ಭೂಮಿಗೆ ಪ್ಲಾಸ್ಟಿಕ್‌, ರಾಸಾಯನಿಕ ಸೇರಿ ಜೀವಸಂಕುಲಕ್ಕೆ ಮಾರಕ: ನೇರ‍್ಲಿಗಿ ಪ್ರಕಾಶ್

| Published : Apr 23 2024, 01:52 AM IST / Updated: Apr 23 2024, 10:24 AM IST

ಭೂಮಿಗೆ ಪ್ಲಾಸ್ಟಿಕ್‌, ರಾಸಾಯನಿಕ ಸೇರಿ ಜೀವಸಂಕುಲಕ್ಕೆ ಮಾರಕ: ನೇರ‍್ಲಿಗಿ ಪ್ರಕಾಶ್
Share this Article
  • FB
  • TW
  • Linkdin
  • Email

ಸಾರಾಂಶ

ನಮ್ಮ ಅತಿಯಾದ ಆಸೆಗಳಿಂದ ಭೂಮಿಯ ಮೇಲೆ ನಿರಂತರ ದಬ್ಬಾಳಿಕೆ ಮಾಡಿದ್ದರ ಪರಿಣಾಮ ಭೂಮಿಯ ತಾಪ ಹೆಚ್ಚಾಗಿ, ಸರಿಯಾದ ಸಮಯಕ್ಕೆ ಮಳೆ, ಬೆಳೆಗಳಾಗದೇ, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. 

 ದಾವಣಗೆರೆ :  ನಮ್ಮ ಅತಿಯಾದ ಆಸೆಗಳಿಂದ ಭೂಮಿಯ ಮೇಲೆ ನಿರಂತರ ದಬ್ಬಾಳಿಕೆ ಮಾಡಿದ್ದರ ಪರಿಣಾಮ ಭೂಮಿಯ ತಾಪ ಹೆಚ್ಚಾಗಿ, ಸರಿಯಾದ ಸಮಯಕ್ಕೆ ಮಳೆ, ಬೆಳೆಗಳಾಗದೇ, ರೈತರು ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಪರಿಣಾಮ ಅವರ ಮಕ್ಕಳು ಕೃಷಿಯಿಂದ ವಿಮುಖರಾಗುತ್ತಿದ್ದಾರೆ ಎಂದು ಸಾವಯವ ಕೃಷಿಕ ನೇರ‍್ಲಿಗಿ ಪ್ರಕಾಶ ಹೇಳಿದರು.

ಸೋಮವಾರ ರಾಜ್ಯ ವಿಜ್ಞಾನ ಪರಿಷತ್ತು ಮತ್ತು ಜಿಲ್ಲಾ ಬಾಲಭವನ ಸಮಿತಿ ಆಶ್ರಯದಲ್ಲಿ ಏರ್ಪಡಿಸಿದ್ದ ವಿಶ್ವ ಭೂಮಿ ದಿನ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, "ಭೂಮಿ ಉಳಿದರೆ ನಾವೆಲ್ಲ " ವಿಷಯ ಕುರಿತು ಉಪನ್ಯಾಸ ನೀಡಿ ಮಾತನಾಡಿದರು.

ರಾಸಾಯನಿಕ, ಪ್ಲಾಸ್ಟಿಕ್‌ನಂಥ ವಿಷಗಳನ್ನು ನಿತ್ಯ ಭೂಮಿಗೆ ಬೆರೆಸುತ್ತಿದ್ದೇವೆ. ಇದು ಭೂಮಿ ಮೇಲಿನ ಜೀವಿಗಳ ನಾಶಕ್ಕೆ ಕಾರಣವಾಗುತ್ತಿದೆ. ದಿನದಿಂದ ದಿನಕ್ಕೆ ಕಾಡು ಸವೆಯುತ್ತಿದ್ದು, ಅಂತರ್ಜಲದ ಮಟ್ಟ ಪ್ರಪಾತಕ್ಕೆ ಕುಸಿದಿದೆ. ಹೊಸ ಹೊಸ ರೋಗಗಳು ಜನರನ್ನು ಕಾಡುತ್ತಿವೆ. ನಾವೆಲ್ಲ ಮಾರುಕಟ್ಟೆಯಲ್ಲಿ ವಿಷ ಕೊಂಡುಕೊಳ್ಳುತ್ತಿದ್ದೇವೆ. ಆಹಾರ, ನೀರು, ಮಣ್ಣು, ಗಾಳಿ ಕಲುಷಿತಗೊಂಡು ಸಕಲ ಜೀವರಾಶಿಗಳ ಬದುಕಿಗೆ ಮಾರಕವಾಗಿದೆ ಎಂದರು.

ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವಾಧ್ಯಕ್ಷ ಡಾ. ಜೆ.ಬಿ.ರಾಜ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕೈಗಾರಿಕಾ ಕ್ರಾಂತಿಯ ನಂತರ ಇಡೀ ವಿಶ್ವ ನೆಲ, ಜಲ, ಮಾಲಿನ್ಯ ಹೆಚ್ಚಿಸಿ, ಸ್ವೇಚ್ಛೆಯ ಬದುಕನ್ನು ಸಾಗಿಸಿದ್ದರ ಪರಿಣಾಮ ಇಂದು ಅನೇಕ ಸಂಕಟಕ್ಕೆ ಸಿಲುಕಿದ್ದೇವೆ ಎಂದರು.

ಕೆಎಸ್‌ಎಸ್ ಫೌಂಡೇಷನ್ ಕಾರ್ಯನಿರ್ವಾಹಕ ನಿರ್ದೇಶಕ ಎಚ್.ಕೆ. ಬಸವರಾಜ್ ಅಧ್ಯಕ್ಷತೆ ವಹಿಸಿದ್ದರು. ವಿಶ್ವಮಾನವ ಮಂಟಪದ ಸಂಸ್ಥಾಪಕ ಆವರಗೆರೆ ರುದ್ರಮುನಿ, ಕೆಎಸ್‌ಎಸ್ ಶಿಕ್ಷಣ ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಚನ್ನಬಸಪ್ಪ ಉಪಸ್ಥಿತರಿದ್ದರು.

ಜಿಲ್ಲಾ ಕರಾವಿಪ ಕಾರ್ಯದರ್ಶಿ ಎಂ.ಗುರುಸಿದ್ಧಸ್ವಾಮಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಬಾಲಭವನದ ಕಾರ್ಯಕ್ರಮ ಸಂಯೋಜಕಿ ಎಸ್.ಬಿ. ಶಿಲ್ಪ ಸ್ವಾಗತಿಸಿದರು. ಉಪನ್ಯಾಸಕ ರುದ್ರಮುನಿ ಹಿರೇಮಠ್ ವಂದಿಸಿದರು.