ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ

| Published : May 06 2024, 12:30 AM IST / Updated: May 06 2024, 11:02 AM IST

ಇದು ದೇಶದ ಭವಿಷ್ಯ ನಿರ್ಧರಿಸುವ ಚುನಾವಣೆ: ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಾಳಕೊಪ್ಪ ಪಟ್ಟಣದಲ್ಲಿ ಪ್ರಚಾರ ದಿನವಾದ ಭಾನುವಾರ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ರ್‍ಯಾಲಿ ನಂತರ ಭಾಷಣ ಮಾಡಿದರು.

 ಶಿವಮೊಗ್ಗ / ಶಿರಾಳಕೊಪ್ಪ :  ಮೇ 7ರಂದು ನಡೆಯುವ ಚುನಾವಣೆ ದೇಶದ ಭವಿಷ್ಯವನ್ನು ನಿರ್ಧರಿಸುವ ಚುನಾವಣೆಯಾಗಿದ್ದು, ಕಳೆದ 10 ವರ್ಷಗಳಿಂದ ಭ್ರಷ್ಟಾಚಾರ ರಹಿತ ಆಡಳಿತ ಕೊಟ್ಟ ಮಹಾನ್ ನಾಯಕ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡುವ ಚುನಾವಣೆ ಇದಾಗಿದೆ ಎಂದು ಶಾಸಕ, ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಶಿರಾಳಕೊಪ್ಪ ಪಟ್ಟಣದಲ್ಲಿ ಚುನಾವಣಾ ಪ್ರಚಾರದ ಕೊನೆಯ ದಿನವಾದ ಭಾನುವಾರ ಬೆಳಗ್ಗೆ ಹಿರೆಕೇರೂರ ರಸ್ತೆಯ ಮೆಸ್ಕಾಂ ಕಛೇರಿಯಿಂದ ಪಟ್ಟಣದ ಪ್ರಮುಖ ರಸ್ತೆಯಲ್ಲಿ ಸಾಗಿ ಬಸ್ ನಿಲ್ದಾಣದವರೆಗೆ ನಡೆದ ರೋಡ್‌ ಶೋ ನಂತರ ಬಸ್‌ ಆವರಣದಲ್ಲಿ ನಡೆದ ಸಾವರ್ಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದ ವಿಜಯೇಂದ್ರ ಶಿವಮೊಗ್ಗ ಲೋಕ ಸಭಾ ಕ್ಷೇತ್ರದಲ್ಲಿ ಕಳೆದ 15  ವರ್ಷಗಳಿಂದ ಮಾಡಿದ ಅಭಿವೃದ್ಧಿ ಕೆಲಸವನ್ನು ಕ್ಷೇತ್ರದ ಜನತೆ ಎಂದೂ ಮರೆಯುವುದಿಲ್ಲ ಎಂದರು.

ಈ ಬಾರಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷ ಒಂದಾಗಿ ಚುನಾವಣೆ ಎದುರಿಸುತ್ತಿದ್ದು, ಕನಿಷ್ಠ 3 ಲಕ್ಷ ಅಂತರದಿಂದ ರಾಘಣ್ಣ ಗೆದ್ದು ಬರಲಿದ್ದಾರೆ. ಈಶ್ವರಪ್ಪನವರ ಹೆಸರು ಹೇಳದೇ ಕೆಲವರು ಬಿಜೆಪಿಗೆ ಪಾಠ ಕಲಿಸಲು ಹೋಗಿ ತಮ್ಮ ಡಿಪಾಜಿಟ್ ಸಹ ಉಳಿಸಿಕೊಳ್ಳಲೂ ಆಗುವುದಿಲ್ಲ ಎಂದು ಕಟಕಿಯಾಡಿದರು.

ಕಾಂಗ್ರೆಸ್‌ ಪಕ್ಷ ಹೀನಾಯ ಸ್ಥಿತಿ ತಲುಪಿದ್ದು, ಬಿಜೆಪಿ ರಾಜ್ಯದಲ್ಲಿ ಎಲ್ಲ 28 ಕ್ಷೇತ್ರ ಗೆಲ್ಲಲಿದೆ ಎಂದ ಅವರು, ಈ ಬಾರಿ ನರೇಂದ್ರ ಮೋದಿ ಅವರು ೪೦೦ ಕ್ಷೇತ್ರಗಳನ್ನು ಗೆದ್ದು, ಪ್ರಧಾನಿ ಆಗುತ್ತಾರೆ. ಕಾಂಗ್ರೆಸ್ ಪಕ್ಷ ಕೇವಲ ಈ ಬಾರಿ ೪೦ ಕ್ಷೇತ್ರದಲ್ಲಿ ಗೆದ್ದು, ಹೀನಾಯ ಸ್ಥಿತಿ ತಲುಪಲಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ಪಕ್ಷದ ಚಿತ್ರನಟಿ ತಾರಾ, ಕೆ.ರೇವಣಪ್ಪ, ಅಗಡಿ ಅಶೋಕ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಗಾಯತ್ರಿ ದೇವಿ, ಜಿಲ್ಲಾ ಮಹಿಳಾ ಘಟಕದ ಈಡಿಗ ಸಮಾಜದ ಅಧ್ಯಕ್ಷೆ ಆಶಾ ಮಂಜುನಾಥ, ಕೆಎಸ್‌ಡಿಎಲ್ ಮಾಜಿ ನಿದೇರ್ಶಕಿ ನಿವೇದಿತಾ ರಾಜು , ಸಣ್ಣ ಹನುಮಂತಪ್ಪ, ತಾಪಂ ಮಾಜಿ ಅಧ್ಯಕ್ಷ ಶಂಭು ಸೇರಿದಂತೆ ಹಲವಾರು ಪ್ರಮುಖರು ಹಾಜರಿದ್ದರು.

ಪ್ರದೀಪ್‌ ಈಶ್ವರ್‌ಗೆ ಅಭಿವೃದ್ಧಿ ಪಟ್ಟಿ ಕೊಡುವೆ: ಸಂಸದ ರಾಘವೇಂದ್ರ

ಶಿವಮೊಗ್ಗ: ಮೂರು ಬಾರಿ ಸಂಸದನಾಗಿ ಜಿಲ್ಲೆಯಲ್ಲಿ ಏನೂ ಅಭಿವೃದ್ಧಿ ಮಾಡಿದ್ದೇನೆ ಎಂಬ ಬಗ್ಗೆ ಪ್ರದೀಪ್‌ ಈಶ್ವರ್‌ ಅವರಿಗೆ ಬೇಕಾದರೆ ಪಟ್ಟಿ ಕೊಡುತ್ತೇನೆ ಎಂದು ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಸಂಸದ ಬಿ.ವೈ.ರಾಘವೇಂದ್ರ ತಿರುಗೇಟು ನೀಡಿದರು.

ಶಿವಮೊಗ್ಗದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಘವೇಂದ್ರ ಅವರು ಏನೂ ಅಭಿವೃದ್ಧಿ ಮಾಡಿದ್ದಾರೆ ಎಂದು ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ ಕೇಳಿದ್ದಾರೆ. ಅವರು ಜಿಲ್ಲೆಯಲ್ಲಿ ಒಂದೊಂದು ಹೆಜ್ಜೆ ಇಟ್ಟರೂ ರಾಘಣ್ಣನ ಕಟ್ಟೆಗಳು ಕಾಣುತ್ತವೆ. ನೀರಾವರಿ, ರಸ್ತೆ, ಚರಂಡಿ, ಸಮುದಾಯ ಭವನ, ಟವರ್‌ಗಳ ಸ್ಥಾಪನೆ ಹೀಗೆ ದೊಡ್ಡ ಪಟ್ಟಿಯನ್ನೇ ಕೊಡುತ್ತೇನೆ ಎಂದರು.

ಶಿವಮೊಗ್ಗ ಜಿಲ್ಲೆಯ ಮತದಾರರ ಹೃದಯ ವಿಶಾಲವಾಗಿದೆ. ಅದಕ್ಕೆ ತಕ್ಕಂತೆ ಬಿಜೆಪಿ ಪಕ್ಷಕ್ಕೆ ಅವರು ಮತ ಕೊಡುತ್ತಿದ್ದಾರೆ. ಮೊದಲನೇ ಚುನಾವಣೆಯಲ್ಲಿ 50,000 ಎರಡನೇ ಚುನಾವಣೆಯಲ್ಲಿ 70,000 ಮೂರನೇ ಚುನಾವಣೆಯಲ್ಲಿ ಎರಡು ಕಾಲು ಲಕ್ಷ ಅಂತರದಿಂದ ಗೆಲ್ಲಿಸಿದ್ದರು. ಈ ಬಾರಿ ಇನ್ನು ಹೆಚ್ಚಿನ ಅಂತರದಿಂದ ಗೆಲ್ಲಿಸುತ್ತಾರೆ ಎಂದು ವಿಶ್ವಾಸ ಇದೆ ಎಂದು ತಿಳಿಸಿದರು.

ಕೆಲವೆಡೆ ಚುನಾವಣಾ ಬಹಿಷ್ಕಾರ ನಡೆದಿತ್ತು. ಅವರ ಮನವೊಲಿಸುವ ಕೆಲಸ ಮಾಡಿದ್ದೇವೆ. ಈ ಬಾರಿ ಜೆಡಿಎಸ್ ನಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಕ್ಷೇತ್ರದಲ್ಲಿ ಹೆಚ್ಚಿನ ಬಲ ಬಂದಿದೆ. ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಜೆಡಿಎಸ್ ಅಮಾನತ್ತು ಮಾಡಿದೆ. ಹಾಗೆಯೇ ಕಾನೂನು ತನ್ನ ಕ್ರಮ ತೆಗೆದುಕೊಳ್ಳುತ್ತದೆ. ಪಕ್ಷೇತರ ಅಭ್ಯರ್ಥಿ ಕಣಕ್ಕಿಳಿದ ಹಿನ್ನೆಲೆ ಹಿಂದೂ ಮತದಾರರ ಕ್ರೋಢೀಕರಣ ನಡೆಯುತ್ತಿದ್ದು, ಬಿಜೆಪಿ ಅಭ್ಯರ್ಥಿಗೆ ಕೊರತೆ ಆಗದಂತೆ ಬೆಂಬಲ ಹೆಚ್ಚಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.