ಕುವೆಂಪುನಗರದಲ್ಲಿ ಪಾದಚಾರಿಗಳಿಗಿಲ್ಲ ರಕ್ಷಣೆ!

| Published : Apr 27 2024, 01:00 AM IST

ಕುವೆಂಪುನಗರದಲ್ಲಿ ಪಾದಚಾರಿಗಳಿಗಿಲ್ಲ ರಕ್ಷಣೆ!
Share this Article
  • FB
  • TW
  • Linkdin
  • Email

ಸಾರಾಂಶ

ನೃಪತುಂಗ ರಸ್ತೆ ಎಂದು ಕರೆಯಲ್ಪಡುವ ಈ ಮಾರ್ಗಕ್ಕೆ ನಮ್ಮ ಪಾಲಿಕೆಯು ದಿ||ಪಿ. ವೆಂಕಟರಮಣ ರಸ್ತೆ ಎಂದೂ ನಾಮಕರಣ ಮಾಡಿದೆ. ಈ ರಸ್ತೆಗೆ ಎರಡೆರಡು ಹೆಸರು ಇರುವುದಲ್ಲದೆ ಈ ಮಾರ್ಗಕ್ಕೆ ಎರಡೆರಡು ಗುಣವೂ ಇದೆ. ಈ ರಸ್ತೆಯ ವಿಶೇಷತೆ ಎಂದರೆ ಈ ರಸ್ತೆಯ ಪಶ್ಚಿಮ ಭಾಗದಲ್ಲಿ ಪಾದಚಾರಿ ಮಾರ್ಗ ಇದೆ.

ಕನ್ನಡಪ್ರಭ ವಾರ್ತೆ ಮೈಸೂರು

ಮಂಗಳೂರು ಅಥವಾ ಬೆಂಗಳೂರಿನ ರಸ್ತೆಗಳ ''''''''ಮಧ್ಯೆ'''''''' ಯಾರಾದರೂ ನಡೆದುಕೊಂಡು ಹೋಗುತ್ತಿದ್ದರೆ ಅಂತಹವರನ್ನು ಮೈಸೂರಿನವರು ಎಂದು ಸುಲಭವಾಗಿ ಗುರುತಿಸಬಹುದು!

ಕಾರಣ ಇಷ್ಟೇ...

ಮೈಸೂರಿನ ಬಹುತೇಕ ರಸ್ತೆಗಳ ಇಕ್ಕೆಲಗಳಲ್ಲಿ ಪಾದಚಾರಿ ಮಾರ್ಗಗಳಿಲ್ಲ.

ಪಾದಚಾರಿ ಮಾರ್ಗಗಳಿದ್ದರೆ ಅವುಗಳು ಸುಸಜ್ಜಿತವಾಗಿಲ್ಲ. ಸುಸಜ್ಜಿತವಾಗಿದ್ದರೆ ಅವುಗಳನ್ನು ಅಂಗಡಿ-ಮುಂಗಟ್ಟುಗಳ ಮಾಲೀಕರು ಅತಿ ಕ್ರಮಿಸಿಕೊಂಡಿದ್ದಾರೆ.

ಜೊತೆಗೆ ರಸ್ತೆಯ ಎರಡೂ ಬದಿಗಳಲ್ಲಿ ಕಾರುಗಳು ನಿಂತಿರುತ್ತವೆ. ಹೀಗಾಗಿ ವಿಧಿಯಿಲ್ಲದೆ ಮೈಸೂರಿನ ನಾಗರೀಕರು ರಸ್ತೆಯ ನಡುವೆಯೇ ನಡೆದುಕೊಂಡು ಹೋಗಬೇಕಾದ ದುಸ್ಥಿತಿ ಬಂದೊದಗಿದೆ.

ಕೋಡಗನ್ನ ಕೋಳಿ ನುಂಗಿತ್ತಾ ಎಂಬಂತೆ ಫುಟ್ ಪಾತನ್ನು ರೋಡೇ ನುಂಗಿತ್ತಾ... ಎನ್ನುವ ಸ್ಥಿತಿ ಕುವೆಂಪು ನಗರಕ್ಕೂ ಬಂದೊದಗಿದೆ. ಕುವೆಂಪುನಗರದ ಉದಯರವಿ ರಸ್ತೆಯ ಡಾ. ಹೆಡಗೇವಾರ್ ವೃತ್ತದಿಂದ ದಕ್ಷಿಣಕ್ಕೆ ಹೋಗುವ ಮಾರ್ಗಕ್ಕೆ ಎರಡೆರಡು ಹೆಸರಿದೆ.

ನೃಪತುಂಗ ರಸ್ತೆ ಎಂದು ಕರೆಯಲ್ಪಡುವ ಈ ಮಾರ್ಗಕ್ಕೆ ನಮ್ಮ ಪಾಲಿಕೆಯು ದಿ||ಪಿ. ವೆಂಕಟರಮಣ ರಸ್ತೆ ಎಂದೂ ನಾಮಕರಣ ಮಾಡಿದೆ. ಈ ರಸ್ತೆಗೆ ಎರಡೆರಡು ಹೆಸರು ಇರುವುದಲ್ಲದೆ ಈ ಮಾರ್ಗಕ್ಕೆ ಎರಡೆರಡು ಗುಣವೂ ಇದೆ. ಈ ರಸ್ತೆಯ ವಿಶೇಷತೆ ಎಂದರೆ ಈ ರಸ್ತೆಯ ಪಶ್ಚಿಮ ಭಾಗದಲ್ಲಿ ಪಾದಚಾರಿ ಮಾರ್ಗ ಇದೆ. ಆದರೆ ಪೂರ್ವ ಭಾಗದಲ್ಲಿ ಇದ್ದ ಪಾದಚಾರಿ ಮಾರ್ಗವನ್ನು ಸಮತಟ್ಟು ಮಾಡಿ ನಾಶಪಡಿಸಿ ಆ ಭಾಗವನ್ನು ಡಾಂಬರೀಕರಣ ಮಾಡಿ ರಸ್ತೆಯ ರೂಪ ನೀಡಲಾಗಿದೆ. ಇದರಿಂದಾಗಿ ಈ ರಸ್ತೆಯ ಪೂರ್ವ ಭಾಗದಲ್ಲಿ ಪಾದಚಾರಿಗಳಿಗೆ ಪ್ರವೇಶದ ಹಕ್ಕನ್ನು ನಿರಾಕರಿಸಿದಂತಾಗಿದೆ.

ರಸ್ತೆಯ ಪೂರ್ವ ಭಾಗದಲ್ಲಿ ಓಡಾಡುವ ನಾಗರೀಕರು ವಿಧಿಯಿಲ್ಲದೆ ರಸ್ತೆಯ ಮಧ್ಯದಲ್ಲಿಯೇ ನಡೆಯುವಂತಾಗಿದೆ. ಈ ರಸ್ತೆಯ ಪೂರ್ವ ಭಾಗದಲ್ಲಿನ ಮನೆ ಹಾಗೂ ಮಳಿಗೆಯ ಮಾಲೀಕರು ತಮ್ಮ ಶಿಫಾರಸ್ಸು ಬಳಸಿ ತಮ್ಮ ತಮ್ಮ ಕಾರುಗಳನ್ನು ನಿಲ್ಲಿಸಲು ಅನುಕೂಲವಾಗುವಂತೆ ಪಾದಚಾರಿ ಮಾರ್ಗವನ್ನು ನಾಶಪಡಿಸಿ ಪಾಲಿಕೆಯ ನೇತೃತ್ವದಲ್ಲಿಯೇ ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡಿದ್ದಾರೆ.

ಶಾಂತಿಸಾಗರ ಕಾಂಪ್ಲೆಕ್ಸ್‌ ನಿಂದ ಎಂ. ಬ್ಲಾಕ್ ಪೂಜಾ ಬೇಕರಿಯವರೆಗೆ ಹೋಗುವ ಪಾದಚಾರಿಗಳಂತೂ ಪಾಲಿಕೆಯನ್ನು ಶಪಿಸದ ಕ್ಷಣಗಳಿಲ್ಲ! ಅಷ್ಟೇ ಅಲ್ಲದೆ ಶತಾಬ್ದಿ ಸೂಪರ್ ಮಾರ್ಕೆಟ್ ಬಳಿ ಇರುವ ಹೋಟೆಲ್ ಮಾಲೀಕರು ಪಾದಚಾರಿ ಮಾರ್ಗವನ್ನು ರಾಜಾರೋಷವಾಗಿ ಅತಿಕ್ರಮಿಸಿಕೊಂಡು ಟೇಬಲ್ ಹಾಗೂ ಖುರ್ಚಿಯನ್ನು ಇಟ್ಟು ವ್ಯಾಪಾರ ಮಾಡುತ್ತಿದ್ದಾರೆ. ಈ ಕೃತ್ಯಕ್ಕೆ ಪಾಲಿಕೆಯ ಅಧಿಕಾರಿಗಳ ಸಹಮತವೂ ಇದೆ.

ಈ ಪಾದಚಾರಿ ಮಾರ್ಗವನ್ನು ಒಂದು ಅಡಿಗಳಷ್ಟು ಎತ್ತರಕ್ಕೆ ಏರಿಸಿ ಅತಿಕ್ರಮಣಕೋರರಿಗೆ ಪಾಲಿಕೆಯು ಸಹಕರಿಸಿದೆ. ಪಾದಚಾರಿಗಳು ವಿಧಿಯಿಲ್ಲದೆ ರಸ್ತೆಗಿಳಿದು ನಡೆಯೋಣವೆಂದರೆ ಅಲ್ಲಿ ಸಾಲು ಸಾಲು ಕಾರುಗಳು ಎರಡೆರಡು ಸಾಲುಗಳಲ್ಲಿ ನಿಂತಿರುತ್ತದೆ.

ಕೋಟ್

26 ಎಂವೈಎಸ್‌ 118

- ಪಾದಚಾರಿ ಮಾರ್ಗವನ್ನು ನಾಶಪಡಿಸಿ ಆ ಜಾಗವನ್ನು ಡಾಂಬರೀಕರಣ ಮಾಡಿದ ದುಷ್ಟರ ವಿರುದ್ಧ ಪೊಲೀಸ್ ಆಯುಕ್ತರು ಕರ್ನಾಟಕ ಪೊಲೀಸ್ ಕಾಯಿದೆ ಅನ್ವಯ ಕ್ರಿಮಿನಲ್ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಬೇಕಿದೆ. ಹೀಗಾದಾಗ ಮಾತ್ರ ಪಾದಚಾರಿಗಳ ಹಕ್ಕನ್ನು ರಕ್ಷಿಸಿದಂತಾಗುತ್ತದೆ.

ಪ್ರಚಾರ ಗಿಟ್ಟಿಸಲೆಂದು ಮೈಸೂರಿನ ಬಹುತೇಕ ನಗರ ಪಾಲಿಕೆ ಸದಸ್ಯರು ಆಗಾಗ ಪಾದಯಾತ್ರೆ ಮಾಡುತ್ತಾರೆ.

ನಗರ ಪಾಲಿಕೆ ಸದಸ್ಯರು ಅವರವರ ವಾರ್ಡಿನಲ್ಲಿ ಪಾದಯಾತ್ರೆಯನ್ನು ಪಾದಚಾರಿ ಮಾರ್ಗದಲ್ಲಿಯೇ ನಡೆಯುವುದರ ಮೂಲಕ ಹಮ್ಮಿಕೊಂಡರೆ ಪಾದಚಾರಿಗಳ ಕಷ್ಟದ ಅರಿವು ಮೂಡಬಹುದು.

ಈ ಕೂಡಲೇ ಪಾಲಿಕೆಯ ಅಭಯ ತಂಡವು ಪಾದಚಾರಿ ಮಾರ್ಗದಲ್ಲಿರುವ ಈ ಕುರ್ಚಿ ಟೇಬಲ್ಲುಗಳನ್ನು ಹಾಗೂ ಜಾಹಿರಾತು ಫಲಕಗಳನ್ನು ಹೊತ್ತೊಯ್ದು ಪಾದಚಾರಿಗಳ ಹಕ್ಕುಗಳನ್ನು ರಕ್ಷಿಸಿ ನಾಗರಿಕರಿಗೆ ಅಭಯ ನೀಡಲಿ

- ಪಿ.ಜೆ. ರಾಘವೇಂದ್ರ ನ್ಯಾಯವಾದಿ ಮೈಸೂರು.