ನೇಹಾ ಹತ್ಯೆ: ಸಿಐಡಿಯಿಂದ ಸ್ಥಳ ಮಹಜರು

| Published : Apr 25 2024, 01:06 AM IST / Updated: Apr 25 2024, 07:41 AM IST

ಸಾರಾಂಶ

ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿಯನ್ನು 6 ದಿನ ತಮ್ಮ ಕಸ್ಟಡಿಗೆ ಪಡೆದಿರುವ ಸಿಐಡಿ ತಂಡವು ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದ ಫಯಾಜ್‌ನನ್ನು ವಶಕ್ಕೆ ಪಡೆದು ಅಲ್ಲಿಂದ ನೇರವಾಗಿ ಅಪರಾಧ ನಡೆದ ಸ್ಥಳವಾದ ಬಿವಿಬಿ ಕಾಲೇಜ್‌ ಕ್ಯಾಂಪಸ್‌ಗೆ ಕರೆ ತಂದು ಮಹಜರು ನಡೆಸಿತು.

ಹುಬ್ಬಳ್ಳಿ:  ಇಲ್ಲಿನ ಬಿವಿಬಿ ಕಾಲೇಜ್‌ ಕ್ಯಾಂಪಸ್‌ನಲ್ಲಿ ನಡೆದ ನೇಹಾ ಹಿರೇಮಠ ಹತ್ಯೆ ಪ್ರಕರಣವನ್ನು ಕೈಗೆತ್ತಿಕೊಂಡಿರುವ ಸಿಐಡಿ ತನಿಖೆಯನ್ನು ಚುರುಕುಗೊಳಿಸಿದೆ. ಹತ್ಯೆ ಮಾಡಿದ ಆರೋಪಿ ಫಯಾಜ್‌ನನ್ನು ಧಾರವಾಡ ಕೇಂದ್ರ ಕಾರಾಗೃಹದಿಂದ ವಶಕ್ಕೆ ಪಡೆದಿರುವ ಸಿಐಡಿ ಅಧಿಕಾರಿಗಳು ಬುಧವಾರ ಕೃತ್ಯ ನಡೆದ ಸ್ಥಳಕ್ಕೆ ಕರೆತಂದು ಮಹಜರು ಮಾಡಿದರು.

ಎಸ್ಪಿ ವೆಂಕಟೇಶ್ ಹಾಗೂ ಡಿವೈಎಸ್ಪಿ ಮನೋಹರ ಪೈಕ್‌ ನೇತೃತ್ವದ ಎಂಟು ಮಂದಿಯ ತಂಡ ಪರಿಶೀಲನೆ ನಡೆಸುತ್ತಿದೆ. ಸಿಐಡಿ ಅಧಿಕಾರಿಗಳ ಜೊತೆ ಉತ್ತರ ವಲಯದ ಎಡಿಜಿಪಿ ವಿಕಾಸಕುಮಾರ ಅವರು ಸಹ ಸ್ಥಳದಲ್ಲಿದ್ದರು.

ನ್ಯಾಯಾಲಯದ ಅನುಮತಿ ಮೇರೆಗೆ ಆರೋಪಿಯನ್ನು 6 ದಿನ ತಮ್ಮ ಕಸ್ಟಡಿಗೆ ಪಡೆದಿರುವ ಸಿಐಡಿ ತಂಡವು ಧಾರವಾಡ ಕೇಂದ್ರ ಕಾರಾಗೃಹದಲ್ಲಿದ್ದ ಫಯಾಜ್‌ನನ್ನು ವಶಕ್ಕೆ ಪಡೆದು ಅಲ್ಲಿಂದ ನೇರವಾಗಿ ಅಪರಾಧ ನಡೆದ ಸ್ಥಳವಾದ ಬಿವಿಬಿ ಕಾಲೇಜ್‌ ಕ್ಯಾಂಪಸ್‌ಗೆ ಕರೆ ತಂದು ಮಹಜರು ನಡೆಸಿತು.

ಇದಕ್ಕೂ ಮೊದಲು ಕಾಲೇಜಿನ ಎಂಸಿಎ ವಿಭಾಗದ ಮುಖ್ಯಸ್ಥರ ಕೊಠಡಿಗೆ ತೆರಳಿ ಫಯಾಜ್‌ನಿಂದ ಕೊಲೆ ಮಾಹಿತಿ ಪಡೆದರು. ಕೊಲೆ ನಡೆದ ದಿನ ಆರೋಪಿ ತಂದಿದ್ದ ದ್ವಿಚಕ್ರ ವಾಹನ ಹಾಗೂ ಅವನು ಆವರಣದಲ್ಲಿ ಓಡಾಡಿದ ಸ್ಥಳಗಳ ಬಗ್ಗೆ ಮಾಹಿತಿ ಪಡೆದು, ಅದನ್ನು ಚಿತ್ರೀಕರಿಸಿಕೊಂಡರು.

ಅಂದು ಫಯಾಜ್ ಯಾವ್ಯಾವ ಸ್ನೇಹಿತರನ್ನು ಭೇಟಿಯಾಗಿದ್ದ. ಯಾವ ಸಮಯಕ್ಕೆ ಕಾಲೇಜಿನ ಆವರಣಕ್ಕೆ ಬಂದಿದ್ದ, ಯಾವ ಬೈಕ್ ತಂದಿದ್ದ, ಅವನ ಜೊತೆ ಯಾವೆಲ್ಲ ಸಾಮಗ್ರಿಗಳು ಇದ್ದವು ಎನ್ನುವ ಮಾಹಿತಿ ಕಲೆ ಹಾಕಿದರು.

ಈ ವೇಳೆ ಫಯಾಜ್ ನೇಹಾಳನ್ನು ಕೊಲೆ ಮಾಡುವ ಉದ್ದೇಶದಿಂದ ಧಾರವಾಡದಲ್ಲೇ 5 ದಿನದ ಮೊದಲೇ ಚಾಕು ಖರೀದಿ ಮಾಡಿದ್ದ. ಅದನ್ನು ಬ್ಯಾಗ್‌ನಲ್ಲಿಟ್ಟುಕೊಂಡು, ಅವಳ ಹತ್ಯೆಗೆ ಸಂಚು ರೂಪಿಸಿದ್ದ ಬಗ್ಗೆ ವಿವರಿಸಿದ್ದಾನೆ. ಏ. 18ರಂದು ನೇಹಾಳ ಬರುವಿಕೆಗಾಗಿ ಬರೋಬ್ಬರಿ ಒಂದೂವರೆ ಗಂಟೆ ಕಾಯ್ದು ನಿಂತಿದ್ದೆ. ಅವಳು ಪರೀಕ್ಷೆ ಮುಗಿಸಿಕೊಂಡು ಹೊರಬರುತ್ತಿದ್ದಂತೆ ಅವಳನ್ನು ಮಾತನಾಡಿಸುವ ನೆಪದಲ್ಲಿ ಚಾಕುವಿನಿಂದ ಇರಿದು ಕೊಲೆ ಮಾಡಿದ ದೃಷ್ಟಾಂತದ ಬಗ್ಗೆ ಸಿಐಡಿ ಅಧಿಕಾರಿಗಳಿಗೆ ಫಯಾಜ್‌ ಮಾಹಿತಿ ನೀಡಿದ್ದಾನೆ ಎಂದು ಮೂಲಗಳು ತಿಳಿಸುತ್ತವೆ.

ಭದ್ರತೆ ಬಗ್ಗೆ ವಿವರ:

ಕಾಲೇಜಿನ ಭದ್ರತೆಯ ಟೆಂಡರ್ ಪಡೆದ ಗುತ್ತಿಗೆದಾರ ಹಾಗೂ ಭದ್ರತಾ ಅಧಿಕಾರಿಗಳಿಂದಲೂ ಸಿಐಡಿ ಅಧಿಕಾರಿಗಳು ಮಾಹಿತಿ ಪಡೆದರು. ಕಾಲೇಜಿನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಿದ್ದ ಸ್ಥಳಗಳು, ಭದ್ರತಾ ಸಿಬ್ಬಂದಿ ಕರ್ತವ್ಯ ನಿರ್ವಹಿಸುವ ಸ್ಥಳಗಳ ಮಾಹಿತಿ ಪಡೆದಿದ್ದಾರೆ. ಬಿವಿಬಿ ಕಾಲೇಜ್‌ನಲ್ಲಿ ಪರಿಶೀಲನೆಯ ನಂತರ, ಸಿಐಡಿ ಅಧಿಕಾರಿಗಳು ಫಯಾಜ್‌ನನ್ನು ವಶಕ್ಕೆ ಪಡೆದ ಲಿಂಗರಾಜ ನಗರದ ಪ್ರದೇಶಕ್ಕೆ ತೆರಳಿ ಅಲ್ಲಿನ ಮಾಹಿತಿ ಕಲೆ ಹಾಕಿದರು. ತದನಂತರ ಆತನನ್ನು ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋದರೆಂದು ಮೂಲಗಳು ತಿಳಿಸಿವೆ.

ಸಿಐಡಿಯ ಇನ್ನೊಂದು ತಂಡ ಆರೋಪಿ ಊರು ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಮುನವಳ್ಳಿ ಗ್ರಾಮಕ್ಕೆ ತೆರಳಿ ಮಾಹಿತಿ ಕಲೆ ಹಾಕಿದೆ. ಫಯಾಜ್ ಬೈಕ್‌ ಹ್ಯಾಂಡಲ್ ಲಾಕ್ ಮಾಡದೆ, ಕೃತ್ಯ ಮುಗಿಸಿ ಪರಾರಿಯಾಗಲು ಯೋಜಿಸಿದ್ದ. ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ತೆರಳಲು ಸಾಧ್ಯವಾಗದಿದ್ದಾಗ ಕಾಲೇಜಿನ ಮುಖ್ಯದ್ವಾರದ ಮೂಲಕ ಪರಾರಿಯಾಗಲು ಯತ್ನಿಸಿದ್ದ. ಆ ವೇಳೆ ವಿದ್ಯಾರ್ಥಿಗಳು ಹಾಗೂ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ ಎಂದು ಪೊಲೀಸ್ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ ಎಂದು ಮೂಲಗಳು ತಿಳಿಸಿವೆ.

ಈ ವೇಳೆ ಸಿಐಡಿ ಎಡಿಜಿಪಿ ಬಿ.ಕೆ.ಸಿಂಗ್, ಎಸ್ಪಿ ವೆಂಕಟೇಶ್, ಡಿವೈಎಸ್ಪಿ ಮನೋಹರ ಪೈಕ್, ಹು-ಧಾ ಪೊಲೀಸ್ ಸಂಚಾರ ಮತ್ತು ಅಪರಾಧ ವಿಭಾಗದ ಡಿಸಿಪಿ ಸಿ.ಆರ್. ರವೀಶ, ಪೊಲೀಸ್ ಅಧಿಕಾರಿಗಳಾದ ಶ್ರೀಮಂತ ಹುಣಸಿಕಟ್ಟಿಹಾಗೂ ವಿಧಿ ವಿಜ್ಞಾನ ಪ್ರಯೋಗಾಲಯದ ಅಧಿಕಾರಿಗಳು ಸೇರಿದಂತೆ ಇತರೆ ಅಧಿಕಾರಿಗಳು ಇದ್ದರು.

ಈಗಾಗಲೇ ವಿದ್ಯಾನಗರ ಠಾಣೆ ಪೊಲೀಸರು ಶೇ. 60ರಷ್ಟು ಪ್ರಕರಣದ ತನಿಖೆ ಮಾಡಿದ್ದರು. ಸಾರ್ವಜನಿಕರ ಒತ್ತಡದ ಮೇರೆಗೆ, ಸರ್ಕಾರ ಸೋಮವಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸಿದೆ. ಇದೀಗ ಸಿಐಡಿ ಅಧಿಕಾರಿಗಳು, ಮೊದಲಿನಿಂದಲೇ ತನಿಖೆ ಶುರು ಮಾಡಿದ್ದಾರೆ.

6 ದಿನ ಸಿಐಡಿ ವಶಕ್ಕೆ:

ರಾಜ್ಯ ಸರ್ಕಾರ ಸೋಮವಾರ ಈ ಪ್ರಕರಣವನ್ನು ಸಿಐಡಿ ತನಿಖೆಗೆ ಒಪ್ಪಿಸಿದ್ದರಿಂದ, ಧಾರವಾಡ ಕೇಂದ್ರ ಕಾರಾಗೃಹದಲ್ಲಿರುವ ಆರೋಪಿ ಫಯಾಜ್‌ನನ್ನು 14 ದಿನಗಳ ಕಾಲ ತಮ್ಮ ವಶಕ್ಕೆ ನೀಡುವಂತೆ ಹುಬ್ಬಳ್ಳಿ ಜೆಎಂಎಫ್‌ಸಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಆರೋಪಿ ಫಯಾಜ್‌ನನ್ನು ಆರು ದಿನ ಸಿಐಡಿ ಅಧಿಕಾರಿಗಳ ವಶಕ್ಕೆ ನೀಡಿ ಆದೇಶ ನೀಡಿದೆ. ಬಳಿಕ ಸಿಐಡಿ ಅಧಿಕಾರಿಗಳು ಫಯಾಜ್‌ನನ್ನು ಧಾರವಾಡದ ಡಿಎಆರ್ ಮೈದಾನದ ಹತ್ತಿರ ಇರುವ ನಗರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವೈದ್ಯಕೀಯ ತಪಾಸಣೆ ಮಾಡಿ ಬಳಿಕ ಹುಬ್ಬಳ್ಳಿ ಕಡೆ ಹೊರಟರು.

ಪ್ರವೇಶದ್ವಾರ ಬಂದ್‌

ಆರೋಪಿ ಫಯಾಜ್‌ನನ್ನು ಬಿವಿಬಿ ಕ್ಯಾಂಪಸ್‌ಗೆ ಕರೆ ತರುತ್ತಿದ್ದಂತೆ ಬಿಗಿ ಪೊಲೀಸ್ ಬಂದೋಬಸ್ತ್‌ ಒದಗಿಸಲಾಗಿತ್ತು. ಈ ವೇಳೆ ಕಾಲೇಜು ಪ್ರವೇಶಿಸುವ ಮೂರು ಪ್ರವೇಶ ದ್ವಾರ ಬಂದ್ ಮಾಡಲಾಗಿತ್ತು. ಕೆಲವು ತರಗತಿ ಮುಗಿದಿದ್ದರೂ, ವಿದ್ಯಾರ್ಥಿಗಳನ್ನು ಕೊಠಡಿಯಲ್ಲೇ ಕುಳ್ಳಿರಿಸಿ ಹೊರಗೆ ಬರದಂತೆ ನಿರ್ಬಂಧಿಸಲಾಗಿತ್ತು.

ಗಲ್ಲಿಗೇರಿಸಿ.. ಗಲ್ಲಿಗೇರಿಸಿ!

ಸಿಐಡಿ ಅಧಿಕಾರಿಗಳ ತಂಡ ವಿಚಾರಣೆಗೆಂದು ಕೊಲೆ ಆರೋಪಿ ಫಯಾಜ್‌ನನ್ನು ಬಿವಿಬಿ ಕ್ಯಾಂಪಸ್‌ಗೆ ಕರೆತಂದ ಸಂದರ್ಭದಲ್ಲಿ ಎಬಿವಿಪಿ ಕಾರ್ಯಕರ್ತರು ಫಯಾಜ್ ವಿರುದ್ಧ ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಕೊಲೆ ಆರೋಪಿ ಫಯಾಜ್‌ನ್ನು ಕೂಡಲೇ ಗಲ್ಲಿಗೇರಿಸಿ, ಗಲ್ಲಿಗೇರಿಸಿ ಇಲ್ಲವೇ ಎನ್ಕೌಂಟರ್ ಮಾಡಿ ಎಂದು ಆಗ್ರಹಿಸಿದರು. ಈ ವೇಳೆ ಅಲ್ಲಿದ್ದ ವಿದ್ಯಾರ್ಥಿಗಳು ಎಬಿವಿಪಿ ಕಾರ್ಯಕರ್ತರ ಘೋಷಣೆಗೆ ಸಾಥ್ ನೀಡಿದರು. ಆಗ ಮಧ್ಯ ಪ್ರವೇಶಿಸಿದ ಪೊಲೀಸರು ಪ್ರತಿಭಟನಾಕಾರರನ್ನು ಕ್ಯಾಂಪಸ್‌ನಿಂದ ಹೊರಗೆ ಕಳುಹಿಸುವ ಮೂಲಕ ಪರಿಸ್ಥಿತಿ ನಿಯಂತ್ರಣಕ್ಕೆ ತಂದರು.