ಅಪ್ರಾಪ್ತೆ ಮದುವೆಯಾಗುವೆ ಎಂದ ಆರೋಪಿ; ಫೋಕ್ಸೋ ಪ್ರಕರಣ ರದ್ದು!

| Published : May 06 2024, 01:33 AM IST / Updated: May 06 2024, 07:30 AM IST

ಸಾರಾಂಶ

ಅಪ್ರಾಪ್ತೆಯನ್ನು ಪ್ರೀತಿಸಿ ವಿವಾಹವಾದ ಹಾಗೂ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿ ಮಗುವಿನ ಜನನಕ್ಕೆ ಕಾರಣವಾದ ಪ್ರಕರಣವೊಂದರಲ್ಲಿ ಆತನ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (ಪೋಕ್ಸೋ) ಅಡಿ ದಾಖಲಾಗಿದ್ದ ಕ್ರಿಮಿನಲ್‌ ದೂರು ರದ್ದುಪಡಿಸಿದೆ.

ವೆಂಕಟೇಶ್ ಕಲಿಪಿ

  ಬೆಂಗಳೂರು :  ಅಪ್ರಾಪ್ತೆಯನ್ನು ಪ್ರೀತಿಸಿ ವಿವಾಹವಾದ ಹಾಗೂ ದೈಹಿಕ ಸಂಪರ್ಕ ಬೆಳೆಸಿ ಗರ್ಭಿಣಿಯನ್ನಾಗಿಸಿ ಮಗುವಿನ ಜನನಕ್ಕೆ ಕಾರಣವಾದ ಪ್ರಕರಣವೊಂದರಲ್ಲಿ ಸಂತ್ರಸ್ತೆ (ಅಪ್ರಾಪ್ತೆ) ವಯಸ್ಕಳಾದ ನಂತರ ಕಾನೂನುಬದ್ಧವಾಗಿ ಮದುವೆಯಾಗಿ ಪೋಷಣೆ ಮಾಡುತ್ತೇನೆಂದು ಆರೋಪಿ ನೀಡಿದ ಭರವಸೆಗೆ ಒಪ್ಪಿದ ಹೈಕೋರ್ಟ್‌, ಆತನ ವಿರುದ್ಧ ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ತಡೆ ಕಾಯ್ದೆ (ಪೋಕ್ಸೋ) ಅಡಿ ದಾಖಲಾಗಿದ್ದ ಕ್ರಿಮಿನಲ್‌ ದೂರು ರದ್ದುಪಡಿಸಿದೆ.

ಸಂತ್ರಸ್ತೆ ಹಾಗೂ ಆರೋಪಿಗಳ ಪರಸ್ಪರ ಪ್ರೀತಿಸುತ್ತಿದ್ದು, ಆರೋಪಿಯೊಂದಿಗೆ ಸಂತ್ರಸ್ತೆ ನಿಕಟ ಸಂಬಂಧ ಹೊಂದಿದ್ದಳು. ಮೇಲಾಗಿ ಆರೋಪಿ ವಿರುದ್ಧ ಸಂತ್ರಸ್ತೆ ದೂರು ನೀಡಿಲ್ಲ, ಯಾವ ಆರೋಪವೂ ಮಾಡಿಲ್ಲ. ಆರೋಪಿ ಹಾಗೂ ಸಂತ್ರಸ್ತೆ ತಂದೆ ಇಲ್ಲದಾಗಿದ್ದು, ಸಂತ್ರಸ್ತೆ ಹಾಗೂ ಆಕೆಯ ಮಗಳ ಪೋಷಣೆಯ ಏಕೈಕ ಆಧಾರ ಆರೋಪಿಯೇ ಆಗಿದ್ದಾನೆ. ಅಲ್ಲದೇ, ನ್ಯಾಯಾಲಯದಿಂದ ಹೊರಗಡೆ ಪ್ರಕರಣವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವುದಾಗಿ ಆರೋಪಿ, ಆತನ ತಾಯಿ, ಮತ್ತು ಸಂತ್ರಸ್ತೆಯ ತಾಯಿ ಭರವಸೆ ನೀಡಿರುವುದನ್ನು ಪರಿಗಣಿಸಿದ ಹೈಕೋರ್ಟ್‌ ಪ್ರಕರಣ ರದ್ದು ಮಾಡಿದೆ.

ಪೋಕ್ಸೋ ಪ್ರಕರಣದಲ್ಲಿ ಸಂತ್ರಸ್ತೆಯನ್ನೇ ಮದುವೆಯಾದರೂ ಅಥವಾ ಮದುವೆಯಾಗುವುದಾಗಿ ಆರೋಪಿ ಭರವಸೆ ನೀಡಿದ್ದರೂ ಪ್ರಕರಣ ರದ್ದುಪಡಿಸಲು ನ್ಯಾಯಾಲಯ ನಿರಾಕರಿಸಿದ ಹಲವು ನಿದರ್ಶನಗಳು ಇರುವ ನಡುವೆ ಹೈಕೋರ್ಟ್‌ ಇಂತಹ ಆದೇಶ ಮಾಡಿರುವುದು ಗಮನ ಸೆಳೆದಿದೆ. ಜತೆಗೆ, ಸಂತ್ರಸ್ತೆ ತಾಯಿ ಮತ್ತು ಆರೋಪಿಯ ತಾಯಿ ಸಹ ಆರೋಪಿಗಳಾಗಿದದ್ದು ಪ್ರಕರಣದ ಮತ್ತೊಂದು ವಿಶೇಷ.

ಪ್ರಕರಣದಲ್ಲಿ ಆರೋಪಿ ಮೇಲಿನ ಆರೋಪಗಳು ಗಂಭೀರ ಅಪರಾಧಗಳ ಸ್ವರೂಪದ್ದು. ಅವುಗಳನ್ನು ರಾಜೀ ಸಂಧಾನದ ಮೂಲ ಬಗೆಹರಿಸಿಕೊಳ್ಳಲು ಕಾನೂನಿಲ್ಲಿ ಅವಕಾಶವಿಲ್ಲ. ಆದರೆ, ಈ ಪ್ರಕರಣ ವಿಚಾರಣೆ ಬಾಕಿಯಿರುವುದರಿಂದ ತನಗೆ ಒತ್ತಡ ಉಂಟಾಗುತ್ತಿದೆ. ತಾನು ನೆಮ್ಮದಿಯಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ. ಈ ಪ್ರಕರಣ ಮುಂದುವರಿದರೆ ತನ್ನ ಜೀವನ ಕಠಿಣವಾಗಲಿದೆ ಎಂದು ಕೋರ್ಟ್‌ ಮುಂದೆ ಸಂತ್ರಸ್ತೆ ಖುದ್ದು ಹೇಳಿಕೆ ನೀಡಿದರು. ಈ ಅಂಶ ಪರಿಗಣಿಸಿದ ಹೈಕೋರ್ಟ್‌, ರಾಮಗೋಪಾಲ್‌ ಮತ್ತು ಮಧ್ಯಪ್ರದೇಶ ನಡುವಿನ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನೀಡಿದ ತೀರ್ಪು ಆಧರಿಸಿ, ಆರೋಪಿಗಳ ಮೇಲಿನ ಪ್ರಕರಣ ರದ್ದುಪಡಿಸಿದೆ.

ತಮ್ಮ ಮೇಲಿನ ಈ ಕ್ರಿಮಿನಲ್‌ ಪ್ರಕರಣ ರದ್ದುಪಡಿಸುವಂತೆ ಕೋರಿ ಆರೋಪಿ, ಆತನ ತಾಯಿ ಹಾಗೂ ಸಂತ್ರಸ್ತೆ ತಾಯಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ಇತ್ತೀಚೆಗೆ ವಿಚಾರಣೆಗೆ ಬಂದಾಗ ಆರೋಪಿಗಳ ಪರ ವಕೀಲ ಸಿ.ಎನ್‌. ರಾಜು ಹಾಜರಾಗಿ ಮೆಮೋ ಸಲ್ಲಿಸಿದರು. ಸಂತ್ರಸ್ತೆಗೆ ಈಗ 17 ವರ್ಷ 9 ತಿಂಗಳು. 18 ವರ್ಷ ತುಂಬಿದ ಕೂಡಲೇ ಆಕೆಯನ್ನು ಆರೋಪಿ ಮದುವೆಯಾಗಿ, ಪೋಷಿಸಲಿದ್ದಾರೆ. ಆದ ಕಾರಣ ಪ್ರಕರಣ ರದ್ದುಪಡಿಸಬೇಕು .ಅದಕ್ಕೆ ಸಂತ್ರಸ್ತೆಯ ಸಮ್ಮತಿ ನೀಡಿದ್ದಾರೆ ಎಂದು ತಿಳಿಸಿದರು. ವಿಚಾರಣೆಗೆ ಖುದ್ದು ಹಾಜರಿದ್ದ ಸಂತ್ರಸ್ತೆ ಪ್ರಕರಣ ರದ್ದತಿಗೆ ಕೋರಿದರು. ಅದನ್ನು ಪರಿಗಣಿಸಿದ ಹೈಕೋರ್ಟ್‌, ಆರೋಪಿಗಳ ಮೇಲಿನ ಪ್ರಕರಣ ರದ್ದುಪಡಿಸಿದೆ.

ಅಪ್ರಾಪ್ತೆಯನ್ನೇ ಪ್ರೀತಿಸಿ ಮದುವೆ!ಪ್ರಕರಣದ ಆರೋಪಿ ಮತ್ತು ಸಂತ್ರಸ್ತೆ ಮಂಡ್ಯ ಜಿಲ್ಲೆಯ ಒಂದೇ ಗ್ರಾಮದ ನಿವಾಸಿಗಳು. ಹತ್ತಿರದ ಸಂಬಂಧಿಕರಾದ ಅವರು ಪರಸ್ಪರ ಪ್ರೀತಿಸುತ್ತಿದ್ದರು. ಆರೋಪಿ ದೈಹಿಕ ಸಂಪರ್ಕ ಬೆಳೆಸಿದ ಪರಿಣಾಮ ಸಂತ್ರಸ್ತೆ ಗರ್ಭಿಣಿಯಾಗಿದ್ದರು. ಅವರು ಮದುವೆಯೂ ಆಗಿದ್ದರು. ವೈದ್ಯಕೀಯ ಪರೀಕ್ಷೆಗೆ ಆಸ್ಪತ್ರೆಗೆ ತೆರಳಿದಾಗ ಸಂತ್ರಸ್ತೆ ಅಪ್ರಾಪ್ತೆಯಾಗಿರುವ ವಿಚಾರ ತಿಳಿದ ವೈದ್ಯರು ತಿಳಿದು, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಅಧಿಕಾರಿಗೆ ಮಾಹಿತಿ ನೀಡಿದ್ದರು. 

ಅವರ ದೂರು ಆಧರಿಸಿ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದರು. ಆರೋಪಿ ವಿರುದ್ಧ ಸಂತ್ರಸ್ತೆ ದೂರು ನೀಡಿಲ್ಲ ಹಾಗೂ ಯಾವುದೇ ಆರೋಪ ಮಾಡಿರಲಿಲ್ಲ. ಮೊದಲಿಗೆ ಆರೋಪಿಯ ಹೆಸರೂ ಹೇಳಿರಲಿಲ್ಲ. ಡಿಎನ್‌ಎ ಪರೀಕ್ಷೆ ನಡೆಸುವುದಾಗಿ ಪೊಲೀಸರು ತಿಳಿಸಿದ್ದರಿಂದ ಆರೋಪಿಯ ಹೆಸರು ಬಹಿರಂಗಪಡಿಸಿದರು. 

ಇದರಿಂದ ಆರೋಪಿಯನ್ನು ಬಂಧಿಸಿದ್ದ ಪೊಲೀಸರು, ಆತನ ವಿರುದ್ಧ ಪೋಕ್ಸೋ ಕಾಯ್ದೆ ಹಾಗೂ ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ದೊಷಾರೋಪಪಟ್ಟಿ ಸಲ್ಲಿಸಿದ್ದರು. ಜೈಲು ಪಾಲಾಗಿದ್ದ ಆರೋಪಿ ಜಾಮೀನು ಪಡೆದು ಹೊರಬಂದಿದ್ದ. ಅಪ್ರಾಪ್ತ ಸಂತ್ರಸ್ತೆಯನ್ನು ಮದುವೆಯಾಗಿರುವ ವಿಚಾರವನ್ನು ಸರ್ಕಾರದ ಸಕ್ಷಮ ಅಧಿಕಾರಿಗಳಿಗೆ ತಿಳಿಸದಕ್ಕೆ ಆರೋಪಿಯ ತಾಯಿ, ಸಂತ್ರಸ್ತೆಯ ತಾಯಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಪ್ರಕರಣ ವಿಚಾರಣೆ ಹಂತದಲ್ಲಿರುವಾಗಲೇ ಸಂತ್ರಸ್ತೆ 2023ರ ಜೂ.14ರಂದು ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು.