ಹಣ ಮದದಿಂದ ಕಾಂಗ್ರೆಸ್‌ಗೆ ಗೆಲ್ಲುವ ಭ್ರಮೆ: ವಿಜಯೇಂದ್ರ

| Published : May 04 2024, 01:36 AM IST / Updated: May 04 2024, 11:40 AM IST

ಸಾರಾಂಶ

ಹುಣಸಗಿ ಯುಕೆಪಿ ಕ್ಯಾಂಪಿನ ಪೋಲಿಸ್ ಠಾಣಾ ಆವರಣದಲ್ಲಿ ನಡೆದ ಬಿಜೆಪಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜೆಯೇಂದ್ರ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

 ಹುಣಸಗಿ : ಅಧಿಕಾರ ಹಾಗೂ ಹಣದ ದರ್ಪದಿಂದ ಗೆದ್ದೇ ಗೆಲ್ಲುತ್ತೇವೆ ಎಂಬ ಭ್ರಮೆ ಕಾಂಗ್ರೆಸ್‌ನದ್ದಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದರು.

ಪಟ್ಟಣದ ಯುಕೆಪಿ ಕ್ಯಾಂಪಿನ ಪೋಲಿಸ್ ಠಾಣಾ ಆವರಣದಲ್ಲಿ ಗುರುವಾರ ರಾತ್ರಿ ನಡೆದ ಬಿಜೆಪಿ ಬೃಹತ್‌ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಕೆಶಿಗೆ ಅಧಿಕಾರ ಹಾಗೂ ಹಣದ ದರ್ಪದಿಂದ ಚುನಾವಣೆಯಲ್ಲಿ ಗೆಲ್ಲಬಹುದು ಎಂಬ ಭ್ರಮೆ ಉಂಟಾಗಿದ್ದು, ಈ ಭ್ರಮೆ ನುಚ್ಚು ನೂರಾಗಲಿದೆ ಎಂದರು.

ಮೊದಲನೇ ಹಂತದಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಗ್ರಾಮೀಣ ಲೋಕಸಭೆ ಕ್ಷೇತ್ರದಲ್ಲಿ ಅರ್ಭಟ ಮಾಡುತ್ತಿರುವ ಡಿ.ಕೆ.ಶಿವಕುಮಾರ ಅವರನ್ನು ಪುಡಿ ಪುಡಿ ಮಾಡಲು ಅಲ್ಲಿನ ಮತದಾರರು ಉತ್ಸಾಹ ವ್ಯಕ್ತಪಡಿಸಿದ್ದಾರೆ. ಜೂ.4ರಂದು ಮತಎಣಿಕೆ ಮಾಡಿದಾಗ ಎಲ್ಲ ತಿಳಿಯಲಿದೆ ಎಂದ ಅವರು, ಡಿಕೆಶಿ ಅವರ ಭದ್ರಕೋಟೆ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಕಾಂಗ್ರೆಸ್ ಛಿದ್ರಛಿದ್ರವಾಗಿ ಕಮಲದ ಹೂ ಅರಳಿರುತ್ತದೆ ಎಂದರು.

ಸುರಪುರ ವಿಧಾನಸಭೆ ಉಪ ಚುನಾವಣೆಯಲ್ಲಿ ಮಾಜಿ ಸಚಿವ ರಾಜೂಗೌಡರನ್ನು ಗೆಲ್ಲಿಸಲು ಯಡಿಯೂರಪ್ಪ ಅವರು ಸ್ವತಃ ನನಗೆ ಕಳುಹಿಸಿ ಕೊಟ್ಟಿದ್ದಾರೆ. ಸುರಪುರ ಮತಕ್ಷೇತ್ರದ ಜನರಿಗೆ ಎರಡು ಬೆಳೆಗಳಿಗೆ ನೀರು ಬೇಕಾಗಿದೆ. ಈ ಭಾಗದ ರೈತರು ಹೋರಾಟ ಮಾಡಿದರೂ ರಾಜ್ಯ ಕಾಂಗ್ರೆಸ್ ಸರಕಾರ ನೀರು ಬಿಡುವಲ್ಲಿ ವಿಫಲಾಗಿದೆ ಎಂದು ವಿಜಯೇಂದ್ರ ಟೀಕಿಸಿದರು.

ಯಡಿಯೂರಪ್ಪ ಮುಖ್ಯಮಂತ್ರಿ ಇದ್ದ ಸಂದರ್ಭದಲ್ಲಿ ರೈತರು ತಮ್ಮ ಜಮೀನುಗಳಿಗೆ ಟ್ರಾನ್ಸ್‌ಫಾರ್ಮರ್ ಹಾಕಿಸಿ ವಿದ್ಯುತ್‌ ಸಂಪರ್ಕ ಪಡೆಯಲು 25 ಸಾವಿರ ಕಟ್ಟಬೇಕಾಗಿತ್ತು. ಆದರೆ, ರೈತ ವಿರೋಧಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದು ರೈತರು ಜಮೀನುಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು 2 ಲಕ್ಷಕ್ಕೂ ಅಧಿಕ ಹಣ ಪಾವತಿಸುವ ಹಾಗೆ ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ಸಂದರ್ಭದಲ್ಲಿ ದಲಿತರ ಕಲ್ಯಾಣಕ್ಕಾಗಿ 25 ಸಾವಿರ ಕೋಟಿ ಅನುದಾನ ಮೀಸಲಿಟ್ಟಿದ್ದರು. ಆದರೆ, ಈಗ ಗ್ಯಾರಂಟಿಗೆ ಹಣದ ಕೊರತೆಯಿಂದಾಗಿ ದಲಿತರಿಗೆ ಮೀಸಲಿಟ್ಟ ಹಣ ದುರ್ಬಳಕೆ ಮಾಡಿಕೊಳ್ಳುತ್ತಿರುವದು ಎಷ್ಟರ ಮಟ್ಟಿಗೆ ಸರಿಯಿದೆ ಎಂದು ಪ್ರಶ್ನಿಸಿದರು.

ಮಾಜಿ ಸಚಿವ ಹಾಗೂ ಬಿಜೆಪಿ ಅಭ್ಯರ್ಥಿ ರಾಜೂಗೌಡ ಮಾತನಾಡಿ, ಬಸವ ಸಾಗರ ಜಲಾಶಯ ನಿರ್ಮಾಣವಾಗಿನಿಂದಲೂ ಮೊದಲನೇ ಬೆಳೆಗೆ ಯಾವತ್ತು ವಾರಬಂದಿಯಾಗಿಲ್ಲ. ಆದರೆ, ಎರಡನೇ ಬೆಳೆಗೆ ನೀರು ಸಂಪೂರ್ಣವಾಗಿ ನೀರು ಬಂದ್ ಮಾಡಿ ರೈತರನ್ನು ಮೂಲೆಗುಂಪು ಮಾಡಲು ಕಾಂಗ್ರೆಸ್ ಸರಕಾರ ನಿಂತಿದೆ. ನಾನು ಗೆದ್ದರೆ ಗುದ್ದಿ ರೈತರಿಗೆ ನೀರು ತರುತ್ತೇನೆ. ಡಿಸಿಎಂ ಡಿ.ಕೆ.ಶಿವಕುಮಾರ ಮಂತ್ರಿ ಇದ್ದಾಗಲೇ ಕ್ಷೇತ್ರಕ್ಕೆ ನೀರು ಬಿಡಿಸಿದ್ದೇನೆ. ಡಿಕೆಶಿ ಮರೆತಿರಬಹುದು, ಆದರೆ ನಾನು ಮಾತ್ರ ಮರೆತಿಲ್ಲ. ನಿನ್ನ ಅಧಿಕಾರ ಶಾಶ್ವತವಲ್ಲ. ಅದು ಆಸ್ತಿಯೂ ಅಲ್ಲ. ಯಾವಗಲೂ ರೈತರ ಪರವಾಗಿಯೇ ಮಾತನಾಡಬೇಕೇ ಹೊರತು ವಿರುದ್ಧ ಮಾತನಾಡಿದರೆ ನಾನು ಹೆದರುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.

ದೇವತಕಲ್‌ ಗ್ರಾಮಕ್ಕೆ ಉಪಮುಖ್ಯಂತ್ರಿ ಡಿ.ಕೆ.ಶಿವಕುಮಾರ ಆಗಮಿಸಿ ಜೋರಾಗಿ ಮಾತನಾಡಿದರೆ ರಾಜೂಗೌಡ ಅಂಜುವದಿಲ್ಲ. ರಾಜೂಗೌಡನನ್ನು ಪ್ರೀತಿಯಿಂದ ಗೆಲ್ಲಬೇಕು ಹೊರತು ಧಮ್ಕಿ ಹಾಕಿದರೆ ಹೆದರುವ ಮಾತೇ ಇಲ್ಲವೆಂದು ಟಾಂಗ್ ನೀಡಿದರು.

ರಾಜ್ಯದ ಎಲ್ಲಾ ರೈತರನ್ನು ಒಂದೇ ದೃಷ್ಟಿಯಿಂದ ನೋಡುವುದು ಬಿಟ್ಟು ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರವಿದೆ, ನೀರಾವರಿ ಸಚಿವ ನಾನಿದ್ದೇನೆ ಹೇಗೆ ನೀರು ಬಿಡಿಸಿಕೊಂಡು ಹೋಗುತ್ತೀರಿ ಎಂದು ಕ್ಷೇತ್ರದ ರೈತರಿಗೆ ಪ್ರಶ್ನೆ ಮಾಡುವ ನಿಮಗೆ ಲೋಕಸಭೆ ಹಾಗೂ ವಿಧಾನಸಭೆ ಉಪ ಚುನಾವವಣೆಯಲ್ಲಿ ಜನರು ತಕ್ಕ ಪಾಠ ಕಲಿಸಲಿದ್ದಾರೆ ಎಂದು ರಾಜೂಗೌಡ ವಾಗ್ದಾಳಿ ನಡೆಸಿದರು.

ರಾಯಚೂರು ಲೋಕಸಭಾ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಪಿ.ರಾಜೀವ ಸೇರಿದಂತೆ ಇನ್ನಿತರರು ಮಾತನಾಡಿದರು.

ಹಣಮಂತನಾಯಕ (ಬಬ್ಲೂಗೌಡ), ರಾಜಾ ಜಿತೇಂದ್ರನಾಯಕ, ರಾಜಾ ಕುಶಾಲನಾಯಕ ಮುಂತಾದವರಿದ್ದರು.