ಬಜರಂಗದಳ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಮೇಲೆ ಹಲ್ಲೆ

| Published : Apr 27 2024, 01:00 AM IST

ಸಾರಾಂಶ

ಬಾಳೆಹೊನ್ನೂರು, ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಅಂತ್ಯದಲ್ಲಿ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಯಲ್ಲಿ ಬಿಜೆಪಿಯ 2 ಗುಂಪುಗಳ ವೈಮನಸ್ಸು ಹೊರಬಿದ್ದಿದ್ದು, ಒಂದು ಗುಂಪಿನ ಕಾರ್ಯಕರ್ತರು ಮತ್ತೊಂದು ಗುಂಪಿನ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಖಾಂಡ್ಯ ಹೋಬಳಿ ಉಜ್ಜಿನಿ ಮತಗಟ್ಟೆ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ

ಬಿಜೆಪಿ ಮೂವರು ಕಾರ್ಯಕರ್ತರ ಮೇಲೆ ಸ್ವ ಪಕ್ಷದ ಕಾರ್ಯಕರ್ತರಿಂದಲೇ ಹಲ್ಲೆಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಲೋಕಸಭಾ ಚುನಾವಣೆ ಅಂತ್ಯದಲ್ಲಿ ಚಿಕ್ಕಮಗಳೂರು ತಾಲೂಕಿನ ಖಾಂಡ್ಯ ಹೋಬಳಿ ಯಲ್ಲಿ ಬಿಜೆಪಿಯ 2 ಗುಂಪುಗಳ ವೈಮನಸ್ಸು ಹೊರಬಿದ್ದಿದ್ದು, ಒಂದು ಗುಂಪಿನ ಕಾರ್ಯಕರ್ತರು ಮತ್ತೊಂದು ಗುಂಪಿನ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಘಟನೆ ಖಾಂಡ್ಯ ಹೋಬಳಿ ಉಜ್ಜಿನಿ ಮತಗಟ್ಟೆ ಬಳಿ ಶುಕ್ರವಾರ ಮಧ್ಯಾಹ್ನ ನಡೆದಿದೆ. ಬಜರಂಗದಳದ ಮಾಜಿ ಮುಖಂಡ, ಖಾಂಡ್ಯ ಹೋಬಳಿ ಬಿಜೆಪಿ ಮುಖಂಡ ಪ್ರವೀಣ್ ಖಾಂಡ್ಯ ಮೇಲೆ ಉಜ್ಜಿನಿ ಮತಗಟ್ಟೆ ಬಳಿ ಕೆಲವು ಯುವಕರು ಹಲ್ಲೆ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಪ್ರವೀಣ್ ಹಾಗೂ ಕಾರ್ಯಕರ್ತರಾದ ಆಶಿತ್, ವಿಜಯ್ ಖಾಂಡ್ಯ, ಗೋಪಾಲ್ ಹುಣಸೇಹಳ್ಳಿ ಬಾಳೆಹೊನ್ನೂರಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಚುನಾವಣೆ ಹಿನ್ನೆಲೆಯಲ್ಲಿ ಪ್ರವೀಣ್ ಅವರೊಂದಿಗೆ ಮತಗಟ್ಟೆಗಳಿಗೆ ಭೇಟಿ ನೀಡಿತ್ತಾ ಉಜ್ಜಿನಿ ಮತಗಟ್ಟೆ ಬಳಿ ಬಂದಾಗ ಅಲ್ಲಿದ್ದ ಬಿಜೆಪಿ ಕಾರ್ಯಕರ್ತರಾದ ಸೃಜನ್, ರವೀಂದ್ರ, ಶಂಕರ್, ಸಚಿನ್, ಪ್ರಶಾಂತ್, ಅಭಿ ಮತ್ತು ಇತರರು ನೀವು ಇಲ್ಲಿಗೇಕೆ ಬಂದಿದ್ದು, ಬರುವ ಮುಂಚೆ ನಮಗೇಕೆ ಹೇಳಿಲ್ಲ ಎಂದು ಜಗಳ ತೆಗೆದು ಸೃಜನ್ ಎಂಬ ಯುವಕ ದಿಢೀರ್ ಆಗಿ ಕಬ್ಬಿಣದ ರಾಡಿನಿಂದ ಹಲ್ಲೆ ನಡೆಸಿದ್ದಾರೆ. ನನ್ನ ಜೊತೆಯಿದ್ದ ಆಶಿತ್, ವಿಜಯ, ಗೋಪಾಲ್ ಮೇಲೂ ಉದ್ದೇಶಪೂರ್ವಕವಾಗಿ ಹಲ್ಲೆ ನಡೆಸಿದ್ದು, ನನ್ನೊಂದಿಗೆ ಇದ್ದ ದಲಿತ ಯುವಕರು ಹಾಗೂ ನನ್ನನ್ನು ತುಳಿಯುವ ಉದ್ದೇಶದಿಂದ ಹಲ್ಲೆ ನಡೆಸಲಾಗಿದೆ ಎಂದು ಪ್ರವೀಣ್ ಖಾಂಡ್ಯ 6 ಜನರ ವಿರುದ್ಧ ಬಾಳೆಹೊನ್ನೂರು ಠಾಣೆಯಲ್ಲಿ ದೂರು ನೀಡಿದ್ದಾರೆ. ಅಪರಾಧ ವಿಭಾಗದ ಪಿಎಸ್‌ಐ ಅಭಿಷೇಕ್ ಪ್ರಕರಣ ದಾಖಲಿಸಿ, ತನಿಖೆ ಕೈಗೊಂಡಿದ್ದಾರೆ. ಪ್ರವೀಣ್ ಖಾಂಡ್ಯ ತಲೆಗೆ ಪೆಟ್ಟು ಬಿದ್ದಿರುವ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ರವಾನಿಸಲಾಗಿದೆ. ೨೬ಬಿಎಚ್‌ಆರ್ ೬: ಪ್ರವೀಣ್ ಖಾಂಡ್ಯ

-- ಬಾಕ್ಸ್--

ಹಲ್ಲೆಗೆ ಮಾಜಿ ಸಚಿವ ಜೀವರಾಜ್ ಕುಮ್ಮಕ್ಕು: ಆರೋಪಕನ್ನಡಪ್ರಭ ವಾರ್ತೆ, ಬಾಳೆಹೊನ್ನೂರು

ನನ್ನ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆಗೆ ಮಾಜಿ ಸಚಿವ ಡಿ.ಎನ್. ಜೀವರಾಜ್ ಅವರ ಕುಮ್ಮಕ್ಕು ಕಾರಣ ಎಂದು ಬಜರಂಗದಳ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಆರೋಪಿಸಿದರು.ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ 2 ತಿಂಗಳಿನಿಂದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಯಾಗಿಸುವ ನಿಟ್ಟಿನಲ್ಲಿ ಬಿಜೆಪಿ ಎಲ್ಲಾ ಪ್ರಮುಖರು ಹೋಬಳಿಯಾದ್ಯಂತ ಕೆಲಸ ಮಾಡಲಾಗುತ್ತಿದೆ. ಪ್ರತೀ ಚುನಾವಣೆ ಯಂತೆ ಈ ಬಾರಿಯೂ ಖಾಂಡ್ಯ ಹೋಬಳಿ ಬೂತ್‌ಗಳಿಗೆ ಹೋಬಳಿ ಅಧ್ಯಕ್ಷರೊಂದಿಗೆ ಸೌಜನ್ಯದ ಭೇಟಿ ನೀಡುತ್ತಾ ಶುಕ್ರವಾರ ಬಿದರೆ ಗ್ರಾಪಂ ವ್ಯಾಪ್ತಿಯ ಉಜ್ಜಿನಿ ಬೂತ್‌ಗೆ ತೆರಳಿದಾಗ ಮಾಜಿ ಸಚಿವ ಜೀವರಾಜ್ ಅವರು ಈ ಕ್ಷೇತ್ರದಲ್ಲಿ ಪ್ರಬಲವಾಗಿರುವ ಸಮಾಜದ ಪ್ರತಿನಿಧಿಯಾಗಿರುವ ನಾನು ಅವರಿಗೆ ಮುಳ್ಳಾಗುತ್ತೇನೆ ಎಂಬ ಭಯದಲ್ಲಿ ಅವರ ಬೆಂಬಲಿಗರನ್ನು ಬಿಟ್ಟು ರಾಡಿನಿಂದ ಹಲ್ಲೆ ನಡೆಸುವ ಮೂಲಕ ಕೊಲೆ ಪ್ರಯತ್ನ ಮಾಡಿದ್ದಾರೆ ಎಂದು ಬಿಜೆಪಿಯ ತಳಮಟ್ಟದ ಕಾರ್ಯಕರ್ತರಾದ ದಲಿತ ಯುವಕರ ಮೇಲೂ ಸಹ ಹಲ್ಲೆ ನಡೆಸಿ ಬೂಟು ಕಾಲಿನಿಂದ ತುಳಿದಿದ್ದಾರೆ. ಧರ್ಮ ವಿರೋಧಿಗಳಿಗೆ ಹಲ್ಲೆ ನಡೆಸುವ ರೀತಿಯಲ್ಲಿ ದೌರ್ಜನ್ಯ ಎಸಗಿದ್ದಾರೆ. ಈ ಕ್ಷೇತ್ರದ ಸಭ್ಯ ಬ್ರಾಹ್ಮಣ ಸಮಾಜ ಇಷ್ಟು ದಿನ ಜೀವರಾಜ್ ಅವರೊಂದಿಗೆ ಇತ್ತು. ಆದರೆ ಇದೀಗ ಸಮುದಾಯದ ಮೇಲೆ ದೌರ್ಜನ್ಯ ಮೀರಿ ಕೈ ಎತ್ತಿ ಹಲ್ಲೆ ನಡೆಸುವ ಕಾರ್ಯ ನಡೆದಿದೆ. ನಮ್ಮನ್ನು ಯಾವುದೇ ರೀತಿಯಲ್ಲಿ ಹಿಂದಿಕ್ಕಲು ಸಾಧ್ಯವಿಲ್ಲ ಎಂದು ಅರಿತ ಮಾಜಿ ಸಚಿವರು ಕೊಲೆ ಯತ್ನಕ್ಕೆ ಹಿಂಬಾಲಕರನ್ನು ಬಿಟ್ಟಿದ್ದಾರೆ. ಬ್ರಾಹ್ಮಣ, ದಲಿತ ಸಮುದಾಯದ ಮೇಲಿನ ದಾಳಿಗೆ ಶೀಘ್ರದಲ್ಲಿ ತಕ್ಕ ಉತ್ತರ ದೊರೆಯಲಿದೆ. ಕಳೆದ ಚುನಾವಣೆಯಲ್ಲಿ ಜೀವರಾಜ್ ವಿರುದ್ಧ ನಿಂತಾಗ ನನ್ನನ್ನು ಪಕ್ಷಕ್ಕೆ ಸೇರಿಸಿ ಕೊಂಡು ಪ್ರತೀ ಹಂತದಲ್ಲೂ ನನಗೆ ಅವಮಾನ ಮಾಡಿ, ನನ್ನ ಹೋಬಳಿಯಲ್ಲಿ ಕೆಲಸ ಮಾಡಲು ಅವಕಾಶ ನೀಡದೆ ಬೇರೆ ಕಡೆ ಜವಾಬ್ದಾರಿ ನೀಡ ಲಾಗಿತ್ತು.ಆದರೆ ಜೀವರಾಜ್ ಸ್ವಗ್ರಾಮದ ಬೂತ್‌ನಲ್ಲಿ ಲೀಡ್ ಪಡೆಯಲಾಗದೆ ಅವರ ಸೋಲನ್ನು ನನ್ನ ತಲೆಗೆ ಕಟ್ಟಿದ್ದಾರೆ. ಸೋಲಿನ ಹತಾಶೆಯಿಂದ ಇದೀಗ ಹಲ್ಲೆಯ ಹಂತಕ್ಕೆ ಬರಲಾಗಿದೆ. ನಾನು ಯಾವುದೇ ಸಮಾಜಕ್ಕೆ ಸೀಮಿತವಾದ ವ್ಯಕ್ತಿಯಲ್ಲ. ನಾನು ಬಜರಂಗದಳಕ್ಕೆ ಸೀಮಿತವಾಗಿದ್ದು, ನನ್ನೊಂದಿಗೆ ತಳಮಟ್ಟದ ಎಲ್ಲ ಸಮುದಾಯಗಳು ಇವೆ. ಹಿಂದೂ ಧರ್ಮ ವಿರೋಧಿಗಳ ಜೊತೆ ಹೋರಾಡಿ ಬೆಳೆದ ನಾನು ಈ ಹಲ್ಲೆಗೆ ಹೆದರುವುದಿಲ್ಲ. ಸಂಘಟನೆ, ಪಕ್ಷದ ಹಿರಿಯರು ಇಂತಹ ಘಟನೆಗಳನ್ನು ಗಮನಿಸಬೇಕು ಎಂಬುದು ನಮ್ಮ ಆಗ್ರಹ. ಸುಭಿಕ್ಷವಾದ ಕ್ಷೇತ್ರದಲ್ಲಿ ಬಿಜೆಪಿ 2 ಬಾರಿ ನಿರಂತರವಾಗಿ ಸೋತಿದೆ ಎಂದು ಬಿಜೆಪಿ ನಾಯಕರು ಇದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಕಾರ್ಯಕರ್ತರ ನೋವನ್ನು ನಾನು ರಾಷ್ಟ್ರೀಯ ಅಧ್ಯಕ್ಷರ ಬಳಿಗೂ ಕೊಂಡೊಯ್ಯಲಿದ್ದು, ಪಕ್ಷದ ನಾಯಕ ಸಿ.ಟಿ.ರವಿ, ಬಿಜೆಪಿ ಜಿಲ್ಲಾಧ್ಯಕ್ಷ ಸೇರಿದಂತೆ ಹಿರಿಯ ನಾಯಕರ ಬಳಿ ಚರ್ಚಿಸಲಾಗುವುದು. ನೊಂದ ಕಾರ್ಯಕರ್ತರ ದನಿಗೆ ಸೂಕ್ತ ಕ್ರಮಕೈಗೊಳ್ಳದಿದ್ದಲ್ಲಿ ಕಾರ್ಯಕರ್ತರು ತೀಕ್ಷ್ಣ ಉತ್ತರ ನೀಡಲಿದ್ದಾರೆ ಎಂದು ಹೇಳಿದರು.೨೬ಬಿಹೆಚ್‌ಆರ್ ೭:

ಬಜರಂಗದಳದ ಮಾಜಿ ಮುಖಂಡ ಪ್ರವೀಣ್ ಖಾಂಡ್ಯ ಮೇಲೆ ಹಲ್ಲೆ ನಡೆದ ಹಿನ್ನೆಲೆಯಲ್ಲಿ ಅವರ ಆರೋಗ್ಯ ವಿಚಾರಿಸಲು ಬಾಳೆಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಸೇರಿದ್ದ ಬಿಜೆಪಿ ಹಾಗೂ ಹಿಂದೂಪರ ಸಂಘಟನೆ ಕಾರ್ಯಕರ್ತರು.