ಕುಡಿವ ನೀರಿಗಾಗಿ ಅಂಬೇಡ್ಕರ್ ಕಾಲೋನಿ ನಿವಾಸಿಗಳ ಪ್ರತಿಭಟನೆ

| Published : Apr 28 2024, 01:20 AM IST

ಸಾರಾಂಶ

ಸಮರ್ಪಕ ಕುಡಿಯುವ ನೀರಿಗೆ ಆಗ್ರಹಿಸಿ ತಾಲೂಕಿನ ಬಿಜಿಕೆರೆ ಗ್ರಾಮದ ಅಂಬೇಡ್ಕರ್ ಕಾಲೋನಿ ನಿವಾಸಿಗಳು ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳ್ಳಂ ಬೆಳಗ್ಗೆ ಪ್ರತಿಭಟನೆ ನಡೆಸಿದರು.

ಮೊಳಕಾಲ್ಮುರು: ಸಮರ್ಪಕ ಕುಡಿಯುವ ನೀರಿಗೆ ಆಗ್ರಹಿಸಿ ತಾಲೂಕಿನ ಬಿಜಿಕೆರೆ ಗ್ರಾಮದ ಅಂಬೇಡ್ಕರ್ ಕಾಲೋನಿ ನಿವಾಸಿಗಳು ಗ್ರಾಮ ಪಂಚಾಯಿತಿ ಆವರಣದಲ್ಲಿ ಬೆಳ್ಳಂ ಬೆಳಗ್ಗೆ ಪ್ರತಿಭಟನೆ ನಡೆಸಿದರು.ಪಂಚಾಯಿತಿ ಆವರಣದಲ್ಲಿ ಖಾಲಿ ಕೊಡಗಳೊಂದಿಗೆ ಪ್ರತಿಭಟಿಸಿದ ಮಹಿಳೆಯರು ಪಂಚಾಯಿತಿ ಅಧಿಕಾರಿಗಳಿಗೆ ಧಿಕ್ಕಾರ ಕೂಗಿದರು. ಬಹುತೇಕ ದಲಿತ ಕುಟುಂಬಗಳೇ ವಾಸಿಸುವ ಅಂಬೇಡ್ಕರ್ ಕಾಲೋನಿಯಲ್ಲಿ ಕಳೆದೊಂದು ತಿಂಗಳಿಂದ ಕುಡಿಯುವ ನೀರಿನ ಸಮಸ್ಯೆ ಬಹುವಾಗಿ ಕಾಡುತ್ತಿದೆ. ಮಕ್ಕಳು, ಮಹಿಳೆಯರು ಎನ್ನದೆ ನೀರಿಗಾಗಿ ಇಡೀ ದಿನ ಅಲೆದಾಡುವಂತಾಗಿದೆ. ಹೀಗಿದ್ದರೂ ಸಂಬಂಧಿಸಿದ ಗ್ರಾಪಂ ಅಧಿಕಾರಿಗಳು ಚಕಾರ ಎತ್ತುತ್ತಿಲ್ಲ ಎಂದು ಆರೋಪಿಸಿದರು. ಬಡ ಕುಟುಂಬಗಳೇ ವಾಸವಾಗಿರುವ ಕಾಲೋನಿಯ ಜನರು ಕೂಲಿಯಿಂದಲೇ ಬದುಕನ್ನು ಕಟ್ಟಿಕೊಂಡಿದ್ದಾರೆ. ಕಳೆದೊಂದು ತಿಂಗಳಿಂದ ಕಾಲೋನಿಯಲ್ಲಿ ನೀರಿನ ಕೊರತೆ ತೀವ್ರವಾಗಿ ಕಾಡುತ್ತಿದೆ. ಸಮಸ್ಯೆ ಪರಿಹರಿಸುವಂತೆ ಅನೇಕ ಬಾರಿ ಹೇಳಿದರೂ ಪ್ರಯೋಜನವಾಗಿಲ್ಲ. ಪಂಚಾಯಿತಿಯವರು ನೆಪ ಮಾತ್ರಕ್ಕೆ ಎಂಬಂತೆ ಒಂದು ದಿನ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಿ ಕೈತೊಳೆದುಕೊಂಡಿದ್ದಾರೆ. ಆದರೆ ಸಮಸ್ಯೆ ಪರಿಹರಿಸಲು ಮುಂದಾಗಿಲ್ಲ. ಇದರಿಂದಾಗಿ ಸಮಸ್ಯೆ ಇನ್ನಷ್ಟು ಬಿಗುಡಾಯಿಸಲು ಕಾರಣವಾಗಿದೆ. ನಿತ್ಯವೂ ನೀರಿಗಾಗಿ ಗಲಾಟೆ ನಡೆಯುತ್ತಿದ್ದರೂ ಸಂಬಂಧಿಸಿದ ಅಭಿವೃದ್ಧಿ ಅಧಿಕಾರಿ ಇ - ಸ್ವತ್ತು, ನರೇಗ ಯೋಜನೆ ನಿರ್ವಹಣೆಯಲ್ಲಿಯೇ ಕಾಲ ಕಳೆಯುತ್ತಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ತಾರಕಕ್ಕೇರಿದ್ದರೂ ಸ್ಥಳೀಯ ಜನಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಗಮನ ಹರಿಸುತ್ತಿಲ್ಲ ಎಂದು ಆರೋಪಿಸಿದ ನಿವಾಸಿಗಳು ಕೂಡಲೆ ನಮಗೆ ನೀರು ಕೊಡಿ ಎಂದು ಒತ್ತಾಯಿಸಿದರು.ಈ ವೇಳೆ ಮಹದೇವಮ್ಮ, ಸತ್ಯಕ್ಕ, ಭಾಗ್ಯಮ್ಮ, ಬಸಕ್ಕ, ರತ್ನಕ್ಕ, ಗಂಗಮ್ಮ, ಬಸಮ್ಮ, ಸಿದ್ದಣ್ಣ, ಗ್ರಾಪಂ ಸದಸ್ಯ ಮಹೇಶ, ರಾಜ, ಮಲ್ಲಕ್ಕ, ತಿಪ್ಪಮ್ಮ, ಗಂಗಮ್ಮ, ತಿಪ್ಪೀರಮ್ಮ, ಮಂಜುನಾಥ ಇದ್ದರು.