ಕಾವೇರಿ ಹೋರಾಟ: ದಾವಣಗೆರೆ ಭಾಗಶಃ ಬಂದ್‌

| Published : Oct 04 2023, 01:00 PM IST / Updated: Dec 23 2023, 12:57 PM IST

sandalwood cauvery protest 12

ಸಾರಾಂಶ

ಜಯದೇವ ವೃತ್ತದಲ್ಲಿ ಘೋಷಣೆ ಕೂಗಿ ಆಕ್ರೋಶ, ಪ್ರತಿಭಟನೆ , ಬಲವಂತದ ಬಂದ್‌ಗೆ ಯತ್ನ, ಪೊಲೀಸರ ಸರ್ಪಗಾವಲು

* ಜಯದೇವ ವೃತ್ತದಲ್ಲಿ ಘೋಷಣೆ ಕೂಗಿ ಆಕ್ರೋಶ, ಪ್ರತಿಭಟನೆ , ಬಲವಂತದ ಬಂದ್‌ಗೆ ಯತ್ನ, ಪೊಲೀಸರ ಸರ್ಪಗಾವಲುಕನ್ನಡಪ್ರಭ ವಾರ್ತೆ ದಾವಣಗೆರೆ

ನೆರೆಯ ತಮಿಳುನಾಡಿಗೆ ಕಾವೇರಿ ನೀರು ಬಿಡುವುದು ವಿರೋಧಿಸಿ ಕನ್ನಡ ಪರ ಸಂಘಟನೆಗಳ ಒಕ್ಕೂಟ ಕರೆ ನೀಡಿದ್ದ ದಾವಣಗೆರೆ ಬಂದ್‌ ಬಹುತೇಕ ಯಶಸ್ವಿಯಾಗಿದ್ದು, ಜಿಲ್ಲಾ ಕೇಂದ್ರದ ಬಹುತೇಕ ಭಾಗ ಸ್ತಬ್ಧವಾಗಿತ್ತು.

ಕನ್ನಡ ಪರ ಸಂಘಟನೆಗಳ ಒಕ್ಕೂಟ, ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ, ಕರ್ನಾಟಕ ರಕ್ಷಣಾ ವೇದಿಕೆ ಹೀಗೆ ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಕರ್ನಾಟಕ ಬಂದ್‌ ಹಿನ್ನೆಲೆಯಲ್ಲಿ ತಮಿಳುನಾಡಿಗೆ ನೀರು ಬಿಡುವುದು ವಿರೋಧಿಸಿ, ಉಭಯ ರಾಜ್ಯ ಸರ್ಕಾರಗಳು, ಕೇಂದ್ರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದವು.

ಇಲ್ಲಿನ ಶ್ರೀ ಜಯದೇವ ವೃತ್ತದಿಂದ ದ್ವಿಚಕ್ರ ವಾಹನ, ಆಟೋ ರಿಕ್ಷಾ ಸೇರಿ ವಿವಿಧ ವಾಹನಗಳಲ್ಲಿ ಜಿಲ್ಲಾ ಕೇಂದ್ರದ ವಿವಿಧೆಡೆ ಸಂಚರಿಸಿ, ಬಂದ್‌ಗೆ ಸಹಕರಿಸಲು ಸಾರ್ವಜನಿಕರು, ವ್ಯಾಪಾರಸ್ಥರಿಗೆ ಮನವಿ ಮಾಡಿದ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಬಂದ್ ಮಧ್ಯ ಕರ್ನಾಟಕದಲ್ಲಿ ಬಹುತೇಕ ಯಶಸ್ವಿಯಾಗಲು ಕಾರಣರಾದರು.

ಬಂದ್ ಹಿನ್ನೆಲೆಯಲ್ಲಿ ಹೋಟೆಲ್‌ಗಳು, ಅಂಗಡಿ ಮುಂಗ್ಗಟ್ಟುಗಳು ಬಂದ್ ಆಗಿದ್ದರೆ, ಸರ್ಕಾರಿ ಮತ್ತು ಖಾಸಗಿ ಬಸ್‌ ಗಳು, ಆಟೋ ರಿಕ್ಷಾಗಳ ಸಂಚಾರ ಎಂದಿನಂತೆ ಇದ್ದರೂ, ಪ್ರಯಾಣಿಕರ ಸಂಖ್ಯೆ ಗಣನೀಯ ಇಳಿಕೆಯಾಗಿತ್ತು. ಬಸ್‌, ಆಟೋ ರಿಕ್ಷಾ ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದವರಿಗೆ ಪೊಲೀಸರು ತಿಳಿ ಹೇಳಿ ಪರಿಸ್ಥಿತಿ ಸಹಜಗೊಳಿಸಿದರು.

ಅಂತರ್‌ ಜಿಲ್ಲಾ ಸಂಚಾರ, ಸರಕು ಸಾಗಾಣಿಕೆ ಸೇರಿ ಖಾಸಗಿ ವಾಹನಗಳು ನಗರ ಪ್ರವೇಶಿಸದೆ ರಾಷ್ಟ್ರೀಯ ಹೆದ್ದಾರಿ-48 (ಬೈಪಾಸ್ ರಸ್ತೆ) ಮಾರ್ಗವಾಗಿಯೇ ಮುಂದಿನ ಹಾದಿ ಕ್ರಮಿಸಿದವು. ಬಂದ್ ಹಿನ್ನೆಲೆಯಲ್ಲಿ ಪೊಲೀಸ್ ಇಲಾಖೆ ಎಸ್‌ಪಿ ಉಮಾ ಪ್ರಶಾಂತ್‌ರ ಸೂಚನೆಯಂತೆ ಸಾಕಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿತ್ತು.

...................................

ಶಾಶ್ವತ ಪರಿಹಾರಕ್ಕೆ ಉಭಯ ಸರ್ಕಾರಗಳು ಯತ್ನಿಸಿಲ್ಲ

* ಕನ್ನಡ ಪರ ಸಂಘಟನೆಗಳ ಮುಖಂಡರು ಅಸಮಾಧಾನ

ಕನ್ನಡ ಪರ ಸಂಘಟನೆಗಳ ಮುಖಂಡರು ಮಾತನಾಡಿ, ಕಾವೇರಿ ನೀರಿನ ಹಂಚಿಕೆ ವಿವಾದಕ್ಕೆ ಶಾಶ್ವತ ಪರಿಹಾರ ಕಲ್ಪಿಸಲು ಕೇಂದ್ರ ಸರ್ಕಾರ ಮಧ್ಯಪ್ರವೇಶಿಸಬೇಕು. ಯಾವುದೇ ಪಕ್ಷಗಳ ಸರ್ಕಾರಗಳು ಕರ್ನಾಟಕ-ತಮಿಳುನಾಡಿನಲ್ಲಿ ಅಧಿಕಾರಕ್ಕೆ ಬಂದರೂ, ಕಾವೇರಿನ ನೀರಿನ ಸಮಸ್ಯೆ ಪರಿಹರಿಸುವ ಬದಲಿಗೆ, ಕಾವೇರಿ ನೀರಿನ ವಿಚಾರವನ್ನು ರಾಜಕಾರಣಕ್ಕೆ ಬಳಸಿಕೊಂಡೇ ಬರುತ್ತಿವೆ. ಸಮಸ್ಯೆಗೆ ಶಾಶ್ವತ ಪರಿಹಾರಕ್ಕೆ ಉಭಯ ಸರ್ಕಾರಗಳು ಪ್ರಯತ್ನಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಡೀ ರಾಜ್ಯವೇ ಬರದಿಂದ ತತ್ತರಿಸುತ್ತಿದ್ದು, ಕುಡಿಯುವ ನೀರಿಗೂ ಸಮಸ್ಯೆ ತಲೆದೋರುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ತಮಿಳುನಾಡು ಬೆಳೆಗಾಗಿ ನೀರು ಕೇಳುತ್ತಿದೆ. ಆದರೆ ವಾಸ್ತವದಲ್ಲಿ ಕೆಆರ್‌ಎಸ್‌ ಅಣೆಕಟ್ಟೆಯಲ್ಲಿ ಕಡಿಮೆ ಪ್ರಮಾಣದಲ್ಲಿ ನೀರಿದ್ದು, ಒಂದು ವೇಳೆ ನೀರು ಬಿಟ್ಟರೆ ಕನ್ನಡಿಗರಿಗೆ ವಿಶೇಷವಾಗಿ ಬೆಂಗಳೂರಿನಲ್ಲಿ ವಾಸಿಸುತ್ತಿರುವವರು ಕಾವೇರಿ ನೀರು ಅವಲಂಬಿತರಿಗೆ ಕುಡಿಯುವ ನೀರಿಗೂ ಸಂಚಕಾರ ಬರಲಿದೆ ಎಂದು ತಿಳಿಸಿದರು.

ಒಂದು ಕಡೆ ಬರ, ಮತ್ತೊಂದು ಕಡೆ ಡ್ಯಾಂನಲ್ಲಿ ನೀರು ಇಲ್ಲದಿದ್ದರೂ 3 ಸಾವಿರ ಕ್ಯುಸೆಕ್ ನೀರು ಬಿಡುತ್ತಿರುವುದು ಸರಿಯಲ್ಲ. ತಕ್ಷಣವೇ ನೆರೆ ರಾಜ್ಯಕ್ಕೆ ನೀರು ಹರಿಸುವುದು ಬಂದ್ ಮಾಡಬೇಕು. ಕಾವೇರಿ ವಿವಾದ ಹಾಗೂ ಸುಪ್ರೀಂಕೋರ್ಟ್ ಆದೇಶದನ್ವಯ ತಮಿಳುನಾಡಿಗೆ ನಿತ್ಯ ನೀರು ಹರಿಸುವುದಿಲ್ಲವೆನ್ನುವ ಮೂಲಕ ರಾಜ್ಯ ಸರ್ಕಾರ ಬದ್ಧತೆಯಿಂದ ರಾಜ್ಯದ ಜನತೆ ಹಿತ ಕಾಯಬೇಕಿತ್ತು. ಆದರೆ, ಅಂತಹ ಕೆಲಸ ರಾಜ್ಯ ಸರ್ಕಾರ ಮಾಡಿಲ್ಲ ಎಂದು ಕಿಡಿಕಾರಿದರು.

..................

ಕಾವೇರಿ ನೀರಿನ ವಿಚಾರದಲ್ಲಿ ಕೇಂದ್ರವು ತಕ್ಷಣ ಮಧ್ಯ ಪ್ರವೇಶಿಸಬೇಕು. ರಾಜ್ಯದಿಂದ 25 ಜನ ಬಿಜೆಪಿ ಸಂಸದರು ಇದ್ದು, ಪ್ರಧಾನಿ ಮೋದಿ ಮೇಲೆ ಒತ್ತಡ ಹೇರುವ ಕೆಲಸ ಮಾಡಬೇಕು. ಕಾವೇರಿ ನದಿ ನೀರು ಹಂಚಿಕೆ ವಿಚಾರ ಬಂದಾಗಲೆಲ್ಲಾ ಕರ್ನಾಟಕ, ತಮಿಳುನಾಡು ಮಧ್ಯೆ ವೈಷಮ್ಯಕ್ಕೆ ಕಾರಣವಾಗುತ್ತದೆ. ಈ ಸಮಸ್ಯೆಗೆ ಶಾಶ್ವತ ಪರಿಹಾರ ಆಗಲೇಬೇಕು. ಅಲ್ಲಿಯವರೆಗೆ ಈ ಸಮಸ್ಯೆ ಬಗೆಹರಿಯದು.

ಕನ್ನಡ ಪರ ಸಂಘಟನೆಗಳ ಒಕ್ಕೂಟ, ದಾವಣಗೆರೆ ಜಿಲ್ಲೆ