ಕೃಷ್ಣರಾಜಪೇಟೆಯಲ್ಲಿ ಶಾಂತಿಯುತ ಮತದಾನ

| Published : Apr 28 2024, 01:18 AM IST

ಸಾರಾಂಶ

ಶಾಸಕ ಎಚ್.ಟಿ. ಮಂಜು ಪತ್ನಿ ರಮಾ ಹಾಗೂ ಕುಟುಂಬಸ್ಥರೊಡಗೂಡಿ ಸ್ವಗ್ರಾಮ ಹರಳಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿನ ಮತಗಟ್ಟೆ ಸಂಖ್ಯೆ 137ರಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಪತ್ನಿ ದೇವಕಿ ಮತ್ತು ಪುತ್ರಿ ನೇಹಾ ಜೊತೆ ಆಗಮಿಸಿ ಮತದಾನ ಮಾಡಿದರು. ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ ತಮ್ಮ ಹುಟ್ಟೂರು ಬೂಕನಕೆರೆಯ ಮತಕೇಂದ್ರದಲ್ಲಿ ಮತದಾನ ಮಾಡಿದರು.

ಕನ್ನಡಪ್ರಭ ವಾರ್ತೆ ಕೆ.ಆರ್.ಪೇಟೆ

ಮಂಡ್ಯ ಲೋಕಸಭಾ ಕ್ಷೇತ್ರದ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಶಾಂತಿಯುತ ಮತದಾನ ನಡೆಯಿತು.

ಬೆಳಗ್ಗೆ 7 ರಿಂದ ಮತದಾನ ಆರಂಭಗೊಂಡಿತು. ಎಲ್ಲಾ ಸಿಬ್ಬಂದಿ ತಮ್ಮ ತಮ್ಮ ಮತಗಟ್ಟೆ ಕೇಂದ್ರಗಳಲ್ಲಿ ಮತಗಟ್ಟೆ ಏಜೆಂಟ್‌ಗಳ ಸಮ್ಮುಖದಲ್ಲಿ ಮತಯಂತ್ರ ಪರಿಸೀಲಿಸಿದ ನಂತರ ಮತದಾನ ಪ್ರಕ್ರಿಯೆಗೆ ಚಾಲನೆ ನೀಡಿದರು.

ತಾಲೂಕಿನ ಮಾಕವಳ್ಳಿ ಮತಗಟ್ಟೆ ಸಂಖ್ಯೆ 100ರಲ್ಲಿ ಮತಯಂತ್ರದಲ್ಲಿ ದೋಷ ಕಂಡು ಬಂದ ಕಾರಣ ನಿಗಧಿತ ಸಮಯಕ್ಕೆ ಮತದಾನ ಆರಂಭವಾಗದೇ ಅರ್ಧ ಗಂಟೆಗೂ ಹೆಚ್ಚು ಕಾಲ ತಡವಾಗಿ ಆರಂಭವಾಯಿತು. ಮತಯಂತ್ರ ದೋಷ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಚುನಾವಣಾ ಅಧಿಕಾರಿಗಳು ಮತಯಂತ್ರದ ದೋಷ ಸರಿಪಡಿಸಿ ಮತದಾನಕ್ಕೆ ಅವಕಾಶ ಮಾಡಿಕೊಟ್ಟರು.

ಮತಗಟ್ಟೆಗಳ ಹೊರಗೆ ಕಾಂಗ್ರೆಸ್ ಮತ್ತು ಜೆಡಿಎಸ್-ಬಿಜೆಪಿ ಮೈತ್ರಿ ಕೂಟದ ಕಾರ್ಯಕರ್ತರು ಶಾಮಿಯಾನ ಹಾಕಿ ಮತದಾನ ಕೇಂದ್ರಕ್ಕೆ ಬರುವವರ ಬಳಿ ಮತಯಾಚನೆ ಮಾಡುತ್ತಿದ್ದ ದೃಶ್ಯ ಕಂಡು ಬಂತು.

ಶಾಸಕರು, ಗಣ್ಯರ ಮತದಾನ:

ಶಾಸಕ ಎಚ್.ಟಿ. ಮಂಜು ಪತ್ನಿ ರಮಾ ಹಾಗೂ ಕುಟುಂಬಸ್ಥರೊಡಗೂಡಿ ಸ್ವಗ್ರಾಮ ಹರಳಹಳ್ಳಿ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೂಲ್ ಆವರಣದಲ್ಲಿನ ಮತಗಟ್ಟೆ ಸಂಖ್ಯೆ 137ರಲ್ಲಿ ಮಾಜಿ ಸಚಿವ ಕೆ.ಸಿ.ನಾರಾಯಣಗೌಡ ಪತ್ನಿ ದೇವಕಿ ಮತ್ತು ಪುತ್ರಿ ನೇಹಾ ಜೊತೆ ಆಗಮಿಸಿ ಮತದಾನ ಮಾಡಿದರು. ಕಾಂಗ್ರೆಸ್ ಮುಖಂಡ ವಿಜಯರಾಮೇಗೌಡ ತಮ್ಮ ಹುಟ್ಟೂರು ಬೂಕನಕೆರೆಯ ಮತಕೇಂದ್ರದಲ್ಲಿ ಮತದಾನ ಮಾಡಿದರು.

ಮತದಾನಕ್ಕೂ ಮುನ್ನ ಗ್ರಾಮ ದೇವತೆ ಗೋಗಾಲಮ್ಮನಿಗೆ ವಿಶೆಷ ಪೂಜೆ ಸಲ್ಲಿಸಿ ಕಾಂಗ್ರೆಸ್ ಅಭ್ಯರ್ಥಿ ಗೆಲುವಿಗಾಗಿ ಪ್ರಾರ್ಥಿಸಿದ ವಿಜಯ ರಾಮೇಗೌಡ, ಮತದಾನದ ಅನಂತರ ತಮ್ಮ ಅಭಿಮಾನಿಗಳ ಜೊತೆಗೂಡಿ ಮತದಾನ ಹಬ್ಬವನ್ನು ಸಂಭ್ರಮಿಸಿದರು.

ಮಾಜಿ ಶಾಸಕರಾದ ಕೆ.ಬಿ.ಚಂದ್ರಶೇಖರ್ ಪಟ್ಟಣದ ಕರ್ನಾಟಕ ಪಬ್ಲಿಕ್ ಸ್ಕೋಲ್‌ನ ಮತಗಟ್ಟೆಯಲ್ಲಿ, ಬಿ.ಪ್ರಕಾಶ್ ಸ್ವಗ್ರಾಮ ಬೊಮ್ಮೇನಹಳ್ಳಿಯಲ್ಲಿ ಮತ ಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಪಟ್ಟಣಕ್ಕೆ ಆಗಮಿಸಿ ಮತದಾನ ಪ್ರಕ್ರಿಯೆಯ ವೀಕ್ಷಣೆ ಮಾಡಿ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು.

ಹಿರಿಯರಿಂದ ಮತದಾನ:

ತಾಲೂಕಿನ ಬಳ್ಳೇಕೆರೆ ಗ್ರಾಮದಲ್ಲಿ ವಯೋವೃದ್ದೆ ಸಾಕಮ್ಮ (90) ತಮ್ಮ ಕುಟುಂಬಸ್ಥರ ಸಹಾಯದಿಂದ ಮತಗಟ್ಟೆ ಆಗಮಿಸಿ ಮತ ಚಲಾಯಿಸಿದರು. ಕುರುಬಹಳ್ಳಿಯಲ್ಲಿ ಶತಾಯುಷಿ ಬಸವೇಗೌಡ (105) ವೀಲ್ ಚೇರ್ ಸಹಾಯದಿಂದ ಮತ ಚಲಾಯಿಸಿದರು. ತಾಲೂಕಿನ ಅಗ್ರಹಾರಬಾಚಹಳ್ಳಿಯ ಗ್ರಾಪಂ ಮಾಜಿ ಸದಸ್ಯ ಶತಾಯುಷಿ ಸತ್ತೇಗೌಡ ಉರುಫ್ ದೊಡ್ಡೇಗೌಡ(100) ಮತದಾನ ಮಾಡಿದರು.

ಸಣ್ಣ ಪ್ರಮಾಣದ ತಳ್ಳಾಟ, ನೂಕಾಟ:

ತಾಲೂಕಿನಾದ್ಯಂತ ಶಾಂತಿಯುತ ಮತದಾನ ನಡೆದರೂ ತಾಲೂಕಿನ ಬ್ಯಾಲದಕೆರೆ ಗ್ರಾಮದಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಇಬ್ಬರು ಕಾರ್ಯಕರ್ತರ ನಡುವೆ ಸಣ್ಣ ಪ್ರಮಾಣದ ತಳ್ಳಾಟ - ನೂಕಾಟ ನಡೆಯಿತು. ಸುದ್ದಿ ತಿಳಿದ ತಕ್ಷಣವೇ ಮೀಸಲು ಪಡೆಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಸ್ಥಿತಿಯನ್ನು ತಿಳಿಗೊಳಿಸಿ ಶಾಂತಿಯುತ ಮತದಾನಕ್ಕೆ ಅನುವು ಮಾಡಿದರು.

5 ಗಂಟೆ ವೇಳೆಗೆ ಶೇ.78 ರಷ್ಟು ಮತದಾನ:

ಬೆಳಿಗ್ಗೆ 11 ಗಂಟೆ ವೇಳೆಗೆ ತಾಲೂಕಿನಾದ್ಯಂತ ಶೇ.18 ರಷ್ಟು ಮತದಾನವಾಗಿತ್ತು. ಬಿರು ಬಿಸಿಲಿನ ಕಾರಣದಿಂದ ಮಧ್ಯಾಹ್ನದ ವೇಳೆಯಲ್ಲಿ ಮಂದಗತಿಯಲ್ಲಿದ್ದ ಮತದಾನ ಸಂಜೆಯ ವೇಳೆಗೆ ಚುರುಕುಗೊಂಡಿತು. ಸಂಜೆ 5 ಗಂಟೆ ವೇಳೆಗೆ ಶೇ.78 ರಷ್ಟು ಮತದಾನವಾಗಿತ್ತು.