ಸಿಇಟಿ ಎಡವಟ್ಟು: ಪ್ರಾಧಿಕಾರದ ಕಚೇರಿಗೆ ಎಬಿವಿಪಿ ಮುತ್ತಿಗೆ

| Published : Apr 23 2024, 01:52 AM IST

ಸಾರಾಂಶ

ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆಗಳಿಂದ ವಿದ್ಯಾರ್ಥಿಗಳಿಗೆ ಆಗಿರುವ ಗೊಂದಲ, ಸಮಸ್ಯೆ ಸರಿಪಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು, ಇದಕ್ಕೆ ಕಾರಣರಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಮಲ್ಲೇಶ್ವರಂನಲ್ಲಿರುವ ಪ್ರಾಧಿಕಾರದ ಕಚೇರಿ ಮುಂಭಾಗ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಕನ್ನಡಪ್ರಭ ವಾರ್ತೆ ಬೆಂಗಳೂರು

ಸಿಇಟಿಯಲ್ಲಿ ಪಠ್ಯೇತರ ಪ್ರಶ್ನೆಗಳಿಂದ ವಿದ್ಯಾರ್ಥಿಗಳಿಗೆ ಆಗಿರುವ ಗೊಂದಲ, ಸಮಸ್ಯೆ ಸರಿಪಡಿಸಲು ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು, ಇದಕ್ಕೆ ಕಾರಣರಾದ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳನ್ನು ವಜಾಗೊಳಿಸಬೇಕೆಂದು ಆಗ್ರಹಿಸಿ ಮಲ್ಲೇಶ್ವರಂನಲ್ಲಿರುವ ಪ್ರಾಧಿಕಾರದ ಕಚೇರಿ ಮುಂಭಾಗ ಸೋಮವಾರ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಪ್ರತಿಭಟನೆ ತಡೆಯಲು ಮೊದಲೇ ಬ್ಯಾರಿಕೇಟ್‌ ಹಾಕಿಕೊಂಡು ಸಜ್ಜಾಗಿದ್ದ ಪೊಲೀಸರು, ಇಲ್ಲಿ ಪ್ರತಿಭಟನೆಗೆ ಅವಕಾಶವಿಲ್ಲ ಎಂದು ವಾಪಸ್‌ ತೆರಳುವಂತೆ ಸೂಚಿಸಿದರು. ಇದಕ್ಕೆ ಬಗ್ಗದ ವಿದ್ಯಾರ್ಥಿ ಕಾರ್ಯಕರ್ತರು ಕೆಇಎ ಅಧಿಕಾರಿಗಳು, ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಕಚೇರಿಗೆ ಮುತ್ತಿಗೆ ಹಾಕಲು ಯತ್ನಿಸಿದಾಗ ಅವರನ್ನು ವಶಕ್ಕೆ ಪಡೆದು ನಂತರ ಬಿಡುಗಡೆಗೊಳಿಸಿದ ಘಟನೆ ನಡೆಯಿತು. ಇದಕ್ಕೂ ಮುನ್ನ ಪೊಲೀಸರು ಮತ್ತು ವಿದ್ಯಾರ್ಥಿ ಕಾರ್ಯಕರ್ತರ ನಡುವೆ ವಾಗ್ವಾದ, ತಳ್ಳಾಟ ಕೂಡ ನಡೆಯಿತು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಈ ಬಾರಿ ಸಿಇಟಿ ಬರೆದ 3.5 ಲಕ್ಷ ವಿದ್ಯಾರ್ಥಿಗಳು ಗೊಂದಲಕ್ಕೀಡಾಗಿದ್ದಾರೆ. 50ಕ್ಕೂ ಹೆಚ್ಚು ಪಠ್ಯೇತರ ಪ್ರಶ್ನೆಗಳನ್ನು ಪರೀಕ್ಷೆಯಲ್ಲಿ ಕೇಳಿರುವುದು ಪ್ರಾಧಿಕಾರದ ಇತಿಹಾಸದಲ್ಲೇ ಒಂದು ಕಪ್ಪು ಚುಕ್ಕೆ. ಈ ರೀತಿ ಪರೀಕ್ಷೆ ನಡೆಸುವುದಾದರೆ ಅದಕ್ಕೊಂದು ಪ್ರಾಧಿಕಾರ, ಅಧಿಕಾರಿಗಳು, ಸಿಬ್ಬಂದಿ, ಸೌಲಭ್ಯ ಏಕೆ ಬೇಕು. ತಮ್ಮಿಂದ ಆಗಿರುವ ತಪ್ಪನ್ನೂ ಒಪ್ಪಳ್ಳದೆ ಅಧಿಕಾರಿಗಳು ಉಡಾಫೆಯ ಉತ್ತರ ನೀಡುತ್ತಿದ್ದಾರೆ ಎಂದು ಪ್ರತಿಭಟನೆ ವೇಳೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.

ಹೊರ ಬರದ ಕೆಇಎ ಅಧಿಕಾರಿಗಳು:

ನೂರಾರು ವಿದ್ಯಾರ್ಥಿಗಳು ತಮ್ಮ ಕಚೇರಿ ಮುಂದೆ ಜಮಾಯಿಸಿ ಆಗಿರುವ ಗೊಂದಲ ಬಗೆಹರಿಸಲು ಆಗ್ರಹಿಸಿ ಪ್ರತಿಭಟನೆ ನಡೆಸಿದರೂ, ಕೆಇಎ ಅಧಿಕಾರಿಗಳು ಮಾತ್ರ ಹೊರಗೆ ಬಂದು ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸುವ ಅಥವಾ ಒಂದು ಸ್ಪಷ್ಟನೆ, ಸಮಾಧಾನಕರ ಉತ್ತರ ಹೇಳುವ ಸೌಜನ್ಯವನ್ನೂ ತೋರಲಿಲ್ಲ. ಇದು ವಿದ್ಯಾರ್ಥಿಗಳನ್ನು ಇನ್ನಷ್ಟು ಕೆರಳಿಸಿತು. ಇದು ಅಧಿಕಾರಿಗಳ ಸರ್ವಾಧಿಕಾರಿ ಧೋರಣೆ ಎಂದು ಕಚೇರಿಗೆ ಮುತ್ತಿಗೆಗೆ ಯತ್ನಿಸಿದರು. ಬಳಿಕ ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಎಂಟಿಸಿ ಬಸ್‌ನಲ್ಲಿ ಕೆಲವರನ್ನು ಫ್ರೀಡಂ ಪಾರ್ಕ್‌ಗೆ, ಇನ್ನು ಕೆಲವರನ್ನು ನಂದಿನಿ ಲೇಔಟ್‌ ಪೊಲೀಸ್‌ ಠಾಣೆಗೆ ಕರೆದೊಯ್ದು ಬಿಡುಗಡೆ ಮಾಡಿದರು. ಆದರೆ, ಪ್ರೀಡಂಪಾರ್ಕ್‌ನಲ್ಲೂ ಕಾರ್ಯಕರ್ತರು ಪ್ರತಿಭಟನೆಗೆ ಮುಂದಾದಾಗ ಇಲ್ಲಿ ಪ್ರತಿಭಟನೆ ನಡೆಸಬಹುದಾದರೂ ಅನುಮತಿ ಪಡೆದಿಲ್ಲ ಎಂದು ನಿರಾಕರಿಸಿ ಚುದರಿಸಿದರು.