ಮಹಿಳೆ ಗೌರವ, ಗೋಪೂಜೆ, ಮಂದಿರ ಉಳಿವಿಗೆ ಸ್ಪರ್ಧೆ: ಈಶ್ವರಪ್ಪ

| Published : Apr 28 2024, 01:23 AM IST / Updated: Apr 28 2024, 12:31 PM IST

ಮಹಿಳೆ ಗೌರವ, ಗೋಪೂಜೆ, ಮಂದಿರ ಉಳಿವಿಗೆ ಸ್ಪರ್ಧೆ: ಈಶ್ವರಪ್ಪ
Share this Article
  • FB
  • TW
  • Linkdin
  • Email

ಸಾರಾಂಶ

ಭದ್ರಾವತಿ ವಿಧಾನ ಸಭಾ ಕ್ಷೇತ್ರದ ಬಿಆರ್‌ಪಿಯ ಕೈಲಾಸಂ ರಂಗಮಂದಿರದಲ್ಲಿ ರಾಷ್ಟ್ರ ಭಕ್ತರ ಬಳಗ ವತಿಯಿಂದ ಆಯೋಜಿಸಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಮಾತನಾಡಿದರು.

 ಶಿವಮೊಗ್ಗ : ಹೇಡಿಗಳ ರೀತಿ ಹಿಂದೂ ಯುವಕರನ ಮೇಲೆ ಹಲ್ಲೆ ಮಾಡಿ ಓಡಿ ಹೋಗುತ್ತಾರೆ, ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಕರುವನ್ನು ಕಳ್ಳತನ ಮಾಡುತ್ತಿದ್ದಾರೆ ಅದನ್ನು ತಡೆ ಯಲು ಹೋದ ಯುವಕರ ಮೇಲೆ ರಾಜ್ಯ ಸರ್ಕಾರ ಕೇಸ್ ಹಾಕುತ್ತಿದೆ. ನಾವೇನು ಪಾಕಿಸ್ಥಾನದಲ್ಲಿದ್ದೇವಾ ಎಂದು ಲೋಕಸಭಾ ಚುನಾವಣೆಯ ಸ್ವತಂತ್ರ ಅಭ್ಯರ್ಥಿ ಕೆ.ಎಸ್‌.ಈಶ್ವರಪ್ಪ ಕಿಡಿಕಾರಿದರು.

ಭದ್ರಾವತಿ ವಿಧಾನಸಭಾ ಕ್ಷೇತ್ರದ ಬಿ.ಆರ್.ಪಿಯ ಕೈಲಾಸಂ ರಂಗಮಂದಿರದಲ್ಲಿ ರಾಷ್ಟ್ರಭಕ್ತರ ಬಳಗ ವತಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪರವರನ್ನು ಬೆಂಬಲಿಸಿ ಆಯೋಜಿಸಿದ್ದ ಸಾರ್ವಜನಿಕ ಸಭೆಯಲ್ಲಿ ಅವರು ಮಾತನಾಡಿ, ಮುಗ್ದ ಹುಡುಗಿಯರಿಗೆ ಪ್ರೀತಿ ತೋರಿಸಿ ಅವರನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿ ಇದು ಲವ್ ಜಿಹಾದ್ ಪ್ರಕರಣವಲ್ಲ ಎಂದು ಹೇಳಿದ್ದಾರೆ. ಕೊಲೆ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ರಾಜ್ಯದಲ್ಲಿ ಒತ್ತಡ ಹೆಚ್ಚಾದಾಗ ಸಿಐಡಿಗೆ ಪ್ರಕರಣ ವಹಿಸಿದ್ದಾರೆ. ಸಿಐಡಿ ಅಧಿಕಾರಿಗಳು ಮುಖ್ಯಮಂತ್ರಿ ಹೇಳಿದಂತೆ ವರದಿ ನೀಡುತ್ತಾರೆ ಆದ್ದರಿಂದ ನೇಹಾ ಕೊಲೆ ಪ್ರಕರಣ ಸಿಬಿಐಗೆ ವಹಿಸಬೇಕು ಎಂದು ಒತ್ತಾಯಿಸಿದರು.

ದೇಶದಲ್ಲಿ ಹಿಂದುತ್ವದ ಉಳಿವಿಗಾಗಿ ಅಟಲ್ ಬಿಹಾರಿ ವಾಜಪೇಯಿ, ಲಾಲ್ ಕೃಷ್ಣ ಅಡ್ವಾಣಿ, ನರೇಂದ್ರ ಮೋದಿಯವರಂತಹ ಮಹಾನ್ ನಾಯಕರು ಪಕ್ಷ ಸಂಘಟನೆ ಮಾಡಲು ತಮ್ಮ ಜೀವನವನ್ನು ತ್ಯಾಗ ಮಾಡಿದ್ದಾರೆ. ಹಿಂದುತ್ವದ ಮೂಲ ಉದ್ದೇಶ ಮಹಿಳೆಯರಿಗೆ ಗೌರವ ಸ್ಥಾನ ಕೊಡುವುದು ಎಂದರು.

ಹುಬ್ಬಳ್ಳಿಯಲ್ಲಿ ಕಾಲೇಜಿಗೆ ಹೋದ ವಿದ್ಯಾರ್ಥಿನಿಯನ್ನು ಕಾಲೇಜಿನ ಒಳಗೆ ನುಗ್ಗಿ ಕೊಲೆ ಮಾಡಲಾಗಿದೆ. ದೇಶಕ್ಕೆ ಸ್ವಾತಂತ್ರ್ಯ ತರಲು ಅನೇಕ ಮಹಾಪುರುಷರು ಪ್ರಾಣ ತ್ಯಾಗ ಮಾಡಿ ಸ್ವರ್ಗದಲ್ಲಿದ್ದಾರೆ. ರಾಜ್ಯದಲ್ಲಿ ಆಗುತ್ತಿರುವ ಹುಬ್ಬಳ್ಳಿ ಪ್ರಕರಣದಂತಹ ಘಟನೆಗಳು ಸ್ವರ್ಗದಲ್ಲಿರುವ ಸ್ವಾತಂತ್ರ್ಯ ಹೋರಾಟಗಾರರಿಗೆ ನೋವು ತಂದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಹೆಣ್ಣಿಗೆ ಗೌರವ ಸಿಗಬೇಕು ಗೋವಿಗೆ ಪೂಜೆಯಾಗಬೇಕು, ಮಂದಿರಗಳು ಉಳಿಸಬೇಕು ಹಿಂದುತ್ವ ಬೆಳೆಯಬೇಕು ಎಂಬುವ ಉದ್ದೇಶದಿಂದ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ. ಹಿಂದುತ್ವದ ಬಗ್ಗೆ ಮಾತನಾಡಿದ್ದಕ್ಕೆ ಬೇರೆ ಬೇರೆ ದೇಶಗಳಿಂದ ನನಗೆ ಬೆದರಿಕೆ ಕರೆ ಬರುತ್ತಿವೆ, ಫೋನ್ ಮೂಲಕ ಬೆದರಿಕೆ ಹಾಕಬೇಡಿ ಧೈರ್ಯ ಇದ್ದರೆ ಮುಂದೆ ಬನ್ನಿ ಈ ರೀತಿ ಬೆದರಿಕೆಗಳಿಗೆ ನಾನು ಬಗ್ಗುವುದಿಲ್ಲ ಎಂದರು.

ಕಾಶ್ಮೀರದ ಲಾಲ್ ಚೌಕದಲ್ಲಿ ಹಾಕಲಾಗಿದ್ದ ಪಾಕಿಸ್ಥಾನ ಧ್ವಜ ತೆಗೆದು ಹಿಂದೂಸ್ಥಾನ ಧ್ವಜವನ್ನು ಏರಿಸಲು ಮೋದಿ ಕರೆ ಮೇರೆಗೆ ಲಾಲ್ ಚೌಕ್ ಗೆ ಹೋಗಿದ್ದೆ ಅಲ್ಲಿಂದ ನನಗೆ ಮೋದಿಯವರ ಜೊತೆ ಒಡನಾಟ ಆರಂಭವಾಯಿತು. ಮೋದಿಯವರು ಹೋದಲೆಲ್ಲಾ ಕುಟುಂಬ ರಾಜಕಾರಣ ವಿರುದ್ಧ ಮಾತನಾಡುತ್ತಾರೆ. ಆದರೆ, ರಾಜ್ಯದಲ್ಲಿ ಬಿಜೆಪಿ ಪಕ್ಷ ಅಪ್ಪ ಮಕ್ಕಳ ಹಿಡಿತದಲ್ಲಿದೆ ಇದರಿಂದ ರಾಜ್ಯದ ಜನ ಕಾರ್ಯಕರ್ತರು ನೋವಿನಲ್ಲಿದ್ದಾರೆ ಪಕ್ಷವನ್ನು ಒಂದು ಕುಡುಂಬದಿಂದ ಹೊರ ತಂದು ಕಾರ್ಯಕರ್ತರಿಗೆ ನೆಮ್ಮದಿ ತರಲು ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಸಭೆಯಲ್ಲಿ ಮುಖಂಡರಾದ ರಂಗೋಜಿರಾವ್, ಬಿ.ಡಿ.ಈಶ್ವರಪ್ಪ, ಚೌಡಪ್ಪ, ಮಹೇಶ್ ಕುಮಾರ್‌, ವೇದಮೂರ್ತಿ, ನಾರಾಯಣಪ್ಪ, ಪ್ರಭಾಕರ್ ಉಪಸ್ಥಿತರಿದ್ದರು. ಮಾಳೆನ ಹಳ್ಳಿ, ಸಿಂಗನ ಮನೆ, ಶಂಕರ ಘಟ್ಟ, ಗ್ಯಾರೇಜ್ ಕ್ಯಾಂಪ್ ಗ್ರಾಮಸ್ಥರು ದೊಡ್ಡ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಕುಟುಂಬದ ಸದಸ್ಯರಿಂದ ಈಶ್ವರಪ್ಪ ಪರ ಮತಬೇಟೆ

ಶಿವಮೊಗ್ಗ: ಲೋಕಸಭಾ ಚುನಾವಣೆ ಪಕ್ಷೇತರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಅವರ ಕುಟುಂಬದ ಸದಸ್ಯರು ಶನಿವಾರ ನಗರದ ವಾರ್ಡ್ ನಂ.2ನಲ್ಲಿ ಮನೆ ಮನೆಗೆ ತೆರಳಿ ಈಶ್ವರಪ್ಪ ಪರ ಮತಯಾಚಿಸಿದರು.ಈಶ್ವರಪ್ಪನವರ ಸೊಸೆ ಶಾಲಿನಿ ಕಾಂತೇಶ್, ಈಶ್ವರಪ್ಪನವರ ಮಗಳಾದ ಜ್ಯೋತಿ, ಸುಮಾ ಹಾಗೂ ಕುಟುಂಬಸ್ಥರು ಮತ್ತು ಕಾರ್ಯಕರ್ತರೊಂದಿಗೆ ಪ್ರಚಾರ ನಡೆಸಿದ್ದು, ಈಶ್ವರಪ್ಪ ಅವರ ಅಭಿವೃದ್ಧಿ ಕಾರ್ಯಗಳ ಬಗ್ಗೆ ಮತದಾರರಿಗೆ ತಿಳಿಸಿ, ಚಿಹ್ನೆ ತೋರಿಸಿ ಮತ ಕೇಳಿದರು.

ಈ ಸಂದರ್ಭ ಮಾತನಾಡಿದ ಈಶ್ವರಪ್ಪ ಸೊಸೆ ಶಾಲಿನಿ ಅವರು, ಜನರ ಸ್ಪಂದನೆ ತುಂಬಾ ಚೆನ್ನಾಗಿದೆ. ನಾವು ಹೇಳುವ ಮುಂಚೆ ಅವರೇ ಚಿಹ್ನೆ ಮತ್ತು ಅಭಿವೃದ್ಧಿ ಕೆಲಸದ ಬಗ್ಗೆ ಮಾತನಾಡುತ್ತಿದ್ದಾರೆ. ಈಶ್ವರಪ್ಪ ಅವರು ಗೆದ್ದು ಮತ್ತೆ ಮೋದಿಯವರ ಕೈ ಬಲಪಡಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.