‘ಅನನ್ಯ ಮತಗಟ್ಟೆ’ ಬಾಂಜಾರುಮಲೆಯಲ್ಲಿ ಶೇ. 100 ಮತದಾನ

| Published : Apr 27 2024, 01:25 AM IST

ಸಾರಾಂಶ

ಮತಗಟ್ಟೆ ಸಂಖ್ಯೆ 86 ರ ಸಮುದಾಯ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ. ಈ ಬಾರಿ ಅನನ್ಯ ಮತಗಟ್ಟೆಯಾಗಿ ಘೋಷಿಸಲಾಗಿತ್ತು.

ಬೆಳ್ತಂಗಡಿ: ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಮೊದಲ ಬಾರಿಗೆ ಎಂಬಂತೆ ಶೇ.100 ಮತದಾನ ಮಾಡುವ ಮೂಲಕ ನಕ್ಸಲ್ ಕೇಂದ್ರಿತ ಬಾಂಜಾರುಮಲೆ ದಾಖಲೆ ‌ನಿರ್ಮಿಸಿದೆ.ಮತಗಟ್ಟೆ ಸಂಖ್ಯೆ 86 ರ ಸಮುದಾಯ ಭವನದಲ್ಲಿ ಮತದಾನಕ್ಕೆ ಅವಕಾಶ ಕಲ್ಪಿಸಲಾಗಿತ್ತು. ಇಲ್ಲಿ 51 ಮಹಿಳೆಯರು, 60 ಪುರುಷರು ಸೇರಿ ಒಟ್ಟು 111 ಮತದಾರರಿದ್ದಾರೆ. ಈ ಬಾರಿ ಅನನ್ಯ ಮತಗಟ್ಟೆಯಾಗಿ ಘೋಷಿಸಲಾಗಿತ್ತು.

ಕಳೆದ ಬಾರಿ 2019ರಲ್ಲಿ ಇಲ್ಲಿ ಶೇ.99 ಮತದಾನವಾಗಿತ್ತು. ಈ ಬಾರಿ ಜಿಲ್ಲಾ ಸ್ವೀಪ್ ಸಮಿತಿ ಮಾರ್ಗದರ್ಶನದಂತೆ ಬೆಳ್ತಂಗಡಿ ತಾಲೂಕಿನ ಸ್ವೀಪ್‌ ಸಮಿತಿ ಅಧ್ಯಕ್ಷ ವೈಜಣ್ಣ ಹಾಗೂ ತಂಡ ಶೇ.100 ಮತದಾನ ಮಾಡುವಂತೆ ಊರ ಜನರಲ್ಲಿ ಜಾಗೃತಿ ಮೂಡಿಸಿತ್ತು. ಇದರ ಪರಿಣಾಮ ನೆಟ್ ವರ್ಕ್, ರಸ್ತೆ, ಮೂಲಸೌಕರ್ಯವಿಲ್ಲದ ಪುಟ್ಟ ಉರೊಂದು ಜಿಲ್ಲೆಗೆ ಮಾದರಿಯಾಗಿ ಮೂಡಿ ಬಂದಿದೆ.‌ ಬಾಂಜಾರಮಲೆ ಮತಗಟ್ಟೆಯಲ್ಲಿ ಮತಚಲಾಯಿಸಿದ ಕೊನೆಯ ಮತದಾರರನ್ನು ಅಭಿನಂದಸಲಾಯಿತು.

ಇನ್ನುಳಿದಂತೆ ತಾಲೂಕಿನ ವ್ಯಾಪ್ತಿಗೆ ಒಳಪಟ್ಟರೂ 120 ಕಿ.ಮೀ. ದೂರ ಸುತ್ತಿ ಬರಬೇಕಾದ ಮಲವಂತಿಗೆ ಗ್ರಾಮದ ಎಳನೀರು ಮತಗಟ್ಟೆ ಸಂಖ್ಯೆ 15 ಅಂಗನವಾಡಿ ಕೇಂದ್ರ ಉಕ್ಕುಡದಲ್ಲಿ ಶೇ.89.85 ಮತದಾನವಾಗಿದೆ. ಇಲ್ಲೂ ಶೇ. 100 ಗುರಿ ಹೊಂದಲಾಗಿತ್ತು. 148 ಮಹಿಳೆ, 116 ಪುರುಷರು ಸೇರಿ 464 ಮತದಾರರಿದ್ದರು. ಆದರೆ ಮೃತ 5 ಮಂದಿ ಹಾಗೂ ಒಬ್ಬರ ಹೆಸರು ಡಬಲ್ ಎಂಟ್ರಿಯಾಗಿರುವುದರಿಂದ ಶೇ.100 ಮತದಾನದ ಅವಕಾಶ ಕೈಚೆಲ್ಲಬೇಕಾಗಿ ಬಂದಿದೆ. ಕಳೆದ ವರ್ಷ ಶೆ.83.01 ಮತದಾನವಾಗಿತ್ತು.