ಪ್ರಚಾರದ ಅಬ್ಬರ ಉತ್ತರ ಕರ್ನಾಟಕಕ್ಕೆ ಶಿಫ್ಟ್

| Published : Apr 28 2024, 01:23 AM IST / Updated: Apr 28 2024, 05:51 AM IST

ಸಾರಾಂಶ

ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತ ಮುಕ್ತಾಯವಾದ ಬೆನ್ನಲ್ಲೇ ಚುನಾವಣಾ ಪ್ರಚಾರದ ಅಬ್ಬರ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಂಡಿದ್ದು, ಉಭಯ ಪಕ್ಷಗಳಲ್ಲೂ ಚುನಾವಣಾ ರಾಜಕೀಯ ಬಿಸಿ ತೀವ್ರಗೊಂಡಿದೆ.

 ಬೆಂಗಳೂರು : ರಾಜ್ಯದಲ್ಲಿ ಲೋಕಸಭೆ ಚುನಾವಣೆಯ ಮೊದಲ ಹಂತ ಮುಕ್ತಾಯವಾದ ಬೆನ್ನಲ್ಲೇ ಚುನಾವಣಾ ಪ್ರಚಾರದ ಅಬ್ಬರ ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಂಡಿದ್ದು, ಉಭಯ ಪಕ್ಷಗಳಲ್ಲೂ ಚುನಾವಣಾ ರಾಜಕೀಯ ಬಿಸಿ ತೀವ್ರಗೊಂಡಿದೆ.

ಇದಕ್ಕೆ ಪೂರಕವಾಗಿ ಭಾನುವಾರ ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ದಿನ ತಮ್ಮ ತಮ್ಮ ಅಭ್ಯರ್ಥಿಗಳ ಪರ ಮತ ಬೇಟೆಗೆ ಇಳಿದಿದ್ದಾರೆ. ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಪ್ರಧಾನಿ ಮೋದಿ ಬೃಹತ್ ಸಮಾವೇಶ ನಡೆಸಲಿದ್ದು, ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ಪ್ರಚಾರ ಮಾಡಲಿದ್ದಾರೆ.

ಇದೇ ದಿನ ಬೆಳಗಾವಿ ಮತ್ತು ಚಿಕ್ಕೋಡಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿ ನೀಡಲಿದ್ದಾರೆ. ಚಿಕ್ಕೋಡಿ ಕ್ಷೇತ್ರ ವ್ಯಾಪ್ತಿಯ ಉಗಾರ್ ಖುರ್ದ್, ಬೆಳಗಾವಿ ಕ್ಷೇತ್ರದ ಯರಗಟ್ಟಿಯಲ್ಲಿ ನಡೆಯುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಸಿದ್ದರಾಮಯ್ಯ ಒಂದೇ ದಿನ ಎರಡೂ ಕ್ಷೇತ್ರಗಳಲ್ಲಿ ತಲಾ ಒಂದೊಂದು ಸಮಾವೇಶ ನಡೆಸಲಿದ್ದಾರೆ.

ಇನ್ನು ಈಗಾಗಲೇ ರಾಜ್ಯ ಕಾಂಗ್ರೆಸ್‌ ಹಾಗೂ ಬಿಜೆಪಿ ನಾಯಕರು ಉತ್ತರ ಕರ್ನಾಟಕಕ್ಕೆ ಸ್ಥಳಾಂತರಗೊಂಡಿದ್ದು, ಅಲ್ಲೇ ಬೀಡುಬಿಟ್ಟಿದ್ದಾರೆ. ಇನ್ನು ಜೆಡಿಎಸ್‌ನ ಯಾವ ಅಭ್ಯರ್ಥಿಯೂ ಈ ಭಾಗದಲ್ಲಿ ಕಣಕ್ಕಿಳಿಯದಿದ್ದರೂ ಮೈತ್ರಿಯಿಂದಾಗಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ನಡೆಸಲಿದ್ದಾರೆ. ಶಿವಮೊಗ್ಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಪ್ರಚಾರ ನಡೆಸುವುದಾಗಿ ಕುಮಾರಸ್ವಾಮಿ ಹೇಳಿದ್ದಾರೆ.

ದಕ್ಷಿಣ ಕರ್ನಾಟಕ ಭಾಗದ ಹದಿನಾಲ್ಕು ಕ್ಷೇತ್ರಗಳಿಗೆ ಶುಕ್ರವಾರ ಮತದಾನ ಮುಗಿದಿದೆ. ಮೇ 7ರಂದು ಉತ್ತರ ಕರ್ನಾಟಕದ ಹದಿನಾಲ್ಕು ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.

ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಿದ್ದರಾಮನ ಹುಂಡಿಯಲ್ಲಿ ಮತದಾನ ಮಾಡಿ ನೇರವಾಗಿ ವಿಜಯಪುರದಲ್ಲಿ ಕಾಂಗ್ರೆಸ್‌ ಪರ ಪ್ರಚಾರಕ್ಕೆ ತೆರಳಿದರು.

ಇನ್ನು 14 ಕ್ಷೇತ್ರಗಳಿಗೂ ಒಬ್ಬೊಬ್ಬ ಸಚಿವರನ್ನು ಉಸ್ತುವಾರಿಯನ್ನಾಗಿ ನೇಮಿಸಿದ್ದು, ಇದರ ಜತೆಗೆ ದಕ್ಷಿಣ ಭಾಗದ ಕ್ಷೇತ್ರಗಳಿಗೆ ನೇಮಕಗೊಂಡಿದ್ದ 13 ಮಂದಿ ಸಚಿವರನ್ನು ಹೆಚ್ಚುವರಿ ಉಸ್ತುವಾರಿಗಳನ್ನಾಗಿ ನೇಮಿಸಿ ಉತ್ತರ ಕರ್ನಾಟಕಕ್ಕೆ ತೆರಳಲು ಕೆಪಿಸಿಸಿ ಅಧ್ಯಕ್ಷರೂ ಆದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸೂಚನೆ ನೀಡಿದ್ದಾರೆ.

ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ಹುಬ್ಬಳ್ಳಿಯಲ್ಲಿ ಪ್ರಚಾರ ನಡೆಸಿದ್ದು, ಶುಕ್ರವಾರ ವಿಜಯಪುರ, ಬಾಗಲಕೋಟೆ, ಶನಿವಾರ ಕಲಬುರಗಿಯಲ್ಲಿ ಅಬ್ಬರದ ಪ್ರಚಾರ ನಡೆಸಿದ್ದಾರೆ.

ಜತೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ಸೇರಿ ಕಾಂಗ್ರೆಸ್‌ ನಾಯಕರು ದಾವಣಗೆರೆ, ಧಾರವಾಡ, ಉತ್ತರ ಕನ್ನಡ, ಚಿಕ್ಕೋಡಿ, ಹಾವೇರಿ, ಬಳ್ಳಾರಿ, ಬೆಳಗಾವಿ, ಕೊಪ್ಪಳ, ರಾಯಚೂರು, ಬೀದರ್‌, ಶಿವಮೊಗ್ಗ, ಬಿಜಾಪುರ, ಬಾಗಲಕೋಟೆ ಸಾಲು-ಸಾಲು ಪ್ರಚಾರ ಸಭೆಗಳನ್ನು ಹಮ್ಮಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.