ದಕ್ಷಿಣ ಕನ್ನಡ: ಸುಡು ಬಿಸಿಲಲ್ಲಿ ಮತದಾನ ಥಂಡಾ!

| Published : Apr 27 2024, 01:25 AM IST

ದಕ್ಷಿಣ ಕನ್ನಡ: ಸುಡು ಬಿಸಿಲಲ್ಲಿ ಮತದಾನ ಥಂಡಾ!
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಲೇರಿ ಬರುತ್ತಿದ್ದಂತೆ 10 ಗಂಟೆಯ ಬಳಿಕ ಮತಗಟ್ಟೆಗಳಿಗೆ ಆಗಮಿಸುವ ಮತದಾರರ ಸಂಖ್ಯೆ ದಿಢೀರನೆ ಕುಸಿಯತೊಡಗಿತ್ತು. ಮಧ್ಯಾಹ್ನ 12ರಿಂದ 1 ಗಂಟೆಯ ನಡುವೆ ಹೆಚ್ಚಿನ ಮತಗಟ್ಟೆಗಳಲ್ಲಿ ಜನರೇ ಇರಲಿಲ್ಲ.

ಕನ್ನಡಪ್ರಭ ವಾರ್ತೆ ಮಂಗಳೂರು

ಬೇಸಗೆ ತಾಂಡವವಾಡುತ್ತಿರುವ ದಕ್ಷಿಣ ಕನ್ನಡದಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆಗೆ ಬಿರುಸಿನ ಮತದಾನವಾಗಿದ್ದರೆ, ಉರಿ ಬಿಸಿಲಿನ ಮಧ್ಯಾಹ್ನದ ಹೊತ್ತು ಬಹುತೇಕ ಮತಗಟ್ಟೆಗಳು ಖಾಲಿ ಹೊಡೆಯುತ್ತಿದ್ದವು!

ಹೌದು. ಮತದಾನ ದಿನವಾದ ಶುಕ್ರವಾರ ದಕ್ಷಿಣ ಕನ್ನಡದ ಹಲವೆಡೆ ಇತ್ತೀಚಿನ ದಿನಗಳಲ್ಲೇ ಗರಿಷ್ಠ 38 ಡಿಗ್ರಿ ಸೆಲ್ಸಿಯಸ್‌ ತಾಪಮಾನ ದಾಖಲಾಗಿತ್ತು. ಬಿಸಿಲೇರಿ ಬರುತ್ತಿದ್ದಂತೆ 10 ಗಂಟೆಯ ಬಳಿಕ ಮತಗಟ್ಟೆಗಳಿಗೆ ಆಗಮಿಸುವ ಮತದಾರರ ಸಂಖ್ಯೆ ದಿಢೀರನೆ ಕುಸಿಯತೊಡಗಿತ್ತು. ಮಧ್ಯಾಹ್ನ 12ರಿಂದ 1 ಗಂಟೆಯ ನಡುವೆ ಹೆಚ್ಚಿನ ಮತಗಟ್ಟೆಗಳಲ್ಲಿ ಜನರೇ ಇರಲಿಲ್ಲ.ಬೆಳಗ್ಗೆ, ಸಂಜೆ ಹೌಸ್‌ ಫುಲ್‌:

ಮಂಗಳೂರು ಸೇರಿದಂತೆ ಬಂಟ್ವಾಳ, ಪುತ್ತೂರು, ಬೆಳ್ತಂಗಡಿ, ಕಡಬ, ಸುಳ್ಯ ತಾಲೂಕುಗಳಲ್ಲಿ ಬಿಸಿಲಿಗೆ ಕಂಗೆಟ್ಟ ಮತದಾರರು ಮತದಾನ ಮಾಡಲು ಬೆಳಗ್ಗೆ ಮತ್ತು ಸಂಜೆ ಹೊತ್ತನ್ನೇ ಆಯ್ಕೆ ಮಾಡಿಕೊಂಡಿದ್ದರು. ಹೆಚ್ಚಿನ ಮತಗಟ್ಟೆಗಳಲ್ಲಿ ಬೆಳಗ್ಗೆ ಏಳರ ಮೊದಲೇ ಕ್ಯೂ ಕಂಡುಬಂದಿತ್ತು. ಮಂಗಳೂರು ನಗರದ ಕದ್ರಿ ಶಾಲೆಯ ಮತಗಟ್ಟೆಯಲ್ಲಿ 8ರ ವೇಳೆಗೆ ನಗರವಾಸಿಗಳು ಮಾರುದ್ದದ ಸರತಿ ಸಾಲಿನಲ್ಲಿ ನಿಂತಿದ್ದರು.

ಜಿಲ್ಲೆಯಲ್ಲಿ ಬೆಳಗ್ಗೆ 11 ಗಂಟೆಯವರೆಗೆ ಒಟ್ಟಾರೆ ಶೇ.30.96ರಷ್ಟು ಮತದಾನವಾಗಿದ್ದರೆ, 1 ಗಂಟೆಯ ವೇಳೆಗೆ ಶೇ.48.1 ಮತದಾನವಾಗಿತ್ತು. ಮಧ್ಯಾಹ್ನ 3 ಗಂಟೆಯ ಬಳಿಕ ಎಲ್ಲೆಡೆ ಬಿರುಸಿನ ಮತದಾನ ನಡೆಯಿತು. ಮತ್ತೆ ಸರತಿ ಸಾಲು ಕಂಡುಬಂದಿತ್ತು.

ಹೆಚ್ಚಿನ ಮತಗಟ್ಟೆಗಳಲ್ಲಿ ಬಿಸಿಲಿನ ಬೇಗೆ ನೀಗಿಸಲು ಶ್ಯಾಮಿಯಾನ, ಕೂರಲು ಬೆಂಚು, ಕುರ್ಚಿಗಳ ವ್ಯವಸ್ಥೆ, ಹೀಟ್ ಸ್ಟ್ರೋಕ್ ಸೇರಿದಂತೆ ಮತದಾನಕ್ಕೆ ಆಗಮಿಸುವ ಮತದಾರರಿಗೆ ಆರೋಗ್ಯ ಸಮಸ್ಯೆ ಕಂಡು ಬಂದರೆ ತುರ್ತು ಚಿಕಿತ್ಸೆಗೆ ಪ್ರಥಮ ಚಿಕಿತ್ಸಾ ವ್ಯವಸ್ಥೆ, ಕುಡಿಯುವ ನೀರು, ವೀಲ್ ಚೇರ್ ಇತ್ಯಾದಿ ವ್ಯವಸ್ಥೆಗಳನ್ನು ಅಚ್ಚುಕಟ್ಟಾಗಿ ಮಾಡಲಾಗಿತ್ತು.

ಪುತ್ತೂರು ಸುಧಾನ ಶಾಲೆಯ ಮತಗಟ್ಟೆಯಲ್ಲಿ ಮತದಾನ ಆರಂಭವಾಗುತ್ತಿದ್ದಂತೆ ಇವಿಎಂನಲ್ಲಿ ತಾಂತ್ರಿಕ ದೋಷ ಕಂಡು ಬಂದಿದ್ದು, ಇದರಿಂದ 20 ನಿಮಿಷ ಪ್ರಕ್ರಿಯೆ ವಿಳಂಬವಾಯಿತು.

ಹಿಂದಿನ ಚುನಾವಣೆಗಳಲ್ಲಿ ಅಶಕ್ತ ಮತದಾರರನ್ನು ಹೊತ್ತು ತರುವುದು ಇತ್ಯಾದಿ ದೃಶ್ಯ ಸರ್ವೇ ಸಾಮಾನ್ಯವಾಗಿತ್ತು. ಆದರೆ ಈ ಬಾರಿ ಈ ಬಾರಿ 85 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು, ವಿಶೇಷ ಚೇತನರಿಗೆ ಮನೆಯಲ್ಲೇ ಮತದಾನಕ್ಕೆ ಅವಕಾಶ ಕಲ್ಪಿಸಿದ್ದರಿಂದ ಇಂಥ ಸನ್ನಿವೇಶಗಳು ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಕಾಣಿಸಿದವು.ಪಕ್ಷಗಳ ಓಲೈಕೆ:

ಪ್ರತಿ ಬೂತ್‌ ಹೊರಗೆ ಪಕ್ಷಗಳ ಕೌಂಟರ್‌ಗಳಿದ್ದರೂ, ಹಿಂದಿನ ಚುನಾವಣೆಗಳಿಗೆ ಹೋಲಿಸಿದರೆ ಈ ಲೋಕಸಭಾ ಚುನಾವಣೆಯಲ್ಲಿ ಕಾರ್ಯಕರ್ತರ ಗೌಜಿ ಗದ್ದಲ ಅಷ್ಟಾಗಿರಲಿಲ್ಲ. ಆದರೆ ಮತದಾರರ ಓಲೈಕೆ ಮಾಡುವುದು ನಡೆದೇ ಇತ್ತು. ಮತದಾರರನ್ನು ಪಕ್ಷಗಳು ವಾಹನಗಳಲ್ಲಿ ಕರೆದುಕೊಂಡು ಬರುವುದು ನಿಷಿದ್ಧವಾಗಿದ್ದರೂ ಎಲ್ಲೆಡೆ ಪಕ್ಷಗಳ ಕಾರ್ಯಕರ್ತರು ವಾಹನಗಳಲ್ಲಿ ಜನರನ್ನು ಕರೆತಂದು ಬಿಡುತ್ತಿರುವ ದೃಶ್ಯ ಕಂಡುಬಂದಿದೆ.ನಕ್ಸಲರು ಬಂದ ಪ್ರದೇಶದಲ್ಲಿ ಅತ್ಯಧಿಕ ಮತದಾನ!

ಕೆಲ ದಿನಗಳ ಹಿಂದೆ ನಕ್ಸಲರು ಕಾಣಿಸಿಕೊಂಡಿದ್ದ ಸುಳ್ಯದ ಬಿಳಿನೆಲೆ ಪ್ರದೇಶದ ಮತಗಟ್ಟೆಗಳಲ್ಲಿ ಅತ್ಯಧಿಕ ಮತದಾನ ನಡೆದಿದೆ. ಬಿಳಿನೆಲೆ ಕೈಕಂಬದ 2 ಮತಗಟ್ಟೆಗಳಲ್ಲಿ ಮಧ್ಯಾಹ್ನ 3 ಗಂಟೆ ವೇಳೆಗೆ ಒಂದರಲ್ಲಿ ಶೇ.75 ಮತದಾನವಾಗಿದ್ದರೆ, ಇನ್ನೊಂದರಲ್ಲಿ ಶೇ.65 ಮತದಾನವಾಗಿತ್ತು. ಅದೇ ರೀತಿ, ಬಿಳಿನೆಲೆಯ ಗೋಪಾಲಕೃಷ್ಣ ಶಾಲೆಯ ಪಿಂಕ್‌ ಮತಗಟ್ಟೆಯಲ್ಲಿ ಸಂಜೆ 4ರ ವೇಳೆಗೆ ಶೇ.75ಕ್ಕೂ ಅಧಿಕ ಮತದಾನವಾಗಿತ್ತು.ನಕ್ಸಲ್‌ ಸಮಸ್ಯೆಯ ಕಾರಣಕ್ಕೆ ಸೂಕ್ಷ್ಮ ಮತಗಟ್ಟೆಗಳಾಗಿದ್ದ ಬಿಳಿನೆಲೆ, ಕೊಂಬಾರು, ಕೈಕಂಬದ ಒಟ್ಟು 13 ಸೂಕ್ಷ್ಮ ಮತಗಟ್ಟೆಗಳಲ್ಲಿ ಮತದಾನ ಪ್ರಮಾಣ ಉಳಿದೆಲ್ಲ ಕಡೆಗಳಿಗಿಂತ ಬಿರುಸಾಗಿತ್ತು. ಈ ಮತಗಟ್ಟೆಗಳಲ್ಲಿ ರೈಲ್ವೆ ವಿಶೇಷ ರಕ್ಷಣಾ ಪಡೆ ಕಮಾಂಡೋಗಳನ್ನು ಭದ್ರತೆಗೆ ನಿಯೋಜಿಸಲಾಗಿತ್ತು. ಪೊಲೀಸರೂ ಭದ್ರತೆ ಜವಾಬ್ದಾರಿ ವಹಿಸಿಕೊಂಡಿದ್ದರು.ಬಡ ಮಕ್ಕಳಿಗೆ ಬೇಕು ಸಹಾಯ

ಮೊದಲ ಬಾರಿ ಮತದಾನ ಮಾಡುತ್ತಿರುವುದಕ್ಕೆ ಹೆಮ್ಮೆ ಅನಿಸುತ್ತಿದೆ. ರಾಜ್ಯದಲ್ಲಿ ನಮ್ಮಂತೆ ಬಹಳಷ್ಟು ಬಡ ವಿದ್ಯಾರ್ಥಿಗಳು ಕಡು ಕಷ್ಟದಲ್ಲಿ ಕಲಿಯುತ್ತಿದ್ದಾರೆ. ಇಂಥ ವಿದ್ಯಾರ್ಥಿಗಳಿಗೆ ಸರ್ಕಾರ ಸಹಾಯ ಮಾಡಬೇಕು ಎನ್ನುವುದು ನನ್ನ ಬಯಕೆ ಎಂದು ಪ್ರಥಮ ಬಾರಿ ಓಟಿಗೆ ಮತಗಟ್ಟೆಗೆ ಆಗಮಿಸಿದ ಹೃತ್ವಿಕ್‌ ಅಭಿಪ್ರಾಯಪಟ್ಟರು.