ಬಿಜೆಪಿಯ ಹಲವು ಜನಪರ ಯೋಜನೆಗೆ ಕಾಂಗ್ರೆಸ್‌ ಕತ್ತರಿ: ಯಡಿಯೂರಪ್ಪ

| Published : Apr 28 2024, 01:15 AM IST

ಸಾರಾಂಶ

ಹೊಸೂರು ಗ್ರಾಮದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

ಕನ್ನಡಪ್ರಭ ವಾರ್ತೆ ಶಿಕಾರಿಪುರ

ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಜಾರಿಗೊಳಿಸಿದ ಜನಪ್ರಿಯ ಭಾಗ್ಯಲಕ್ಷ್ಮಿ ಯೋಜನೆ, ಸುವರ್ಣ ಗ್ರಾಮ ಯೋಜನೆ ಸಹಿತ ಹಲವು ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದ್ದು, ಜನತೆಗೆ ದ್ರೋಹ ಬಗೆಯುತ್ತಿರುವ ರಾಜ್ಯದ ಕಾಂಗ್ರೆಸ್ ಸರ್ಕಾರವನ್ನು ಕಿತ್ತೊಗೆಯಬೇಕಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಶನಿವಾರ ತಾಲೂಕಿನ ಹೊಸೂರು ಗ್ರಾಮದಲ್ಲಿ ನಡೆದ ಬಿಜೆಪಿ ಚುನಾವಣಾ ಪ್ರಚಾರ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ತಾಲೂಕಿನ ಜನತೆ ರಾಜಕೀಯ ಜನ್ಮ ನೀಡಿದ್ದು, ಕ್ಷೇತ್ರದ ಮತದಾರರ ಋಣ ತೀರಿಸಲು ರಾಜ್ಯದ ಮುಖ್ಯಮಂತ್ರಿಯಾಗಿ ದೊರೆತ ಅವಕಾಶದಲ್ಲಿ ಶಕ್ತಿ ಮೀರಿ ಶ್ರಮಿಸಿದ್ದಾಗಿ ತಿಳಿಸಿದರು. ಭವಿಷ್ಯದಲ್ಲಿ ಕ್ಷೇತ್ರದ ಅಭಿವೃದ್ದಿಗೆ ಅನಿವಾರ್ಯವಾದ ಕೆಲಸ ಕಾರ್ಯ ಮಾಡಲು ಸದಾ ಸಿದ್ಧವಿರುವುದಾಗಿ ತಿಳಿಸಿ ಜತೆಯಲ್ಲಿ ಸಂಸದ ರಾಘವೇಂದ್ರ ಹಾಗೂ ಶಾಸಕ ವಿಜಯೇಂದ್ರ ಪೂರಕವಾಗಿ ಸ್ಪಂದಿಸಲಿದ್ದಾರೆ ಎಂದು ತಿಳಿಸಿದರು.

ರಾಜ್ಯದ ಮುಖ್ಯಮಂತ್ರಿಯಾದ ಅವಧಿಯಲ್ಲಿ ಜನಸಾಮಾನ್ಯರು ಮಹಿಳೆಯರ ಕಲ್ಯಾಣಕ್ಕಾಗಿ ಹಲವು ಯೋಜನೆಯನ್ನು ಜಾರಿಗೊಳಿಸಿದ್ದು, ಹೆಣ್ಣು ಮಕ್ಕಳಿಗೆ ಸಮಾಜದಲ್ಲಿ ಸಹಜ ಗೌರವಕ್ಕಾಗಿ ಜಾರಿಗೊಳಿಸಲಾದ ಭಾಗ್ಯಲಕ್ಷ್ಮಿ ಯೋಜನೆಯಡಿ ರಾಜ್ಯದ ಲಕ್ಷಾಂತರ ಹೆಣ್ಣು ಮಕ್ಕಳಿಗೆ ರೂ.1 ಲಕ್ಷ ನೀಡುವ ಅತ್ಯಂತ ಜನಪರ ಯೋಜನೆ ಸಹಿತ ಸುವರ್ಣ ಗ್ರಾಮ ಯೋಜನೆ, ಕಿಸಾನ್ ಸಮ್ಮಾನ್ ಯೋಜನೆಯಡಿ ರಾಜ್ಯ ಸರ್ಕಾರದ ರೂ.6 ಸಾವಿರ ಪ್ರೋತ್ಸಾಹ ಧನ ನೀಡುವ ಹಲವು ಯೋಜನೆಯನ್ನು ಇದೀಗ ಕಾಂಗ್ರೆಸ್ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಆರೋಪಿಸಿದ ಅವರು, ತಾಲೂಕು ಜಿಲ್ಲೆಯ ಅಭಿವೃದ್ಧಿಗೆ ಪ್ರಧಾನಿ ಮೋದಿ ಪಕ್ಕದಲ್ಲಿ ಕುಳಿತು ಕೆಲಸ ಮಾಡಲು ರಾಘವೇಂದ್ರರನ್ನು ಪುನಃ ಆಯ್ಕೆಗೊಳಿಸಬೇಕಾಗಿದೆ ಎಂದರು.

ಸಂಸದ ರಾಘವೇಂದ್ರ ಮಾತನಾಡಿ, ದೇಶದಲ್ಲಿ ಅಂದಾಜು 60 ಕೋಟಿ ಮಹಿಳೆಯರಿದ್ದು, ವಾರ್ಷಿಕ ತಲಾ 1 ಲಕ್ಷ ನೀಡುವ ಕಾಂಗ್ರೆಸ್ ಗ್ಯಾರಂಟಿ 60 ಲಕ್ಷ ರು. ಕೋಟಿ ಹಣ ಹೇಗೆ ಹೊಂದಿಸಲಿದೆ? ದೇಶದ ಬಜೆಟ್ ಗಾತ್ರ ₹47 ಲಕ್ಷ ಕೋಟಿಯಾಗಿದ್ದು, ಈ ಸುಳ್ಳು ಗ್ಯಾರಂಟಿ ಬಗ್ಗೆ ಮಹಿಳೆಯರು ಜಾಗೃತರಾಗಿರಬೇಕು ಎಂದು ಹೇಳಿದರು.

ಇನ್ನು, ಕೆಲ ತಿಂಗಳ ಹಿಂದೆ 5 ಲಕ್ಷ ಮತಗಳ ಅಂತರದಿಂದ ರಾಘಣ್ಣನನ್ನು ಗೆಲ್ಲಿಸುವಂತೆ ಬಹಿರಂಗ ಸಭೆಯಲ್ಲಿ ಕರೆ ನೀಡಿದ ಕೆ.ಎಸ್ ಈಶ್ವರಪ್ಪನವರು ಇದೀಗ ಹಗುರ ವಾಗಿ ಮಾತನಾಡುತ್ತಿದ್ದಾರೆ. ಇಂತಹವರ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದರು.

ವಿಧಾನಸಭೆ ವಿಪಕ್ಷ ಉಪನಾಯಕ ಸುನೀಲ್ ವಲ್ಯಾಪುರೆ ಮಾತನಾಡಿ, ಸಿಂಗಾಪುರ ರೀತಿ ಜಿಲ್ಲೆಯನ್ನು ರಾಘಣ್ಣ ಅಭಿವೃದ್ಧಿಪಡಿಸಿದ್ದಾರೆ. ರಸ್ತೆ ಸೇತುವೆ ವಿಮಾನ ನಿಲ್ದಾಣವಾಗಿದೆ ಎಂದು ಹೆಮ್ಮೆ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಲವರು ಪಕ್ಷಕ್ಕೆ ಸೇರ್ಪಡೆಗೊಂಡರು. ವೇದಿಕೆಯಲ್ಲಿ ಮಾಜಿ ಶಾಸಕ ಅಶೋಕನಾಯ್ಕ ತಾ.ಅಧ್ಯಕ್ಷ ಹನುಮಂತಪ್ಪ ಸಂಕ್ಲಾಪುರ,ತಾ.ಜೆಡಿಎಸ್ ಅಧ್ಯಕ್ಷ ಬೆಂಕಿ ಯೋಗೀಶ,ಸಂಗಯ್ಯ,ಮುಖಂಡ ಗುರುಮೂರ್ತಿ,ಎಚ್.ಟಿ ಬಳಿಗಾರ್,ಮಹೇಶ್ ಹುಲ್ಮಾರ್,ಮಹದೇವ ಪಾಟೀಲ್,ವಸಂತಗೌಡ,ಸುಧಾ,ರಾಜಶೇಖರ ಗೌಡ,ರೇಣುಕಾ,ನೇತ್ರಾವತಿ ಮತ್ತಿತರರು ಉಪಸ್ಥಿತರಿದ್ದರು.