮತದಾನ ಹೆಚ್ಚಳವಾಗಿರುವುದೇ ಜೆಡಿಎಸ್ ಗೆಲುವಿಗೆ ಮಾನದಂಡವಾಗಿ ಪರಿಗಣಿಸಲಾಗುವುದಿಲ್ಲ. ಕಾಂಗ್ರೆಸ್ ಕೂಡ ಯಾವ ಯಾವ ಕಡೆಯಿಂದ ಮತಗಳನ್ನು ಪಕ್ಷದ ಕಡೆಗೆ ಸೆಳೆಯಬಹುದೋ ಆ ಎಲ್ಲ ಕಡೆಯಿಂದಲೂ ಸೆಳೆದಿದ್ದೇವೆ. ಬಿರುಸಿನ ಪ್ರಚಾರ ನಡೆಸಿದ ಕಾರಣದಿಂದಲೇ ಮತ ಪ್ರಮಾಣ ಹೆಚ್ಚಳವಾಗಿದೆ. ಅದು ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗೂ ಅನುಕೂಲಕರ ವಾತಾವರಣ ಸೃಷ್ಟಿಸಿರುವ ಸಾಧ್ಯತೆಗಳಿವೆ ಎಂದು ಹೇಳುತ್ತಿದ್ದಾರೆ.ಇದೀಗ ಚುನಾವಣೆ ಮುಗಿದಿದೆ. ಅಭ್ಯರ್ಥಿಗಳ ಎಲ್ಲರ ಹಣೆಬರಹ ಮತಯಂತ್ರದಲ್ಲಿ ಭದ್ರವಾಗಿದೆ. ಜೂ.೪ರವರೆಗೆ ಫಲಿತಾಂಶವನ್ನು ಕಾದುನೋಡಬೇಕಿದೆ. ವಾಸ್ತವದಲ್ಲಿ ಮಂಡ್ಯ ಲೋಕಸಭಾ ಕ್ಷೇತ್ರದ ಫಲಿತಾಂಶ ಕುತೂಹಲ ಕಾಯ್ದುಕೊಂಡಿರುವಂತೆ ಕಂಡುಬರುತ್ತಿಲ್ಲ. ಅಧಿಕೃತ ಫಲಿತಾಂಶ ಹೊರಬೀಳುವುದಕ್ಕಷ್ಟೇ ಜನರು ಎದುರುನೋಡುತ್ತಿದ್ದಾರೆ.

ಮತ್ತೊಮ್ಮೆ ಮೋದಿಗಾಗಿ ಹೆಗಲುಕೊಟ್ಟ ಬಿಜೆಪಿಎಚ್.ಡಿ.ಕುಮಾರಸ್ವಾಮಿ ಹೊರತುಪಡಿಸಿ ಬೇರೆ ಯಾರೇ ಅಖಾಡ ಪ್ರವೇಶಿಸಿದ್ದರೂ ಚುನಾವಣೆ ಇಷ್ಟೊಂದು ತೀವ್ರತೆ ಪಡೆಯುತ್ತಿರಲಿಲ್ಲ ಎನ್ನುವುದು ಜೆಡಿಎಸ್‌ನವರೇ ಹೇಳುವ ಮಾತು. ಸಂಘಟನಾತ್ಮಕವಾಗಿ ನಡೆಸಿದ ಹೋರಾಟ, ಒಕ್ಕಲಿಗ ಓಟುಗಳು ಅತಿ ಹೆಚ್ಚು ಪ್ರಮಾಣದಲ್ಲಿ ಜೆಡಿಎಸ್ ಕೈಹಿಡಿದಿರುವ ವಿಶ್ವಾಸದಲ್ಲಿ ಇದ್ದಾರೆ. ಕಳೆದ ಚುನಾವಣೆಯಲ್ಲಿನ ನಿಖಿಲ್ ಕುಮಾರಸ್ವಾಮಿ ಸೋಲಿನ ಅನುಕಂಪವೂ ಈ ಬಾರಿ ಜೆಡಿಎಸ್ ಬಗ್ಗೆ ಜನರು ಒಲವು ತೋರಿದ್ದಾರೆ ಎಂಬ ಖಚಿತ ವಿಶ್ವಾಸದಲ್ಲಿ ಜೆಡಿಎಸ್‌ನವರಿದ್ದಾರೆ.ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಹುದ್ದೆಗೇರಿಸಬೇಕೆಂಬ ಉತ್ಕಟಾಕಾಂಕ್ಷೆಯಿಂದ ಬಿಜೆಪಿಯವರೂ ತೀವ್ರ ಶ್ರಮ ವಹಿಸಿದ್ದು, ಮಿತ್ರ ಪಕ್ಷಕ್ಕೆ ಹೆಚ್ಚಿನ ಬಲ ತುಂಬಿದ್ದಾರೆ. ಬಿಜೆಪಿ ಪರ ಮತಗಳು ಹೆಚ್ಚಿನ ಸಂಖ್ಯೆಯಲ್ಲಿ ಜೆಡಿಎಸ್‌ಗೆ ಹರಿದಿರುವ ಬಲವಾದ ನಂಬಿಕೆ ಜೆಡಿಎಸ್‌ನವರಲ್ಲಿದೆ. ಇವೆಲ್ಲವೂ ಕುಮಾರಸ್ವಾಮಿ ಅವರ ಗೆಲುವಿಗೆ ಶಕ್ತಿಯನ್ನು ತಂದುಕೊಟ್ಟಿವೆ. ಫಲಿತಾಂಶ ಕಣ್ಣೆದುರಿಗೇ ಇದ್ದು ಜೂ.೪ರಂದು ಅಧಿಕೃತವಾಗಿ ಘೋಷಣೆಯಾಗಬೇಕಷ್ಟೇ ಎಂದು ದೃಢವಾಗಿ ಹೇಳುತ್ತಿದ್ದಾರೆ.