ಜಲಮೂಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ

| Published : Apr 28 2024, 01:18 AM IST

ಸಾರಾಂಶ

ಜಲಮೂಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಜಲವಿಲ್ಲದಿದ್ದರೆ ಸಕಲ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಜಲಮೂಲದ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಿದೆ

ಕನ್ನಡಪ್ರಭವಾರ್ತೆ ತಿಪಟೂರು

ಜಲಮೂಲ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯವಾಗಿದ್ದು ಜಲವಿಲ್ಲದಿದ್ದರೆ ಸಕಲ ಜೀವರಾಶಿಗಳು ಬದುಕಲು ಸಾಧ್ಯವಿಲ್ಲ. ಪ್ರತಿಯೊಬ್ಬರು ಜಲಮೂಲದ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕ ಸತೀಶ್ ಸುವರ್ಣ ತಿಳಿಸಿದರು. ಹೊನ್ನವಳ್ಳಿ ವಲಯದ ರಟ್ಟೇನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ವತಿಯಿಂದ ನಮ್ಮೂರು ನಮ್ಮ ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿದರು. ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗದಿಂದ ಜಿಲ್ಲೆಯಲ್ಲಿ ಒಟ್ಟು ೬೦ ಕೆರೆಗಳ ಹೂಳನ್ನು ತೆಗೆಸುವುದರ ಮೂಲಕ ರೈತಾಪಿ ವರ್ಗದವರಿಗೆ ಅನುಕೂಲ ಕಲ್ಪಿಸಿದೆ. ಮುಂದಿನ ಪೀಳಿಗೆಗೆ ಕುಡಿಯುವ ನೀರು ಉಳಿಸಲು ಈ ಕಾರ್ಯಕ್ರಮ ಸಹಕಾರಿಯಾಗಿದ್ದು ಈ ನಿಟ್ಟಿನಲ್ಲಿ ಪೂಜ್ಯರ ಪಾತ್ರ ಅವಿಸ್ಮರಣೀವಾಗಿದೆ ಎಂದರು.

ಕೆರೆ, ಕುಂಟೆ, ಕಾಲುವೆಗಳು ಸರಿಯಾಗಿದ್ದರೆ ನೀರು ಸರಾಗವಾಗಿ ಹರಿಯುತ್ತದೆ. ಹಾಗಾಗಿ ಜಲಮೂಲದ ಸಂರಕ್ಷಣೆಯನ್ನು ನಾವು ಮಾಡಬೇಕು. ನಮ್ಮ ಪೂರ್ವಜರು ನಮಗೆ ಸಮೃದ್ಧ ಕೆರೆ, ಕಟ್ಟೆಗಳನ್ನು ನೀಡಿದ್ದು ಅವುಗಳನ್ನು ಉಳಿಸಿಕೊಂಡು ಹೂಳು ತುಂಬದ ರೀತಿಯಲ್ಲಿ, ಕಸ ಕಡ್ಡಿಗಳನ್ನು ಎಸೆಯದೆ, ಗಿಡಗೆಂಟೆಗಳು ಬೆಳೆಯದಂತೆ ಸ್ವಚ್ಚವಾಗಿಟ್ಟುಕೊಳ್ಳಬೇಕು ಎಂದರು. ಕೆರೆಯನ್ನು ಸ್ವಚ್ಚ ಮಾಡಿ ಸಮಾಜಕ್ಕೆ ನೀಡಲಾಗಿದ್ದು ಗ್ರಾಮಸ್ಥರು ಕೆರೆಯನ್ನು ಯಥಾಸ್ಥಿತಿಯಲ್ಲಿ ಕಾಪಾಡಿಕೊಂಡು ಹೋಗಬೇಕು. ಈ ತಾಲೂಕಿನಲ್ಲಿ ಏಳು ಕೆರೆಗಳನ್ನು ಹೂಳೆತ್ತಿ ಕೆರೆಗಳ ಪುನಶ್ಚೇತನಗೊಳಿಸಲಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ತಾಲೂಕು ಯೋಜನಾಧಿಕಾರಿ ಕೆ.ಉದಯ್, ಕೆರೆ ಸಮಿತಿ ಅಧ್ಯಕ್ಷ ಮೋಹನ್, ತಾಲೂಕು ಕೃಷಿ ಮೇಲ್ವಿಚಾರಕ ಪ್ರಮೋದ್‌ಕುಮಾರ್, ವಲಯ ಮೇಲ್ವಿಚಾರಕ ಎ.ಎಂ ಪರಶಿವಮೂರ್ತಿ, ಸೇವಾ ಪ್ರತಿನಿಧಿ ಮಮತಾ ಸೇರಿದಂತೆ ಕೆರೆ ಸಮಿತಿ ಪದಾಧಿಕಾರಿಗಳು, ಗ್ರಾಮಸ್ಥರು, ಪಾಲುದಾರ ಬಂಧುಗಳು ಭಾಗವಹಿಸಿದ್ದರು.