ಬಿಜೆಪಿ ಸೋಲಿಸಲು ಜನವಾದಿ ಮಹಿಳಾ ಸಂಘಟನೆ ಕರೆ

| Published : Apr 27 2024, 01:17 AM IST

ಸಾರಾಂಶ

ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ. ಎಲ್ಲ ಕುಟುಂಬಗಳ ಸಮಗ್ರ ಯೋಗಕ್ಷೇಮಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಸಂಘಟನೆಯ ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಚಂದ್ರಕುಮಾರಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಳ್ಳಾರಿ

ಬಳ್ಳಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಸೋಲಿಸುವಂತೆ ಕರೆ ನೀಡಲಾಗಿದೆ ಎಂದು ಜನವಾದಿ ಮಹಿಳಾ ಸಂಘಟನೆಯ (ಜೆಎಂಎಸ್) ರಾಜ್ಯ ಜಂಟಿ ಕಾರ್ಯದರ್ಶಿ ಜೆ.ಚಂದ್ರಕುಮಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರದ ಬಿಜೆಪಿ ಸರ್ಕಾರ ಮಹಿಳಾ ಸಮುದಾಯವನ್ನು ಸಂಪೂರ್ಣ ಕಡೆಗಣಿಸಿದೆ. ಎಲ್ಲ ಕುಟುಂಬಗಳ ಸಮಗ್ರ ಯೋಗಕ್ಷೇಮಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಮಹಿಳೆಯರ ಆರೋಗ್ಯ ಮತ್ತು ಘನತೆಯ ಬದುಕಿನ ಉನ್ನತಿಗೆ ಶ್ರಮಿಸುತ್ತೇವೆ ಎಂದು ಹೇಳಿದ್ದರು. ಆದರೆ, ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ಬೆಳವಣಿಗೆ ಕುಂಠಿತವಾಗಿರುವುದು ರಾಷ್ಟ್ರೀಯ ಆರೋಗ್ಯ ಕುಟುಂಬ ಸಮೀಕ್ಷೆಯಿಂದ ಗೊತ್ತಾಗಿದೆ. ಉದ್ಯೋಗ ಸೃಷ್ಟಿಯ ಭರವಸೆ ಹುಸಿಯಾಗಿದೆ. ಕಳೆದ ಒಂದು ದಶಕದ ಅವಧಿಯಲ್ಲಿ ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿವೆ. ಇದರಿಂದ ಬಡ ಹಾಗೂ ಮಧ್ಯಮ ಕುಟುಂಬಗಳು ತೀವ್ರ ತತ್ತರಿಸಿ ಹೋಗಿವೆ. ಬೆಲೆಗಳ ನಿಯಂತ್ರಣಕ್ಕೆ ತರುವುದಾಗಿ ಹೇಳಿದ್ದ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಬಿಜೆಪಿಯನ್ನು ಈ ಬಾರಿ ಸೋಲಿಸಬೇಕು ಎಂದು ಜನವಾದಿ ಮಹಿಳಾ ಸಂಘಟನೆ ಕರೆ ನೀಡಿದೆ ಎಂದರು.

ಸಂಘಟನೆಯ ಜಿಲ್ಲಾಧ್ಯಕ್ಷೆ ತರಂಗಿಣಿ, ವಿನೋದಾಕುಮಾರಿ, ಲಕ್ಷ್ಮೀದೇವಿ, ಅಂಬಿಕಾ, ರುದ್ರಮ್ಮ, ಮಂಗಮ್ಮ, ಈರಮ್ಮ ಸುದ್ದಿಗೋಷ್ಠಿಯಲ್ಲಿದ್ದರು.

ಇದೇ ವೇಳೆ ಭಾರತದ ಮಹಿಳೆಯರ ಸ್ಥಿತಿ-ಗತಿಗಳು ಕುರಿತು ಕಿರು ಹೊತ್ತಿಗೆಯನ್ನು ಸಂಘಟನೆಯ ಮುಖಂಡರು ಬಿಡುಗಡೆಗೊಳಿಸಿದರು.