ಇಂದು, ನಾಳೆ ಸಿಇಟಿ ಪರೀಕ್ಷೆ: ಜಿಲ್ಲೆಯಲ್ಲಿ ಸಕಲ ಸಿದ್ಧತೆ

| Published : Apr 18 2024, 02:17 AM IST / Updated: Apr 18 2024, 07:50 AM IST

ಇಂದು, ನಾಳೆ ಸಿಇಟಿ ಪರೀಕ್ಷೆ: ಜಿಲ್ಲೆಯಲ್ಲಿ ಸಕಲ ಸಿದ್ಧತೆ
Share this Article
  • FB
  • TW
  • Linkdin
  • Email

ಸಾರಾಂಶ

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್ ಲೈನ್ ನಲ್ಲಿ ದಾಖಲಿಸಲಾಗುವುದು. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತುಪಡಿಸಿ ಬೇರೆ ಯಾರೂ ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶಿಸುವಂತಿಲ್ಲ

 ಚಿಕ್ಕಬಳ್ಳಾಪುರ :  ಜಿಲ್ಲೆಯಾದ್ಯಂತ 16 ಪರೀಕ್ಷಾ ಕೇಂದ್ರಗಳಲ್ಲಿ ಏಪ್ರಿಲ್ 18 ಮತ್ತು 19 ರಂದು ನಡೆಯಲಿರುವ ವೃತ್ತಿಪರ ಕೋರ್ಸ್ ಗಳ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಸುಸೂತ್ರವಾಗಿ ನಡೆಸಲು ಸಕಲ ಸಿದ್ದತೆಗಳನ್ನು ಮಾಡಿ ಕೊಂಡಿರುವುದಾಗಿ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ತಿಳಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈ ಬಾರಿ ಸಿಇಟಿ ಪರೀಕ್ಷೆ ಬರೆಯಲು ದ್ವಿತೀಯ ಪಿಯುಸಿ ಪೂರೈಸಿರುವ 7,211 ವಿದ್ಯಾರ್ಥಿಗಳು ನೋಂದಾಯಿಸಿಕೊಂಡಿದ್ದಾರೆ. ಆ ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಪೂರಕ ವಾತಾವರಣವನ್ನು ಸೃಷ್ಟಿಸುವುದು ನಮ್ಮ ಜವಬ್ದಾರಿಯಾಗಿರುತ್ತದೆ ಎಂದರು.

200 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ

ಪರೀಕ್ಷಾ ಕೇಂದ್ರದ ಸುತ್ತಮುತ್ತಲಿನ 200 ಮೀಟರ್ ವ್ಯಾಪ್ತಿಯ ಪ್ರದೇಶವನ್ನು ನಿಷೇಧಿತ ಪ್ರದೇಶವೆಂದು ಘೋಷಿಸಲಾಗುವುದು. ಅದರಂತೆ ಎಲ್ಲಾ ಪರೀಕ್ಷಾ ಕೇಂದ್ರಗಳಿಗೆ ಹಾಗೂ ಎಲ್ಲಾ ಮಾರ್ಗಾಧಿಕಾರಿಗಳಿಗೆ ಸೂಕ್ತ ಪೊಲೀಸ್ ಬಂದೋಬಸ್ತ್ ಮತ್ತು ಬೆಂಗಾವಲು ರಕ್ಷಣೆಯನ್ನು ಒದಗಿಸುವುದು. ಪರೀಕ್ಷಾ ಕೇಂದ್ರಗಳ ಸುತ್ತ ಮುತ್ತಲಿನ ಜೆರಾಕ್ಸ್ ಅಂಗಡಿಗಳನ್ನು ಪರೀಕ್ಷಾ ದಿನಗಳಂದು ಮುಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ.

ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಹಾಜರಾತಿಯನ್ನು ಆನ್ ಲೈನ್ ನಲ್ಲಿ ದಾಖಲಿಸಲಾಗುವುದು. ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಹೊರತು ಪಡಿಸಿ ವಿದ್ಯಾರ್ಥಿಗಳ ಪೋಷಕರು ಹಾಗೂ ಇನ್ನಿತರ ಯಾವುದೇ ವ್ಯಕ್ತಿಗಳು ಪರೀಕ್ಷಾ ಕೇಂದ್ರದ ಆವರಣದೊಳಗೆ ಪ್ರವೇಶಿಸುವುದನ್ನು ನಿಷೇಧಿಸಲಾಗಿರುತ್ತದೆ. ಮೊಬೈಲ್‌, ಸ್ಮಾರ್ಟ್‌ವಾಚ್‌ ನಿಷೇಧ

ಪರೀಕ್ಷೆಗೆ ನೋಂದಾಯಿತರಾಗಿರುವ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವ ವೇಳೆ ಕ್ಯಾಪ್, ಆಭರಣಗಳು ಮತ್ತು ಪುಲ್ ಸ್ಲೀವ್ಸ್ ಷರ್ಟ್, ಮಾಸ್ಕ್ ಧರಿಸಬಾರದು. ಮೊಬೈಲ್, ಸ್ಮಾರ್ಟ್ ವಾಚ್, ಇನ್ನಿತರ ಎಲೆಕ್ಟ್ರಾನಿಕ್ ಉಪಕರಣಗಳ ರಹಿತವಾಗಿ ಪರೀಕ್ಷಾ ಕೇಂದ್ರಗಳಿಗೆ ಅರ್ಧ ಗಂಟೆ ಮುಂಚಿತವಾಗಿ ಹಾಜರಾಗಬೇಕು ಎಂದರು.

ಈ ವೇಳೆ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಐ ಖಾಸಿಂ, ಅಪರ ಜಿಲ್ಲಾಧಿಕಾರಿ ಡಾ. ಎನ್. ತಿಪ್ಪೇಸ್ವಾಮಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮರಿಸ್ವಾಮಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಮಹೇಶ್ ಕುಮಾರ್, ಶಾಲಾ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಬೈಲಾಂಜಿನಪ್ಪ, ಜಿಲ್ಲಾ ಖಜಾನೆ ಉಪನಿರ್ದೇಶಕ ಎಂ.ಮಂಜುನಾಥ, ಮಾರ್ಗಾಧಿಕಾರಿಗಳು, ಪ್ರಾಂಶುಪಾಲರು ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಇದ್ದರು.