ಬಿಜೆಪಿಗರ ಹೇಳಿಕೆ ಖಂಡನೀಯ: ಶಂಭು ಶೆಟ್ಟಿ

| Published : Apr 28 2024, 01:21 AM IST

ಬಿಜೆಪಿಗರ ಹೇಳಿಕೆ ಖಂಡನೀಯ: ಶಂಭು ಶೆಟ್ಟಿ
Share this Article
  • FB
  • TW
  • Linkdin
  • Email

ಸಾರಾಂಶ

ಬಿಜೆಪಿ ಮಾಜಿ ವಕ್ತಾರ ನಾಗರಾಜ ನಾಯಕ ಕಾಂಗ್ರೆಸ್‌ನವರು ಆಮದು ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯವರು ಸಂವಿಧಾನವನ್ನೇ ಒಪ್ಪಿಲ್ಲ. ಒಕ್ಕೂಟದ ವ್ಯವಸ್ಥೆ ಹೇಗೆ ಒಪ್ಪುತ್ತಾರೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಪ್ರಶ್ನಿಸಿದರು.

ಕನ್ನಡಪ್ರಭ ವಾರ್ತೆ ಕಾರವಾರ

ಈ ಕ್ಷೇತ್ರದಲ್ಲಿ ಬಿಜೆಪಿ ಸೋಲುತ್ತದೆ ಎಂದು ಅವರಿಗೆ ಖಚಿತವಾಗಿದೆ. ಹೀಗಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಅಂಜಲಿ ನಿಂಬಾಳಕರ ಅವರನ್ನು ಆಮದು ಮಾಡಿಕೊಂಡಿದ್ದಾರೆ ಎನ್ನುವುದು ಖಂಡನೀಯವಾಗಿದೆ ಎಂದು ಕಾಂಗ್ರೆಸ್ ಜಿಲ್ಲಾ ವಕ್ತಾರ ಶಂಭು ಶೆಟ್ಟಿ ಹೇಳಿದರು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಮಾಜಿ ವಕ್ತಾರ ನಾಗರಾಜ ನಾಯಕ ಕಾಂಗ್ರೆಸ್‌ನವರು ಆಮದು ಅಭ್ಯರ್ಥಿ ಕಣಕ್ಕಿಳಿಸಿದ್ದಾರೆ ಎಂದು ಹೇಳಿದ್ದಾರೆ. ಬಿಜೆಪಿಯವರು ಸಂವಿಧಾನವನ್ನೇ ಒಪ್ಪಿಲ್ಲ. ಒಕ್ಕೂಟದ ವ್ಯವಸ್ಥೆ ಹೇಗೆ ಒಪ್ಪುತ್ತಾರೆ? ಒಂದು ರಾಜ, ಒಂದು ದೇಶ ಎನ್ನುವ ಸಂಸ್ಕೃತಿ ಅವರದ್ದಾಗಿದೆ. ಡಾ. ಅಂಜಲಿ ೨೫ ವರ್ಷದಿಂದ ಕರ್ನಾಟಕವನ್ನು ಕರ್ಮಭೂಮಿಯಾಗಿ ಮಾಡಿಕೊಂಡು ವಾಸಿಸುತ್ತಿದ್ದಾರೆ. ಬಿಜೆಪಿಗರು ಜಗದೀಶ ಶೆಟ್ಟರ ಅವರನ್ನು ಬೆಳಗಾವಿಗೆ ರಪ್ತು ಮಾಡಿದ್ದೀರಾ? ದಿ. ಸುಷ್ಮಾ ಸ್ವರಾಜ್ ಬಳ್ಳಾರಿಯಲ್ಲಿ ಸ್ಪರ್ಧಿಸಿದ್ದರು. ಪ್ರಧಾನ ಮಂತ್ರಿ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧಿಸಿದ್ದಾರೆ. ಇದಕ್ಕೆ ಏನನ್ನಬೇಕು? ಎಂದು ಪ್ರಶ್ನಿಸಿದರು.

ಜಿಲ್ಲೆಯಲ್ಲಿ ಬದಲಾವಣೆ ಬೇಕೆಂದು ಜನ ತೀರ್ಮಾನ ಮಾಡಿದ್ದಾರೆ. ಇದು ಬಿಜೆಪಿಗರಿಗೆ ಅರ್ಥವಾದ ಕಾರಣ ಇಲ್ಲಸಲ್ಲದ ಆರೋಪ ಹೊರಿಸುತ್ತಿದ್ದಾರೆ. ಸಿಕ್ಕಸಿಕ್ಕಲ್ಲಿ ಅಕ್ಕತಂಗಿಯರೆ, ಮಾತೆಯರೆ ಎನ್ನುತ್ತಾರೆ. ಆದರೆ ಇವರದ್ದೇ ಪಕ್ಷದ ಶ್ರುತಿ ಉಚಿತ ಬಸ್‌ನಿಂದ ಪತಿಗೆ ಗೊತ್ತಿಲ್ಲದೆ ಪತ್ನಿ ಎಲ್ಲೆಲ್ಲಿಗೊ ಹೋತ್ತಾಳೆ ಎನ್ನುತ್ತಾರೆ. ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಗ್ಯಾರಂಟಿಯಿಂದ ಸ್ತ್ರೀಯರು ದಾರಿ ತಪ್ಪುತ್ತಿದ್ದಾರೆ ಎನ್ನುತ್ತಾರೆ. ಬಿಜೆಪಿಯಲ್ಲಿ ಸ್ತ್ರೀಯರಿಗೆ ಯಾವ ಗೌರವವಿದೆ? ಎಂದು ಕಿಡಿಕಾರಿದರು.

ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಜಿ ಸಭಾಧ್ಯಕ್ಷರಾಗಿದ್ದವರು. ಅವರು ಸುಮ್ಮಸುಮ್ಮನೆ ಆರೋಪ ಮಾಡುತ್ತಿದ್ದಾರೆ. ನಮ್ಮ ಅಭ್ಯರ್ಥಿಯ ಕುಟುಂಬವನ್ನು ಎಳೆದು ತರುತ್ತಿದ್ದಾರೆ. ಸರ್ಕಾರಿ ನೌಕರರು ಕಾನೂನಿನ ಅನ್ವಯ ಕೆಲಸ ಮಾಡುತ್ತಾರೆ. ಶಾಸಕರಾಗಿ, ಸಚಿವರಾಗಿ, ಸಭಾಧ್ಯಕ್ಷರಾಗಿ ಅವರು ಏನು ಕೊಡುಗೆ ಕೊಟ್ಟಿದ್ದಾರೆ. ವೈಯಕ್ತಿಕ ನಿಂದನೆ ಸರಿಯಲ್ಲ ಎಂದರು.

ಎಲ್ವಿನಾ ಫರ್ನಾಂಡೀಸ್, ವಿಶ್ವನಾಥ ಕಲಗುಟ್ಕರ, ಮಚ್ಚೇಂದ್ರ ಮಹಾಲೆ, ಸಿ.ಜಿ. ನಾಯ್ಕ ಗಣಪತಿ ಕುಡಾಳಕರ, ಸೂರಜ ನಾಯ್ಕ ಇದ್ದರು.